ಡಿಕೆ ಶಿವಕುಮಾರ್ ಕೈ ಸೇರಿದ 20 ಕ್ಷೇತ್ರಗಳ ಅಭ್ಯರ್ಥಿ ಪಟ್ಟಿ, ಸಚಿವರಿಂದ ಅಭಿಪ್ರಾಯ ಸಂಗ್ರಹ
ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭಾರಿ ತಲೆಕೆಡಿಸಿಕೊಂಡಿದ್ದಾರೆ. ಅಭ್ಯರ್ಥಿಗಳ ಪ್ರಾಥಮಿಕ ಪಟ್ಟಿ ಡಿಕೆ ಶಿವಕುಮಾರ್ ಅವರ ಕೈ ಸೇರಿದ್ದು, ಶುಕ್ರವಾರ (ಫೆ.24) ರಂದು ನಡೆದ ತಮ್ಮ ಮನೆಯ ಕಾರ್ಯಕ್ರಮದಲ್ಲೂ ಈ ಬಗ್ಗೆ ಸಚಿವರೊಂದಿಗೆ ಚರ್ಚೆ ನಡೆಸಿದ್ದಾರೆ.
ಬೆಂಗಳೂರು, ಫೆಬ್ರವರಿ 24: ಲೋಕಸಭೆ ಚುನಾವಣೆಗೆ (Lok Sabha Election) ಎರಡು ತಿಂಗಳು ಬಾಕಿ ಉಳಿದಿವೆ. ಎಲ್ಲ ರಾಜಕೀಯ ಪಕ್ಷಗಳು ಈಗಾಗಲೆ ಚುನಾವಣೆ ತಯಾರಿ ಆರಂಭಿಸಿವೆ. ರಾಜ್ಯದಲ್ಲೂ ಚುನಾವಣಾ ಅಖಾಡ ತಯಾರಿಯಾಗುತ್ತಿದೆ. ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ (Congress) ಮತ್ತು ಬಿಜೆಪಿ (BJP) ಹಾಗೂ ಇದರ ಮಿತ್ರ ಪಕ್ಷ ಜೆಡಿಎಸ್ (JDS) ಚುನಾವಣೆಗೆ ಸಿದ್ದವಾಗುತ್ತಿದೆ. ಆದರೆ ಟಿಕೆಟ್ ಹಂಚಿಕೆ ವಿಚಾರವಾಗಿ ಎರಡೂ ರಾಷ್ಟ್ರೀಯ ಪಕ್ಷದಲ್ಲಿ ಸಾಕಷ್ಟು ಪ್ರಶ್ನೆಗಳು ಉದ್ಭವವಾಗಿವೆ. ಹಾಗೆ ತಲೆನೋವು ಆಗಿದೆ. ಆಯಾ ಕ್ಷೇತ್ರಗಳಿಗೆ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಈಗಾಗಲೆ ಸರ್ವೆ ನಡೆದಿದ್ದು, ಪ್ರಾಥಮಿಕ ಹಂತದ ಪಟ್ಟಿ ಸಿದ್ದವಾಗಿದೆ. ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಭಾರಿ ತಲೆಕೆಡಿಸಿಕೊಂಡಿದ್ದಾರೆ.
ಅಭ್ಯರ್ಥಿಗಳ ಪ್ರಾಥಮಿಕ ಪಟ್ಟಿ ಡಿಕೆ ಶಿವಕುಮಾರ್ ಅವರ ಕೈ ಸೇರಿದ್ದು, ಶುಕ್ರವಾರ (ಫೆ.24) ರಂದು ನಡೆದ ತಮ್ಮ ಮನೆಯ ಕಾರ್ಯಕ್ರಮದಲ್ಲೂ ಈ ಬಗ್ಗೆ ಸಚಿವರೊಂದಿಗೆ ಚರ್ಚೆ ನಡೆಸಿದ್ದಾರೆ. ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್ 20 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಸಚಿವರ ಮಂದಿಟ್ಟು, ಒಂದೊಂದು ಕ್ಷೇತ್ರದ ಅಭ್ಯರ್ಥಿಗಳ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಈ ಕ್ಷೇತ್ರಕ್ಕೆ ಈ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದರೆ ಸೂಕ್ತವೇ ಎಂದು ಮತ್ತೆ ಸಚಿವರಿಂದ ಸಲಹೆ ಪಡೆದುಕೊಂಡಿದ್ದಾರೆ.
ರಾಜ್ಯಾದ್ಯಂತ ಗ್ಯಾರಂಟಿ ಸಮಾವೇಶ
ವಿಧಾನಸಭೆ ಚುನಾವಣೆ ಪೂರ್ವದಲ್ಲಿ ತಾನು ಘೋಷಿಸಿರುವ ಐದು ಗ್ಯಾರೆಂಟಿಗಳನ್ನು ರಾಜ್ಯ ಕಾಂಗ್ರೆಸ್ ಯಶಸ್ವಿಯಾಗಿ ಜಾರಿಗೆ ತಂದಿದೆ. ಇದೀಗ ಲೋಕಸಭೆ ಚುನಾವಣೆ ಇದ್ದು, ಈ ಗ್ಯಾರೆಂಟಿಗಳನ್ನೇ ಮುಂದಿಟ್ಟುಕೊಂಡು ಚುನಾವಣೆ ಎದುರಿಸಲು ರಾಜ್ಯ ಕಾಂಗ್ರೆಸ್ ತಯಾರಿ ನಡೆಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಗ್ಯಾರಂಟಿ ಸಮಾವೇಶ ಮಾಡಲು ಕಾಂಗ್ರೆಸ್ ಮುಂದಾಗಿದೆ. ಸಿಎಂ ಹಾಗೂ ಡಿಸಿಎಂ ನೇತೃತ್ವದಲ್ಲಿ ರಾಜ್ಯದ ವಿವಿಧಡೆ ಗ್ಯಾರಂಟಿ ಕಾರ್ಯಕ್ರಮ ನಡೆಯಲಿವೆ.
ಇದನ್ನೂ ಓದಿ: ಲೋಕಸಭೆ ಚುನಾವಣೆ: ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳ ಆಯ್ಕೆ ಕಗ್ಗಂಟು, ಯತೀಂದ್ರ ಸ್ಪರ್ಧೆಗೆ ಸಿಎಂ ಹಿಂದೇಟು!
ಶಿವಮೊಗ್ಗದಲ್ಲಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಗ್ಯಾರಂಟಿ ಕಾರ್ಯಕ್ರಮ ನಡೆದರೇ, ಧಾರವಾಡದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಗ್ಯಾರಂಟಿ ಸಮಾವೇಶ ನಡೆಯಲಿದೆ. ನಾಳೆ (ಫೆ.25) ಮಾಗಡಿಯಲ್ಲಿ ಡಿಕೆ ಶಿವಕುಮಾರಿಂದ ಗೃಹ ಲಕ್ಷ್ಮೀ ಸಮಾವೇಶ ಜರುಗಲಿದೆ. ಈ ಮೂಲಕ ಕಾಂಗ್ರೆಸ್ ಚುನಾವಣೆಗೂ ಮುನ್ನ ಗ್ಯಾರಂಟಿ ಅಸ್ರ್ತಗಳನ್ನ ಬಳಸಲು ಮುಂದಾಗಿದೆ.
ಗ್ಯಾರಂಟಿ ಯೋಜನೆ ಪಲಾನುಭವಿಗಳನ್ನ ಟಾರ್ಗೆಟ್ ಮಾಡಿ ಮತ ಪಡೆಯಲು ಪ್ಲಾನ್ ಮಾಡಿದೆ. ಈ ಹಿಂದೆ ಬಿಜೆಪಿ ಯೋಜನೆಗಳ ಪಲಾನುಭವಿಗಳ ಸಂವಾದ ರ್ಯಾಲಿ ಮಾಡುತ್ತಿತ್ತು. ಇದೆ ತಂತ್ರವನ್ನು ಕಾಂಗ್ರೆಸ್ ಅನುಸರಿಸಲಿದೆ. ಚುನಾವಣೆಗೂ ಮುನ್ನ ಮೇಗಾ ಗ್ಯಾರಂಟಿ ರ್ಯಾಲಿ ನಡೆಸುವ ಸಾಧ್ಯತೆ ಇದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:36 am, Sat, 24 February 24