ಬೆಂಗಳೂರು, ಜನವರಿ 11: ಬಿಜೆಪಿಯಲ್ಲಿನ (BJP) ಬಣ ಬಡಿದಾಟ ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಈ ವಿಚಾರ ಹೈಕಮಾಂಡ್ ಅಂಗಳಕ್ಕೂ ಹೋಗಿತ್ತು. ಆದರೂ ಇದು ಮುಂದುವರೆದಿದೆ. ಮೇಲಿಂದ ಎಲ್ಲವೂ ಸರಿ ಇದೆ ಅಂತಾ ಕಾಣಿಸಿದರೆ, ನಾಯಕರ ಹೇಳಿಕೆಗಳು, ನಡೆ ಮತ್ತೆ ಬಣದ ಬಡಿದಾಟಕ್ಕೆ ಕಾರಣವಾಗುತ್ತಿದೆ. ಶಾಸಕ ಯತ್ನಾಳ್ ಮತ್ತು ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಬಣ ಬಡಿದಾಟದಿಂದ ಪಕ್ಷದಲ್ಲಿ ಭಿನ್ನಮತ ಉಂಟಾಗಿದೆ. ಹೀಗಾಗಿ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಈ ಭಿನ್ನಮತ ವಿಚಾರದಲ್ಲಿ ಅಂತರ ಕಾಯ್ದುಕೊಂಡಿದ್ದಾರೆ.
ಇನ್ನು ಈ ಬಗ್ಗೆ ದೆಹಲಿಯಲ್ಲಿ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿಯನ್ನು ಶಾಸಕ ರಮೇಶ್ ಜಾರಕಿಹೊಳಿ ಮತ್ತು ತಂಡ ಭೇಟಿ ಮಾಡಿದ್ದು, ಈ ವೇಳೆ ರಾಜ್ಯ ಬಿಜೆಪಿ ಭಿನ್ನಮತದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಭಿನ್ನಮತ ವಿಚಾರದ ಬಗ್ಗೆ ಬಿಜೆಪಿ ಹೈಕಮಾಂಡ್ ಜೊತೆ ಮಾತಾಡುವಂತೆ ಮನವಿ ಮಾಡಿದ್ದಾರೆ. ಆದರೆ ರಾಜ್ಯ ಬಿಜೆಪಿ ಭಿನ್ನಮತದ ಚರ್ಚೆ ನಡೆಸಲು ಹೆಚ್ಡಿ ಕುಮಾರಸ್ವಾಮಿ ಆಗಲ್ಲ ಎಂದಿದ್ದಾರೆ.
ಇದನ್ನೂ ಓದಿ: ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
ಸಲಹೆ ನೀಡಬೇಕಿದ್ದರೆ ಪಕ್ಷದ ಅಧ್ಯಕ್ಷ ವಿಜಯೇಂದ್ರಗೆ ಹೇಳೋಣ ಅಥವಾ ಸರ್ಕಾರದ ವಿರುದ್ಧ ಹೋರಾಟದ ಬಗ್ಗೆ ರಾಜ್ಯ ನಾಯಕರ ಜೊತೆ ಚರ್ಚಿಸೋಣ, ಆದರೆ ಆಂತರಿಕ ಜಗಳದ ಬಗ್ಗೆ ಚರ್ಚೆ ಬೇಡ ಎಂದಿದ್ದಾರೆ. ಆ ಮೂಲಕ ಬಿಜೆಪಿ ಆಂತರಿಕ ಜಗಳಕ್ಕೆ ಕೈಹಾಕೋದು ಬೇಡವೆಂದು ಹೆಚ್ಡಿ ಕುಮಾರಸ್ವಾಮಿ ತೀರ್ಮಾನಿಸಿದ್ದಾರೆ.
ಸದ್ಯ ಬಿಜೆಪಿಯಲ್ಲಿ ಬಣ ಕಿಚ್ಚು ಬೂದಿ ಮುಚ್ಚಿದ ಕೆಂಡವಾಗಿದೆ. ಎದುರಾಳಿಗೆ ಡೋಂಟ್‌ಕೇರ್ ಎಂದಿರುವ ಬಿ.ವೈ ವಿಜಯೇಂದ್ರ, ಪಕ್ಷ ಸಂಘಟನೆಗೆ ಒತ್ತು ನೀಡಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಿನ್ನೆ ಸಭೆ ನಡೆಸಿದ ಬಿ.ವೈ ವಿಜಯೇಂದ್ರ ಸೋತವರ ವಿಶ್ವಾಸಗಳಿಸುವ ಪ್ರಯತ್ನ ಮಾಡಿದ್ದಾರೆ. ಇದೇ ಸಭೆಯಲ್ಲಿ ವಿಜಯೇಂದ್ರ ಪರ ಬ್ಯಾಟ್ ಬೀಸಿದ ಸೋತ ನಾಯಕರು, ಯತ್ನಾಳ್ ವಿರುದ್ಧ ಗುಡುಗಿದ್ದಾರೆ.
ಇದನ್ನೂ ಓದಿ: ಬಿಜೆಪಿಯಲ್ಲಿ ಬಣ ಕಿತ್ತಾಟ.. ವಿಜಯೇಂದ್ರ ಪರ ಸೋತವರ ಬ್ಯಾಟಿಂಗ್, ಸಭೆಯಲ್ಲಿ ಏನೇನಾಯ್ತು?
ಅದರಲ್ಲೂ ಮಾಜಿ ಸಚಿವ ರೇಣುಕಾಚಾರ್ಯ, ಯಡಿಯೂರಪ್ಪೋತ್ಸವವನ್ನ ಮಾಡೇ ಮಾಡುತ್ತೇವೆ ಅಂತಾ ಕಡ್ಡಿ ಮುರಿದಂತೆ ಹೇಳಿದ್ದರು. ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಾಗಿಲ್ಲ. ನಾವೇ ಹಣ ಹಾಕುತ್ತೇವೆ ಎಂದಿದ್ದಾರೆ. ಪರ್ಯಾಯ ನಾಯಕತ್ವವಿಲ್ಲ. ವಿಜಯೇಂದ್ರ ನೇತೃತ್ವದಲ್ಲೇ ಚುನಾವಣೆಗೆ ಹೋಗಬೇಕು ಎಂದು ಹೇಳುವ ಮೂಲಕ ಯತ್ನಾಳ್ ಬಣಕ್ಕೆ ಸಂದೇಶ ರವಾಸಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:03 pm, Sat, 11 January 25