ಬೆಂಗಳೂರು, ಏಪ್ರಿಲ್ 13: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಹೃದಯವಂತ ಡಾ. ಸಿಎನ್ ಮಂಜುನಾಥ್ (D. CN Manjunath) ಬಂದಿದ್ದಾರೆ. ಹೃದಯ ಇಲ್ಲದ ಡಿಕೆ ಸುರೇಶ್ ಕಾಣೆಯಾಗುತ್ತಾರೆ. ಹೃದಯವಂತರು ಬಂದಿರುವುದರಿಂದ ಹೃದಯ ಇಲ್ಲದ ಕಟುಕರು ಕಾಣೆಯಾಗುತ್ತಾರೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ (R Ashoka) ಟೀಕೆ ಮಾಡಿದರು. ಬೆಂಗಳೂರಿನಲ್ಲಿ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಮಾತನಾಡಿದ ಅವರು, ಭಾರತದ ನೈಜ ಹಿಟ್ಲರ್ ಅಂದ್ರೆ ಅದು ಕಾಂಗ್ರೆಸ್ ಪಕ್ಷ. ಯಾವ ಕಾರಣಕ್ಕೆ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದ್ದರು? ಇವರು ಮೋದಿ ಅವರನ್ನು ಹಿಟ್ಲರ್, ಮುಸೋಲಿನಿ ಅಂತ ಟೀಕಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೋದಿಯವರು ಈ ದೇಶದ ರಿಯಲ್ ಹೀರೋ. ಅವರ ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡುವ ಕಾಂಗ್ರೆಸ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಕೊಡುತ್ತೇವೆ. ಮೋದಿ ಅವರನ್ನು ಸರ್ವಾಧಿಕಾರಿ ಅಂದಿದ್ದನ್ನು ನಾವು ಖಂಡಿಸುತ್ತೇವೆ ಎಂದು ಅಶೋಕ್ ಹೇಳಿದರು.
ದೇಶದಲ್ಲಿ ಸಂವಿಧಾನ ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ ಅಂತ ಮೋದಿ ಹೇಳಿದ್ದಾರೆ. ಬಿಜೆಪಿಗೆ 400 ಸೀಟು ಬಂದರೆ ಸಂವಿಧಾನ ಬದಲಿಸುತ್ತಾರೆ ಅಂತ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ಸಂವಿಧಾನ ದೇಶದ ಪರಮೋಚ್ಛ. ಸಂವಿಧಾನದ ಮೇಲೆ ಕಾಂಗ್ರೆಸ್ ಪಕ್ಷದವರಿಗೆ ಗೌರವ ಇಲ್ಲ ಎಂದು ಅಶೋಕ್ ಹೇಳಿದ್ದಾರೆ.
ಅಶೋಕ್ ಹೇಳಿಕೆಗೆ ಆನೇಕಲ್ನಲ್ಲಿ ತಿರುಗೇಟು ನೀಡಿದ ಕಾಂಗ್ರೆಸ್ ಸಂಸದ ಡಿಕೆ ಸುರೇಶ್, ಅವರಿಗೆ ನನ್ನ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ. ಬಿಜೆಪಿಯ ಸ್ನೇಹಿತರು ಮೈತ್ರಿ ನಾಯಕರ ಬಗ್ಗೆ ಮಾತನಾಡಲಿ. ಅವರ ಹಾಗೆ ನಾನು ಪಲಾಯನವಾದಿಯಲ್ಲ. ನಾನು ಯಾರಿಗೂ ಹೆದರಲ್ಲ. ಕಾಂಗ್ರೆಸ್ನವರು ನಾವು ಕಟುಕ ಹೃದಯಿಗಳು ಅಲ್ಲ. ರಾಜ್ಯದ ಜನರಿಗೆ ನಮ್ಮ ಸರ್ಕಾರ ಒಳ್ಳೆಯ ಕಾರ್ಯಕ್ರಮ ನೀಡಿದೆ ಎಂದು ಹೇಳಿದರು.
ಹಳೇ ಮೈಸೂರು ಭಾಗದಲ್ಲಿ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರ ಅಭಿಮಾನಿಗಳು ಹೆಚ್ಚಿದ್ದಾರೆ. ನೀರಾವರಿ ಹೋರಾಟದಲ್ಲಿ ಕೂಡ ಅವರು ಮುಂಚೂಣಿಯಲ್ಲಿದ್ದಾರೆ. ಕಾವೇರಿಗಾಗಿ ಹೋರಾಟ ಮಾಡಿದ್ದಾರೆ. ಮೋದಿಯ ಅಭಿವೃದ್ಧಿ, ದೇವೇಗೌಡರ ನೀರಾವರಿ ಹೆಚ್ಚು ಮತ ತರಲಿದೆ. ಅವರಿಬ್ಬರೂ ಒಂದಾಗಿರುವುದರಿಂದ ಸಮೃದ್ಧ ಕರ್ನಾಟಕ, ಸಂಪದ್ಭರಿತ ಕರ್ನಾಟಕ ಆಗಲಿದೆ. ಈ ಮೈತ್ರಿಯನ್ನು ಜನ ಸ್ವೀಕಾರ ಮಾಡಿದ್ದಾರೆ. ಇದರಿಂದ ಬಿಜೆಪಿ, ಜೆಡಿಎಸ್‌ಗೆ ಲಾಭವಾಗಲಿದೆ ಎಂದು ಅಶೋಕ್ ಹೇಳಿದ್ದಾರೆ.
ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟ ನಗರವನ್ನು ತಲ್ಲಣಗೊಳಿಸಿತ್ತು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪದೇ ಪದೇ ಸ್ಫೋಟ ಪ್ರಕರಣಗಳು ನಡೆಯುತ್ತವೆ. ರಾಮೇಶ್ವರಂ ಕೆಫೆಯಲ್ಲಿ ಸ್ಫೋಟದ ನಂತರ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇದು ಉದ್ಯಮ ದ್ವೇಷದಿಂದ ಆದ ಘಟನೆ ಅಂತ ಹೇಳುವ ಮೂಲಕ ಪ್ರಕರಣವನ್ನು ತಿರುಚಲು ಪ್ರಯತ್ನಪಟ್ಟಿದ್ದರು. ಅಲ್ಪಸಂಖ್ಯಾತರ ಮೇಲೆ ಏನಾದರೂ ಆರೋಪ ಬಂದರೆ ಕಾಂಗ್ರೆಸ್ನವರು ಸಹಿಸಲ್ಲ. ಈ ದೇಶದ ಭದ್ರತೆಗೆ ಕಾಂಗ್ರೆಸ್ನಿಂದಲೇ ಅಪಾಯವಿದೆ ಎಂದು ಅಶೋಕ ವಾಗ್ದಾಳಿ ನಡೆಸಿದ್ದಾರೆ.
ಇದು ಉದ್ಯಮ ದ್ವೇಷದಿಂದ ಆದ ಘಟನೆ ಅಂತ ದಿಕ್ಕು ತಪ್ಪಿಸಲು ನೋಡಿದರು. ಡಿಕೆ ಶಿವಕುಮಾರ್ ಬೆಂಗಳೂರಿನ ಹೆಡ್, ಹೆಡ್ ಹೇಳಿದ ಮೇಲೆ ಪೊಲೀಸರು ಅದೇ ದಿಕ್ಕಿನಲ್ಲಿ ತನಿಖೆ ಮಾಡೋದು ಸಹಜ. ಮಂಗಳೂರು ಬಾಂಬ್ ಬ್ಲಾಸ್ಟ್ ಆರೋಪಿಯನ್ನು ಬ್ರದರ್ಸ್ ಅಂದರು. ಕೆಲ ಮಂತ್ರಿಗಳು ಕೂಡ ಪ್ರಕರಣದ ದಿಕ್ಕು ತಪ್ಪಿಸುವ ಹೇಳಿಕೆ ಕೊಟ್ಟರು ಎಂದು ಅಶೋಕ್ ಹೇಳಿದರು.
ರಾಜ್ಯ ಸರ್ಕಾರ ಒಂದು ದಿಕ್ಕು ಕೊಟ್ಟ ಹಿನ್ನೆಲೆಯಲ್ಲಿ ಪೊಲೀಸರ ತನಿಖೆಯಲ್ಲಿ ಪ್ರಗತಿ ಆಗಲಿಲ್ಲ. ಯಾವಾಗ ಎನ್ಐಎ ತನಿಖೆಯನ್ನು ಕೈಗೆತ್ತಿಕೊಂಡಿತೋ, ಪ್ರಕರಣದ ತನಿಖೆ ಸರಿಯಾದ ದಾರಿಯಲ್ಲಿ ಸಾಗಿತು. ಶಂಕಿತ ಉಗ್ರರನ್ನು ಬಂಧಿಸಲಾಯಿತು. ಎನ್ಐಎ ಅಧಿಕಾರಿಗಳು ಶಂಕಿತ ಉಗ್ರರನ್ನು ಬಂಧಿಸಿ ಮಹತ್ತರ ಸಾಧನೆ ಮಾಡಿದ್ದಾರೆ. ಶಂಕಿತ ಉಗ್ರರ ಬಂಧನದಿಂದ ಜನ ನಿಟ್ಟುಸಿರು ಬಿಟ್ಟಿದ್ದಾರೆ. ರಾಜ್ಯದ ಜನತೆ ಪರವಾಗಿ ನಾನು ಎನ್ಐಎ ತಂಡಕ್ಕೆ ಅಭಿನಂದನೆ ಸಲ್ಲಿಸ್ತೇನೆ ಎಂದರು.
ಪಶ್ಚಿಮ ಬಂಗಾಳ ರಾಜ್ಯ ಸುರಕ್ಷಿತ ಅಂತ ಶಂಕಿತ ಉಗ್ರರು ಅಲ್ಲೇ ಇದ್ದರು. ಕಾಂಗ್ರೆಸ್ನವರ ತಂಗಿಯ ರಾಜ್ಯದಲ್ಲಿ ಶಂಕಿತರು ಬಂಧನವಾಗಿದ್ದಾರೆ ಎಂದು ಅಶೋಕ್ ಟೀಕಿಸಿದ್ದಾರೆ.
ಇದನ್ನೂ ಓದಿ: ಲೋಕಸಭೆ ಚುನಾವಣೆಯಲ್ಲಿ ಗೆಲುವು ಯಾರಿಗೆ? ಸಿಎಸ್ಡಿಎಸ್ ಸಮೀಕ್ಷೆಯಲ್ಲಿ ಬಿಜೆಪಿಗೆ ಬಲ, ದಕ್ಷಿಣ ಭಾರತದಲ್ಲಿಯೂ ಮೋದಿ ಮೋಡಿ
ಮೊಬೈಲ್ ಮಾರಿದ ಬಿಜೆಪಿ ಕಾರ್ಯಕರ್ತ ಸಾಯಿ ಪ್ರಸಾದ್ ವಿರುದ್ಧ ಕಾಂಗ್ರೆಸ್ನವರು ಸುಳ್ಳು ಆರೋಪ ಮಾಡಿದರು. ನಮ್ಮ ಕಡೆ ಬೆರಳು ತೋರಿಸಿದರು. ಆದರೆ ಅದೇ ಸಾಯಿ ಪ್ರಸಾದ್ ಸಾಕ್ಷಿಯೇ ಶಂಕಿತರ ಬಂಧನಕ್ಕೆ ಕಾರಣವಾಯಿತು. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಅಂತ ಘೋಷಣೆ ಕೂಗಲಾಯಿತು. ಅವರನ್ನು ಬಂಧಿಸಲು ಒಂದು ವಾರ ಸಮಯ ತೆಗೆದುಕೊಂಡರು. ಅದಕ್ಕಾಗಿ ನಾವು ವಿಧಾನಸೌಧದಲ್ಲಿ ಎರಡು ದಿನ ಹೋರಾಟ ನಡೆಸಿದೆವು. ರಾಮೇಶ್ವರಂ ಕೆಫೆ ಸ್ಫೋಟ, ಪಾಕ್ ಪರ ಘೋಷಣೆ ಪ್ರಕರಣ ಮುಚ್ಚಿ ಹಾಕಲು ಕಾಂಗ್ರೆಸ್ ಪ್ರಯತ್ನ ಪಟ್ಟಿದೆ. ಈ ದೇಶದ ಭದ್ರತೆಗೆ ಕಾಂಗ್ರೆಸ್ ಪಕ್ಷದಿಂದಲೇ ಅಪಾಯವಿದೆ ಎಂದು ಅಶೋಕ್ ಕಿಡಿಕಾರಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ