Ramesh Jarkiholi CD: ರಮೇಶ್ ಜಾರಕಿಹೊಳಿ ಸಿಡಿ ಹಿಂದಿನ ರೂವಾರಿ ಹೆಸರು ಬಿಚ್ಚಿಟ್ಟ ಮಾಜಿ ಶಾಸಕ ನಾಗರಾಜ್
ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದ್ದ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣ ಮತ್ತೆ ಮುನ್ನಲೆಗೆ ಬಂದಿದ್ದು, ಆ ರಾಸಲೀಲೆ ಸಿಡಿ ರುವಾರಿ ಎಂದು ಮಾಜಿ ಶಾಸಕ ನಾಗರಾಜ್ ಅವರು ಬಿಚ್ಚಿಟ್ಟಿದ್ದಾರೆ.
ಬೆಂಗಳೂರು: ಅತ್ತ ಬೆಳಗಾವಿಯಲ್ಲಿ (Belagavi) ತಮ್ಮ ವಿರುದ್ಧ ಸಿಡಿ (CD Case) ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ಅವರು ಡಿಕೆ ಶಿವಕುಮಾರ್ (DK Shivakumar), ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೇ ಸಿಡಿ ವಿರುದ್ಧವಾಗಿ ಡಿಕೆ ಶಿವಕುಮಾರ್ ವಿರುದ್ಧ ಆಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಇತ್ತ ಬೆಂಗಳೂರಿನಲ್ಲಿ ಇದೇ ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ನಾಗರಾಜ್ ಹೊಸ ಬಾಂಬ್ ಸಿಡಿಸಿದ್ದಾರೆ. ಜಾರಕಿಹೊಳಿ ಸಿಡಿ ಪ್ರಕರಣದ ರೂವಾರಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಎಂದು ಮಾಜಿ ಶಾಸಕ ನಾಗರಾಜ್ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಇಂದು (ಜನವರಿ 30) ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಶಾಸಕ ನಾಗರಾಜ್, ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಹೆಬ್ಬಾಳ್ಕರ್ ಸಹೋದರನ ಕೈವಾಡ ಇದೆ. ಸಿಡಿ ಪ್ರಕರಣದ ರೂವಾರಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ (ಚನ್ನರಾಜ ಹಟ್ಟಿಹೊಳಿ). ಸಿಡಿ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುವ ವಿಚಾರ ಗೊತ್ತಾಯ್ತು. ಈ ವಿಚಾರವನ್ನು ರಮೇಶ್ ಜಾರಕಿಹೊಳಿಗೆ ನಾವು 2 ಬಾರಿ ಹೇಳಿದ್ದೆವು ಎಂದು ಹೇಳಿದರು.
ನಾನು ತಪ್ಪು ಮಾಡಿಲ್ಲ. ಸಿಡಿ ಬಗ್ಗೆ ತಲೆಕೆಡಿಸಿಕೊಳ್ಳಲ್ಲ ಎಂದು ಜಾರಕಿಹೊಳಿ ಹೇಳಿದ್ದರು. ಇಂತಹ ನೂರು ಸಿಡಿ ಬಂದರೂ ನಾನು ತಲೆಕೆಡಿಸಿಕೊಳ್ಳಲ್ಲ ಎಂದಿದ್ದರು. ಷಡ್ಯಂತ್ರ ಮಾಡಿ ರಮೇಶ್ ಜಾರಕಿಹೊಳಿ ಮುಗಿಸುವ ಪ್ರಯತ್ನಿಸಿದ್ದಾರೆ. ಈ ಸಿಡಿಯ ಹಿಂದೆ ಪ್ರಭಾವಿ ನಾಯಕರು ಇದ್ದಾರೆ ಎಂದ ನಾಗರಾಜ್ ಸ್ಫೋಟಕ ಹೇಳಿಕೆ ನೀಡಿದರು.
ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಬಹಿರಂಗವಾಗಿದ್ದೇ ತಡ ವಿಪಕ್ಷಗಳು ಬಿಜೆಪಿ ವಿರುದ್ಧ ಮುಗಿಬಿದ್ದಿದ್ದವು. ಅಲ್ಲದೇ ರಮೇಶ್ ಜಾರಕಿಹೊಳಿ ಅವರನ್ನು ಮಂತ್ರಿ ಸ್ಥಾನದಿಂದ ವಜಾ ಮಾಡಬೇಕೆಂದು ಆಗ್ರಹಿಸಿದ್ದರು. ಈ ಬಗ್ಗೆ ಬಿಜೆಪಿ ಹೈಕಮಾಂಡ್ ಸಹ ಗಂಭೀರವಾಗಿ ಪರಿಗಣಿಸಿ ರಾಜ್ಯ ಬಿಜೆಪಿಯಿಂದ ವರದಿ ತರಿಸಿಕೊಂಡಿತ್ತು. ಇದಾದ ಬಳಿಕ ಈ ಸಿಡಿ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಅಂತಿಮವಾಗಿ ಹೈಕಾಂಡ್ ಸೂಚನೆ ಮೇರೆಗೆ ಜಾರಕಿಹೊಳಿ ಮಿನಿಸ್ಟರ್ ಹುದ್ದೆಗೆ ರಾಜೀನಾಮೆ ನೀಡಬೇಕಾಗಿ ಬಂತು.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 3:37 pm, Mon, 30 January 23