ನಿಗಮ ಮಂಡಳಿ ನೇಮಕ: ಕಾಂಗ್ರೆಸ್ ಹೈಕಮಾಂಡ್, ರಾಜ್ಯ ನಾಯಕರ ನಡುವಣ ಬಿಕ್ಕಟ್ಟು ಮುಂದುವರಿಕೆ

ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ರಾಜ್ಯ ನಾಯಕರನ್ನು ಸಂಪರ್ಕಿಸದೆ ನಿಗಮ ಮಂಡಳಿ ನೇಮಕ ಪಟ್ಟಿ ಅಂತಿಮಗೊಳಿಸಿದ್ದಾರೆ ಎಂದು ಕರ್ನಾಟಕ ಗೃಹ ಸಚಿವ ಡಾ. ಜಿ ಪರಮೇಶ್ವರ ಆರೋಪಿಸಿದ್ದಾರೆ. ಇಂತಹ ವಿಚಾರಗಳನ್ನು ಪಕ್ಷದ ಕೇಂದ್ರ ನಾಯಕರು ರಾಜ್ಯ ನಾಯಕರಿಗೆ ಬಿಟ್ಟು ಕೊಡಲಿ ಎಂದು ಪರಮೇಶ್ವರ ಹೇಳಿದ್ದಾರೆ.

ನಿಗಮ ಮಂಡಳಿ ನೇಮಕ: ಕಾಂಗ್ರೆಸ್ ಹೈಕಮಾಂಡ್, ರಾಜ್ಯ ನಾಯಕರ ನಡುವಣ ಬಿಕ್ಕಟ್ಟು ಮುಂದುವರಿಕೆ
ನಿಗಮ ಮಂಡಳಿ ನೇಮಕ: ಕಾಂಗ್ರೆಸ್ ಹೈಕಮಾಂಡ್, ರಾಜ್ಯ ನಾಯಕರ ನಡುವಣ ಬಿಕ್ಕಟ್ಟು ಮುಂದುವರಿಕೆ
Follow us
TV9 Web
| Updated By: Ganapathi Sharma

Updated on: Jan 23, 2024 | 12:37 PM

ಬೆಂಗಳೂರು, ಜನವರಿ 23: ನಿಗಮ ಮಂಡಳಿಗಳ ನೇಮಕಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹೈಕಮಾಂಡ್ (Congress High Command) ಮತ್ತು ರಾಜ್ಯ ನಾಯಕತ್ವದ ನಡುವಿನ ಜಟಾಪಟಿ ಮುಂದುವರಿದಿದೆ. ಹೈಕಮಾಂಡ್ ನಾಯಕರು ಕಳುಹಿಸಿದ್ದ ಪಟ್ಟಿಗೆ ಸಿಎಂ ಸಿದ್ದರಾಮಯ್ಯ (Siddaramaiah) ಮತ್ತು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ವಿರೋಧ ವ್ಯಕ್ತಪಡಿಸಿದ್ದು, ಮರುಪರಿಶೀಲಿಸುವಂತೆ ಸೂಚಿಸಿದ್ದರು. ಕರ್ನಾಟಕದ ಗೃಹ ಸಚಿವ ಜಿ ಪರಮೇಶ್ವರ ಅವರು ನಿರ್ಧಾರ ಕೈಗೊಳ್ಳುವ ಮುನ್ನ ರಾಜ್ಯ ನಾಯಕರನ್ನು ಸಂಪರ್ಕಿಸದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎಂಟು ತಿಂಗಳು ಕಳೆದರೂ ಇನ್ನೂ ಮಂಡಳಿ, ನಿಗಮಗಳಿಗೆ ನೇಮಕಾತಿ ನಡೆದಿಲ್ಲ. ಶೀಘ್ರವೇ ನೇಮಕಾತಿ ಮಾಡುವಂತೆ ಶಾಸಕರು ಹಾಗೂ ಪಕ್ಷದ ಕಾರ್ಯಕರ್ತರಿಂದ ರಾಜ್ಯ ನಾಯಕರು ಒತ್ತಡ ಹೇರುತ್ತಿದ್ದಾರೆ.

ಬಹಳ ವಿಳಂಬದ ನಂತರ ಶನಿವಾರ ಪಕ್ಷದ ಹೈಕಮಾಂಡ್ ರಾಜ್ಯ ನಾಯಕರಿಗೆ ಪಟ್ಟಿ ಕಳುಹಿಸಿತ್ತು. ಆದರೆ, ರಾಜ್ಯ ನಾಯಕರ ಸಲಹೆ ಪಡೆಯದೆ ಕೊನೆಯ ಕ್ಷಣದಲ್ಲಿ ಪಟ್ಟಿಗೆ ಕೆಲವು ಹೆಸರುಗಳನ್ನು ಸೇರ್ಪಡೆಗೊಳಿಸಿರುವುದು ಸಿಎಂ ಹಾಗೂ ಉಪಮುಖ್ಯಮಂತ್ರಿಗಳ ಅಸಮಾಧಾನಕ್ಕೆ ಕಾರಣವಾಗಿತ್ತು. ಇದರಿಂದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಬೆಂಗಳೂರಿಗೆ ಭೇಟಿ ನೀಡಿ ರಾಜ್ಯ ನಾಯಕರ ಜತೆ ಸಮಾಲೋಚನೆ ನಡೆಸಬೇಕಾಯಿತು. ಸಭೆಯಲ್ಲಿ ರಾಜ್ಯ ನಾಯಕರು ಕಳುಹಿಸಿದ ಹೆಸರುಗಳನ್ನು ಅನುಮೋದಿಸುವಂತೆ ಸಿಎಂ ಮತ್ತು ಡಿಸಿಎಂ ಪಕ್ಷವನ್ನು ಮನವಿ ಮಾಡಿದ್ದಾರೆ.

ನಿಗಮ ಮಂಡಳಿ ನೇಮಕ: ಸ್ಥಳೀಯ ನಾಯಕರಿಗೆ ಬಿಟ್ಟುಬಿಡಬೇಕೆಂದ ಪರಮೇಶ್ವರ

ಇಂತಹ ವಿಚಾರಗಳನ್ನು ರಾಜ್ಯ ನಾಯಕರಿಗೆ ಬಿಟ್ಟು ಕೊಡಿ ಎಂದು ಗೃಹ ಸಚಿವ ಪರಮೇಶ್ವರ ಮಂಗಳವಾರ ಕಾಂಗ್ರೆಸ್ ಹೈಕಮಾಂಡ್​​ಗೆ ಹೇಳಿದ್ದಾರೆ.

ಹೈಕಮಾಂಡ್ ನಮ್ಮನ್ನು ಸಂಪರ್ಕಿಸಿಲ್ಲ. ಅವರು ನಮ್ಮ ಶಿಫಾರಸುಗಳನ್ನು ಸ್ವೀಕರಿಸಿಲ್ಲ. ಜಿಲ್ಲಾ ಮಟ್ಟದಲ್ಲಿ ಯಾರು ಕೆಲಸ ಮಾಡಿದ್ದಾರೆ ಎಂಬುದು ನಮಗೆ ಗೊತ್ತಿದೆಯೇ ಹೊರತು ಹೈಕಮಾಂಡ್​ಗೆ ಅಲ್ಲ. ಹೈಕಮಾಂಡ್ ಇಂತಹ ವಿಚಾರಗಳನ್ನು ಸಿಎಂ ಹಾಗೂ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಿಗೆ ಬಿಡಬೇಕು ಎಂದು ಪರಮೇಶ್ವರ ಹೇಳಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲಾ ಅವರು ರಾಜ್ಯ ನಾಯಕರೊಂದಿಗೆ ಸಮಾಲೋಚನೆ ನಡೆಸದೆ ನೇಮಕ ಮಾಡಿದ್ದಾರೆ ಎಂದು ಪರಮೇಶ್ವರ ಆರೋಪಿಸಿದ್ದಾರೆ.

ಇದನ್ನೂ ಓದಿ: ಪಿಎಸ್​ಐ ನೇಮಕಾತಿ ಅಕ್ರಮ: ಜಂಟಿ ಅಧಿವೇಶನದಲ್ಲಿ ತನಿಖಾ ವರದಿ ಮಂಡಿಸಲು ಸಿಎಂ ಸಿದ್ದರಾಮಯ್ಯ ಚಿಂತನೆ

ನೇಮಕಾತಿ ಮಾಡುವ ಮೊದಲು ಜಿಲ್ಲೆಯ ನಾಯಕರನ್ನು ಸಂಪರ್ಕಿಸಬೇಕು. ಆದರೆ, ಇಲ್ಲಿ, ನಮ್ಮ ಪ್ರಧಾನ ಕಾರ್ಯದರ್ಶಿ ನೇಮಕಾತಿಗಳನ್ನು ಮಾಡುತ್ತಿದ್ದಾರೆ. ಪಕ್ಷಕ್ಕಾಗಿ ಯಾರು ದುಡಿದಿದ್ದಾರೆ ಎಂಬುದು ನಮಗೆ ಗೊತ್ತು. ಅಂಥವರಿಗೆ ಹುದ್ದೆಗಳು ಸಿಗಬೇಕು. ಕೆಲಸ ಮಾಡದವರಿಗೆ ಪ್ರಮುಖ ಹುದ್ದೆಗಳು ಸಿಕ್ಕರೆ ನಮ್ಮ ನಿಜವಾದ ಕಾರ್ಯಕರ್ತರಿಗೆ ಗಲಿಬಿಲಿಯಾಗುವುದು ಸ್ಪಷ್ಟವಾಗಿದೆ ಎಂದು ಪರಮೇಶ್ವರ ಹೇಳಿದ್ದಾರೆ.

36 ಶಾಸಕರು ಮತ್ತು 39 ಮಂದಿ ಕಾರ್ಯಕರ್ತರನ್ನು ವಿವಿಧ ಮಂಡಳಿ ಮತ್ತು ನಿಗಮಗಳಿಗೆ ನೇಮಕ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಕೆ ಶಿವಕುಮಾರ್ ಈಗಾಗಲೇ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ