ಬರದಿಂದ ನಲುಗುತ್ತಿರುವ ನಾಡಿಗೆ ಬರಿಗೈಯಲ್ಲಿ ಬಂದಿರಾ?: ಅಮಿತ್ ಶಾ ವಿರುದ್ಧ ಕಾಂಗ್ರೆಸ್ ಪೋಸ್ಟರ್ ಅಭಿಯಾನ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಬೆಳಗ್ಗೆ ಮೈಸೂರಿಗೆ ಆಗಮಿಸಿದ್ದಾರೆ. ಈ ನಡುವೆ ತೆರಿಗೆಯ ಅನುದಾನ ವಿಚಾರವಾಗಿ ಕಾಂಗ್ರೆಸ್ ಪ್ರತಿಭಟನೆ ನಡೆಸಲು ಮುಂದಾಗಿದೆ. ನನ್ನ ತೆರಿಗೆ ನನ್ನ ಹಕ್ಕು ಘೋಷಣೆಯೊಂದಿಗೆ, ಬರದಿಂದ ನಲುಗುತ್ತಿರುವ ನಾಡಿಗೆ ಬರಿಗೈಯಲ್ಲಿ ಬಂದಿರಾ ಎಂದಬ ಪ್ರಶ್ನೆಯೊಂದಿಗೆ ಪೋಸ್ಟರ್ ಅಭಿಯಾನ ನಡೆಸಲು ಸಜ್ಜಾಗಿದೆ. ಇಷ್ಟೆಲ್ಲಾ ಆದರೂ ಅಮಿತ್ ಶಾ ಅವರನ್ನು ಕೈ ಪಡೆದ ಸ್ವಾಗತಿಸಿದೆ.
ಮೈಸೂರು, ಫೆ.11: ಜಿಲ್ಲೆಗೆ ಕೇಂದ್ರ ಗೃಹ ಸಚಿವು ಅಮಿತ್ ಶಾ (Amit Shah) ಆಗಮನ ಹಿನ್ನೆಲೆ ಮೈಸೂರು ಕಾಂಗ್ರೆಸ್ (Congress) ಘಟಕದಿಂದ ಪ್ರತಿಭಟನೆಗೆ ಸಿದ್ಧತೆ ನಡೆಸಲಾಗಿದೆ. ಮೈಸೂರು (Mysuru) ಗ್ರಾಮಾಂತರ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್ ನೇತೃತ್ವದಲ್ಲಿ “ನನ್ನ ತೆರಿಗೆ ನನ್ನ ಹಕ್ಕು” ಘೋಷಣೆಯೊಂದಿಗೆ “ಬರದಿಂದ ನಲುಗುತ್ತಿರುವ ನಾಡಿಗೆ ಬರಿಗೈಯಲ್ಲಿ ಬಂದಿರಾ?” ಎಂಬ ಪ್ರಶ್ನೆಯೊಂದಿಗೆ ಪೋಸ್ಟರ್ ಅಭಿಯಾನ ನಡೆಸಲು ಕಾರ್ಯಕರ್ತರು ಸಜ್ಜಾಗಿದ್ದಾರೆ.
ಬೆಳಗ್ಗೆ 11 ಗಂಟೆಗೆ ಮೈಸೂರಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಅಮಿತ್ ಶಾ ವಿರುದ್ಧ ಪೋಸ್ಟರ್ ಅಭಿಯಾನ ನಡೆಸಲು ಜಿಲ್ಲಾ ಕಾಂಗ್ರೆಸ್ ಪ್ಲಾನ್ ಮಾಡಿಕೊಂಡಿದೆ. ಇಷ್ಟೆಲ್ಲಾ ಆದರೂ ಅಮಿತ್ ಶಾ ಅವರನ್ನು ಕೈ ಪಡೆ ಸ್ವಾಗತ ಕೋರಿದ್ದು, ಕನ್ನಡ ನಾಡಲ್ಲಿ ಅತಿಥ್ಯಕ್ಕೆ ಬರವಿಲ್ಲ. ದ್ರೋಹಿಗಳನ್ನು ಕ್ಷಮಿಸು ಮರೆವಿಲ್ಲ ಅಂತಾ ಘೋಷ ವಾಕ್ಯ ಸಿದ್ಧಮಾಡಿದ್ದಾರೆ.
ದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಅನುದಾನ ಹಂಚಿಕೆಯಲ್ಲಿ ಕೇಂದ್ರ ಸರಕಾರ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಿತ್ತು. ಕರ್ನಾಟಕ ಸರ್ಕಾರದ ತೆರಿಗೆ ಆರೋಪಕ್ಕೆ ಸ್ವತಃ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮಾನ್ ಪ್ರತಿಕ್ರಿಯಿಸಿದ್ದು, ಅಂಕಿ-ಅಂಶಗಳ ಸಮೇತ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕಕ್ಕೆ ಕೇಂದ್ರ ತಾರತಮ್ಯ ಮಾಡಿದೆ ಎಂಬುದು ತಪ್ಪು ಮಾಹಿತಿ ನೀಡುತ್ತಿದೆ. ಇಲ್ಲಿಯವರೆಗೆ ಒಟ್ಟು 12,476 ಕೋಟಿ ರೂ.ಗಳಲ್ಲಿ 6196 ಕೋಟಿ ರೂ. ನೀಡಲಾಗಿದೆ ಎಂದು ಸ್ಪಷ್ಟೀಕರಣ ನೀಡಿದ್ದರು.
ಇದನ್ನೂ ಓದಿ: ಮೈಸೂರಿಗೆ ಆಗಮಿಸಿದ ಬಿಜೆಪಿ ಚಾಣಕ್ಯ ಅಮಿತ್ ಶಾ; ರಸ್ತೆ ಮಧ್ಯೆ ಕಾರು ಅಪಘಾತ
ಅದಾಗ್ಯೂ, ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ಟೀಕೆಗಳನ್ನು ಮುಂದುವರಿಸಿದ್ದು, ಕರ್ನಾಟಕಕ್ಕೆ ಆಗಿರುವ ಅನ್ಯಾಯದ ಬಗ್ಗೆ ರಾಜ್ಯ ಬಜೆಟ್ ಮಂಡನೆಯ ಬಳಿಕ ಶ್ವೇತಪತ್ರ ಹೊರಡಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆ ಟ್ವೀಟ್ ಮಾಡಿದ ಸಿದ್ದರಾಮಯ್ಯ, ಹಲವು ಪ್ರಶ್ನೆಗಳಿಗೆ ಉತ್ತರಿಸಿ ಎಂದು ಹೇಳಿದ್ದಾರೆ. ಬರಪರಿಹಾರಕ್ಕೆ ಮನವಿ ಸಲ್ಲಿಸಿ ನಾಲ್ಕು ತಿಂಗಳುಗಳಾಗಿವೆ. ಕೇಂದ್ರ ತಜ್ಞರ ಸಮಿತಿ ಬಂದು ಅಧ್ಯಯನ ಮಾಡಿ ವರದಿ ಸಲ್ಲಿಸಿಯಾಗಿದೆ. ನಿಯಮಗಳ ಪ್ರಕಾರ ಕೇಂದ್ರ ಗೃಹಸಚಿವರು ಅಧ್ಯಕ್ಷತೆಯ ಉನ್ನತಾಧಿಕಾರ ಸಮಿತಿ ಸಭೆ ನಡೆಸಿ ತಜ್ಞರ ವರದಿಯನ್ನು ಪರಿಶೀಲಿಸಿ ಪರಿಹಾರಕ್ಕೆ ಅನುಮೋದನೆ ನೀಡಬೇಕು. ಇಂತಹದ್ದೊಂದು ಸಣ್ಣ ಸಭೆ ನಡೆಸಲು ಕೇಂದ್ರ ಗೃಹಸಚಿವ ಅಮಿತ್ ಶಹಾ ಅವರಿಗೆ ಪುರುಸೊತ್ತಿಲ್ಲ. ಯಾವಾಗ ಬರ ಪರಿಹಾರ ನೀಡುತ್ತೀರಿ? ಅಮಿತ್ ಶಹಾ ಅವರೇ, ಕರ್ನಾಟಕಕ್ಕೆ ಕಾಲಿಡುವ ಮೊದಲು ಈ ಪ್ರಶ್ನೆಗೆ ಉತ್ತರಿಸಿರುವಿರಾ? ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಹುಬ್ಬಳ್ಳಿ -ಧಾರವಾಡ ಸುತ್ತಮುತ್ತಲಿನ ಪಟ್ಟಣ ಹಾಗೂ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಮಹದಾಯಿಯ ಕಳಸಾ ನಾಲಾ ತಿರುವು ಯೋಜನೆಗೆ ಮತ್ತೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಅನುಮೋದನೆ ನಿರಾಕರಿಸಿದೆ. ಕೇಂದ್ರ ಅರಣ್ಣ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದ್ರ ಯಾದವ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಹಾದಾಯಿ ಯೋಜನೆಗೆ ಅನುಮೋದನೆ ನೀಡದಿರಲು ನಿರ್ಧರಿಸಿದೆ. ಈ ಸಂದೇಶವನ್ನು ಕನ್ನಡಿಗರಿಗೆ ತಿಳಿಸಲು ಕರ್ನಾಟಕಕ್ಕೆ ಬರುತ್ತಿದ್ದೀರಾ ಅಮಿತ್ ಶಹಾ ಅವರೇ? ಎಂದು ಕೇಳಿದ್ದಾರೆ.
ಬಡ ಕನ್ನಡಿಗರ ಹಸಿವು ನೀಗಿಸಲೆಂದೇ ನಾವು ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆಗೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ದಿನದಿಂದ ಅಡ್ಡಗಾಲು ಹಾಕುತ್ತಲೇ ಬಂದಿರುವುದು ಇಡೀ ದೇಶಕ್ಕೆ ಗೊತ್ತಿದೆ. ಅನ್ನಭಾಗ್ಯ ಯೋಜನೆಯಡಿ ವಿತರಿಸಲು ಬೇಕಾಗಿರುವ ಅಕ್ಕಿಯನ್ನು ಒಂದು ಕಿಲೋಗೆ 33 ರೂಪಾಯಿ ಕೊಟ್ಟು ಖರೀದಿಸುತ್ತೇವೆ ಎಂದು ಹೇಳಿದರೂ ಅಕ್ಕಿ ಕೊಡಲಿಲ್ಲ. ಈಗ ಅದೇ ಅಕ್ಕಿಯನ್ನು ‘’ಭಾರತ್ ಬ್ರಾಂಡ್’’ ಎಂಬ ಹೆಸರಿನಲ್ಲಿ ಒಂದು ಕಿಲೋಗೆ ರೂ.29ರಂತೆ ಮಾರಾಟ ಮಾಡಲು ಹೊರಟಿದೆ. ಯಾಕೆ ಕನ್ನಡಿಗರ ಹಸಿವು ಹಸಿವಲ್ಲವೇ ಅಮಿತ್ ಶಹಾ ಅವರೇ? ಎಂದು ಸಿದ್ದರಾಮಯ್ಯ ಕೇಳಿದ್ದಾರೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ