ಬೆಳಗಾವಿ, ಅಕ್ಟೋಬರ್ 25: ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಮೈಸೂರು ಪ್ರವಾಸಕ್ಕೆ ಕಾಂಗ್ರೆಸ್ (Congress) ಹೈಕಮಾಂಡ್ ಬ್ರೇಕ್ ಹಾಕಿ ಅಂತೂ ಸಮಸ್ಯೆ ಬಗೆಹರಿಸಿತು ಎಂಬಷ್ಟರಲ್ಲೇ ಅವರು ವಿದೇಶ ಪ್ರವಾಸದ (Foreign Trip) ಯೋಜನೆ ಇದೆ ಎಂದು ಹೇಳಿದ್ದಾರೆ. ಇದು ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಕುತೂಹಲ ಸೃಷ್ಟಿಸಿದೆ. ಬೆಳಗಾವಿಯಲ್ಲಿ ಬುಧವಾರ ಮಾತನಾಡಿದ ಸತೀಶ್ ಜಾರಕಿಹೊಳಿ, ಹೊರ ದೇಶ ಪ್ರವಾಸಕ್ಕೆ ಹೋಗುವ ವಿಚಾರ ಇದೆ. ಹೀಗೆಯೇ ಅಂತ ನಿರ್ಧಾರ ಮಾಡಿಲ್ಲ, ಅದಕ್ಕೆ ಸಮಯ ಬರಬೇಕು. ಪ್ರವಾಸ ಮಾಡುವ ಪ್ಲ್ಯಾನ್ ಇದ್ದೇ ಇದೆ ಎಂದು ಹೇಳಿದ್ದಾರೆ.
ಬಹಳಷ್ಟು ಜನ ಪ್ರವಾಸಕ್ಕೆ ಹೋಗುತ್ತಾರೆ, ನಾವೂ ಹೋಗುತ್ತೇವೆ. ಪಕ್ಷದ ಅಧ್ಯಕ್ಷರು, ಸಿಎಂ ಗಮನಕ್ಕೆ ತಂದು ಪ್ರವಾಸಕ್ಕೆ ಹೋಗ್ತೇವೆ ಎಂದು ‘ಟಿವಿ9’ಗೆ ಅವರು ತಿಳಿಸಿದ್ದಾರೆ.
ಸತೀಶ್ ಜಾರಕಿಹೊಳಿ ಶಾಸಕರೊಂದಿಗೆ ಮೈಸೂರು ಪ್ರವಾಸಕ್ಕೆ ಹೊರಟಿದ್ದ ವಿಚಾರ ಇತ್ತೀಚೆಗೆ ರಾಜ್ಯ ರಾಜಕಾರಣದಲ್ಲಿ ಕೋಲಾಹಲಕ್ಕೆ ಕಾರಣವಾಗಿತ್ತು. ಸತೀಶ್ ಅವರು ಬೆಳಗಾವಿ ರಾಜಕಾರಣದಲ್ಲಿ ಇತರರ ಹಸ್ತಕ್ಷೇಪದಿಂದ ರೋಸಿಹೋಗಿ ಅಸಮಾಧಾನದಿಂದ ಬಲ ಪ್ರದರ್ಶನಕ್ಕೆ ಮುಂದಾಗಿದ್ದಾರೆ ಎಂದೇ ಹೇಳಲಾಗಿತ್ತು. ನಂತರ ಕಾಂಗ್ರೆಸ್ ಹೈಕಮಾಂಡ್ ನಾಯಕರು ಅವರನ್ನು ಸಮಾಧಾನಪಡಿಸಿದ್ದರು.
ಸತೀಶ್ ಜಾರಕಿಹೊಳಿಗೆ ಕಾಂಗ್ರೆಸ್ನಲ್ಲಿ ಹಿಂಸೆ ಆಗ್ತಿದೆ ಎಂಬ ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಆ ರೀತಿ ಏನೂ ಆಗುತ್ತಿಲ್ಲ. ಯಾವುದೇ ಗೊಂದಲಕ್ಕೂ ನಮ್ಮ ಪಕ್ಷದಲ್ಲಿ ಅವಕಾಶ ಇಲ್ಲ ಎಂದು ‘ಟಿವಿ9’ಗೆ ತಿಳಿಸಿದ್ದಾರೆ.
ಬೆಂಗಳೂರು ಜಿಲ್ಲೆಗೆ ಕನಕಪುರ ಸೇರಿಸುವ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅದು ಡಿಕೆಶಿ ಮತ್ತು ಹೆಚ್ಡಿ ಕುಮಾರಸ್ವಾಮಿ ನಡುವಣ ಫೈಟ್ ಇರಬಹುದು. ಅಂತಿಮವಾಗಿ ಎಲ್ಲಿಗೆ ಸೇರಬೇಕು ಅಂತಾ ಜನ ತೀರ್ಮಾನ ಮಾಡಬೇಕು. ನಮ್ಮ ನಿರ್ಧಾರದಿಂದ ಜನರಿಗೆ ತೊಂದರೆ ಆಗಬಾರದು. ಇದಕ್ಕೆ ಸರ್ಕಾರ ಕೂಡ ಒಪ್ಪಬೇಕು ಎಂದು ಹೇಳಿದ್ದಾರೆ.
ಬೆಳಗಾವಿ ಪಾಲಿಕೆ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿ ಶಾಸಕ ಅಭಯ ಪಾಟೀಲ್ ವಿರುದ್ಧ ಸತೀಶ್ ಜಾರಕಿಹೊಳಿ ಕಿಡಿಕಾರಿದ್ದಾರೆ. ಬೆಳಗಾವಿ ಪಾಲಿಕೆಯಲ್ಲಿ ಸಭೆಯ ಬಳಿಕ ಮಾತನಾಡಿದ ಅವರು, ಮೊನ್ನೆ ನಡೆದ ಸಭೆಯಲ್ಲಿ ಒಂದೇ ನಿರ್ಣಯ ಪಾಸ್ ಆಗಿದೆ. ಪಾಲಿಕೆಯ ಕಮಿಷನರ್ ವಿರುದ್ಧ ಒಂದೇ ನಿರ್ಣಯ ಅಂದು ಪಾಸ್ ಆಗಿತ್ತು. ರಾಜ್ಯಪಾಲರಿಗೆ ಕ್ರಮ ಕೈಗೊಳ್ಳಲಿ ಅಂತಾ ಪತ್ರ ಬರೆದಿದ್ದಾರೆ. ಅಧಿಕಾರಿ ವಿರುದ್ಧ ಭ್ರಷ್ಟಾಚಾರ ಸೇರಿ ಯಾವುದೇ ಆರೋಪ ಬಂದಿಲ್ಲ. ಯಾವುದೇ ಗಂಭೀರ ಆರೋಪದ ನಿರ್ಣಯ ಅಲ್ಲ. ಕೇವಲ ದಿನಾಂಕ ಬದಲಾವಣೆ ಆದ ವಿಷಯ ಸಭೆಯಲ್ಲಿ ಚರ್ಚೆ ಆಗಿದೆ. ರಾಜ್ಯ ಸರ್ಕಾರಕ್ಕೆ ಪತ್ರ ಬರೆಯೋದು ಬಿಟ್ಟು, ಕೇಂದ್ರದ ಏಜೆನ್ಸಿಗಳಿಗೆ ಪತ್ರ ಬರೆದು ಅಧಿಕಾರಿಗಳನ್ನು ಬ್ಲಾಕ್ ಮೇಲ್ ಮಾಡ್ತಿದ್ದಾರೆ. ಅಭಯ್ ಪಾಟೀಲ್ ದುರುದ್ದೇಶದಿಂದ ತೊಂದರೆ ಆಗ್ತಿದೆ ಎಂದು ಇಂದು ಪ್ರತಿಭಟನೆ ಆಗಿದೆ ಎಂದು ಸತೀಶ್ ಜಾರಕಿಹೊಳಿ ದೂರಿದರು.
ಇದನ್ನೂ ಓದಿ: ಮತ್ತೊಂದು ಸುತ್ತಿನ ರಾಜಕೀಯ ಕದನಕ್ಕೆ ಸಾಕ್ಷಿ ಆಯ್ತು ಬೆಳಗಾವಿ ಪಾಲಿಟಿಕ್ಸ್, ಕಾಂಗ್ರೆಸ್ನಲ್ಲಿ ಕಂಪನ
ತಮ್ಮ ವಿರುದ್ಧ ಮೇಯರ್ ರಾಜ್ಯಪಾಲರಿಗೆ ದೂರು ನೀಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅಂತಹ 10 ಪತ್ರಗಳನ್ನು ನಾವೂ ರಾಜ್ಯಪಾಲರಿಗೆ ಬರೆಯುತ್ತೇವೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ