ಕರ್ನಾಟಕದಲ್ಲಿ ಗೆದ್ದ ಮಾತ್ರಕ್ಕೆ ಇಡೀ ದೇಶವನ್ನೇ ಗೆಲ್ಲುತ್ತೇವೆಂಬ ಭ್ರಮೆ ಬೇಡ: ಸಿಎಂಗೆ ಸಚಿವ ಜೋಶಿ ಟಾಂಗ್​

ಪ್ರಧಾನಿ ನರೇಂದ್ರ ಮೋದಿ ಅವರು ನಿಜವಾದ ರಾಮ ಭಕ್ತರಾಗಿದ್ದರೆ ಅಯೋಧ್ಯೆ ರಾಮ ಮಂದಿರದಲ್ಲಿ ನಿಂತು ಪ್ರಮಾಣ ಮಾಡಲಿ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್​ಗೆ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಕಿಡಿಕಾರಿದ್ದಾರೆ. ಚುನಾವಣಾ ಪೂರ್ವ ನೀಡಿದ ಆಶ್ವಾಸನೆಗಳನ್ನು ಪೂರೈಸಲಾಗದ ನಿಮಗೆ ಪ್ರಧಾನಮಂತ್ರಿಗಳನ್ನು ಟೀಕೆ ಮಾಡುವ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದ್ದಾರೆ.

ಕರ್ನಾಟಕದಲ್ಲಿ ಗೆದ್ದ ಮಾತ್ರಕ್ಕೆ ಇಡೀ ದೇಶವನ್ನೇ ಗೆಲ್ಲುತ್ತೇವೆಂಬ ಭ್ರಮೆ ಬೇಡ: ಸಿಎಂಗೆ ಸಚಿವ ಜೋಶಿ ಟಾಂಗ್​
ಸಚಿವ ಜೋಶಿ, ಸಿಎಂ ಸಿದ್ದರಾಮಯ್ಯ
Follow us
ಗಂಗಾಧರ​ ಬ. ಸಾಬೋಜಿ
|

Updated on:Jan 22, 2024 | 10:29 PM

ಬೆಂಗಳೂರು, ಜನವರಿ 22: ಸಿಎಂ ಸಿದ್ದರಾಮಯ್ಯನವರೇ, ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳಲೆಂದು ರಾಹುಲ್ ಗಾಂಧಿಯಂತಹ ಅಪ್ರಬುದ್ಧ ನಾಯಕನಿಗೆ ಉಧೋ..ಉಧೋ ಎನ್ನುವ ನಿಮಗೆ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿದೆ? ಎಂದು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್​ ಜೋಶಿ (Pralhad Joshi) ತಿರುಗೇಟು ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ನಿಜವಾದ ರಾಮ ಭಕ್ತರಾಗಿದ್ದರೆ ಅಯೋಧ್ಯೆ ರಾಮ ಮಂದಿರದಲ್ಲಿ ನಿಂತು ಪ್ರಮಾಣ ಮಾಡಲಿ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್​ಗೆ ಪ್ರಲ್ಹಾದ್​ ಜೋಶಿ ಕಿಡಿಕಾರಿದ್ದಾರೆ.

ಸಿಎಂ ಟ್ವೀಟ್​ ಗೆ ತಿರುಗೇಟು

ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು, 34000 ಚದರ ಕಿಲೋಮೀಟರ್ ಭಾರತದ ಅಕ್ಸಾಯ್ ಚಿನ್ ಅನ್ನು ಚೈನಾ ತೆಕ್ಕೆಗೆ ಹಾಕಿದ್ದು ಜವಹಾರ್ ಲಾಲ್ ನೆಹರೂ ಅವರು ಪ್ರಧಾನಿಯಾಗಿದ್ದಾಗ ಮರೆತಿಲ್ಲ ತಾನೆ? ಟಿಬೆಟ್ ಪ್ರಾಂತ್ಯ ಚೈನಾದ ಕೈವಶವಾಗುವಂತೆ ಮಾಡಿದ್ದು, ಇಂದು ಚೈನಾವನ್ನು ನಮ್ಮ ನೆರೆ ರಾಷ್ಟ್ರವನ್ನಾಗಿ ಮಾಡಿದ್ದು ನಿಮ್ಮ ಕಾಂಗ್ರೆಸ್​ನ ಘನ ಸರ್ಕಾರವೇ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ನನ್ನ ರಾಮ ಮನೆಗೆ ಬಂದ… ಇತಿಹಾಸದಲ್ಲಿ ಕಂಡು ಕೇಳರಿಯದ ಸಂಭ್ರಮ ಮನೆ ಮಾಡಿದೆ- ಸಚಿವ ಪ್ರಲ್ಹಾದ ಜೋಶಿ

1962 ಯುದ್ಧದ ಸಂದರ್ಭದಲ್ಲಿ ಸೈನಿಕರಿಗೆ ಸರಿಯಾದ ಶಸ್ತ್ರಾಸ್ತ್ರಗಳನ್ನ, ಬೂಟುಗಳನ್ನೂ ನೀಡದೇ ನಮ್ಮ ಸೈನಿಕರ ಬಲಿದಾನ ತೆಗೆದುಕೊಂಡಿದ್ದು ನಿಮ್ಮ ಕಾಂಗ್ರೆಸ್ ಪಕ್ಷವೇ. ಸೈನಿಕರಿಗೆ, ದೇಶಕ್ಕೆ ಅಗೌರವ ತೋರುವುದು ನಿಮ್ಮ ಅನುವಂಶಿಕ ಗುಣ. ಸರ್ಜಿಕಲ್ ಸ್ಟ್ರೈಕ್ ಆದಾಗಲೂ ಸಾಕ್ಷಿ ಕೇಳಿದ ಮಹಾತ್ಮರು ನೀವು. ಇನ್ನು ಚೀನಾ ವಿಚಾರವಾಗಿ ಮೋದಿ ಸರ್ಕಾರದ ದಿಟ್ಟ ನಿಲುವುಗಳಿಂದಲೇ ಇಂದು ಚೈನಾಕ್ಕೆ ಸಮರ್ಪಕ ಉತ್ತರ ನೀಡಲು ಸಾಧ್ಯವಾಗಿದ್ದು ಎಂದಿದ್ದಾರೆ.

ಸುಳ್ಳೇ ನಿಮ್ಮ ಮನೆ ದೇವರು

ಸುಳ್ಳೇ ನಿಮ್ಮ ಮನೆ ದೇವರಾಗಿದ್ದು, ಆ ಸುಳ್ಳಿನ ಮೇಲೆ ರಾಜಕಾರಣ ಮಾಡುವುದು ಕಾಂಗ್ರೆಸ್​ನ ಇತಿಹಾಸವೇ ಆಗಿದೆ. ಸಹಕಾರಿ ತತ್ವಗಳ ವಿಚಾರದಲ್ಲಿ ಹಲವಾರು ಬದಲಾವಣೆಗಳನ್ನು ತಂದು ಕೇಂದ್ರ ಸರ್ಕಾರ ನೀತಿ ಆಯೋಗ ಜಾರಿಗೊಳಿಸಿದೆ. ಕೇಂದ್ರ ಸರ್ಕಾರ ತೆರಿಗೆ ಮತ್ತು ಅನುದಾನವನ್ನು ಕೂಡ ಕರ್ನಾಟಕ ಸರ್ಕಾರಕ್ಕೆ ತ್ರಿಗುಣ ಗೊಳಿಸಿದೆ ಎಂಬುದು ನಿಮಗೂ ತಿಳಿದಿರುವ ವಿಚಾರ.

ಸಚಿವ ಪ್ರಲ್ಹಾದ್​ ಜೋಶಿ ಟ್ವೀಟ್​

ಈ ಎಲ್ಲಾ ವಿಷಯಗಳ ಮೇಲೆ ಮಾತನಾಡುವ ಅಧಿಕಾರ ನಿಮಗಂತೂ ಇಲ್ಲ. ರಾಷ್ಟ್ರಾದ್ಯಂತ ತಿರಸ್ಕೃತ ಗೊಂಡ ಕಾಂಗ್ರೆಸ್​ಗೆ ಹಾಗೂ ಅದರ ಸ್ವಾರ್ಥಕ್ಕೆ, ಪಟ್ಟಭದ್ರ ಹಿತಾಸಕ್ತಿಗೆ ಜನ ಮರುಳಾಗುವುದಿಲ್ಲ. ಕರ್ನಾಟಕದಲ್ಲಿ ಗೆದ್ದ ಮಾತ್ರಕ್ಕೆ ಇಡೀ ದೇಶವನ್ನೇ ಗೆಲ್ಲುತ್ತೇವೆ ಎಂಬ ಭ್ರಾಂತಿಯಿಂದ ಹೊರ ಬನ್ನಿ. ಈಗ ಮುಖ್ಯಮಂತ್ರಿಯಾಗಿ ಮುಂದುವರಿಯಲು ರಾಹುಲ್ ಗಾಂಧಿಯಂತಹ ಅಪ್ರಬುದ್ಧ ನಾಯಕನಿಗೆ ಉಧೋ ಉಧೋ ಅನ್ನಲು ಈ ರೀತಿ ಕಂತೆ ಕಂತೆ ಸುಳ್ಳುಗಳನ್ನು ಹೇಳುತ್ತಿದ್ದೀರಿ ಎಂದು ಹರಿ ಹಾಯ್ದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:23 pm, Mon, 22 January 24