ಹುಬ್ಬಳ್ಳಿ, ಫೆಬ್ರವರಿ 24: ಸರ್ದಾರ್ ವಲ್ಲಭಭಾಯಿ ಪಟೇಲ್ (Sardar Vallabhbhai Patel) ಅವರೇ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಅನ್ನು ಬ್ಯಾನ್ ಮಾಡಿದ್ದರು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ (Santosh Lad) ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ (Hubballi) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಸುಳ್ಳು ಹೇಳುತಿಲ್ಲ, ಬೇಕಿದ್ದರೆ ಬಿಜೆಪಿಯವರನ್ನು ಕೇಳಿ. ದಾಖಲೆ ತೆಗದು ನೋಡಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರೇ ಆರ್ಎಸ್ಎಸ್ ಬ್ಯಾನ್ ಮಾಡಿದ್ದು. ಇದೀಗ ಅವರೇ ಸರ್ದಾರ್ ವಲ್ಲಭಭಾಯಿ ಪಟೇಲ್ರ ಪ್ರತಿಮೆ ನಿರ್ಮಾಣ ಮಾಡಿದ್ದಾರೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆ ನಿರ್ಮಾಣವಾಯ್ತು, ಮುಂದೇನು? ಇವರ ಸಿದ್ಧಾಂತವೆ ನನಗೆ ಅರ್ಥವಾಗುತಿಲ್ಲ. ಆರ್ಎಸ್ಎಸ್, ಬಿಜೆಪಿಯವರು ಯಾರ ಪರ ಇದ್ದಾರೋ? ಯಾರ ವಿರುದ್ಧ ಇದಾರೋ? ಅರ್ಥವಾಗುತ್ತಿಲ್ಲ ಎಂದರು.
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಯನ್ನು ನಿರ್ಮಾಣ ಮಾಡಿದ್ದು ಚೈನಾದವರು. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಎಲ್ಲಾದರೂ ಒಂದು ಪೋಸ್ಟರ್ ಇದೆಯಾ? ಹಳ್ಳಿ ಭಾಷೆಯಲ್ಲಿ ಜಾತ್ರೆ ಇದ್ದಾಗ ತುರಾಡುವುದು ಅಂತಾರೆ ಹಾಗಲ್ಲ. ಇದೊಂದು ಜಾತ್ರೆ, ಮತ್ತೊಂದು ಜಾತ್ರೆ ಎಂದು ಪರೋಕ್ಷವಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಬಿಜೆಪಿಯವರು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಿದ್ದರಾಮುಲ್ಲಾ ಖಾನ್ ಅಂತಾರೆ. ಅವರು ನಮ್ಮ ದೇಶದವರು ಅಲ್ವಾ? ಕರ್ನಾಟಕದವರು ಅಲ್ವಾ? ದೇಶಕ್ಕೆ ಅವರ ಕೊಡುಗೆ ಏನಿಲ್ವಾ? ಇನ್ನು ರೈತರ ಹೋರಾಟ ಯಾವುದು? ಖಲಿಸ್ತಾನಿ ಹೋರಾಟ ಯಾವುದು? ಅವರನ್ನೇ ಕೇಳಬೇಕು. ಶಿಕ್ಷಣ, ಆರೋಗ್ಯದಲ್ಲಿ ಗುಜರಾತ್ ಮಾಡೆಲ್ ಎಷ್ಟಿದೆ ಗೊತ್ತಾ? ಅಭಿವೃದ್ಧಿ, ಮೂಲಭೂತ ಸೌಕರ್ಯಗಳ ಬಗ್ಗೆ ಮಾತನಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಸಿದ್ದರಾಮುಲ್ಲಾ ಖಾನ್ ಮತ್ತು ದೆಹಲಿಯಲ್ಲಿ ಹೋರಾಟ ಮಾಡುತ್ತಿರುವ ರೈತರಿಗೆ ಖಲಕಿಸ್ತಾನ ದೇಶ ದ್ರೋಹಿಗಳು ಎಂದ ಸಂಸದ ಅನಂತ ಕುಮಾರ್ ಹೆಗಡೆ ಹೇಳಿಕೆಗೆ ತಿರುಗೇಟು ನೀಡಿದರು.
ಕಳೆದ ಹತ್ತು ವರ್ಷದಲ್ಲಿ ಪ್ರಧಾನಿ ಮೋದಿ ಏನು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂಬುವುದು ನನಗಂತೂ ಗೊತ್ತಿಲ್ಲ. ರೈತರ ಸಾಲ ಮನ್ನಾ, ಆದಾಯ ದ್ವಿಗುಣ ಮಾಡುತ್ತೇನೆ ಅಂದಿದ್ದರು. ಇದೆಲ್ಲ ನನಗೆ ಕಂಡು ಬಂದಿಲ್ಲ. ರೈತರಿಗೆ ಸಂಬಂಧಪಟ್ಟ ಕಾರ್ಯಕ್ರಮ, ನದಿಗಳ ಜೋಡಣೆ ಅನ್ನೋ ಆಶ್ವಾಸನೆ ಕೊಟ್ಟಿದ್ದರು. ನನಗೆ ಇವೆಲ್ಲ ಕಂಡು ಬಂದಿಲ್ಲ. ಈ ಬಗ್ಗೆ ನನಗೆ ಮಾಹಿತಿ ಇದೆ ಎಂದರು.
ಇದನ್ನೂ ಓದಿ: ‘ಸುಪ್ರೀಂಕೋರ್ಟ್ ಸೂಚಿಸಿದ ಸ್ಥಳದಲ್ಲಿ ರಾಮ ಮಂದಿರ ಕಟ್ಟಿಲ್ಲ’: ವಿವಾದದ ಬೆನ್ನಲ್ಲೇ ಸಂತೋಷ್ ಲಾಡ್ ಸ್ಪಷ್ಟನೆ
ಚುನಾವಣೆ ಬಂದಿದ್ದಕ್ಕೆ ಹಿಂದು-ಮುಸ್ಲಿಂ ತರುತ್ತಿದ್ದಾರೆ. ಈ ದೇಶದಲ್ಲಿ ಅಜಿಮ್ ಪ್ರೇಮ್‍ಜಿ ಹೆಚ್ಚು ದಾನ ಮಾಡಿದ್ದಾರೆ. ಅವರೊಬ್ಬ ಮುಸ್ಲಿಂ ಸಮುದಾಯದವರು. 30 ಬಿಲಿಯನ್ ಡಾಲರ್ ಅವರು ದಾನ ಮಾಡಿದ್ದಾರೆ. ಚುನಾವಣೆ ಬಂದಾಗ ಹಿಂದು-ಮುಸ್ಲಿಂ ಆಗುತ್ತೆ ಅಂತ ನಮಗೆ ಗೊತ್ತೇ ಇದೆ. ರಾಮ ಮಂದಿರ, ಹಿಂದು-ಮುಸ್ಲಿಂ, ಖಲಿಸ್ಥಾನ, ಪಾಕಿಸ್ತಾನ ವಿಚಾರ ಬರುತ್ತೆ. ನಾವು ಯಾವ ದೇಶಕ್ಕೆ ಹೋಲಿಕೆ ಮಾಡಬೇಕು? ಎಲ್ಲಾ ಸರಕುಗಳು ಚೈನಾದಿಂದ ಬರುತ್ತಿವೆ. ಮೇಕ್ ಇನ್ ಇಂಡಿಯಾ ಎಲ್ಲಿದೆ? ಮೇಕ್ ಇನ್ ಇಂಡಿಯಾಗೆ 450 ಕೋಟಿ ಖರ್ಚ ಆಯ್ತು. ಇದರ ಬಗ್ಗೆ ಬಿಜೆಪಿಯವರು ಮಾತನಾಡುತ್ತಾರಾ? ಭಾರತ ಪಾಸ್ ಪೋರ್ಟ್ ಪವರ್ 85ನೇ ಸ್ಥಾನಕ್ಕಿದೆ. ಪವರ್ ಫುಲ್ ಪ್ರಧಾನಿ ಇದ್ದಾರೆ ಅಂದರೇ, ಮೊದಲನೆ ಸ್ಥಾನದಲ್ಲಿ ಇರಬೇಕಿತ್ತಲ್ಲ ಎಂದು ವ್ಯಂಗ್ಯವಾಡಿದರು.
ಪ್ರಲ್ಹಾದ ಜೋಶಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಜೋಶಿ ಸಾಹೇಬರು ಅಭಿವೃದ್ಧಿ ಕೆಲಸ ಹಳ್ಳ ಹಿಡಿದಿದೆ. ದೇಶದ ಸಾಲ ಎಷ್ಟಿದೆ ಅಂತ ಪ್ರಹ್ಲಾದ್ ಜೋಶಿ ಹಾಗೂ ಬಿಜೆಪಿ ಅವರಿಗೆ ಕೇಳಿ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:32 pm, Sat, 24 February 24