ನೀವು ಬಿಜೆಪಿಗೆ ಬನ್ನಿ: ಹು-ಧಾ ಪಾಲಿಕೆ ವಿರೋಧ ಪಕ್ಷದ ನಾಯಕನಿಗೆ ಪ್ರಲ್ಹಾದ್ ಜೋಶಿ ಆಫರ್
ನಮ್ಮ ಪಕ್ಷಕ್ಕೆ ಬಂದುಬಿಡಿ, ಮೇಯರ್ ಆಗುತ್ತೀರಾ ಎಂದು ಹೇಳುವ ಮೂಲಕ ಹುಬ್ಬಳ್ಳಿ ಧಾರವಾಡ ಪಾಲಿಕೆ ವಿರೋಧ ಪಕ್ಷದ ನಾಯಕ ದೊರೆರಾಜ ಮಣಿಕುಂಟ್ಲ ಅವರಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಫರ್ ಕೊಟ್ಟಿದ್ದಾರೆ. ಇದಕ್ಕೆ ದೊರೆರಾಜ ಏನು ಹೇಳಿದರು ಗೊತ್ತಾ?
ಹುಬ್ಬಳ್ಳಿ: ನಿಮ್ಮನ್ನು ಕಾಂಗ್ರೆಸ್ (Congress) ಪಕ್ಷ ಏನೂ ಮಾಡಲ್ಲ, ಬಿಜೆಪಿಗೆ (BJP) ಬಂದುಬಿಡಿ ಮೇಯರ್ ಆಗುತ್ತೀರಿ ಎಂದು ಹೇಳುವ ಮೂಲಕ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ದೊರೆರಾಜ ಮಣಿಕುಂಟ್ಲ (Doreraj Manikuntla) ಅವರಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಅವರು ಆಫರ್ ನೀಡಿದ್ದಾರೆ.
ಇಂದು ಪ್ರಲ್ಹಾದ್ ಜೋಶಿ ಅವರು ಮೇಯರ್ ಕಚೇರಿ ಉದ್ಘಾಟನೆಗೆ ಆಗಮಿಸಿದ್ದಾರೆ. ಕಾರ್ಯಕ್ರಮಕ್ಕೆ ಪಾಲಿಕೆ ವಿರೋಧ ಪಕ್ಷದ ನಾಯಕ ದೊರೆರಾಜ ಮಣಿಕುಂಟ್ಲ ಅವರು ಕೂಡ ಆಗಮಿಸಿದ್ದಾರೆ. ಈ ವೇಳೆ, ದೊರೆರಾಜ ಅವರನ್ನು ಮಾತನಾಡಿಸಿದ ಪ್ರಲ್ಹಾದ್ ಜೋಶಿ, ನಮ್ಮ ಪಕ್ಷಕ್ಕೆ ಬಂದುಬಿಡಿ, ನೀವು ಮೇಯರ್ ಆಗುತ್ತೀರಾ. ಇಲ್ಲಿದಿದ್ದರೆ ಆಗಲ್ಲ. ಕಾಂಗ್ರೆಸ್ ಪಕ್ಷ ನಿಮ್ಮನ್ನು ಏನೂ ಮಾಡಲ್ಲ ಎಂದರು. ಈ ವೇಳೆ, ನಿಮ್ಮ ಆಶೀರ್ವಾದ ಬೇಕು ಎಂದು ದೊರೆರಾಜ ಮಣಿಕುಂಟ್ಲ ಹೇಳಿದ್ದಾರೆ.
ಸರ್ಕಾರದ ಬುದ್ಧಿ ಹ್ಯಾಕ್ ಆಗಿದೆ: ಪ್ರಲ್ಹಾದ್ ಜೋಶಿ
ಗೃಹಲಕ್ಷ್ಮಿ ಯೋಜನೆ ಜಾರಿ ವಿಳಂಭ ಹಿನ್ನೆಲೆ ವಿಪಕ್ಷಗಳ ಹಾಗೂ ಜನರ ಟೀಕೆಯಿಂದ ತಪ್ಪಿಸಿಕೊಳ್ಳಲು ಸಚಿವ ಸತೀಶ್ ಜಾರಕಿಹೊಳಿ, ಕೇಂದ್ರ ಸರ್ಕಾರ ಸರ್ವರ್ ಹ್ಯಾಕ್ ಮಾಡಿದೆ ಎಂದು ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿದ ಪ್ರಲ್ಹಾದ್ ಜೋಶಿ, ಸರ್ಕಾರದ ಬುದ್ಧಿ ಹ್ಯಾಕ್ ಆಗಿದೆ ಎಂದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ವಿಚಾರವಾಗಿ ಕಾಂಗ್ರೆಸ್ನವರು ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ: Monsoon Session: ಜುಲೈ 20ರಿಂದ ಆಗಸ್ಟ್ 11ರವರೆಗೆ ಸಂಸತ್ನ ಮುಂಗಾರು ಅಧಿವೇಶನ; ಸಚಿವ ಪ್ರಹ್ಲಾದ್ ಜೋಶಿ
ಸುಳ್ಳು ಹಾಗೂ ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಉಚಿತ ಪ್ರಯಾಣ ಬಿಟ್ಟರೆ ಎಲ್ಲಾ ಗ್ಯಾರಂಟಿಗಳು ವಿಫಲವಾಗಿವೆ. ಜನರಿಗೆ ಉಚಿತವಾಗಿ ಅಕ್ಕಿ ಕೊಡುತ್ತಿರುವುದು ಪ್ರಧಾನಿ ಮೋದಿ ಸರ್ಕಾರ. ಆಹಾರ ಭದ್ರತಾ ಕಾಯ್ದೆ ಮಾಡಿದ್ದು ಯುಪಿಎ ಸರ್ಕಾರ ಎಂದು ಹೇಳುತ್ತಾರೆ. ಆದರೆ ನಾವು ಆಹಾರ ಭದ್ರತಾ ಕಾಯ್ದೆ ಕಾನೂನನ್ನು ಜಾರಿಗೆ ತಂದಿದ್ದು. ದೇಶದ 80 ಕೋಟಿ ಜನರಿಗೆ ಅಕ್ಕಿ ಕೊಡುತ್ತಿದ್ದೇವೆ ಎಂದರು.
ಅಸಭ್ಯ ಪದ ಬಳಸುವುದು ಸರಿಯಲ್ಲ: ಪ್ರಲ್ಹಾದ್ ಜೋಶಿ
ಪಂಚೆ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿದ ಬಗ್ಗೆ ಪ್ರತಿಕ್ರಿಯಿಸಿದ ಪ್ರಲ್ಹಾದ್ ಜೋಶಿ, ಇದು ಕಾಂಗ್ರೆಸ್ನ ಕೆಳಮಟ್ಟದ ಭಾಷೆ. ಈ ವಿಚಾರಕ್ಕೆ ನಮ್ಮ ಪಕ್ಷದ ಬೇರೆ ಬೇರೆಯವರು ಮಾತಾಡಿದ್ದಾರೆ. ಭಾರತ ಸರ್ಕಾರದ ಮಂತ್ರಿಯಾಗಿ ನಾನು ಆ ಪದ ಬಳಸಿಲ್ಲ ಎಂದರು. ಸಿಎಂ ಸಿದ್ದರಾಮಯ್ಯ ಲುಂಗಿ ಲೀಡರ್. ಅವರು ಅದನ್ನು ಮರೆಯಬಾರದು. ಅಸಭ್ಯ ಪದ ಬಳಸುವುದು ಸರಿಯಲ್ಲ. ಅಪ್ಪಿತಪ್ಪಿಯೂ ನನ್ನ ಬಾಯಿಯಿಂದ ಅಂತಹ ಭಾಷೆ ಬರುವುದಿಲ್ಲ. ಅದಕ್ಕೆಲ್ಲಾ ಜನರು ಉತ್ತರ ಕೊಡುತ್ತಾರೆ ಎಂದರು.
ವಿಧಾನಸಭೆ ಅಧಿವೇಶನ ಜುಲೈ 3 ರಿಂದ ಆರಂಭಗೊಳ್ಳಲಿದೆ. ಈ ನಡುವೆ ಬಿಜೆಪಿಯಲ್ಲಿ ವಿಪಕ್ಷ ನಾಯಕನ ಆಯ್ಕೆಗೆ ಕಸರತ್ತು ನಡೆಯುತ್ತಿದ್ದು, ಹಲವರು ರೇಸ್ನಲ್ಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರಲ್ಹಾದ್ ಜೋಶಿ, ಇನ್ನು ಎರಡು ಮೂರು ದಿನಗಳಲ್ಲಿ ವಿಪಕ್ಷ ನಾಯಕನ ಆಯ್ಕೆ ಆಗಲಿದೆ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ