ಬೆಂಗಳೂರು, ಫೆ.11: ಅನುದಾನದಲ್ಲಿ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ತಾರತಮ್ಯ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಈ ವಿಚಾರವಾಗಿ ಬಿಜೆಪಿ-ಕಾಂಗ್ರೆಸ್ ನಡುವೆ ಆರೋಪ-ಪ್ರತ್ಯಾರೋಪಗಳ ನಡುವೆ ಸಂಸತ್ ಅಧಿವೇಶನದಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಅಂಕಿ-ಅಂಶಗಳ ಮೂಲಕ ಕಾಂಗ್ರೆಸ್ ಆರೋಪಿಗಳಿಗೆ ತಿರುಗೇಟು ನೀಡಿದ್ದರು. ಈ ವಿಚಾರವಾಗಿ ಮಾತನಾಡಿದ ರಾಜ್ಯ ಗೃಹಮಂತ್ರಿ ಡಾ.ಜಿ.ಪರಮೇಶ್ವರ್ (Dr.G.Parameshwar), ನಿರ್ಮಲಾ ಸೀತಾರಾಮನ್ ಅವರು ಸಂಸತ್‌ನಲ್ಲಿ ಅತಿ ದೊಡ್ಡ ಸುಳ್ಳು ಹೇಳಿದ್ದಾರೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಪರಮೇಶ್ವರ್, ಕೇಂದ್ರದಿಂದ ಒಂದೇ ಒಂದು ರೂಪಾಯಿ ನಮಗೆ ಬಂದಿಲ್ಲ. ಅತಿ ದೊಡ್ಡ ಸುಳ್ಳನ್ನ ಸಂಸತ್‌ನಲ್ಲಿ ನಿರ್ಮಾಲಾ ಸೀತರಾಮನ್ ಹೇಳಿದ್ದಾರೆ. ಕರ್ನಾಟಕದಿಂದ ಆಯ್ಕೆ ಆಗಿರುವ ಸಚಿವೆ ಸುಳ್ಳು ಹೇಳಿದ್ದು ಬೇಸರ ತರಿಸಿದೆ. ಬರ ಸಂಬಂಧ ರಾಜ್ಯದಲ್ಲಿ ಸರ್ವೆ ಕೆಲಸ ಮಾಡಿಕೊಂಡು ಹೋಗಿದ್ದರು. ಆದರೆ ಹಣ ಬಿಡುಗಡೆ ಮಾಡಿಲ್ಲ. ನಮಗೆ ಕೊಡಬೇಕಾದ ಎನ್‌ಡಿಆರ್‌ಎಫ್ ಹಣ ಕೊಡಿ ಎಂದರು.
ಕರ್ನಾಟಕದ ಆಂತರಿಕ ಭದ್ರತೆ ವಿಭಾಗದ ಡಿಜಿಪಿಯಾಗಿದ್ದ ಐಪಿಎಸ್ ಅಧಿಕಾರಿ ಪ್ರತಾಪ್ ರೆಡ್ಡಿ ಅವರು ನಿವೃತ್ತಿಗೆ ಎರಡು ತಿಂಗಳು ಬಾಕಿ ಇರುವಾಗಲೇ ರಾಜೀನಾಮೆ ನೀಡಿದ್ದಾರೆ. ಈ ವಿಚಾರವಾಗಿ ಮಾತನಾಡಿದ ಗೃಹ ಸಚಿವರು, ವೈಯಕ್ತಿಕ ಕಾರಣದಿಂದ ಪ್ರತಾಪ್ ರೆಡ್ಡಿ ರಾಜೀನಾಮೆ ಕೊಟ್ಟಿದ್ದಾರೆ. ಯಾವುದೇ ಕಾರಣ ಕೊಟ್ಟು ರಾಜೀನಾಮೆ ಕೊಟ್ಟಿಲ್ಲ. ಅದಕ್ಕೆ ಅಂಗೀಕಾರ ಮಾಡಬೇಕಾಗುತ್ತದೆ ಎಂದು ಸ್ಪಷ್ಟನೆ ನೀಡಿದರು.
ಇದನ್ನೂ ಓದಿ: ಕರ್ನಾಟಕಕ್ಕೆ ಎಷ್ಟು ತೆರಿಗೆ ಹಣ ನೀಡಲಾಗಿದೆ? ಅಂಕಿ-ಅಂಶ ಬಿಚ್ಚಿಟ್ಟ ನಿರ್ಮಲಾ ಸೀತಾರಾಮನ್
ಕಾರ್ಯಕರ್ತರಿಗೆ ನಿಗಮ ಮಂಡಳಿ ಹಂಚಿಕೆ ವಿಳಂಬ ವಿಚಾರವಾಗಿ ಮಾತನಾಡಿದ ಪರಮೇಶ್ವರ್, ಆದಷ್ಟು ಬೇಗ ಮಾಡುತ್ತೇವೆ ಅಂತ ಹೇಳಿದ್ದಾರೆ. ನಾವು ಬೇಸರ ಪಟ್ಟಿದ್ದು ಎಲ್ಲಾ ಮುಗಿದು ಹೋಯ್ತು. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಚರ್ಚೆ ಮಾಡಿದ್ದಾರೆ. ಅಂತಿಮಗೊಳಿಸಿದ್ದೀವಿ ಅಂತ ಹೇಳಿದ್ದಾರೆ ಎಂದರು.
ಕೆಎಚ್ ಮುನಿಯಪ್ಪ ನಿವಾಸಕ್ಕೆ ಭೇಟಿ ವಿಚಾರವಾಗಿ ಮಾತನಾಡಿದ ಪರಮೇಶ್ವರ್, ನಾವು ಯಾರದ್ದೋ ಮನೆಯಲ್ಲಿ ತಿಂಡಿ ತಿನ್ನೋದೇ ತಪ್ಪಾ? ನಾವೆಲ್ಲಾ ಮುನಿಯಪ್ಪ ಮನೆಗೆ ಹೋಗಿ ತಿಂಡಿ ತಿಂದೆವು. ಲಗ್ನ, ಸಂಬಂಧ ಮಾಡೋಕೆ ಮಾತಾಡುತ್ತೇವೆ. ನಾಲ್ಕು ಜನ ಸೇರಿದ ಮೇಲೆ ರಾಜಕೀಯ ಮಾತಾಡುತ್ತೇವೆ. ಹೆಚ್ಚು ಸೀಟು ಗೆಲ್ಲೋಕೆ ನಾವೇನು ಮಾಡಬಹುದು ಅಂತ ಚರ್ಚೆ ಮಾಡಿದ್ದೇವೆ. ಅದಕ್ಕೆ ಬೇರೆ ಬಣ್ಣ ಬಳಿಯೋದು ಬೇಡ ಎಂದರು.
ಚುನಾವಣೆ ಸಂದರ್ಭದಲ್ಲಿ ಅಮಿತ್ ಶಾ ಬಂದೇ ಬರುತ್ತಾರೆ. ಇಷ್ಟರಲ್ಲೇ ಪ್ರಧಾನಿ ಮೋದಿ ಟಿಪಿ ಕೂಡ ಬರುತ್ತದೆ. ಬಿಜೆಪಿ ನಾಯಕರು ಏನು ಮಾಡಬೇಕೋ ಅದನ್ನು ಮಾಡಲಿ. ನಾವು ಏನು ಮಾಡಬೇಕೋ ಮಾಡುತ್ತೇವೆ. ಸಂದರ್ಭ ಬಂದಾಗ ಅಭ್ಯರ್ಥಿಗಳ ಘೋಷಣೆ ಮಾಡುತ್ತೇವೆ ಎಂದರು.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮಾಡಿದ ಕಮಿಷನ್ ಆರೋಪ ಬಗ್ಗೆ ಸಿಬಿಐ ತನಿಖೆಗೆ ವಿಪಕ್ಷ ನಾಯಕ ಆರ್. ಅಶೋಕ್ ಆಗ್ರಹಿಸಿದ ವಿಚಾರವಾಗಿ ಮಾತನಾಡಿದ ಪರಮೇಶ್ವರ್, CBI ತನಿಖೆಗೆ ಕೊಡಿ ಎನ್ನುವ ಬಿಜೆಪಿಗೆ ನೈತಿಕತೆ ಇದೆಯಾ? ಈ ಹಿಂದೆ ನಾವು ಸಿಬಿಐ ತನಿಖೆಗೆ ಕೊಡಿ ಅಂತಾ ಕೇಳಿರಲಿಲ್ವಾ? ಮೋದಿಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪತ್ರ ಬರೆದಿದ್ದರು. ಆಗ ಏನೂ ಮಾಡಲಿಲ್ಲ, ಈಗ ಯಾವ ನೈತಿಕತೆ ಮೇಲೆ ಕೇಳುತ್ತಾರೆ ಎಂದು ಕೇಳಿದರು.
ಮಹದಾಯಿ ಯೋಜನೆಗೆ ರಾಷ್ಟ್ರೀಯ ವಾಣಿಜ್ಯ ಮಂಡಳಿ ತಕರಾರು ವಿಚಾರವಾಗಿ ಮಾತನಾಡಿದ ಪರಮೇಶ್ವರ್, ಮಹದಾಯಿ, ಮೇಕೆದಾಟು, ಅಪ್ಪರ್ ಭದ್ರಾಗೆ ಅನುಮತಿ ಕೊಡಲಿಲ್ಲ. ಅಪ್ಪರ್ ಭದ್ರಾಗೆ 5,300 ಕೋಟಿ ಕೊಡುತ್ತೇವೆ ಅಂತ ಹೇಳಿ ಕೊಡಲಿಲ್ಲ. ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಮಾಡುತ್ತಿದೆ ಅಂತಾ ಹೇಳಬೇಕಾಗುತ್ತದೆ ಎಂದರು.
ದೇಶವಿರೋಧಿ ಹೇಳಿಕೆ ನೀಡುವವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನನ್ನು ಕೇಂದ್ರ ಸರ್ಕಾರ ಜಾರಿಗೆ ತರಬೇಕು ಎಂದು ದೇಶ ವಿಭಜನೆಯ ಹೇಳಿಕೆ ನೀಡಿದ್ದ ಕಾಂಗ್ರೆಸ್ ಸಂಸದ ಡಿಕೆ ಶಿವಕುಮಾರ್ ವಿರುದ್ಧ ಬಿಜೆಪಿ ಹಿರಿಯ ನಾಯಕ ಕೆಎಸ್ ಈಶ್ವರಪ್ಪ ಹೇಳಿಕೆ ನೀಡಿದ್ದರು. ಇದಕ್ಕೆ ನೋಟಿಸ್ ಜಾರಿಯಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಈಶ್ವರಪ್ಪ, 100 ನೋಟಿಸ್ ಕೊಟ್ಟರೂ ಹೆದರಲ್ಲ ಎಂದು ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿದ ಪರಮೇಶ್ವರ್, ಕೆ.ಎಸ್.ಈಶ್ವರಪ್ಪರನ್ನು ಹೆದರಿಸಲು ಯಾರು ಸಹ ಹೋಗಿಲ್ಲ. ಕೆ.ಎಸ್.ಈಶ್ವರಪ್ಪ ಬಹಳ ದೊಡ್ಡವರು, ಹೆದರಿಸಲು ಆಗುತ್ತಾ? ಕಾನೂನಿನ ಪ್ರಕಾರ ಅವರಿಗೆ ನೋಟಿಸ್ ಕೊಟ್ಟಿದ್ದೇವೆ. ಮೊದಲು ಅದಕ್ಕೆ ಸಮಜಾಯಿಷಿ ಕೊಡಲಿ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:57 am, Sun, 11 February 24