ಮಂಡ್ಯ: ಕೈಲಾಗದವರು ನೆಲಡೊಂಕು ಅಂದಹಾಗೆ ಜೆಡಿಎಸ್ನವರು ಮಾತಾಡುತ್ತಾರೆ ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ (N Chaluvaraya Swamy) ವಾಗ್ದಾಳಿ ನಡೆಸಿದರು. ಜೆಡಿಎಸ್ (JDS) ನಾಯಕರ ಟೀಕೆಗಳಿಗೆ ಮಂಡ್ಯದಲ್ಲೇ ತಿರುಗೇಟು ನೀಡಿದ ಅವರು, ಜೆಡಿಎಸ್ ನಾಯಕರು ಏಕವಚನದಲ್ಲಿ ಮಾತನಾಡಿದರೆ ಅವರದ್ದೇ ಮರಿಯಾದೆ ಹೋಗುತ್ತದೆ ಎಂದು ಹೇಳಿದರು.
ಅನುದಾನ ತರುವುದು ಬಿಡುವುದು ಈ ಐದು ವರ್ಷದಲ್ಲಿ ಗೊತ್ತಾಗುತ್ತದೆ. ಅನುದಾನ ಬಗ್ಗೆ ಸದನದಲ್ಲಿ ಹೆಚ್ಡಿ ಕುಮಾರಸ್ವಾಮಿ ಮೂಲಕ ಕೇಳಲು ಹೇಳಿ. ಆಗ ನಾನು ಉತ್ತರ ಕೊಡುತ್ತೇನೆ. ಇವರಿಗೆಲ್ಲ ಉತ್ತರ ಕೊಡಲ್ಲ ಎಂದು ಹೇಳಿದ ಚಲುವರಾಯಸ್ವಾಮಿ, ಈ ಹಿಂದೆ ಇದ್ದ ಜೆಡಿಎಸ್ ಶಾಸಕರು ಎಷ್ಟು ಅನುದಾನ ತಂದಿದ್ದಾರೆ? ಈ ಬಗ್ಗೆ ಮಂಡ್ಯ ಜಿಲ್ಲೆಯ ಜೆಡಿಎಸ್ ಮಾಜಿ ಶಾಸಕರು ದಾಖಲೆ ಕೊಡಲಿ ಎಂದು ಸವಾಲು ಹಾಕಿದರು.
ವರ್ಗಾವಣೆ ವಿಚಾರವಾಗಿ ಲಂಚ ಪಡೆಯಲಾಗುತ್ತಿದೆ ಎಂಬ ಆರೋಪ ವಿಚಾರವಾಗಿ ಮಾತನಾಡಿದ ಅವರು, ವರ್ಗಾವಣೆ ಯಾವ ಸರ್ಕಾರದಲೂ ಆಗಿಲ್ಲ ಇವಾಗಲೇ ಆಗುತ್ತಿರುವುದು ಎಂದು ವ್ಯಂಗ್ಯವಾಡಿದರು. ಅಲ್ಲದೆ, ಅನ್ನಭಾಗ್ಯದ ಬಗ್ಗೆ ಮಾತನಾಡಿ 5 ಕೆಜಿ ಅಕ್ಕಿ ಕೇಂದ್ರ ಸರ್ಕಾರ ಕೊಡಲು ನಿರಾಕರಣೆ ಮಾಡಿದೆ. ಅವರು ಏನೆ ಮಾಡಿದರೂ ನಾವು ಅಕ್ಕಿ ಹಾಗೂ ದುಡ್ಡು ಕೊಡುತ್ತೇವೆ. ಚುನಾವಣೆ ಭಯದಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಅಕ್ಕಿ ಕೊಡುತ್ತಿಲ್ಲ ಎಂದರು.
ಇದನ್ನು ಓದಿ: ಅನ್ನಭಾಗ್ಯ ಯೋಜನೆಯ ನೇರ ನಗದು ವರ್ಗಾವಣೆಗೆ ಚಾಲನೆ ನೀಡಿದ ಸಿಎಂ, ಡಿಸಿಎಂ
ಮಹಿಳೆಯರು ಬಸ್ನಲ್ಲಿ ಹೋಗುತ್ತಿದ್ದಾರೆ. ಅಕ್ಕಿ ಮತ್ತು ದುಡ್ಡು ತೆಗೆದುಕೊಳ್ಳುತ್ತಿದ್ದಾರೆ. ನಮ್ಮ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ನಡೆಯುತ್ತಿವೆ. ಸದನದಲ್ಲಿ ಈಗಾಗಲೇ ಮಾತನಾಡಿದ್ದೇನೆ ಹೆಚ್ಚು ಚರ್ಚೆ ಸೂಕ್ತ ಅಲ್ಲ ಎಂದು ಚಲುವರಾಯಸ್ವಾಮಿ ಹೇಳಿದರು.
ರಾಜ್ಯಪಾಲರ ಭಾಷಣದಲ್ಲಿ ಸುಳ್ಳು ಹೇಳಿಸಿದ್ದಾರೆ ಎಂಬ ವಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದ ಕೃಷಿ ಸಚಿವರು, ಈ ಹಿಂದೆ ಬಸವರಾಜ ಬೊಮ್ಮಯಿ ಅವರು ಮುಖ್ಯಮಂತ್ರಿ ಆಗಿದ್ದಾಗ ರಾಜ್ಯಪಾಲರ ಮುಖಾಂತರ ಏನೇನು ಸುಳ್ಳು ಹೇಳಿಸಿದ್ದರು ಅದನ್ನ ಯೋಚನೆ ಮಾಡಿಕೊಳ್ಳಲು ಹೇಳಿ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ