ಬೆಂಗಳೂರು, ಫೆಬ್ರವರಿ 27: ರಾಜ್ಯಸಭೆ ಚುನಾವಣೆಯಲ್ಲಿ (Rajya Sabha Election) ಬಿಜೆಪಿ ಶಾಸಕ ಎಸ್ಟಿ ಸೋಮಶೇಖರ್ (ST Somashekhar) ಕಾಂಗ್ರೆಸ್ ಪರ ಅಡ್ಡ ಮತದಾನ ಮಾಡಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal), ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಅವರ ಮಗ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಪರೋಕ್ಷವಾಗಿ ವ್ಯಂಗ್ಯವಾಡಿದ್ದಾರೆ. ಪೂಜ್ಯ ತಂದೆಯವರು ಮತ್ತು ಅವರ ಮಗ ವಿಫಲರಾಗಿದ್ದಾರೆ ಎಂದು ಯತ್ನಾಳ್ ಟೀಕಿಸಿದ್ದಾರೆ.
ಸೋಮಶೇಖರ್ ಆ ರೀತಿ ಮಾಡಬಾರದಿತ್ತು. ನಮ್ಮಲ್ಲಿ ಕೇವಲ ಹೊಂದಾಣಿಕೆ ರಾಜಕೀಯ ಆಗಿ ಹೋಗಿದೆ. ಇದೇ ಕಾರಣಕ್ಕೆ ನಾನು ಪದೇಪದೇ ಹೊಂದಾಣಿಕೆ ರಾಜಕೀಯದ ಬಗ್ಗೆ ಪ್ರಸ್ತಾಪಿಸುತ್ತಿರುತ್ತೇನೆ ಎಂದು ಯತ್ನಾಳ್ ಹೇಳಿದ್ದಾರೆ.
ಸೋಮಶೇಖರ್ ಅವರು ಅಡ್ಡ ಮತದಾನ ಮಾಡಿದ್ದು ಮತ್ತೊಬ್ಬ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ಕೂಡ ಅಡ್ಡ ಮತದಾನ ಮಾಡುವ ಆತಂಕ ಪಕ್ಷದ ನಾಯಕರಿಗೆ ಎದುರಾಗಿದೆ. ಈ ಮಧ್ಯೆ ಕಲ್ಯಾಣ ರಾಜ್ಯ ಪ್ರಗತಿಪಕ್ಷದ ಅಧ್ಯಕ್ಷ ಗಾಲಿ ಜನಾರ್ಧನ ರೆಡ್ಡಿ ಯಾರಿಗೆ ಮತ ಹಾಕಿದ್ದು ಎಂಬ ವಿಚಾರ ಬಹಿರಂಗಪಡಿಸಲು ನಿರಾಕರಿಸಿದ್ದಾರೆ.
ಕ್ಷೇತ್ರದ ಮತದಾರರು ಹೇಳಿದ ವ್ಯಕ್ತಿಗೆ ಮತ ಹಾಕಿದ್ದೇನೆ. ಸಿಎಂ, ಡಿಸಿಎಂ ಸೇರಿದಂತೆ ಹಲವರು ನನ್ನನ್ನು ಸಂಪರ್ಕಿಸಿದ್ದರು. ಆದರೆ, ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಚಲಾಯಿಸಿದ್ದೇನೆ ಎಂದು ರೆಡ್ಡಿ ಪ್ರತಿಕ್ರಿಯಿಸಿದ್ದಾರೆ.ಸೋಮವಾರವಷ್ಟೇ ಜನಾರ್ದನ ರೆಡ್ಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.. ರಾಜ್ಯಸಭೆ ಚುನಾವಣೆಗೆ ಒಂದು ದಿನ ಬಾಕಿ ಇರುವಾಗ ನಡೆದ ಈ ವಿದ್ಯಮಾನ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿತ್ತು.
ಇದನ್ನೂ ಓದಿ: ಬಿಜೆಪಿ ಶಾಸಕ ಎಸ್ಟಿ ಸೋಮಶೇಖರ್ ಅಡ್ಡ ಮತದಾನ
ಈ ಮಧ್ಯೆ ಶಾಸಕ ಸ್ಥಾನಕ್ಕೆ ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. ಮತ್ತೊಂದೆಡೆ ಅಡ್ಡ ಮತದಾನ ಮಾಡಿದ ಸೋಮಶೇಖರ್ ವಿರುದ್ಧ ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ವಿಧಾನಸಭೆ ಸ್ಪೀಕರ್ಗೆ ದೂರು ನೀಡಲು ಬಿಜೆಪಿ ಚಿಂತನೆ ನಡೆಸಿದೆ. ಈ ವಿಚಾರವಾಗಿ ಪ್ರತಿಪಕ್ಷ ನಾಯಕ ಆರ್ ಅಶೋಕ್ ಈಗಾಗಲೇ ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ