ಹುಬ್ಬಳ್ಳಿ, ಜ.13: ರಾಜ್ಯ ಕಾಂಗ್ರೆಸ್ (Congress) ಸರ್ಕಾರ ಅಂಕಿ ಅಂಶ ಮುಚ್ಚಿಟ್ಟು ಕೇಂದ್ರ ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡುತ್ತಿದೆ. ಹಿಂದಿನ ಯುಪಿಎ ಸರ್ಕಾರ ನೀಡಿದ್ದ ಅನುದಾನದಕ್ಕೆ ಹೋಲಿಸಿದರೆ ಶೇಕಡಾ 242 ರಷ್ಟು ಅಧಿಕ ಅನುದಾನವನ್ನು ಕರ್ನಾಟಕಕ್ಕೆ ಮೋದಿ ಸರ್ಕಾರ (Modi Govt) ಕೊಟ್ಟಿದೆ ಎಂದು ಮಾಜಿ ಸಚಿವ ಸಿಟಿ ರವಿ (CT Ravi) ಹೇಳಿದ್ದಾರೆ. ಅಲ್ಲದೆ, ಅಂಕಿ ಅಂಶವನ್ನೂ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕಕ್ಕೆ ಅನ್ಯಾಯ ಆಗುತ್ತಿದೆ ಎಂದು ಹೇಳುತ್ತಿದ್ದಾರೆ. ಅನುದಾನವೂ ಕಡಿಮೆ ಬರುತ್ತಿದೆ ಎಂದು ಹೇಳುತ್ತಿದ್ದಾರೆ. 2004 ರಿಂದ 2014 ರ ವರೆಗೆ ಕಾಂಗ್ರೆಸ್ ಸರ್ಕಾರ ಇತ್ತು ಹಾಗೂ ಮನಮೋಹನ ಸಿಂಗ್ ಪ್ರಧಾನಿಯಾಗಿದ್ದರು. ಅಂದು ಕರ್ನಾಟಕಕ್ಕೆ ಬಂದ ಅನುದಾನ ಎಷ್ಟು, ಪಾಲೆಷ್ಟು ಎಂದು ಹೇಳಲಿ ಎಂದು ರಾಜ್ಯ ಸರ್ಕಾರಕ್ಕೆ ಸಿಟಿ ರವಿ ಸವಾಲು ಹಾಕಿದರು.
ನರೇಂದ್ರ ಮೋದಿ ಅವರ ಕೊಟ್ಟು ಅನುದಾನ ಎಷ್ಟು ಅನ್ನೋದನ್ನ ಶ್ವೇತ ಪತ್ರದ ಮೂಲಕ ಬಿಡುಗಡೆ ಮಾಡಬೇಕು. ಈ ಸವಾಲನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವೀಕರಸುತ್ತಾರೆ ಎಂಬ ಭಾವನೆ ಇದೆ. ಮೋದಿ ಅನುದಾನ ಕಡಿಮೆ ಕೊಟ್ಟಿದ್ದರೆ, ನಾವು ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ ಎಂದು ಒಪ್ಪಕೊಳ್ಳುತ್ತೇವೆ. ಲೋಕಸಭೆ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲ. ನಿಮಗೆ ಅವಿರೋಧ ಆಯ್ಕೆಗೆ ಅವಕಾಶ ಕೊಡುತ್ತೇವೆ. ನೀವು ಈ ಸವಾಲನ್ನು ಸ್ವೀಕರಿಸಿ ಎಂದರು.
ಇದನ್ನೂ ಓದಿ: ಘೋಷಿತ ಗ್ಯಾರಂಟಿಗಳೊಂದಿಗೆ ಸಿದ್ದರಾಮಯ್ಯ ಸರ್ಕಾರ ಅಘೋಷಿತ ಗ್ಯಾರಂಟಿಗಳನ್ನೂ ಜಾರಿಗೊಳಿಸಿದೆ: ಸಿಟಿ ರವಿ
ಯುಪಿಎ ಸರ್ಕಾರ 10 ವರ್ಷಗಳಲ್ಲಿ ರಾಜ್ಯಕ್ಕೆ 81795 ಕೋಟಿ ರೂಪಾಯಿ ಹಣ ನೀಡಿದೆ. ಮೋದಿ ಅವರು ಕೊಟ್ಟಿರುವುದು 208832 ಕೋಟಿ ರೂಪಾಯಿಯಾಗಿದೆ. ಶೇಕಡಾ 242 ರಷ್ಟು ಹೆಚ್ಚು ಅನುದಾನ ಮೋದಿ ಸರ್ಕಾರ ಕೊಟ್ಟಿದೆ. ಕಾಂಗ್ರೆಸ್ ಸರ್ಕಾರ 10 ವರ್ಷದಲ್ಲಿ 60779 ಕೋಟಿ ರೂಪಾಯಿ ನೀಡಿದ್ದರೆ, ಬಿಜೆಪಿ ಸರ್ಕಾರ 208832 ಕೋಟಿ ಕೊಟ್ಟಿದೆ. ಯಾರು ಹೆಚ್ಚು ಕೊಟ್ಟಿದಾರೆ ಎಂದು ಮಕ್ಕಳಿಗೂ ಗೊತ್ತಾಗುತ್ತೆ ಎಂದರು.
ಆರ್ಥಿಕ ತಜ್ಞ ಸಿದ್ದರಾಮಯ್ಯ ಎಲ್ಲ ಗೊತ್ತಿದ್ದು ಸುಳ್ಳು ಹೇಳತ್ತಿದ್ದಾರೆ. ಜನ ಸಂಖ್ಯೆ ಆಧಾರದಲ್ಲಿ ಅನುದಾನ ಹಂಚಿಕೆಯಾಗತ್ತದೆ. ಮುಂಚೆ ಜನ ಸಂಖ್ಯೆ ಆಧಾರದಲ್ಲಿ ಅನುದಾನ ಹಂಚಿಕೆಯಾಗತಿರಲಿಲ್ಲ. ಕೇಂದ್ರದಿಂದ ವಂಚನೆ ಆಗುತ್ತಿದೆ ಎಂಬ ಕಾಂಗ್ರೆಸ್ ಹೇಳುತ್ತಿರುವುದು ಸುಳ್ಳು. ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದರೆ ಅಂಕಿ ಅಂಶಗಳ ಬಗ್ಗೆ ಸಿದ್ದರಾಮಯ್ಯ ಅವರು ಶ್ವೇತ ಪತ್ರ ಹೊರಡಿಸಲಿ ಎಂದು ಸಿಟಿ ರವಿ ಸವಾಲು ಹಾಕಿದರು.
ಕೆಂದ್ರ ಸರ್ಕಾರ ಯಾವತ್ತೂ ರಾಜಕಾರಣ ಮಾಡಲ್ಲ. ಒಂದು ಸೀಟ್ ಇಲ್ಲದ ಕೇರಳಕ್ಕೂ ಸರ್ಕಾರ ಹಣ ಕೊಟ್ಟಿದೆ. ಕಾಂಗ್ರೆಸ್ಗೆ ರೈತರು, ದಲಿತರ ಮೇಲೆ ಪ್ರೀತಿ ಇಲ್ಲ. ದಲಿತರ ಹಣ ಡೈವರ್ಟ್ ಮಾಡಿದರು, ಅಲ್ಪ ಸಂಖ್ಯಾತರಿಗೆ 10 ಸಾವಿರ ಕೋಟಿ ಘೋಷಣೆ ಮಾಡಿದರು ಎಂದು ವಾಗ್ದಾಳಿ ನಡೆಸಿದರು.
ರಾಜಕೀಯ ಸುದ್ದಿಗಳನ್ನ ಓದಲು ಇಲ್ಲಿ ಕ್ಲಿಕ್ ಮಾಡಿ