ಬೆಂಗಳೂರು, ಆಗಸ್ಟ್ 19: ರಾಜ್ಯದಲ್ಲಿ ಗದ್ದಲ, ದಾಂಧಲೆ, ಹಲ್ಲೆಗಳಾದರೆ ಅದಕ್ಕೆ ರಾಜ್ಯಪಾಲರೇ ಹೊಣೆ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan) ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅನುಮತಿ ನೀಡಿದ್ದನ್ನು ವಿರೋಧಿಸಿ ಫ್ರೀಡಂ ಪಾರ್ಕ್ನಲ್ಲಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದರು. ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಜಮೀರ್, ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಬಿಜೆಪಿ, ಜೆಡಿಎಸ್ ಏನೇ ಮಾಡಿದರೂ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಆಗಲ್ಲ. ವರಿಷ್ಠರು, ರಾಜ್ಯದ ಏಳು ಕೋಟಿ ಜನ ಸಿಎಂ ಪರವಾಗಿ ಇದ್ದಾರೆ. ಏನಾದರೂ ಗಲಾಟೆ, ಹಲ್ಲೆಯಾದ್ರೆ ಅದಕ್ಕೆ ರಾಜ್ಯಪಾಲರೇ ಹೊಣೆ. ಕರ್ನಾಟಕದ ಜನ ಸುಮ್ಮನೆ ಕೂರಲ್ಲ ಎಂದರು.
ಹಿಂದುಳಿದ ವರ್ಗದ ನಾಯಕನಾಗಿರುವುದಕ್ಕೆ ಸಿಎಂ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ. ಸಂವಿಧಾನ ವಿರುದ್ಧವಾಗಿ ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟಿದ್ದಾರೆ. ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಯಾವುದೇ ಪಾತ್ರವಿಲ್ಲ. ರಾಜ್ಯಪಾಲರ ಕಚೇರಿಯನ್ನು ಬಿಜೆಪಿ ಕಚೇರಿ ಮಾಡಿಕೊಂಡಿದ್ದಾರೆ. ಬಿಜೆಪಿ ಸರ್ಕಾರದಲ್ಲೇ ಕಾಲದಲ್ಲಿ 14 ನಿವೇಶನ ಕೊಟ್ಟಿದ್ದಾರೆ. ಸಿಎಂ ಪಾಪ್ಯುಲಾರಿಟಿ ಸಹಿಸಲಾಗದೆ ಸರ್ಕಾರ ತೆಗೆಯಲು ಯತ್ನಿಸಲಾಗುತ್ತಿದೆ. ಬಿಜೆಪಿಯವರಿಗೆ ಜನ ಯಾವತ್ತೂ ಬಹುಮತ ನೀಡಿಲ್ಲ ಎಂದು ಗುಡುಗಿದರು.
ಇದನ್ನೂ ಓದಿ: ಒಬ್ಬ ಅಯೋಗ್ಯ, ಬೇಜವಾಬ್ದಾರಿ ಗವರ್ನರ್; ರಾಜ್ಯಪಾಲರ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ ಸಲೀಂ ಅಹ್ಮದ್
ಮುಖ್ಯಮಂತ್ರಿಯಾಗಿದ್ದ ವೇಳೆ ಯಾರಾದರೂ ಜೈಲಿಗೆ ಹೋಗಿದ್ದರೆ ಅದು ಬಿಎಸ್ ಯಡಿಯೂರಪ್ಪ ಅವರು. ಯಾವ ದೂರಿನ ಮೇಲೆ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟಿದ್ದಾರೆ. ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ಕೇಳಿದ್ದರೂ ಯಾಕೆ ಅನುಮತಿ ಕೊಟ್ಟಿಲ್ಲ. ನಮಗೆ ನ್ಯಾಯಾಲಯದ ಮೇಲೆ ವಿಶ್ವಾಸವಿದೆ ಎಂದರು.
ನಾವು ಉಪ್ಪೂ ತಿಂದಿಲ್ಲ, ನೀರೂ ಕುಡಿಯಲ್ಲ. ಈ ರಾಜ್ಯಪಾಲ ಕರ್ನಾಟಕ ಬಿಟ್ಟು ತೊಲಗಬೇಕು ಅಂತ ಹೋರಾಟ ಕೂಡ ಮಾಡಬೇಕಾಗುತ್ತದೆ. ಥಾವರ್ ಚಂದ್ ಗೆಹ್ಲೋಟ್ ಘನತೆ ಇಲ್ಲದ ರಾಜ್ಯಪಾಲರು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ಮಾಡಿದರು. ಭ್ರಷ್ಟಾಚಾರದಲ್ಲಿ ಬಿಎಸ್ವೈ ಪುತ್ರ ವಿಜಯೇಂದ್ರ ಪಿಹೆಚ್ಡಿ ಮಾಡಿದ್ದಾರೆ. ದೇಶದಲ್ಲಿಯೇ ಅತಿ ದೊಡ್ಡ ಭ್ರಷ್ಟಾಚಾರಿ ಬಿ.ಎಸ್.ಯಡಿಯೂರಪ್ಪ. ಬ್ಲ್ಯಾಕ್ಮೇಲ್ ನೈಪುಣ್ಯತೆ ಇರುವ ಏಕೈಕ ವ್ಯಕ್ತಿ ಹೆಚ್. ಡಿ.ಕುಮಾರಸ್ವಾಮಿ ಎಂದು ಆರೋಪ ಮಾಡಿದರು.
ಕಳ್ಳರ ಕೂಟ ಸೇರಿಕೊಂಡು ಕುಮಾರಸ್ವಾಮಿ ಷಡ್ಯಂತ್ರ ಮಾಡಿದ್ದಾರೆ. ಭ್ರಷ್ಟಾಚಾರ ಮತ್ತು ವಿಜಯೇಂದ್ರ ಬೇರೆ ಬೇರೆ ಅಲ್ಲ, ಎರಡೂ ಒಂದೇ. ಭ್ರಷ್ಟಾಚಾರದಲ್ಲಿಯೇ ಹುಟ್ಟಿದವರು, ಭ್ರಷ್ಟಾಚಾರದಲ್ಲಿಯೇ ಬೆಳೆದವರು ಎಂದು ಕಿಡಿ ಕಾರಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:29 pm, Mon, 19 August 24