11 ದಿನ ಉಪವಾಸ ಮಾಡಿದ್ರೆ ಮನುಷ್ಯ ಬದುಕಲು ಸಾಧ್ಯವಿಲ್ಲ, ಮೋದಿ ವ್ರತದ ಮೇಲೆ ಮಾಜಿ ಸಿಎಂ ಅನುಮಾನ
ಶ್ರೀರಾಮ ಮಂದಿರದಲ್ಲಿನ ಬಾಲರಾಮನ ಪ್ರಾಣಪ್ರತಿಷ್ಠೆ ಸಮಾರಂಭದ ‘ಯಜಮಾನತ್ವ’ ವಹಿಸಿಕೊಂಡಿರುವ ಕಾರಣದಿಂದ ಪ್ರಧಾನಿ ನರೇಂದ್ರ ಮೋದಿ ಅವರು11 ದಿನಗಳ ಕಾಲ ಕಠಿಣ ‘ಯಮ ನಿಯಮ’ ವ್ರತಾಚಾರಣೆ ಕೈಗೊಂಡಿದ್ದರು. ಆದ್ರೆ, ಮೋದಿ ಅವರ 11 ದಿನಗಳ ಉಪವಾಸ ವ್ರತದ ಮೇಲೆ ಮಾಜಿ ಮುಖ್ಯಮಂತ್ರಿ ಅನುಮಾನ ವ್ಯಕ್ತಪಡಿಸಿದ್ದಾರೆ.
ಚಿಕ್ಕಬಳ್ಳಾಪುರ, (ಜನವರಿ 23): ಆಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ (Ayodhya Ram Mandir) ಲೋಕಾರ್ಪಣೆಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅಮೃತ ಹಸ್ತದಿಂದ ರಾಮಲಲ್ಲಾ ಪ್ರಾಣಪ್ರತಿಷ್ಠೆ ನೆರವೇರಿಸಿದ್ದಾರೆ. ರಾಮ ಮಂದಿರ ಪ್ರಾಣಪ್ರತಿಷ್ಠೆ ಹಾಗೂ ಪೂಜಾ ವಿಧಿವಿಧಾನ ಪೂರೈಸಿದ ಪ್ರಧಾನಿ ಮೋದಿ, ರಾಮ ಮಂದಿರ ಆವರಣದಲ್ಲಿ ಆಯೋಜಿಸದ ಕಾರ್ಯಕ್ರಮದಲ್ಲಿ ತಮ್ಮ 11 ದಿನಗಳ ಕಠಿಣ ಉಪವಾಸ ವೃತ ಅಂತ್ಯಗೊಳಿಸಿದ್ದಾರೆ. ಸ್ವಾಮೀಜಿಗಳು ಪ್ರಧಾನಿ ಮೋದಿಗೆ ಶ್ರೀರಾಮನ ಪ್ರಸಾದ ನೀಡಿ ಕಠಿಣ ವೃತ ಪೂರ್ಣಗೊಳಿಸಿದ್ದಾರೆ. ಆದ್ರೆ, ನರೇಂದ್ರ ಮೋದಿ ಉಪವಾಸ ಮಾಡಿದ್ದೇ ಅನುಮಾನ ಎಂದು ಮಾಜಿ ಮುಖ್ಯಂತ್ರಿ ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ವೀರಪ್ಪ ಮೊಯ್ಲಿ, ರಾಮಲಲ್ಲಾ ಪ್ರತಿಷ್ಠಾಪನಾ ಕಾರ್ಯಕ್ರಮದ ಅಂಗವಾಗಿ ಮೋದಿ ಉಪವಾಸ ಮಾಡಿಲ್ಲ. ಏಳನೀರು ಮಾತ್ರ ಕುಡಿದು ಉಪವಾಸ ಮಾಡಿದ್ರೆ ಒಂದೆರೆಡು ದಿನದಲ್ಲಿ ಮನುಷ್ಯ ಬೀಳುತ್ತಾನೆ. 11 ದಿನಗಳ ಉಪವಾಸ ಮಾಡಿದ್ರೆ ಮನುಷ್ಯ ಬದುಕಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಉಪವಾಸ ವ್ರತದ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠೆಗೂ ಮುನ್ನ ಮೋದಿಯವರ ವ್ರತಾಚರಣೆ ಹೇಗಿರುತ್ತದೆ?
ವೈದ್ಯರ ಅಭಿಪ್ರಾಯದ ಪ್ರಕಾರ ಅದು ಅಸಾಧ್ಯ. ಉಪವಾಸ ಅಂತ ಹೇಳಿ ಮೋದಿ ಬಹಳ ಜೋರಾಗಿ ಒಡಾಡಿದ್ರು. ಉಪವಾಸ ಇದ್ದ ಹಾಗೆ ನರೇಂದ್ರ ಮೋದಿ ಕಾಣಲಿಲ್ಲ. ದೇವರಿಗೆ ಇಚ್ಛೆ ಪ್ರಕಾರ ಏನು ಬೇಕಾದರೂ ಮಾಡಲಿ. ಅದ್ರೆ ಇವರ ನಾಟಕ ಇನ್ನೂ ಮುಂದೆ ನಡೆಯಲ್ಲ ಎಂದರು.
ಗುಜರಾತ್ ಹತ್ಯಾಕಾಂಡದ ವೇಳೆ ಮೋದಿ ರಾಜಧರ್ಮ ಪಾಲನೆ ಮಾಡಲಿಲ್ಲ. ಕಾನೂನು ಪರಿಪಾಲನೆ ಮಾಡಲಿಲ್ಲ. ರಾಜಧರ್ಮ ಪಾಲನೆ ಮಾಡದೆ ಶ್ರೀರಾಮನ ಗರ್ಭಗುಡಿಯಲ್ಲಿ ಕೂತು ಪ್ರಾಣ ಪ್ರತಿಷ್ಠಾಪನೆ ಮಾಡಿದ್ದು ವಿಪರ್ಯಾಸ. ನಾನು ಬೆಳಿಗ್ಗೆ ವಾಕಿಂಗ್ ಮಾಡುವಾಗ ಡಾಕ್ಟರ್ ಬಳಿ ಚರ್ಚೆ ಮಾಡಿದೆ. 11 ದಿನ ಉಪವಾಸ ಮಾಡಿದ್ರೆ ಮನುಷ್ಯ ಬದುಕಲು ಸಾಧ್ಯವಿಲ್ಲ. ಒಂದು ವೇಳೆ ಮನುಷ್ಯ ಬದುಕಿದ್ರೆ ಪವಾಡ. ಹಾಗಾಗಿ ಅ ಉಪವಾಸ ಮಾಡಿರುವುದು ಅನುಮಾನ. ಉಪವಾಸ ಮಾಡದೆ ಗರ್ಭಗುಡಿಗೆ ಹೋಗಿ ಪೂಜೆ ಮಾಡಿದ್ರೆ ಸ್ಥಳ ಅಪವಿತ್ರ ಆಗಲಿದೆ. ಶಕ್ತಿ ಉದ್ಭವವಾಗಲ್ಲ ಎಂದರು.
ರಾಮಮಂದಿರದ ಕೆಲಸ ಸಂಪೂರ್ಣ ಆಗಲಿಲ್ಲ. ನರೇಂದ್ರ ಮೋದಿ ಪ್ರಾಣ ಪ್ರತಿಷ್ಟಾಪನೆ ನಡೆಸಿಕೊಟ್ಟಿದ್ದು ತಪ್ಪು. ನರೇಂದ್ರ ಮೋದಿ ಗರ್ಭಗುಡಿಗೆ ಪ್ರವೇಶ ಮಾಡಿದ್ದು ಸಹ ತಪ್ಪು. ಅವರ ಕೈಗೆ ತೀರ್ಥ ಬಾಯಿಗೆ ಕೊಡುವುದು ಇದು ಹಿಂದೂ ಧರ್ಮಕ್ಕೆ ಬಂದ ದುಸ್ಥಿತಿ ಎಂದು ಹೇಳಿದರು.
ಜನವರಿ 12 ರಿಂದ ಉಪವಾಸ ವ್ರತ ಆರಂಭಿಸಿದ್ದ ಮೋದಿ
ಜ.22 ರಂದು ಅಯೋಧ್ಯೆಯ ರಾಮ ಮಂದಿರ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕಾಗಿ (ಜನವರಿ 12 ರಿಂದ ಪ್ರಧಾನಿ ಮೋದಿ ಉಪವಾಸ ವ್ರತ ಕೈಗೊಂಡಿದ್ದರು. ಮಹಾರಾಷ್ಟ್ರದ ನಾಸಿಕ್ ನಲ್ಲಿ ಪ್ರಸಿದ್ಧ ಕ್ಷೇತ್ರ ಶ್ರೀ ಕಲಾರಾಮ್ ದೇವಾಲಯದಲ್ಲಿ ದರ್ಶನ ಪಡೆದ ಪ್ರಧಾನಿ ಮೋದಿ ದೇವಾಲಯದಲ್ಲಿ ವಿಶೇಷ ಪೂಜೆ ಮಾಡುವ ಮೂಲಕ ಉಪವಾಸ ವ್ರತ ಶುರು ಮಾಡಿದ್ದರು.
ಈ ಬಗ್ಗೆ ಟ್ವೀಟ್ ಮಾಡಿದ್ದ ಪ್ರಧಾನಿ ಮೋದಿ, ರಾಮ ಮಂದಿರದ ಉದ್ಘಾಟನೆಗೆ ಇನ್ನು 11 ದಿನಗಳಷ್ಟೇ ಬಾಕಿ ಇದೆ. ಈ ಪ್ರಮುಖ ಕಾರ್ಯಕ್ರಮದಲ್ಲಿ ನಾನೂ ಭಾಗಿಯಾಗುತ್ತಿರುವುದು ನನ್ನ ಅದೃಷ್ಟ. ಮಂದಿರದಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆಯ ವೇಳೆ ಭಾರತದ ಜನತೆಯನ್ನು ಪ್ರತಿನಿಧಿಸುವುದಕ್ಕೆ ಭಗವಾನ್ ರಾಮ ನನ್ನನ್ನು ನಿಮಿತ್ತವಾಗಿಸಿದ್ದಾನೆ. ಇದನ್ನು ಗಮನದಲ್ಲಿಟ್ಟುಕೊಂಡು ನಾನು ಇಂದಿನಿಂದ 11 ದಿನಗಳ ವಿಶೇಷ ಉಪವಾಸ ವ್ರತವನ್ನು ಪ್ರಾರಂಭಿಸುತ್ತಿದ್ದೇನೆ. ನಾನು ಎಲ್ಲ ಜನರ ಆಶೀರ್ವಾದವನ್ನು ಕೇಳುತ್ತಿದ್ದೇನೆ. ಈ ಕ್ಷಣದಲ್ಲಿ, ನನ್ನ ಭಾವನೆಗಳನ್ನು ಪದಗಳಲ್ಲಿ ವ್ಯಕ್ತಪಡಿಸುವುದು ತುಂಬಾ ಕಷ್ಟ, ಆದರೆ ನಾನು ಪ್ರಯತ್ನಿಸಿದ್ದೇನೆ ಎಂದು ಬರೆದುಕೊಂಡಿದ್ದರು.
ನಂತರ ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದಲ್ಲಿ ರಾಮ ಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಅತ್ಯಂತ ಸಾಂಗವಾಗಿ ನೆರವೇರಿದ ಬಳಿಕ ಪ್ರಧಾನಿ ಮೋದಿ 11 ದಿನಗಳ ಉಪವಾಸ ಅಂತ್ಯಗೊಳಿಸಿದ್ದರು. ಸ್ವಾಮೀಜಿಗಳು ಪ್ರಧಾನಿ ಮೋದಿಗೆ ಶ್ರೀರಾಮನ ಪ್ರಸಾದ ನೀಡಿ ಕಠಿಣ ವ್ರತ ಪೂರ್ಣಗೊಳಿಸಿದ್ದರು.
Published On - 3:13 pm, Tue, 23 January 24