ಮಂಗಳೂರು: 25 ವರ್ಷಗಳಾದ್ರೂ ಕಾಣದ ರಸ್ತೆ ಅಭಿವೃದ್ಧಿ, ಸ್ವ ಕ್ಷೇತ್ರದಲ್ಲೇ ಸಚಿವ ಅಂಗಾರ ವಿರುದ್ಧ ತಿರುಗಿಬಿದ್ದ ಜನರು
ಸುಳ್ಯ-ಕೊಡಿಯಾಲಬೈಲ್-ದುಗ್ಗಲಡ್ಕ ರಸ್ತೆ ಅಭಿವೃದ್ಧಿ ಕಾಣದೆ 25 ವರ್ಷಗಳು ಕಳೆದಿದೆ. ರಸ್ತೆ ಅಭಿವೃದ್ಧಿ ಮಾಡುವಂತೆ ಕ್ಷೇತ್ರದ ಜನರು ಮನವಿ ಮಾಡಿಕೊಂಡು ಬರುತ್ತಲೇ ಇದ್ದಾರೆ. ಆದರೆ, ಕ್ಷೇತ್ರದ ಶಾಸಕರೂ ಆಗಿರುವ ಸಚಿವ ಎಸ್.ಅಂಗಾರ ಮಾತ್ರ ರಸ್ತೆ ಅಭಿವೃದ್ಧಿಗೆ ಮುಂದಾಗಿಲ್ಲ. ಹೀಗಾಗಿ ಜನಾಕ್ರೋಶ ವ್ಯಕ್ತವಾಗಿದೆ.
ಮಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election 2023) ಸಮೀಪದಲ್ಲಿರುವಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಶಾಸಕರೂ ಆಗಿರುವ ಸಚಿವ ಎಸ್.ಅಂಗಾರ (S. Angara) ಅವರಿಗೆ ಸ್ವಪಕ್ಷದ ಕಾರ್ಯಕರ್ತರು ಹಾಗೂ ಸಾರ್ಜಜನಿಕರ ಪ್ರತಿಭಟನೆ (Protest Against Sullia MLA) ಬಿಸಿ ತಟ್ಟಲು ಆರಂಭವಾಗಿದೆ. ಇತ್ತೀಚೆಗೆ, ರಸ್ತೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡುವ ವೇಳೆ ಸ್ಥಳದಲ್ಲಿದ್ದ ಜನರು ಬೇಡಿಕೆಯೊಂದನ್ನು ಇಟ್ಟಿದ್ದರು. ಈ ವೇಳೆ ಸರ್ಕಾರ ಅನುದಾನ ನೀಡಿದರೆ ಮಾಡಬಹುದು, ಹಣ ಕೊಡದಿದ್ದರೆ ಹೇಗೆ ಅಭಿವೃದ್ಧಿ ಮಾಡುವುದು ಎಂದು ಅಂಗಾರ ಹೇಳಿದ್ದ ವಿಡಿಯೋ ವೈರಲ್ ಆಗಿತ್ತು. ಆದರೀಗ ಸ್ವಪಕ್ಷದ ಕಾರ್ಯಕರ್ತರು ಹಾಗೂ ಕ್ಷೇತ್ರದ ಜನರು ಅಂಗಾರ ವಿರುದ್ಧ ತಿರುಗಿಬಿದ್ದಿದ್ದು, ಪ್ರತಿಭಟನೆ ಮೂಲಕ ನಿಧಿ ಸಂಗ್ರಸಿಹಿ ರಸ್ತೆ ಅಭಿವೃದ್ಧಿ ಮಾಡಲು ಮುಂದಾಗಿದ್ದಾರೆ. ಅಲ್ಲದೆ, ನಮ್ಮ ಮುಂದಿನ ವೋಟ್ ಕೆಲಸ ಮಾಡುವವರಿಗೆ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.
ಸುಳ್ಯ-ಕೊಡಿಯಾಲಬೈಲ್-ದುಗ್ಗಲಡ್ಕ ರಸ್ತೆ ಅಭಿವೃದ್ಧಿ ಕಾಣದೆ 25 ವರ್ಷಗಳು ಕಳೆದಿದೆ. ರಸ್ತೆ ಅಭಿವೃದ್ಧಿ ಮಾಡುವಂತೆ ಕ್ಷೇತ್ರದ ಜನರು ಮನವಿ ಮಾಡಿಕೊಂಡು ಬರುತ್ತಲೇ ಇದ್ದಾರೆ. ರಸ್ತೆ ಅಭಿವೃದ್ಧಿ ಇಂದು ಮಾಡಬಹುದು, ನಾಳೆ ಮಾಡಬಹುದು ಎಂದು ತಮ್ಮ ಶಾಸಕರ ಮೇಲೆ ನಂಬಿಕೆ ಇಟ್ಟು ಬಿಜೆಪಿ ಕಾರ್ಯಕರ್ತರು ಚುನಾವಣೆಯಲ್ಲಿ ಅಂಗಾರ ಅವರನ್ನು ಗೆಲ್ಲಿಸುತ್ತಲೇ ಬಂದಿದ್ದರು. ಆದರೆ ಇದಕ್ಕೆ ಅಂಗಾರ ಅವರು ಕ್ಯಾರೇ ಎನ್ನದೆ ನಿರ್ಲಕ್ಷ್ಯ ತೋರಿದ್ದಾರೆ. ಇದೀಗ ತಾಳ್ಮೆ ಕಳೆದುಕೊಂಡ ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಅಂಗಾರ ವಿರುದ್ಧ ತಿರುಗಿಬಿದ್ದಿದ್ದಾರೆ.
ಇದನ್ನೂ ಓದಿ: ಕೆಪಿಟಿಸಿಎಲ್, ಎಸ್‌ಕಾಂ ನೌಕರರ ಅನಿರ್ದಿಷ್ಟಾವಧಿ ಮುಷ್ಕರ; ಮಾರ್ಚ್ 16ರಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
ಅದರಂತೆ, ಸುಳ್ಯ-ಕೊಡಿಯಾಲಬೈಲ್-ದುಗ್ಗಲಡ್ಕ ರಸ್ತೆ ಅಭಿವೃದ್ಧಿಗೆ ಸ್ವತಃ ಸಾರ್ವಜನಿಕರೇ ಮುಂದೆ ಬಂದಿದ್ದು, ಪ್ರತಿಭಟನೆ ಮೂಲಕ ನಿಧಿ ಸಂಗ್ರಹಿಸಿ ರಸ್ತೆ ಅಭಿವೃದ್ಧಿ ಮಾಡಲು ನಿರ್ಧರಿಸಿದ್ದಾರೆ. ಜಾಥಾ ನಡೆಸಿ ನಗರ ಪಂಚಾಯತ್ ಮುಂಭಾಗದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ನಿಧಿ ಸಂಗ್ರಹ ಅಭಿಯಾನ ಆರಂಭಿಸಿದ್ದಾರೆ. ಅಲ್ಲದೆ, ರಸ್ತೆ ಅಭಿವೃದ್ಧಿಗಾಗಿ ಕಳೆದ 25 ವರ್ಷಗಳಿಂದ ಬೇಡಿಕೆ ಇಡುತ್ತಲೇ ಇದ್ದೇವೆ. ಜಿಲ್ಲೆಗೆ ಕೋಟಿ ಕೋಟಿ ಅನುದಾನ ಬಂದರೂ ರಸ್ತೆ ಅಭಿವೃದ್ಧಿ ಕಾಣುತ್ತಿಲ್ಲ. ಜನರ ಬೇಡಿಕೆ ಈಡೇರಿಸಲು ಜನಪ್ರತಿನಿಧಿಗಳು ವಿಫಲವಾಗಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಜನರಿಂದ ಸಂಗ್ರಹಿಸಿದ ಹಣದಿಂದ ರಸ್ತೆ ದುರಸ್ತಿ ಮಾಡಲು ತೀರ್ಮಾನ ಮಾಡಲಾಗಿದೆ. ಅಲ್ಲದೆ, ಸದ್ಯದಲ್ಲಿ ಬರುವ ಚುನಾವಣೆಯಲ್ಲಿ ಕೆಲಸ ಮಾಡಿದವರಿಗೆ ಮಾತ್ರ ವೋಟ್ ಹಾಕುವುದಾಗಿ ಎಚ್ಚರಿಕೆ ನೀಡಲಾಗಿದೆ. ಬಿಜೆಪಿ ಕಾರ್ಯಕರ್ತರು ಕೂಡ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಕೇಸರಿ ಹಾಗೂ ಹಸಿರು ಶಾಲು ಹಾಕಿ ಪ್ರತಿಭಟನೆ ನಡೆಸಿದರು. ಇಷ್ಟು ವರ್ಷಗಳಿಂದ ಪಕ್ಷಕ್ಕೆ ಮತ ಹಾಕುತ್ತಿದ್ದರೂ ಕಡೆಗಣನೆ ಮಾಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು. ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ