ರಮೇಶ್ ಜಾರಕಿಹೊಳಿ vs ಲಕ್ಷ್ಮಣ ಸವದಿ, ಅಲ್ಪಮತಿಗಳ ಬಗ್ಗೆ ನಾನು ಹೆಚ್ಚು ಒತ್ತುಕೊಡುವುದಿಲ್ಲ ಎಂದ ಅಥಣಿ ಶಾಸಕ
ಬೆಳಗಾವಿಯ ಬಿಜಿಪಿ ಮತ್ತು ಕಾಂಗ್ರೆಸ್ ಶಾಸಕರ ನಡುವೆ ಮಾತಿನ ವಾಗ್ಯುದ್ದ ಶುರುವಾಗಿದೆ. ಅಯೋಧ್ಯೆ ರಾಮ ಮಂದಿರಕ್ಕೆ ದೇಣಿಗೆ ನೀಡಿದ ಮತ್ತು ಉದ್ಘಾಟನೆ ವಿಚಾರವಾಗಿ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಮತ್ತು ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಮಧ್ಯೆ ಮುಸುಕಿನ ಗುದ್ದಾಟ ನಡೆದಿದೆ. ಏನಿದು ಆಹ್ವಾನ ಪಾಲಿಟಿಕ್ಸ್ ಇಲ್ಲಿದೆ ಓದಿ...
ಬೆಳಗಾವಿ, ಜನವರಿ 23: ಅಯೋಧ್ಯೆ ರಾಮ ಮಂದಿರದಲ್ಲಿ (Ayodhya Ram Mandir) ರಾಮಲಲ್ಲಾ (Ram Lalla) ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ಆಹ್ವಾನ ಮತ್ತು ದೇವಸ್ಥಾನಕ್ಕೆ ದೇಣಿಗೆ ನೀಡಿರುವ ವಿಚಾರವಾಗಿ ಬೆಳಗಾವಿಯ (Belagavi) ಘಟಾನು ಘಟಿ ನಾಯಕರ ನಡುವೆ ವಾಗ್ಯುದ್ದ ಶರುವಾಗಿದೆ. ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿರುವ ವಿಚಾರವಾಗಿ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ (Ramesh Jarkiholi) ಮತ್ತು ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ (Laxman Savadi) ನಡುವೆ ಮಾತಿನ ಜಟಾಪಟಿ ನಡೆದಿದೆ. “ಪ್ರತಿಯೊಬ್ಬರು ಅಲ್ಪಮತಿಗೆ ಹೊಳೆದಷ್ಟು ಮಾತನಾಡುತ್ತಾರೆ. ಅಲ್ಪಮತಿಗಳ ಬಗ್ಗೆ ನಾನು ಹೆಚ್ಚು ಒತ್ತುಕೊಡುವುದಿಲ್ಲ” ಎಂದು ಶಾಸಕ ಲಕ್ಷ್ಮಣ ಸವದಿ ಪರೋಕ್ಷವಾಗಿ ರಮೇಶ್ ಜಾರಕಿಹೊಳಿಗೆ ಅಲ್ಪಮತಿ ಎಂದು ಜರಿದರು.
ಅಥಣಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಮ ಮಂದಿರ ಆಹ್ವಾನ ಬಂದಿದೆಯಾ? ನೀವು ದೇಣಿ ಕೊಟ್ಟಿದ್ದೀರಾ? ಅಂತ ಮಾಧ್ಯಮದವರು ಪ್ರಶ್ನಿಸಿದರು. ಅದಕ್ಕೆ ನಾನು ಬಿಜೆಪಿಯಲ್ಲಿದ್ದಾಗ 10 ಲಕ್ಷ ರೂ. ದೇಣಿಗೆ ಕೊಟ್ಟಿರುವೆ ಎಂದು ಹೇಳಿದೆ. ಇಲ್ಲಿ ಯಾರೋ ಒಬ್ಬರು ಕೋಟಿ ಕೊಟ್ಟವರಿಗೆ ಕರೆದಿಲ್ಲಾ ಹತ್ತು ಲಕ್ಷ ಕೊಟ್ಟವರು ಏನು ದೊಡ್ಡ ವಿಷಯ ಅಂದಿದ್ದಾರೆ. ಅದರ ಬಗ್ಗೆ ನನಗೆ ಬೇಸರವೆ ಇಲ್ಲ ಎಂದರು.
ಇದನ್ನೂ ಓದಿ: ನಾನೇ ಲಕ್ಷ್ಮಣ, ಅಯೋಧ್ಯೆಗೆ ಈಗ ಹೋಗಲ್ಲ: ಲಕ್ಷ್ಮಣ ಸವದಿ
ನನಗೆ ಯಾಕೆ ಕರೆದಿಲ್ಲ ಅಂತ ಕೇಳಿಲ್ಲ. ನನ್ನ ತಂದೆ ತಾಯಿ ನನಗೆ ಲಕ್ಷ್ಮಣ ಅಂತ ಹೆಸರು ಇಟ್ಟಿದ್ದಾರೆ. ಶ್ರೀರಾಮನ ಸಹೋದರ ಲಕ್ಷ್ಮಣನ ಹೆಸರು ನನಗೆ ನಾಮಕರಣ ಮಾಡಿದ್ದಾರೆ. ಇವರು ಹಣ ಸಂಗ್ರಹ ಮಾಡುವಂತವರು. ಹಣ ಸಂಗ್ರಹ ಮಾಡಿ ರಾಮ ಮಂದಿರಕ್ಕೆ ಕೊಟ್ಟಿದ್ದಾರೆ ಎಂದು ಹೇಳುವ ಮೂಲಕ ರಮೇಶ್ ಜಾರಕಿಹೊಳಿ ಸ್ವಂತ ಹಣ ನೀಡದೇ ಸಂಗ್ರಹ ಮಾಡಿ ಕೊಟ್ಟಿದ್ದಾರೆ. ಈ ಶುಭ ಸಂದರ್ಭದಲ್ಲಿ ಚರ್ಚೆ ಬೇಡ. ಸಮಯ ಬಂದಾಗ ಚರ್ಚೆ ಮಾಡೋಣ ಅಂತಾ ಪರೋಕ್ಷವಾಗಿ ರಮೇಶ್ ಜಾರಕಿಹೊಳಿಗೆ ತೀರುಗೇಟು ನೀಡಿದರು.
ಬೆಳಗಾವಿಯ ಸವದಿ ಮತ್ತು ರಮೇಶ್ ಜಾರಕಿಹೊಳಿ ನಡುವೆ ಗುದ್ದಾಟವೇಕೆ?
ಅಯೋಧ್ಯೆ ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಆಹ್ವಾನ ನೀಡಿಲ್ಲ ಎಂದು ರಾಜ್ಯದ ಪ್ರಮುಖ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದು ರಾಜಕೀಯ ಬಣ್ಣ ಪಡೆದುಕೊಂಡಿತು. ಈ ವಿಚಾರವಾಗಿ ಶಾಸಕ ಲಕ್ಷ್ಮಣ ಸವದರಿ ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುವಾಗ “ಮಂದಿರಕ್ಕೆ ನಾನು 10 ಲಕ್ಷ ರೂ. ದೇಣಿಗೆ ಕೊಟ್ಟಿದ್ದೇನೆ. ನಾನು ಲಕ್ಷ್ಮಣ ಅಯೋಧ್ಯೆಗೆ ಹೋಗುವುದಿಲ್ಲ” ಎಂದು ಹೇಳಿದ್ದರು.
ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಮಾತಿಗೆ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ತಿರುಗೇಟು ನೀಡಿದ್ದರು. “ನಾನು ಒಂದು ಕೋಟಿ ರೂ. ದೇಣಿಗೆ ನೀಡಿದ್ದೇನೆ. ನನಗು ಕೂಡ ಸಮಾರಂಭಕ್ಕೆ ಆಹ್ವಾನ ಬಂದಿಲ್ಲ” ಎಂದು ಪರೋಕ್ಷವಾಗಿ ಲಕ್ಷ್ಮಣ ಸವದಿಗೆ ತಿರುಗೇಟು ನೀಡಿದ್ದರು. ಒಟ್ಟಿನಲ್ಲಿ ರಾಮಮಂದಿರಕ್ಕೆ ದೇಣಿಗೆ ನೀಡಿರುವ ಮತ್ತು ಆಹ್ವಾನದ ವಿಚಾರವಾಗಿ ಇಬ್ಬರು ನಾಯಕರ ನಡುವೆ ವಾಗ್ಯುದ್ದ ಶುರುವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:33 am, Tue, 23 January 24