ಒಬ್ಬ ಅಯೋಗ್ಯ, ಬೇಜವಾಬ್ದಾರಿ ಗವರ್ನರ್; ರಾಜ್ಯಪಾಲರ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ ಸಲೀಂ ಅಹ್ಮದ್
ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಸಿಎಂ ಸಿದ್ದರಾಮಯ್ಯ ಪರ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ರಾಜ್ಯಪಾಲರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಏಜೆಂಟ್ ಆಗಿ ಗವರ್ನರ್ ಕೆಲಸ ಮಾಡ್ತಿದ್ದಾರೆ. ಅವರು ಗವರ್ನರ್ ಅಲ್ಲ, ಇವರು ನಾಲಾಯಕ್ ಗವರ್ನರ್ ಎಂದು ಕಿಡಿಕಾರಿದ್ದಾರೆ.
ಬೆಂಗಳೂರು, ಆಗಸ್ಟ್.19: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟ ವಿಚಾರ, ಕಾಂಗ್ರೆಸ್ ಪಡೆ ಕೆರಳಿ ಕೆಂಡವಾಗುವಂತೆ ಮಾಡಿದೆ. ಸಿಎಂ ಸಿದ್ದರಾಮಯ್ಯ ಬೆನ್ನಿಗೆ ನಿಂತಿರುವ ಇಡೀ ಪಕ್ಷ ಷಡ್ಯಂತ್ರಕ್ಕೆ ಸವಾಲು ಎಂದು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದೆ. ಬೆಂಕಿ ಹಚ್ಚಿ, ದಿಕ್ಕಾರ ಕೂಗಿ ಕಾಂಗ್ರೆಸ್ ನಾಯಕರು ಆಕ್ರೋಶ ಹೊರಹಾಕಿದ್ದಾರೆ. ಇದರ ನಡುವೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್(Saleem Ahmed), ರಾಜ್ಯಪಾಲರ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ಒಬ್ಬ ಅಯೋಗ್ಯ, ಬೇಜವಾಬ್ದಾರಿ ಗವರ್ನರ್. ಯಾವುದೇ ದಾಖಲೆ ಇಲ್ಲದೇ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದಾರೆ. ನಾವು ಸುಮ್ಮನೆ ಕೂರಲ್ಲ, ಹೋರಾಟ ಮಾಡ್ತೀವಿ ಎಂದು ಕಿಡಿಕಾರಿದ್ದಾರೆ.
ಬಿಜೆಪಿ ಏಜೆಂಟ್ ಆಗಿ ರಾಜ್ಯಪಾಲರು ಕೆಲಸ ಮಾಡ್ತಿದ್ದಾರೆ
ಇನ್ನು ಮತ್ತೊಂದೆಡೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಆಕ್ರೋಶ ಹೊರ ಹಾಕಿದ್ದಾರೆ. ಬಿಜೆಪಿ ಏಜೆಂಟ್ ಆಗಿ ಗವರ್ನರ್ ಕೆಲಸ ಮಾಡ್ತಿದ್ದಾರೆ. ಅವರು ಗವರ್ನರ್ ಅಲ್ಲ, ಇವರು ನಾಲಾಯಕ್ ಗವರ್ನರ್, ಬಿಜೆಪಿ ಏಜೆಂಟ್. ನಾಲಾಯಕ್ ಗವರ್ನರ್ಗೆ ಧಿಕ್ಕಾರ. ಇವರು ಇಲ್ಲಿ ರಾಜ್ಯಪಾಲ ಆಗುವುದಕ್ಕೆ ಯೋಗ್ಯರಲ್ಲ. ತೊಲಗಿ ತೊಲಗಿ ರಾಜ್ಯಪಾಲರೇ ತೊಲಗಿ. ರಾಜ್ಯಪಾಲರಿಗೆ ಮಾನ ಮರ್ಯಾದೆ ನಾಚಿಕೆ ಇದೆಯಾ? ಸಂವಿಧಾನದ ಬಗ್ಗೆ ಗೌರವ ಇದೆಯಾ? ಎಂದು ಕೆಂಡಕಾರಿದ್ದಾರೆ.
ಇದನ್ನೂ ಓದಿ: ಪ್ರಾಸಿಕ್ಯೂಷನ್ ಕಂಟಕ: ಹೇಳಿದ್ದನ್ನೇ ಪದೇಪದೆ ಹೇಳುವುದು ಸರಿಯಲ್ಲವೆಂದು ಸಿಡುಕಿದ ಮಲ್ಲಿಕಾರ್ಜುನ ಖರ್ಗೆ
ರಾಜ್ಯಪಾಲರ ಕ್ರಮ ಸಂವಿಧಾನ ವಿರೋಧಿ
ಇನ್ನು ಮೈಸೂರಿನಲ್ಲಿ ಶಾಸಕ ತನ್ವಿರ್ ಸೇಠ್ ಕೂಡ ರಾಜ್ಯಪಾಲರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ಯಾವುದೇ ವಿಚಾರದಲ್ಲಿ ಯಾರಿಗೂ ಶಿಫಾರಸ್ಸು ಮಾಡಿಲ್ಲ. ನಿವೇಶನ ಹಂಚಿಕೆ ಮಾಡುವ ವೇಳೆ ಸಿದ್ದರಾಮಯ್ಯರ ಯಾವುದೇ ಪಾತ್ರವಿಲ್ಲ. ಬಿಜೆಪಿ, ಜೆಡಿಎಸ್ ನಾಯಕರು ರಾಜಕೀಯ ಲಾಭಕ್ಕಾಗಿ ಸಿದ್ದರಾಮಯ್ಯರನ್ನು ಮುಂದಿಟ್ಟುಕೊಂಡು ಹೋರಾಟ ಮಾಡುತ್ತಿದ್ದಾರೆ. ರಾಜ್ಯಪಾಲರ ಕ್ರಮ ಸಂವಿಧಾನ ವಿರೋಧಿಯಾಗಿದೆ. ರಾಜ್ಯಪಾಲರ ಕ್ರಮವನ್ನ ಪ್ರಶ್ನಿಸಿ ಹೈ ಕೋರ್ಟ್ ಮುಂದೆ ಹೋಗಬೇಕಿದೆ. ಸಚಿವರು, ಶಾಸಕರು, ಪರಿಷತ್ ಸದಸ್ಯರು ಸಿದ್ದರಾಮಯ್ಯ ಬೆನ್ನ ಹಿಂದೆ ಇದ್ದಾರೆ. ನೀಚ ರಾಜಕಾರಣ ಮಾಡುತ್ತಿರುವ ಜೆಡಿಎಸ್, ಬಿಜೆಪಿ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕಾಗಿದೆ. ಸಿದ್ದರಾಮಯ್ಯನವರೇ ಈ ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:37 pm, Mon, 19 August 24