ನಾನು ವಾಪಸ್ ಬಂದೇ ಬರುವೆ ಎಂಬ ಹೇಳಿಕೆ ಟ್ರೋಲ್ ಮಾಡುವವರನ್ನು ನಾನು ಕ್ಷಮಿಸುವೆ: ಫಡ್ನವಿಸ್
ವಿಶ್ವಾಸ ಮತ ಯಾಚನೆ ವೇಳೆ ವಿಪಕ್ಷದ ಕೆಲವು ಶಾಸಕರು ಇಡಿ, ಇಡಿ ಎಂದು ಕೂಗಿದರು. ಅದು ನಿಜ. ಹೊಸ ಸರ್ಕಾರ ರಚಿಸಿದ್ದೇ ಇಡಿ. ಇಡಿ ಎಂದರೆ ಏಕನಾಥ್ ಮತ್ತು ದೇವೇಂದ್ರ ಎಂದು ಫಡ್ನವಿಸ್ ಹೇಳಿದ್ದಾರೆ.
ಮುಂಬೈ: 2019ರ ಮಹಾರಾಷ್ಟ್ರ(Maharashtra) ವಿಧಾನಸಭಾ ಚುನಾವಣೆಗೆ ಮುನ್ನ ನಾನು ವಾಪಸ್ ಬಂದೇ ಬರುವೆ ಎಂದು ದೇವೇಂದ್ರ ಫಡ್ನವಿಸ್ (Devendra Fadnavis) ಹೇಳಿದ್ದರು. ಇದೀಗ ಫಡ್ನವಿಸ್, ಶಿಂಧೆ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದಾರೆ. ಏತನ್ಮಧ್ಯೆ, ನಾನು ವಾಪಸ್ ಬಂದೇ ಬರುವೆ ಎಂಬ ಹೇಳಿಕೆ ಟ್ರೋಲ್ ಆಗುತ್ತಿದ್ದು, ಟ್ರೋಲ್ ಮಾಡುವವರನ್ನು ನಾನು ಕ್ಷಮಿಸುವೆ ಎಂದು ಫಡ್ನವಿಸ್ ಹೇಳಿದ್ದಾರೆ. ಏಕನಾಥ್ ಶಿಂಧೆ (Eknath Shinde) ಅವರು ಸೋಮವಾರ ವಿಶ್ವಾಸ ಮತ ಗೆದ್ದ ನಂತರ ಪಡ್ನವಿಸ್ ಈ ಮಾತನ್ನು ಹೇಳಿದ್ದಾರೆ. 2019ರ ಮಹಾರಾಷ್ಟ್ರ ಚುನಾವಣೆಗೆ ಮುನ್ನ ಬಿಜೆಪಿಯಹಿರಿಯ ನಾಯಕ ಮತ್ತು ಮಾಜಿ ಸಿಎಂ ಫಡ್ನವಿಸ್ ಮೇ ಪುನಃ ಯೇ (ನಾನು ವಾಪಸ್ ಬರುವೆ) ಎಂದು ಹೇಳಿದ್ದು ಈ ಹೇಳಿಕೆ ಈಗ ಸಾಮಾಜಿಕ ಮಾಧ್ಯಮದಲ್ಲಿ ಮೀಮ್ ಆಗಿದೆ. ಚುನಾವಣೆಯ ನಂತರ ಶಿವಸೇನಾ ಬಿಜೆಪಿ ಜತೆಗಿನ ಮೈತ್ರಿ ಮುರಿದು ಎನ್ ಸಿಪಿ ಮತ್ತು ಕಾಂಗ್ರೆಸ್ ಜತೆ ಕೈ ಜೋಡಿಸಿ ಸರ್ಕಾರ ರಚಿಸಿತ್ತು.
ಕಳೆದ ತಿಂಗಳು ಶಿಂಧೆ ಶಿವಸೇನಾದಲ್ಲಿ ಬಂಡಾಯವೆದ್ದು ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ಪತನಕ್ಕೆ ಕಾರಣವಾಗಿದ್ದರು. ಜೂನ್ 30ರಂದು ಶಿಂಧೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ, ಫಡ್ನವಿಸ್ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ನಾನು ವಾಪಸ್ ಬರುವೆ ಎಂಬ ಹೇಳಿಕೆಯನ್ನು ಟ್ರೋಲ್ ಮಾಡಲಾಗುತ್ತಿದೆ. ನಾನು ಅವರನ್ನು ಕ್ಷಮಿಸುವ ಮೂಲಕ ಆ ಮುಯ್ಯಿ ತೀರಿಸುತ್ತಿದ್ದೇನೆ. ವಿಶ್ವಾಸ ಮತ ಯಾಚನೆ ವೇಳೆ ವಿಪಕ್ಷದ ಕೆಲವು ಶಾಸಕರು ಇಡಿ, ಇಡಿ ಎಂದು ಕೂಗಿದರು. ಅದು ನಿಜ. ಹೊಸ ಸರ್ಕಾರ ರಚಿಸಿದ್ದೇ ಇಡಿ. ಇಡಿ ಎಂದರೆ ಏಕನಾಥ್ ಮತ್ತು ದೇವೇಂದ್ರ ಎಂದು ಫಡ್ನವಿಸ್ ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಹೆಸರನ್ನು ಉಲ್ಲೇಖಿಸದೆಯೇ ಫಡ್ನವಿಸ್ ಅವರು ಮಹಾರಾಷ್ಟ್ರದಲ್ಲಿ ಕಳೆದ ಕೆಲವು ವರ್ಷಗಳಿಂದ ನಾಯಕತ್ವದ ಕೊರತೆ ಇತ್ತು. ಆದರೆ ಈಗ ಶಿಂಧೆ ಮತ್ತು ನಾನು ಇಬ್ಬರೂ ಇದ್ದೇವೆ. ನಾವು ಸದಾ ಜನರಿಗೆ ಲಭ್ಯವಾಗಿರುತ್ತೇವೆ ಎಂದಿದ್ದಾರೆ.