ಬೆಂಗಳೂರು, ಜನವರಿ 23: ನಿಗಮ ಮಂಡಳಿಗಳಿಗೆ (Corporation Board) ಶಾಸಕರ (MLA) ನೇಮಕವೆಲ್ಲ ಕ್ಲಿಯರ್ ಆಗಿದೆ. ಪಕ್ಷದ ಕಾರ್ಯಕರ್ತರ ನೇಮಕದ ಬಗ್ಗೆ ಚರ್ಚೆಯಾಗುತ್ತಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಜತೆ ಚರ್ಚೆ ನಡೆಸುತ್ತಿದ್ದೇವೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರು ಪಟ್ಟಿಗೆ ಸಹಿ ಹಾಕಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಿಗಮ ಮಂಡಳಿ ನೇಮಕ ಬಗ್ಗೆ ಡಾ. ಜಿ ಪರಮೇಶ್ವರ್ ಹೇಳಿಕೆ ವಿಚಾರವಾಗಿ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎಲ್ಲರ ಅಭಿಪ್ರಾಯ ಪಡೆಯಲು ಕಷ್ಟವಾಗುತ್ತೆ ಎಂದರು.
ಅಸ್ಸಾಂನ ಗುವಾಹಟಿಯಲ್ಲಿ ರಾಹುಲ್ ಗಾಂಧಿ ಯಾತ್ರೆಗೆ ತಡೆವೊಡ್ಡಿದ ವಿಚಾರವಾಗಿ ಮಾತನಾಡಿದ ಅವರು, ಪಾದಯಾತ್ರೆ ಮಟ್ಟು ಹಾಕುವುದು ಸ್ವಾತಂತ್ರ್ಯವನ್ನು ಕಸಿದ ಹಾಗೆ. ದೇಶದ ಸಮಸ್ಯೆಗಳಿಗಾಗಿ ರಾಹುಲ್ ಗಾಂಧಿ ಪಾದಯಾತ್ರೆ ಮಾಡುತ್ತಿದ್ದಾರೆ. ಅದನ್ನು ತಡೆಯುವ ಕೆಲಸ ಬಿಜೆಪಿ, ಹಲವು ಪುಂಡರು ಮಾಡುತ್ತಿದ್ದಾರೆ. ಇದಕ್ಕಾಗಿ ಬಿಜೆಪಿಯ ವಿರುದ್ಧ ಕಾಂಗ್ರೆಸ್ ಪಕ್ಷ ಪ್ರತಿಭಟನೆ ಮಾಡುತ್ತಿದೆ ಎಂದು ಹೇಳಿದರು. ನೀಡಿದ್ದ ಸಂಬಳವನ್ನು ವಾಪಸ್ ನೀಡುವಂತೆ ಅರ್ಚಕರಿಗೆ ಸರ್ಕಾರ ನೋಟಿಸ್ ನೀಡಿದ ವಿಚಾರದ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿಗಳು ಪ್ರತಿಕ್ರಿಯೆ ನಿಡದೆ ತೆರಳಿದರು.
ಇದನ್ನೂ ಓದಿ: ನಿಗಮ ಮಂಡಳಿ ನೇಮಕ: ಕಾಂಗ್ರೆಸ್ ಹೈಕಮಾಂಡ್, ರಾಜ್ಯ ನಾಯಕರ ನಡುವಣ ಬಿಕ್ಕಟ್ಟು ಮುಂದುವರಿಕೆ
ಇಂತಹ ವಿಚಾರಗಳನ್ನು ರಾಜ್ಯ ನಾಯಕರಿಗೆ ಬಿಟ್ಟು ಕೊಡಿ ಎಂದು ಗೃಹ ಸಚಿವ ಪರಮೇಶ್ವರ ಮಂಗಳವಾರ ಕಾಂಗ್ರೆಸ್ ಹೈಕಮಾಂಡ್ಗೆ ಹೇಳಿದ್ದಾರೆ.
ಹೈಕಮಾಂಡ್ ನಮ್ಮನ್ನು ಸಂಪರ್ಕಿಸಿಲ್ಲ. ಅವರು ನಮ್ಮ ಶಿಫಾರಸುಗಳನ್ನು ಸ್ವೀಕರಿಸಿಲ್ಲ. ಜಿಲ್ಲಾ ಮಟ್ಟದಲ್ಲಿ ಯಾರು ಕೆಲಸ ಮಾಡಿದ್ದಾರೆ ಎಂಬುದು ನಮಗೆ ಗೊತ್ತಿದೆಯೇ ಹೊರತು ಹೈಕಮಾಂಡ್ಗೆ ಅಲ್ಲ. ಹೈಕಮಾಂಡ್ ಇಂತಹ ವಿಚಾರಗಳನ್ನು ಸಿಎಂ ಹಾಗೂ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಿಗೆ ಬಿಡಬೇಕು ಎಂದು ಪರಮೇಶ್ವರ ಹೇಳಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲಾ ಅವರು ರಾಜ್ಯ ನಾಯಕರೊಂದಿಗೆ ಸಮಾಲೋಚನೆ ನಡೆಸದೆ ನೇಮಕ ಮಾಡಿದ್ದಾರೆ ಎಂದು ಪರಮೇಶ್ವರ ಆರೋಪಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:52 pm, Tue, 23 January 24