ಮಗನ ರಾಜಕೀಯ ಭವಿಷ್ಯ ನುಡಿದ ಅಪ್ಪ ಹೆಚ್ಡಿ ಕುಮಾರಸ್ವಾಮಿ: ಮುಂದಿನ 5 ವರ್ಷ ನೋ ಪಾಲಿಟಿಕ್ಸ್
ಹೆಚ್.ಡಿ.ದೇವೇಗೌಡರು, ನಾನು ಚುನಾವಣೆಯಲ್ಲಿ ಸೋತಿಲ್ವಾ? ನಿಖಿಲ ರಾಜಕೀಯದ ಸಹವಾಸಕ್ಕೆ ಹೋಗದೆ, ಭಗವಂತ ಕೊಟ್ಟ ಕಲೆ ಇದೆ ಅದನ್ನೇ ಮುಂದುವರೆಸಲಿ. ಆದರೆ ಅವನ ಹಣೆಬರಹದಲ್ಲಿ ಬರೆದಿದ್ದರೇ ಯಾರು ತಪ್ಪಿಸಲು ಸಾಧ್ಯವಿಲ್ಲ. ನಿನ್ನ ಜೀವನ ರೂಪಿಸಿಕೊಳ್ಳಲು ನೀನು ಮೊದಲು ಭದ್ರವಾಗು ಎಂದಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಹೇಳಿದರು.
ಮಂಡ್ಯ: ಮುಂದಿನ ಐದು ವರ್ಷ ನಿಖಿಲ್ ಕುಮಾರಸ್ವಾಮಿಯನ್ನು (Nikhil Kumaraswamy) ಚುನಾವಣೆಗೆ ಕರೆತರುವ ಪ್ರಶ್ನೆ ಇಲ್ಲ. ಕಲಾವಿದನಾಗಿ ಜೀವನ ರೂಪಿಸಿಕೊಳ್ಳುವಂತೆ ನಿಖಿಲ್ಗೆ ಹೇಳಿದ್ದೇನೆ. ಈಗಾಗಲೇ ನಿಖಿಲ್ ಎರಡು ಬಾರಿ ಚುನಾವಣೆಯಲ್ಲಿ ಸೋತಿದ್ದಾನೆ. ಕಳೆದ ಮಂಡ್ಯ ಲೋಕಸಭೆ ಚುನಾವಣೆಯಲ್ಲೂ ಸ್ಪರ್ಧಿಸಲು ತಯಾರಿರಲಿಲ್ಲ. ಕಾರ್ಯಕರ್ತರು ಹಾಗೂ ಶಾಸಕರ ಒತ್ತಡಕ್ಕೆ ನಿಖಿಲ್ ತಲೆ ಕೊಟ್ಟ. ಸೋಲು, ಗೆಲವು ಸಾಮಾನ್ಯ, ಆ ಬಗ್ಗೆ ಚಿಂತಿಸುವುದಿಲ್ಲ. ಜನಾಭಿಪ್ರಾಯಕ್ಕೆ ತಲೆ ಭಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಹೇಳಿದರು.
ಮಂಡ್ಯದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಹೆಚ್.ಡಿ.ದೇವೇಗೌಡರು, ನಾನು ಚುನಾವಣೆಯಲ್ಲಿ ಸೋತಿಲ್ವಾ? ನಿಖಿಲ ರಾಜಕೀಯದ ಸಹವಾಸಕ್ಕೆ ಹೋಗದೆ, ಭಗವಂತ ಕೊಟ್ಟ ಕಲೆ ಇದೆ ಅದನ್ನೇ ಮುಂದುವರೆಸಲಿ. ಈಗಾಗಲೇ ಮೂರು ಚಿತ್ರ ನಿರ್ಮಾಣ ಮಾಡಲು ಹಲವು ಸಂಸ್ಥೆಗಳು ಮುಂದೆ ಬಂದಿವೆ ಎಂದು ತಿಳಿಸಿದರು.
ಆದರೆ ಅವನ ಹಣೆಬರಹದಲ್ಲಿ ಬರೆದಿದ್ದರೇ ಯಾರು ತಪ್ಪಿಸಲು ಸಾಧ್ಯವಿಲ್ಲ. ನಿನ್ನ ಜೀವನ ರೂಪಿಸಿಕೊಳ್ಳಲು ನೀನು ಮೊದಲು ಭದ್ರವಾಗು ಎಂದಿದ್ದೇನೆ. ಭಗವಂತ ಒಂದು ಕಲೆ ಅವನಿಗೆ ಕೊಟ್ಟಿದ್ದಾನೆ. ಲೋಕಸಭೆ ಚುನಾವಣೆ ಸಿದ್ಧತೆ ಮಾಡಿಕೊಳ್ಳಲು ಇನ್ನೂ ಸಮಯವಿದೆ. ಜನಾಭಿಪ್ರಾಯದ ಮೇಲೆ ತೀರ್ಮಾನ ಮಾಡುತ್ತೇನೆ. ಕಾರ್ಯಕರ್ತರ ಜೊತೆ ಚರ್ಚಿಸಿ ನಾವು ತೀರ್ಮಾನ ಮಾಡುತ್ತೇವೆ ಎಂದರು.
ಇದನ್ನೂ ಓದಿ: ಯಾವ ಶಾಸಕರೂ ಜೆಡಿಎಸ್ ಬಿಟ್ಟು ಹೋಗುವುದಿಲ್ಲ; ಹೆಚ್ಡಿ ದೇವೇಗೌಡ ಸ್ಪಷ್ಟನೆ
ಕುತಂತ್ರಗಳಿಗೆ ಕೆಲವರು ಬಲಿಯಾಗಿದ್ದಾರೆ. ಇದೀಗ ರಾಮನಗರ ಜನರ ಪರಿತಾಪ ನೋಡುತ್ತಿದ್ದೇನೆ. ರಾಮನಗರ ಹೇಗೆ ಉದ್ದಾರ ಮಾಡುತ್ತಿದ್ದಾರೆ ಎಂದು ನೋಡುತ್ತಿದ್ದೇನೆ. ಸಮಯ ಬರುತ್ತದೆ ಕಾಯೋಣ. ಲೋಕಸಭಾ ಚುನಾವಣೆಗೆ 28 ಕ್ಷೇತ್ರಕ್ಕೂ ಅಭ್ಯರ್ಥಿ ಹಾಕಬೇಕು ಎಂದು ಒಂದು ವರ್ಗದ ಅಭಿಪ್ರಾಯ ಇದೆ. ಅಲಿಯನ್ಸ್ ಮಾಡಿಕೊಂಡು ಹೋದರೆ ತೊಂದರೆ ಆಗಲಿದೆ. ಕಳೆದಬಾರಿ ಅಲಿಯನ್ಸ್ ಮಾಡಿಕೊಂಡಿದ್ದಕ್ಕೆ ಏನಾಯ್ತು? ಕಾಂಗ್ರೆಸ್ ಜೊತೆ ಹೋಗಿದಕ್ಕೆ ಏನಾಯ್ತು ? ಅನುಕೂಲ ಆಯ್ತಾ? ಕುತ್ತಿಗೆ ಕುಯ್ಯುವ ಕೆಲಸ ಆಯ್ತು. ಮುಂದೆ ಯೋಚನೆ ಮಾಡೋಣ ಎಂದು ಹೇಳಿದರು.
ನಮ್ಮ ಕಾರ್ಯಕರ್ತರು ಬಲಿಪಶು ಆಗಬಾರದು. ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳದೇ ಇದ್ದಿದ್ದರೇ ಸೋಲುತ್ತಿದ್ದೇವಾ ? ಕಾಂಗ್ರೆಸ್ ಅಭ್ಯರ್ಥಿ ಇದ್ದು, ನಮ್ಮ ಅಭ್ಯರ್ಥಿ ಹಾಕಿ, ಬಿಜೆಪಿ ಅಭ್ಯರ್ಥಿ ಇದ್ದಿದ್ದರೆ ಮಂಡ್ಯದಲ್ಲಿ ನಮ್ಮ ಅಭ್ಯರ್ಥಿ ಸೋಲುವ ಪ್ರಶ್ನೆಯೇ ಇರಲಿಲ್ಲ. ಸ್ವತಂತ್ರವಾಗಿ 28 ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಎಂದು ಹೇಳುವುದಿಲ್ಲ. ನಾಲ್ಕೈದು ಕ್ಷೇತ್ರಗಳಲ್ಲಿ ಗೆಲ್ಲುವ ಸಾಮರ್ಥ್ಯ ಇದೆ ಎಂದು ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ