ಬೆಂಗಳೂರು: ಕುಮಾರಸ್ವಾಮಿ ವಿರುದ್ಧ ಅಸಮಾಧಾನಗೊಂಡಿರುವ ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸ್, ಬಿಜೆಪಿ ಅಭ್ಯರ್ಥಿ ಲೆಹರ್ ಸಿಂಗ್ ಅವರಿಗೆ ಮತಹಾಕಿದ್ದಾರೆ. ಹೆಸರು ಮುಚ್ಚಿಟ್ಟು ರೇವಣ್ಣಗೆ ಖಾಲಿ ಪತ್ರ ತೋರಿಸಿದ್ದ ಶ್ರೀನಿವಾಸ್ ಲೆಹರ್ಸಿಂಗ್ಗೆ ಮೊದಲ ಮತ ಹಾಕಿದ್ದರು. ಕೋಲಾರದ ಜೆಡಿಎಸ್ ಶಾಸಕ ಶ್ರೀನಿವಾಸ ಗೌಡ ಸಹ ಅಡ್ಡ ಮತದಾನದ ಮೂಲಕ ಕಾಂಗ್ರೆಸ್ ಅಭ್ಯರ್ಥಿಗೆ ಮತ ಕೊಟ್ಟಿದ್ದರು. ಇದೀಗ ಎಸ್.ಆರ್.ಶ್ರೀನಿವಾಸ್ ಸಹ ಅಡ್ಡ ಮತದಾನ ಮಾಡಿರುವುದು ಜಗಜ್ಜಾಹೀರಾಗಿದೆ.
ನಾನು ಜೆಡಿಎಸ್ಗೆ ಮತ ನೀಡಿದ್ದೇನೆ. ಖಾಲಿ ಬ್ಯಾಲೆಟ್ ಪೇಪರ್ ಹಾಕಿಲ್ಲ ಎಂದು ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ತುಮಕೂರಿನಲ್ಲಿ ಇಂದು ಮಧ್ಯಾಹ್ನ ಪ್ರತಿಕ್ರಿಯಿಸಿದ್ದರು. ಸಂಜೆಯವರೆಗೂ ಕಾದು ನೋಡಿದರೆ ವಿಷಯ ಏನೆಂದು ಸ್ಪಷ್ಟವಾಗಲಿದೆ. ನಮ್ಮ ನಾಯಕರಿಗೆ ಯಾಕೆ ಅಸಮಾಧಾನ ಇದೆಯೋ ಗೊತ್ತಿಲ್ಲ. ನಿನ್ನೆ ಸಂಜೆ 5 ಗಂಟೆಗೆ ಕುಮಾರಸ್ವಾಮಿಯವರು ಸಾರಾ ಮಹೇಶ್ ಮೂಲಕ ಸಂಪರ್ಕ ಮಾಡಿದ್ದರು. ನಾನು ಬರುತ್ತೇನೆ ಎಂದು ಹೇಳಿದ್ದೆ, ಅದರಂತೆ ಬಂದು ಜೆಡಿಎಸ್ಗೆ ಮತ ಹಾಕಿದ್ದೇನೆ. ಆದರೂ ಕುಮಾರಸ್ವಾಮಿ ‘ಮಾನಮರ್ಯಾದೆ ಇಲ್ವಾ’ ಅಂತಾ ಮಾತನಾಡಿದ್ದಾರೆ. ಇದರ ಬಗ್ಗೆ ಸಂಜೆ ತಿಳಿಯಲಿದೆ ಎಂದು ಟಿವಿ9ಗೆ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಪ್ರತಿಕ್ರಿಯಿಸಿದ್ದರು.
ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರನ್ನು ಶ್ರೀನಿವಾಸ್ ಮತದಾನದ ಮುನ್ನಾ ದಿನವಾದ ಜೂನ್ 9ರಂದು ಭೇಟಿಯಾಗಿದ್ದರು. ಸುಮಾರು 15 ನಿಮಿಷಗಳ ಕಾಲ ಇಬ್ಬರೂ ಮಾತುಕತೆ ನಡೆಸಿದರು. ರಾಜ್ಯಸಭೆಗೆ ನಾಳೆ (ಜೂನ್ 10) ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ಭೇಟಿಗೆ ಮಹತ್ವ ಬಂದಿದೆ. ಭೇಟಿಯ ಕುರಿತು ಗುಬ್ಬಿ ಶಾಸಕ ಶ್ರೀನಿವಾಸ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಸಿದ್ದರಾಮಯ್ಯ ಮಾತ್ರ, ‘ಇದೊಂದು ಸೌಜನ್ಯದ ಭೇಟಿ. ಕರ್ಟಸಿ ಕಾಲ್’ ಎಂದಷ್ಟೇ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದರು.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:50 pm, Fri, 10 June 22