ಪ್ರತ್ಯೇಕ ರಾಷ್ಟ್ರ ಹೇಳಿಕೆ: ಡಿಕೆ ಸುರೇಶ್​ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿಗರ ಮೇಲೆ ಲಾಠಿ ಪ್ರಹಾರ, ಗುಡುಗಿದ ವಿಜಯೇಂದ್ರ

ಕೇಂದ್ರ ಸರ್ಕಾರ ಮಧ್ಯಂತರ ಬಜೆಟ್ ​​ಅನ್ನು ಟೀಕಿಸುವ ಬರದಲ್ಲಿ ಸಂಸದ ಡಿಕೆ ಸುರೇಶ್ ಕೇಂದ್ರದ ಬಜೆಟ್‌ನಲ್ಲಿ ಹೊಸತೇನು ಇಲ್ಲ. ದಕ್ಷಿಣ ಭಾರತದ ರಾಜ್ಯಗಳಿಗೆ ಕೇಂದ್ರ ಹಣ ಬಿಡುಗಡೆ ಮಾಡುತ್ತಿಲ್ಲ. ಹೀಗೆ ಅನ್ಯಾಯ ಆಗುತ್ತಿದ್ದರೆ ಪ್ರತ್ಯೇಕ ರಾಷ್ಟ್ರ ಕೇಳಬೇಕಾಗುತ್ತದೆ ಎಂದು ಹೇಳಿದ್ದರು. ಇದನ್ನು ವಿರೋಧಿಸಿ ಇಂದು (ರವಿವಾರ) ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಡಿಕೆ ಸುರೇಶ್​ ಮನೆ ಮುಂದೆ ಪ್ರತಿಭಟನೆ ನಡೆಸಿದರು.

ಪ್ರತ್ಯೇಕ ರಾಷ್ಟ್ರ ಹೇಳಿಕೆ: ಡಿಕೆ ಸುರೇಶ್​ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿಗರ ಮೇಲೆ ಲಾಠಿ ಪ್ರಹಾರ, ಗುಡುಗಿದ ವಿಜಯೇಂದ್ರ
ಬಿವೈ ವಿಜಯೇಂದ್ರ
Edited By:

Updated on: Feb 04, 2024 | 6:54 PM

ಬೆಂಗಳೂರು, ಫೆಬ್ರವರಿ 04: ಕಾಂಗ್ರೆಸ್ (Congress) ಸಂಸದ ಡಿಕೆ ಸುರೇಶ್ (DK Suresh) ಅವರ ಪ್ರತ್ಯೇಕ ರಾಷ್ಟ್ರ (Separate Nation) ಹೇಳಿಕೆ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ (Politics) ಸಾಕಷ್ಟು ಚರ್ಚೆಯಾಗುತ್ತಿದೆ. ಇನ್ನು ಬಿಜೆಪಿ ಯುವ ಮೋರ್ಚಾ (BJP Yuva Morcha) ಕಾರ್ಯಕರ್ತರು ಇಂದು (ಫೆ.04) ಸಂಸದ ಡಿಕೆ ಸುರೇಶ್ ಅವರ ಬೆಂಗಳೂರು ನಿವಾಸದ​ ಮುಂದೆ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿರುವ ಆರೋಪ ಕೇಳಿಬಂದಿದೆ. ಈ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ, ಶಾಸಕ ಬಿವೈ ವಿಜಯೇಂದ್ರ (BY Vijayendra) ಅವರು ಟ್ವೀಟ್​ ಮಾಡಿ ಕಾಂಗ್ರೆಸ್​ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

“ಪ್ರತ್ಯೇಕ ರಾಷ್ಟ್ರದ ಕೂಗು ಎಬ್ಬಿಸಿದ್ದ ಸಂಸದ ಡಿಕೆ ಸುರೇಶ್​ ಅವರ ಬೆಂಗಳೂರು ನಿವಾಸದ ಎದುರು ಶಾಂತ ರೀತಿಯಲ್ಲಿ ಪ್ರತಿಭಟಿಸುತ್ತಿದ್ದ, ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ಮೇಲೆ ಇಂದು ಪೋಲಿಸರು ಅನಗತ್ಯ ಲಾಠಿ ಪ್ರಹಾರ ನಡೆಸಿ ಕಾರ್ಯಕರ್ತರು ಗಂಭೀರವಾಗಿ ಗಾಯಗೊಳ್ಳಲು ಕಾರಣರಾಗಿದ್ದಾರೆ, ಇದು ಕಾಂಗ್ರೆಸ್ ಸರ್ಕಾರಿ ಪ್ರೇರಿತ ಗೂಂಡಾಗಿರಿಯಾಗಿದೆ. ಭಾರತದ ಸಾರ್ವಭೌಮತ್ವವನ್ನು ಪ್ರಶ್ನಿಸುವ ಯಾರ ನಡೆಯನ್ನೂ ಬಿಜೆಪಿ ಸಹಿಸುವುದಿಲ್ಲ, ಎಷ್ಟೇ ಬಲಶಾಲಿಯಾದರೂ ಅವರು ಪಶ್ಚಾತಾಪ ಪಡುವವರೆಗೂ ಹೋರಾಟ ನಿಲ್ಲಿಸುವುದಿಲ್ಲ” ಎಂದು ವಿಜಯೇಂದ್ರ ಹರಿಹಾಯ್ದಿದ್ದಾರೆ.

ಡಿಕೆ ಸುರೇಶ್​ ಹೇಳಿದ್ದೇನು?

ಗುರುವಾರ (ಫೆ. 01) ಕೇಂದ್ರ ಸರ್ಕಾರ ಮಧ್ಯಂತರ ಬಜೆಟ್ ಮಂಡನೆ ಮಾಡಿತ್ತು. ಈ ಬಜೆಟ್​​ ಅನ್ನು ಟೀಕಿಸುವ ಬರದಲ್ಲಿ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಕೇಂದ್ರದ ಬಜೆಟ್‌ನಲ್ಲಿ ಹೊಸತೇನು ಇಲ್ಲ. ದಕ್ಷಿಣ ಭಾರತದ ರಾಜ್ಯಗಳಿಗೆ ಕೇಂದ್ರ ಹಣ ಬಿಡುಗಡೆ ಮಾಡುತ್ತಿಲ್ಲ. ಹೀಗೆ ಅನ್ಯಾಯ ಆಗುತ್ತಿದ್ದರೆ ಪ್ರತ್ಯೇಕ ರಾಷ್ಟ್ರ ಕೇಳಬೇಕಾಗುತ್ತದೆ. ದಕ್ಷಿಣ ಭಾರತದವರು ಧ್ವನಿ ಎತ್ತಬೇಕಾಗುತ್ತದೆ ಎಂದು ಸುರೇಶ್ ಹೇಳಿದ್ದರು.

ಸಮರ್ಥನೆ ನೀಡಿದ್ದ ಡಿಕೆ ಸುರೇಶ್​

ಜನರ ಭಾವನೆಗಳನ್ನು ಹೇಳಿದ್ದೇನೆಯೇ ಹೊರತು ಬೇರೇನೂ ಹೇಳಿಲ್ಲ. ನನ್ನ ಹೇಳಿಕೆಗೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧವಿಲ್ಲ. ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ. ಕನ್ನಡ ಧ್ವಜಕ್ಕೆ ಸ್ಥಾನಮಾನ ನೀಡುವಂತೆ ಕೋರಿ ಕೇಂದ್ರಕ್ಕೆ ಪತ್ರ ಬರೆದಿದ್ದರೂ ಉತ್ತರ ಬಂದಿಲ್ಲ ಎಂದು ಹೇಳಿದ್ದರು.

ಇದನ್ನೂ ಓದಿ: ‘ಪ್ರತ್ಯೇಕ ರಾಷ್ಟ್ರ’ ಹೇಳಿಕೆ ವಿರುದ್ಧ ಬಿಜೆಪಿ ಹೋರಾಟ: ಯುಟರ್ನ್ ಹೊಡೆದ್ರಾ ಡಿಕೆ ಸುರೇಶ್?

ಅಸಮಾಧಾನ ವ್ಯಕ್ತಪಡಿಸಿದ ಮಲ್ಲಿಕಾರ್ಜುನ ಖರ್ಗೆ

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಾವು ಒಗ್ಗಟ್ಟಾಗಿದ್ದೇವೆ. ಭಾರತಕ್ಕಾಗಿ ಕಾಂಗ್ರೆಸ್ ನಾಯಕಿ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ತ್ಯಾಗ ಬಲಿದಾನ ಮಾಡಿದ್ದಾರೆ. ಲೋಕಸಭೆ ಸಂಸದ (ಡಿ.ಕೆ.ಸುರೇಶ್) ಹಾಗೆ ಹೇಳಿಲ್ಲ, ಅದನ್ನು ಚರ್ಚಿಸಬಾರದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದರು.

ಲೋಕಸಭೆ, ರಾಜ್ಯಸಭೆಯಲ್ಲಿ ಖಂಡನೆ

ಡಿಕೆ ಸುರೇಶ್ ಪ್ರತ್ಯೇಕ ರಾಷ್ಟ್ರ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಲೋಕಸಭೆ, ರಾಜ್ಯಸಭೆಯಲ್ಲಿ ಪ್ರತ್ಯೇಕ ರಾಷ್ಟ್ರ ಹೇಳಿಕೆಗೆ ಖಂಡನೆ ವ್ಯಕ್ತವಾಗಿದೆ. ಸಂಸದ ಡಿ.ಕೆ.ಸುರೇಶ್​ ದೇಶವಿಭಜನೆ ಹೇಳಿಕೆಗೆ ಬಿಜೆಪಿ ಖಂಡಿಸುತ್ತೇನೆ. ದೇಶದ ಏಕತೆ, ಸಾರ್ವಭೌಮತ್ವದ ಬಗ್ಗೆ ಯಾರೂ ಮಾತನಾಡಬಾರದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಹೇಳಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 6:53 pm, Sun, 4 February 24