
ಬೆಂಗಳೂರು, ಮೇ 24: ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ವಿರುದ್ಧ ಆಡಿದ ಅವಹೇಳನಕಾರಿ ಮಾತು ತೀವ್ರ ವಿರೋಧಕ್ಕೆ ಗುರಿಯಾಗಿತ್ತು. ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಬೆಂಬಲಿಗರು ಛಲವಾದಿ ನಾರಾಯಣಸ್ವಾಮಿ ಅವರಿಗೆ ಘೆರಾವ್ ಹಾಕಿದ್ದರು. ಛಲವಾದಿ ನಾರಾಯಣಸ್ವಾಮಿ ಇದ್ದ ಚಿತ್ತಾಪುರ ಪ್ರವಾಸಿ ಮಂದಿರದ ಎದುರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಅಲ್ಲದೇ, ತಿರಂಗಾಯಾತ್ರೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಿಡದಂತೆ ಘೆರಾವ್ ಹಾಕಿದ್ದರು.
ಪ್ರವಾಸಿ ಮಂದಿರದ ಎದುರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು ಮಾತ್ರವಲ್ಲದೆ, ಛಲವಾದಿ ನಾರಾಯಣಸ್ವಾಮಿ ಅವರ ಕಾರಿನ ಮೇಲೆ ಬಣ್ಣ ಎರಚಿ, ಅವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರು.
ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಈ ವರ್ತನೆಯನ್ನು ರಾಜ್ಯ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಇನ್ನು ರಾಜ್ಯ ಬಿಜೆಪಿ ನಾಯಕರು ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ, ತಕ್ಷಣ ಘಟನೆ ಸಂಬಂಧ ರಾಜ್ಯಪಾಲರು ಮಧ್ಯಪ್ರವೇಶ ಮಾಡಬೇಕು. ಅಲ್ಲದೇ ಸಚಿವ ಸ್ಥಾನದಿಂದ ಪ್ರಿಯಾಂಕ್ ಖರ್ಗೆ ಅವರನ್ನು ವಜಾ ಮಾಡಬೇಕು ಎಂದು ಮನವಿ ಮಾಡಿದ್ದರು.
ಛಲವಾದಿ ನಾರಾಯಣಸ್ವಾಮಿ ಅವರಿಗೆ ಘೆರಾವ್ ಹಾಕಿದ್ದನ್ನು ಖಂಡಿಸಿ ರಾಜ್ಯ ಬಿಜೆಪಿ ನಾಯಕರು ಶನಿವಾರ (ಮೇ.24) ಕಲಬುರಗಿ ಚಲೋ ಕರೆ ಕೊಟ್ಟಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್.ಅಶೋಕ್, ವಿಧಾನ ಪರಿಷತ್ ವಿರೋಧ ಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ಗೋವಿಂದ ಕಾರಜೋಳ ಕಲಬುರಗಿಗೆ ತೆರಳಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಈ ಹಿಂದೆ ಕಲಬುರಗಿಗೆ ಬಿಜೆಪಿಯ ಎಲ್ಲ ನಾಯಕರು ಅಕ್ಕಿ ಕಳ್ಳ, ಮಕ್ಕಳ ಹಾಲಿನ ಪೌಡರ್ ಕಳ್ಳನ ಪರ ಬಂದಿದ್ದರು. ಆತನ ಮೇಲೆ ದೌರ್ಜನ್ಯ ಮಾಡಿದ್ದಾರೆ ಅಂತಾ ಬಿಜೆಪಿಗರು ಬಂದಿದ್ದರು. ಅವರೇ ಕಾರನ್ನು ಎಲ್ಲೋ ಬಿಟ್ಟು ಅಪಘಾತ ಆಗಿದೆ ಅಂತ ಬಂದಿದ್ದರು. ಬಿಜೆಪಿಯವರು ಅಕ್ಕಿ ಕಳ್ಳನಿಗೆ ಟಿಕೆಟ್ ಬೇರೆ ಕೊಡುತ್ತಾರೆ ಎಂದು ಬಿಜೆಪಿ ನಾಯಕ ಮಣಿಕಂಠ ರಾಠೋಡ್ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ಮಾಡಿದರು.
ಎಂಎಲ್ಸಿ ಸಿ.ಟಿ.ರವಿ ಪದೇಪದೆ ರಜಾಕರು, ನಿಜಾಮರು ಅಂತಾ ಹೇಳುತ್ತಾರೆ. ನಿಮ್ಮ ಆರ್ಎಸ್ಎಸ್ ನಾಯಕರನ್ನು ಪಾಕಿಸ್ತಾನಕ್ಕೆ ಕಳುಹಿಸಿ. ಅಲ್ಲಿ ಸೆಟಲ್ ಆಗಿ ಅಖಂಡ ಭಾರತದ ಕನಸು ನನಸು ಮಾಡಿ. ರಜಾಕರು, ನಿಜಾಮರು ಅಂತ ಇಲ್ಲಿ ಕುಳಿತು ಮಾತನಾಡಬೇಡಿ. ವಿಧಾನಪರಿಷತ್ನಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಕರಣ ಆಯಿತು. ಈ ಕೇಸ್ನಲ್ಲಿ ಸಿ.ಟಿ.ರವಿ ವಾಯ್ಸ್ ಸ್ಯಾಂಪಲ್ ಏಕೆ ಕೊಡಲಿಲ್ಲ. ಸುಪ್ರೀಂಕೋರ್ಟ್ಗೆ ಹೋಗಿ ತಡೆಯಾಜ್ಞೆ ತರಬೇಕಾ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ರಾಜ್ಯಪಾಲರನ್ನ ಭೇಟಿಯಾದ ಬಿಜೆಪಿ ನಿಯೋಗ, ಸಚಿವ ಸ್ಥಾನದಿಂದ ಪ್ರಿಯಾಂಕ್ ಖರ್ಗೆ ವಜಾಕ್ಕೆ ಮನವಿ
ಛಲವಾದಿ ನಾರಾಯಣಸ್ವಾಮಿಗೆ ಎರಡು ನಾಲಿಗೆ ಇದೆ. ಕಲಬುರಗಿಯಲ್ಲಿ ಒಂದು ನಾಲಿಗೆ ಇದೆ. ಬೆಂಗಳೂರಿನಲ್ಲಿ ಮತ್ತೊಂದು ನಾಲಿಗೆ ಇದೆ. ಅಲ್ಲೊಂದು ಇಲ್ಲೊಂದು ರೀತಿ ಮಾತನಾಡ್ತಾರೆ. ನಾನು ಪ್ರಿಯಾಂಕ್ ಖರ್ಗೆ ಬಗ್ಗೆ ಏನೂ ಹೇಳಿಲ್ಲ ಅಂತಾರೆ. ಕಲಬುರಗಿಯಲ್ಲಿ ನನ್ನನ್ನು ಕೂಡಿ ಹಾಕಲಿಲ್ಲ ಅಂತಾರೆ. ಬೆಂಗಳೂರಿನಲ್ಲಿ ಕೂಡಿ ಹಾಕಿದರು ಅಂತಾರೆ ಛಲವಾದಿ ನಾರಾಯಣಸ್ವಾಮಿಗೆ ಎರಡು ನಾಲಿಗೆ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ