ನಾನೇ ಲಕ್ಷ್ಮಣ, ಅಯೋಧ್ಯೆಗೆ ಈಗ ಹೋಗಲ್ಲ: ಲಕ್ಷ್ಮಣ ಸವದಿ

ಅಯೋಧ್ಯೆ ರಾಮ ಮಂದಿರ ಉದ್ಘಾಟನೆ, ಸಿಎಂ ಸಿದ್ದರಾಮಯ್ಯ, ಲೋಕಸಭೆ ಚುನಾವಣೆ, ಸಿಎಂ ವಿರುದ್ಧ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಹೇಳಿಕೆ ಮತ್ತಿತರ ವಿಚಾರಗಳ ಬಗ್ಗೆ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಪ್ರತಿಕ್ರಿಯೆ ಏನು? ಇಲ್ಲಿದೆ ನೋಡಿ.

ನಾನೇ ಲಕ್ಷ್ಮಣ, ಅಯೋಧ್ಯೆಗೆ ಈಗ ಹೋಗಲ್ಲ: ಲಕ್ಷ್ಮಣ ಸವದಿ
ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ
Follow us
TV9 Web
| Updated By: Ganapathi Sharma

Updated on: Jan 17, 2024 | 10:45 AM

ಕಲಬುರಗಿ, ಜನವರಿ 17: ‘ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ನಾನು ಹೋಗುವುದಿಲ್ಲ. ಮುಂದೆ ಯಾವಾಗಲಾದರೂ ಹೋಗುವೆ. ನಾನೇ ಲಕ್ಷ್ಮಣ ಇದ್ದೇನೆ’ ಎಂದು ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ (Laxman Savadi) ಹೇಳಿದರು. ಕಲಬುರಗಿ ಏರ್​ಪೋರ್ಟ್​ನಲ್ಲಿ ಮಾತನಾಡಿದ ಅವರು, ಅಯೋಧ್ಯೆ ರಾಮ ಮಂದಿರ (Ayodhya Ram Mandir) ಉದ್ಘಾಟನೆ, ಸಿಎಂ ಸಿದ್ದರಾಮಯ್ಯ, ಲೋಕಸಭೆ ಚುನಾವಣೆ, ಸಿಎಂ ವಿರುದ್ಧ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಹೇಳಿಕೆ ಮತ್ತಿತರ ವಿಚಾರಗಳ ಬಗ್ಗೆ ಪ್ರತಿಕ್ರಿಯಿಸಿದರು.

ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆದ್ದರೆ 5 ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಎಂಬ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಸವದಿ, ಅದು ಅವರ ವೈಯಕ್ತಿಕ ಅಭಿಪ್ರಾಯ ಎಂದರು. ಕಾಂಗ್ರೆಸ್ ಹೈಕಮಾಂಡ್ ಮನಸ್ಸು ಮಾಡಿದರೆ 5 ವರ್ಷವೂ ಅವರೇ ಸಿಎಂ ಆಗಬಹುದು. ಸಿಎಂ ಸ್ಥಾನದ ಬಗ್ಗೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿದೆ. ಅದು ಐದು ವರ್ಷವೋ ಎರಡು ವರ್ಷವೋ ಎಂಬುದನ್ನೂ ಹೈಕಮಾಂಡೇ ನಿರ್ಧರಿಸಲಿದೆ ಎಂದು ಸವದಿ ಹೇಳಿದರು.

ಅನಂತಕುಮಾರ್ ಹೆಗಡೆ ಹೇಳಿಕೆಗೆ ಆಕ್ಷೇಪ

ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಏಕವಚನದಲ್ಲಿ ವಾಗ್ದಾಳಿ ನಡೆಸಿದ ವಿಚಾರವಾಗಿ ಪ್ರತಿಕ್ರಿಯಿಸಿದ ಸವದಿ, ಈ ರೀತಿಯ ಹೇಳಿಕೆಗಳಿಂದಲೇ ಅವರ ಬೆಲೆ ಕಡಿಮೆಯಾಗುತ್ತದೆ. ಅನಂತಕುಮಾರ್ ಹೆಗಡೆ 5 ವರ್ಷ ನಾಪತ್ತೆಯಾಗಿದ್ದರು. ಕ್ಷೇತ್ರದ ಜನರನ್ನೂ ಸಂಸದ ಅನಂತಕುಮಾರ್​ ಹೆಗಡೆ ಭೇಟಿಯಾಗಿಲ್ಲ. ಈಗ ಲೋಕಸಭೆ ಟಿಕೆಟ್ ಪಡೆಯಲು ಅವರು ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದಾರೆ ಎಂದು ಸವದಿ ಹೇಳಿದ್ದಾರೆ.

ಇದನ್ನೂ ಓದಿ: ಟೆಂಟ್​​ನಲ್ಲಿ 2 ಗೊಂಬೆ ಇಟ್ಟು ರಾಮ, ರಾಮ ಎನ್ನುತ್ತಿದ್ದರು: ಅಯೋಧ್ಯೆ ಬಗ್ಗೆ ಸಚಿವ ರಾಜಣ್ಣ ವಿವಾದಿತ ಹೇಳಿಕೆ

ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿ ರಾಮ ಮಂದಿರದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದ್ದು, ಜನವರಿ 22 ರಂದು ನಡೆಯಲಿರುವ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಿಂದ ಹೊರಗುಳಿಯಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ. ಆರಂಭದಲ್ಲಿ ರಾಮ ಮಂದಿರ ಉದ್ಘಾಟನೆಗೆ ಸಿಎಂ ಅವರನ್ನು ಆಹ್ವಾನಿಸಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದ ಕಾಂಗ್ರೆಸ್ ನಾಯಕರು ನಂತರ ಹೈಕಮಾಂಡ್ ನಿರ್ಧಾರದಂತೆ ರಾಮ ಮಂದಿರ ಉದ್ಘಾಟನೆಗೆ ತೆರಳುವುದಿಲ್ಲ ಎಂದು ಹೇಳಿದ್ದಾರೆ. ಬಿಜೆಪಿ ನಾಯಕರು ಇದನ್ನೇ ಅಸ್ತ್ರವಾಗಿಟ್ಟುಕೊಂಡು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ