ಬಾಬಾ ಅಮರನಾಥ ಭಾರತದಲ್ಲಿ ಮಾ ಶಾರದಾ ಎಲ್ಒಸಿಯಿಂದಾಚೆಗೆ ಹೇಗೆ ಸಾಧ್ಯ?; ಪಿಒಕೆ ಭಾರತದ ಭಾಗ: ರಾಜನಾಥ್ ಸಿಂಗ್
ಪಿಒಕೆ ಭಾರತದ ಭಾಗ, ಅದು ಹಾಗೆಯೇ ಇರಲಿದೆ. ಬಾಬಾ ಅಮರನಾಥ ಭಾರತದಲ್ಲಿದ್ದು, ಭಾರತದ ಗಡಿನಿಯಂತ್ರಣ ರೇಖೆಯಿಂದಾಚೆಗೆ ಮಾ ಶಾರಾದಾ ಶಕ್ತಿ ಇರುವುದು ಹೇಗೆ ಸಾಧ್ಯ? ಎಂದು ರಕ್ಷಣಾ ಸಚಿವರು ಹೇಳಿದ್ದಾರೆ.
ದೆಹಲಿ: ಪಾಕ್ ಆಕ್ರಮಿತ ಕಾಶ್ಮೀರ (Pakistan-Occupied Kashmir) ಭಾರತದ್ದೇ ಭಾಗ, ಅದು ಹಾಗೆಯೇ ಮುಂದುವರಿಯಲಿದೆ ಎಂದು ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಸೋಮವಾರ ಹೇಳಿದ್ದಾರೆ. ಪಿಒಕೆ ಬಗ್ಗೆ ಸಂಸತ್ನಲ್ಲಿ ನಿರ್ಣಯವೊಂದನ್ನು ಅಂಗೀಕರಿಸಲಾಗಿದೆ. ಪಿಒಕೆ ಭಾರತದ ಭಾಗ, ಅದು ಹಾಗೆಯೇ ಇರಲಿದೆ. ಬಾಬಾ ಅಮರನಾಥ ಭಾರತದಲ್ಲಿದ್ದು, ಭಾರತದ ಗಡಿನಿಯಂತ್ರಣ ರೇಖೆಯಿಂದಾಚೆಗೆ ಮಾ ಶಾರಾದಾ ಶಕ್ತಿ ಇರುವುದು ಹೇಗೆ ಸಾಧ್ಯ? ಎಂದು ರಕ್ಷಣಾ ಸಚಿವರು ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಶಾರದಾ ಪೀಠವನ್ನು ಸಿಂಗ್ ಉಲ್ಲೇಖಿಸಿದ್ದು ಇದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಮುಜಾಫರ್ ಬಾದ್ ನಿಂದ 150 ಕಿಮಿ ದೂರವಿರುವ ಕಿಶನ್ ಗಾಂಗಾ ನದಿಯ ಬಳಿಯಲ್ಲಿದೆ. ಇದು ಕಾಶ್ಮೀರಿ ಪಂಡಿತರ ಪವಿತ್ರ ಧಾರ್ಮಿಕ ಕ್ಷೇತ್ರವಾಗಿದ್ದು ಕರ್ತಾರ್ಪುರ್ನಂತೆ ಕಾರಿಡಾರ್ ಮಾಡಿ ಇಲ್ಲಿ ಪೂಜೆಗೆ ಅನುಮತಿಸಬೇಕು ಎಂದು ಅವರು ಬೇಡಿಕೆಯೊಡ್ಡುತ್ತಿದ್ದಾರೆ.
ಜಮ್ಮುನಲ್ಲಿ ಕಾರ್ಗಿಲ್ ವಿಜಯ್ ದಿವಸ್ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಂಗ್, ಆಗಿನ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರೂ ಅಧಿಕಾರದಲ್ಲಿದ್ದಾಗ 1962ರಲ್ಲಿ ಚೀನಾ ಲಡಾಖ್ ನ್ನು ವಶಪಡಿಸಿತ್ತು. ಆಗಿನ ಕಾಲಕ್ಕೆ ಹೋಲಿಸಿದರೆ ಭಾರತ ಇಂದು ಜಗತ್ತಿನಲ್ಲಿ ಹೆಚ್ಚು ಬಲಿಷ್ಠ ಶಾಲಿ ದೇಶಗಳಲ್ಲೊಂದಾಗಿದೆ.1 962ರಲ್ಲಿ ನಮ್ಮ ಲಡಾಖ್ ಪ್ರದೇಶವನ್ನು ಚೀನಾ ವಶಪಡಿಸಿತ್ತು. ಆಗ ಪ್ರಧಾನಿಯಾಗಿದ್ದವರು ನೆಹರು, ನಾನು ಅವರ ಉದ್ದೇಶವನ್ನು ಪ್ರಶ್ನಿಸುವುದಿಲ್ಲ. ಉದ್ದೇಶಗಳು ಒಳ್ಳೆಯದಾಗಿರಬಹುದು. ಆದರೆ ಅವೆಲ್ಲವೂ ರಾಜಕೀಯಕ್ಕೆ ಅನ್ವಯವಾಗಲ್ಲ ಎಂದು ಸಿಂಗ್ ಹೇಳಿದ್ದಾರೆ. ಜಮ್ಮುನಲ್ಲಿ ಕರ್ತವ್ಯದ ವೇಳೆ ಮಡಿದ ಯೋಧರ ಕುಟುಂಬದವರನ್ನು ಸಿಂಗ್ ಮಾತನಾಡಿಸಿದ್ದಾರೆ.
ದೇಶದ ಸೇವೆಗಾಗಿ ತಮ್ಮ ಪ್ರಾಣ ಒತ್ತೆಯಿಟ್ಟ ಯೋಧರನ್ನು ನಾವು ಸ್ಮರಿಸುತ್ತೇವೆ. ನಮ್ಮ ದೇಶಕ್ಕಾಗಿ ಸೇನೆ ಅತ್ಯುನ್ನತ ತ್ಯಾಗವನ್ನು ಮಾಡಿದೆ.1999ರ ಯುದ್ಧದಲ್ಲಿ ಹಲವಾರು ವೀರಯೋಧರು ಮಡಿದಿದ್ದಾರೆ.ಅವರಿಗೆ ಶಿರಬಾಗುತ್ತೇವೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
2018ರಲ್ಲಿ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ಶಾರದಾ ಪೀಠಕ್ಕೆ ಯಾತ್ರಾರ್ಥಿಗಳನ್ನು ಅನುಮತಿಸಬೇಕು ಎಂದು ಭಾರತ ಮತ್ತು ಪಾಕಿಸ್ತಾನಕ್ಕೆ ಮನವಿ ಮಾಡಿದ್ದರು. ಎರಡು ಧರ್ಮಗಳ ಜನರನ್ನು ದೂರ ಮಾಡುವ ಬದಲು ಒಟ್ಟಿಗೆ ಹೇಗೆ ತರಬಹುದು ಎಂಬುದಕ್ಕೆ ಕತಾರ್ ಪುರ್ ದೊಡ್ಡ ಉದಾಹರಣೆ. ಕಾಶ್ಮೀರದಲ್ಲಿ ಪ್ರಕ್ಷುಬ್ದತೆ ನಿಯಂತ್ರಿಸಲು ಮುಫ್ತಿ ಕಂಡು ಕೊಂಡ ಮಾರ್ಗವಾಗಿದೆ ಇದು. ಕತಾರ್ ಪುರ್ ನಂತರ ಭಾರತ ಮತ್ತು ಪಾಕಿಸ್ತಾನ ಶಾರದಾ ಪೀಠಕ್ಕೆ ಯಾತ್ರಾರ್ಥಿಗಳನ್ನು ಅನುಮತಿಸಬೇಕು ಎಂದು ಜಮ್ಮು ಕಾಶ್ಮೀರದ ಮಾಜಿ ಸಿಎಂ ಟ್ವೀಟಿಸಿದ್ದರು.
Published On - 4:32 pm, Sun, 24 July 22