ಸಚಿವ ನಾರಾಯಣ ಗೌಡ ಕಾಂಗ್ರೆಸ್ ಸೇರ್ಪಡೆಯಾಗುವ ಸಾಧ್ಯತೆ ಇದೆ: ಸಚಿವ ಬಿಸಿ ಪಾಟೀಲ್
ಸಚಿವ ಕೆ.ಸಿ.ನಾರಾಯಣಗೌಡ ಕಾಂಗ್ರೆಸ್ಗೆ ಹೋಗಬಹುದು ಎಂದು ಕೃಷಿ ಇಲಾಖೆ ಸಚಿವ ಬಿ.ಸಿ.ಪಾಟೀಲ್ ಹೇಳಿದರು. ಕಾಂಗ್ರೆಸ್, ಜೆಡಿಎಸ್ನಿಂದ ಬಿಜೆಪಿಗೆ ಬಹಳ ಜನ ಬರೋರಿದ್ದಾರೆ. ನಮ್ಮ ಪಕ್ಷದಿಂದ ಇಬ್ಬರು ಹೋದ್ರೆ 20 ಜನ ಬಿಜೆಪಿಗೆ ಬರ್ತಾರೆ ಎಂದರು.
ಗದಗ: ಸಚಿವ ಕೆ.ಸಿ.ನಾರಾಯಣಗೌಡ (Narayana Gowda) ಕಾಂಗ್ರೆಸ್ಗೆ ಹೋಗಬಹುದು ಎಂದು ಕೃಷಿ ಇಲಾಖೆ ಸಚಿವ ಬಿ.ಸಿ.ಪಾಟೀಲ್ (BC Patil) ಹೇಳಿದರು. ಜಿಲ್ಲೆಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಕಾಂಗ್ರೆಸ್, ಜೆಡಿಎಸ್ನಿಂದ ಬಿಜೆಪಿಗೆ ಬಹಳ ಜನ ಬರೋರಿದ್ದಾರೆ. ನಮ್ಮ ಪಕ್ಷದಿಂದ ಇಬ್ಬರು ಹೋದ್ರೆ 20 ಜನ ಬಿಜೆಪಿಗೆ ಬರ್ತಾರೆ. ಸ್ವಲ್ಪ ದಿನ ಕಾದು ನೋಡಿ. ಸಿದ್ದರಾಮಯ್ಯ ಬಿಜೆಪಿಗೆ ಬರ್ತೀನಿ ಅಂದ್ರೂ ಸೇರಿಸಿಕೊಳ್ಳುವುದಿಲ್ಲ ಎಂದು ವಾಗ್ದಾಳಿ ಮಾಡಿದರು. ಭ್ರಷ್ಟಚಾರ ಆಡಳಿತ ವಿರೋಧಿಸಿ ಕಾಂಗ್ರೆಸ್ ಬಂದ್ ಕರೆ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ಪಕ್ಷದ ನಾಯಕರು ನಿರುದ್ಯೋಗಿಗಳು. ಅವರಿಗೆ ಕೆಲಸವಿಲ್ಲ. ನನಗೆ ಕೆಲಸವಿದೆ. ಹಿರೇಕೆರೂರಿನಿಂದ ಚಿತ್ರದುರ್ಗದಲ್ಲಿ ಕೆಡಿಪಿ ಸಭೆ ಮಾಡಿದ್ದೇನೆ. ಈಗ ಗದಗ ನಗರಕ್ಕೆ ಆಗಮಿಸಿ ಅಧಿಕಾರಿಗಳ ಸಭೆ ಮಾಡುತ್ತಿದ್ದೇನೆ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಗ್ಯಾರಂಟಿ ಇಲ್ಲ
ನಮಗೆ ಕೆಲಸಗಳಿವೆ ಮಾಡುತ್ತಿದ್ದೇವೆ. ಆದರೆ ಅವರಿಗೆ ಕೆಲಸವಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ. ಹೀಗಾಗಿ ಬೀದಿರಂಪ ಮಾಡುತ್ತಿದ್ದಾರೆ. ಆ ಗ್ಯಾರಂಟಿ ಈ ಗ್ಯಾರಂಟಿ ಅಂತಾರೆ, ಕಾಂಗ್ರೆಸ್ ಅಧಿಕಾರಕ್ಕೆ ಬರುವ ಗ್ಯಾರಂಟಿ ಇಲ್ಲ. ಇನ್ನೇನು ಗ್ಯಾರಂಟಿ ನೀಡುತ್ತಾರೆ ಎಂದು ವ್ಯಂಗ್ಯವಾಡಿದರು. ಸಿಎಂ ಬಸವರಾಜ ಬೊಮ್ಮಾಯಿ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ನೆಗಡಿ ಆದರೆ ಮೂಗು ಕೊಯೋಕೆ ಆಗುತ್ತಾ ಎಂದು ಪ್ರಶ್ನಿಸಿದರು. ಯಾರೋ ತಪ್ಪು ಮಾಡಿದ್ರೆ ಸಿಎಂ ಬೊಮ್ಮಾಯಿ ಯಾಕೆ ರಾಜೀನಾಮೆ ನೀಡಬೇಕು. ಅವರು ತಮ್ಮ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ನಾರಾಯಣಗೌಡ ಪಕ್ಷ ಸೇರ್ಪಡೆಗೆ ತೊಂದರೆ ಏನೆಂದು ಗೊತ್ತಿಲ್ಲ, ನಾವು ಡೀಲ್ ಮಾಡುತ್ತೇವೆ: ಡಿಕೆ ಶಿವಕುಮಾರ್
ಮಾಡಾಳ್ ವಿರೂಪಾಕ್ಷಪ್ಪ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದ ಬಿ.ಸಿ.ಪಾಟೀಲ್
ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಹಾಗಿದ್ರೆ ನಾವು ಲೋಕಾಯುಕ್ತ ಸಂಸ್ಥೆಯಿಂದ ರಕ್ಷಣೆ ಕೊಡಬಹುದಾಗಿತ್ತು. ಲೋಕಾಯುಕ್ತ ಸಂಸ್ಥೆ ನಿಷ್ಪಕ್ಷಪಾತ ತನಿಖೆ ಮಾಡುತ್ತಿದೆ. ಈ ಹಿಂದೆ ಸಿದ್ದರಾಮಯ್ಯ ಸಿಎಂ ಆದಾಗ 8 ಸಾವಿರ ಹಗರಣ ಮುಚ್ಚಿಹಾಕಿದ್ದಾರೆ. ಕೆಂಪ್ಪಣ್ಣ ಆಯೋಗ ರಚನೆ ಮಾಡಿ ಲೋಕಾಯುಕ್ತ ಹಾವು ಕಿತ್ತ ಹಲ್ಲಿನಂತೆ ಮಾಡಿ, ಎಸಿಬಿ ರಚನೆ ಮಾಡಿದರು. ನಾವು ರಕ್ಷಣೆ ಮಾಡೋದು ದೊಡ್ಡ ವಿಷಯವಲ್ಲಾ, ಆದರೆ ನಾವು ಹಾಗೇ ಮಾಡುವುದಿಲ್ಲ. ಯಾರು ತಪ್ಪಿತಸ್ಥರು ಇದ್ದಾರೆ, ಅವರಿಗೆ ಶಿಕ್ಷೆಯಾಗಬೇಕು. ಅವರ ತನಿಖೆಯಲ್ಲಿ ಯಾವದೇ ರೀತಿಯ ಹಸ್ತಕ್ಷೇಪ ಇಲ್ಲಾ. ಈಗಾಗಲೇ ಲೋಕಾಯುಕ್ತ ಮಾಡಾಳು ವಿರೂಪಾಕ್ಷಪ್ಪ ಅವರಿಗೆ ಲಿಕ್ ಔಟ್ ನೋಟಿಸ್ ನೀಡಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಬಿಟ್ಟರೆ ಕಷ್ಟಕರವಾಗಲಿದೆ: ಅಣ್ಣಾಮಲೈ
ಯಾರೂ ಕೂಡ ಪಕ್ಷ ಬಿಟ್ಟು ಹೋಗುವುದಿಲ್ಲ, ಇದು ಶುದ್ಧ ಸುಳ್ಳು: ಭು ಚೌಹಾಣ್
ಬಿಜೆಪಿ ಸೇರಿದ್ದ 17 ಶಾಸಕರು ಕಾಂಗ್ರೆಸ್ ಹೋಗ್ತಾರೆ ಎಂಬ ವಿಚಾರವಾಗಿ ಯಾದಗಿರಿಯಲ್ಲಿ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಹೇಳಿದ್ದಾರೆ. ಯಾರೂ ಕೂಡ ಪಕ್ಷ ಬಿಟ್ಟು ಹೋಗುವುದಿಲ್ಲ, ಇದು ಶುದ್ಧ ಸುಳ್ಳು. ಎಲ್ಲರೂ ಸಹ ಪಕ್ಷದಲ್ಲಿ ನಮಗಿಂತ ಹೆಚ್ಚು ಕೆಲಸ ಮಾಡ್ತಾ ಇದ್ದಾರೆ. ಕಾಂಗ್ರೆಸ್ನವರು ಕೇವಲ ಹುಸಿಬಾಂಬ್ ಹಾಕುವ ಕೆಲಸ ಮಾಡ್ತಾರೆ. ವಿ.ಸೋಮಣ್ಣ ಕಾಂಗ್ರೆಸ್ ಸೇರ್ತಾರೆ ಎನ್ನುವ ವಿಚಾರ ಕೂಡ ಸುಳ್ಳು. ಸಿದ್ದರಾಮಯ್ಯ, ಡಿ.ಕೆ. ಶಿವುಕುಮಾರ ಮನೆ ಒಡೆಯುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಮನೆ ಗಟ್ಟಿಯಿದೆ, ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:36 pm, Mon, 6 March 23