ಬೆಂಗಳೂರು, ಜನವರಿ 13: ಹಾವೇರಿ (Haveri) ಜಿಲ್ಲೆಯ ಹಾನಗಲ್ (Hangal) ಪಟ್ಟಣದ ಖಾಸಗಿ ಹೊಟೇಲ್ನಲ್ಲಿ ನಡೆದ ನೈತಿಕ ಪೊಲೀಸ್ಗಿರಿ (Moral Policegiri) ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಸರಿಯಾದ ಸೆಕ್ಷನ್ ಹಾಕಿ. ಪೋಕ್ಸೋ ಕಾಯ್ದೆಯಡಿ ದೋಷಾರೋಪ ಪಟ್ಟಿ (ಚಾರ್ಜ್ ಶೀಟ್) ಸಲ್ಲಿಕೆಯಾಗಬೇಕು. ಸಾಮೂಹಿಕ ಅತ್ಯಾಚಾರ ನಡೆದಿರುವ ಎಲ್ಲಾ ಪ್ರಕರಣಗಳೂ ಎಸ್ಐಟಿ ತನಿಖೆಗೆ ನೀಡಬೇಕು. ಸರ್ಕಾರ ಯಾವ ರೀತಿ ಯೋಚಿಸುತ್ತದೆಯೋ, ಅದೇ ರೀತಿ ಪೊಲೀಸರು ಕೆಲಸ ಮಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಉಪಮುಖ್ಯಂತ್ರಿಗಳಾದ ಗೋವಿಂದ ಕಾರಜೋಳ ಮತ್ತು ಡಾ.ಅಶ್ವಥ್ ನಾರಾಯಣ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಬೊಮ್ಮಾಯಿ, ನಾಳೆ (ಜ.14) ಬಿಜೆಪಿ ಮಹಿಳಾ ನಿಯೋಗ ಹಾನಗಲ್ಗೆ ಭೇಟಿ ಕೊಡುತ್ತಿದೆ. ರಾಜ್ಯದಲ್ಲಿ ಸಂಭವಿಸಿದ ಪ್ರಕರಣಗಳ ಬಗ್ಗೆ ನಾವು ಹೋರಾಟ ಮಾಡುತ್ತೇವೆ. ಎಸ್ಐಟಿ ರಚಿಸಿದರೂ ನ್ಯಾಯಾಂಗ ಮೇಲುಸ್ತುವಾರಿಯ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ನೈತಿಕ ಪೊಲೀಸ್ ಗಿರಿ ಹೆಚ್ಚಾಗಿದೆ. ಯುವಕರು ರೂಂನಲ್ಲಿ ಯುವತಿಯನ್ನು ಥಳಿಸಿ, ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಸಾಮೂಹಿಕ ಅತ್ಯಾಚಾರ ಮುಚ್ಚಿಡುವ ಪ್ರಯತ್ನ ಪೊಲೀಸರು ಮಾಡಿದ್ದಾರೆ. ನಾನು ಕರೆ ಮಾಡಿ ಕೇಳಿದಾಗಲೂ ಪೊಲೀಸರು ಮೊಂಡುವಾದವನ್ನೇ ಮಾಡಿದರು. ಸಾಮೂಹಿಕ ಅತ್ಯಾಚಾರ ಆಗಿದೆ ಅಂದಿದ್ದರೂ, ಎಫ್ಐಆರ್ನಲ್ಲಿ ಇದನ್ನೂ ದಾಖಲಿಸಿಲ್ಲ. ಹಾನಗಲ್ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸ್ಥಳೀಯ ನಾಯಕರ ಒತ್ತಡ ಇದೆ. ನಾನು ಎಸ್ಪಿಗೆ ಮಾತಾಡಿದಾಗ ಆ ರೀತಿ ಆಗಿಲ್ಲ ಎಂದರು. ಆರು ಜನರಲ್ಲಿ ಇನ್ನೂ ಮೂರು ಜನ ಅರೆಸ್ಟ್ ಆಗಿಲ್ಲ. ಗೃಹ ಸಚಿವರು ಸ್ಟಾಂಡರ್ಡ್ ಇನ್ಸ್ಟ್ರಕ್ಷನ್ ಕೊಟ್ಟಿದ್ದೇವೆ ಎಂದಿದ್ದಾರೆ. ಸಮುದಾಯಗಳನ್ನು ನೋಡಿ ಕೇಸ್ ಹಾಕಿ ಅಂತ ನೀವು ಸ್ಟಾಂಡರ್ಡ್ ಇನ್ಸ್ಟ್ರಕ್ಷನ್ ಕೊಟ್ಟಿದ್ದೀರಾ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಗ್ಯಾಂಗ್ ರೇಪ್ ಪ್ರಕರಣವಾಗಿ ಬದಲಾದ ಹಾನಗಲ್ ನೈತಿಕ ಪೊಲೀಸ್ಗಿರಿ ಕೇಸ್
ಬೇರೆ ಕೋಮಿನವರು ಆಗಿದ್ದರೇ ಮೊದಲು ಒಳಗೆ ಹಾಕಿ ನಂತರ ವಿಚಾರಣೆ ಮಾಡುತ್ತಿದ್ದರು. ಯಾರನ್ನು ರಕ್ಷಣೆ ಮಾಡುತ್ತಿದ್ದೀರಿ? ಅಲ್ಪಸಂಖ್ಯಾತ ಹೆಣ್ಣುಮಗಳ ಮೇಲೆ ಅತ್ಯಾಚಾರ ಆಗಿದೆ. ಅಲ್ಪಸಂಖ್ಯಾತರ ರಕ್ಷಕರು ಎಂದು ಬಿಂಬಿಸುವವರು ರಕ್ಷಣೆ ಮಾಡಿಲ್ಲ. ನಿಮ್ಮ ಕೆಲಸವನ್ನು ಮಾಡುವವರಿಗೆ ಮಾತ್ರವೇ ನಿಮ್ಮ ರಕ್ಷಣೆ ಇದೆಯಾ? ಯಾವುದೇ ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲ ಎಂಬುದು ಸ್ಪಷ್ಟವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಪೊಲೀಸ್ ಠಾಣೆಗಳು ಕಲೆಕ್ಷನ್ ಅಡ್ಡಾ ಆಗಿವೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಹೆಣ್ಣುಮಕ್ಕಳು ನಿರ್ಭೀತಿಯಿಂದ ಓಡಾಡುವ ವಾತಾವರಣ ಕೆಟ್ಟು ಹೋಗಿದೆ. ಆದರೂ ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿಲ್ಲ. ಬೆಂಗಳೂರಿನಲ್ಲೇ ಕಳೆದ ವರ್ಷಕ್ಕಿಂತ ಮಹಿಳೆಯರ ಮೇಲಿನ ಅಪರಾಧ ಶೇ 30ರಷ್ಟು ಹೆಚ್ಚಾಗಿದೆ. ಹಲವು ಪ್ರಕರಣಗಳನ್ನು ಮುಚ್ಚಿ ಹಾಕುವ ಕೆಲಸ ಆಗುತ್ತಿದೆ. ಯಾರಾದರೂ ಕಾನೂನು ಪ್ರಕಾರ ಕೆಲಸ ಮಾಡಿದರೆ ಅವರ ಮೇಲೆ ಸರ್ಕಾರದ ವಕ್ರದೃಷ್ಟಿ ಬೀಳುತ್ತಿದೆ ಎಂದು ವಾಗ್ದಾಳಿ ಮಾಡಿದರು.
ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಇತ್ತೀಚೆಗೆ ಹೆಚ್ಚಾಗುತ್ತಿದೆ. ಸ್ಟೇಷನ್ಗೆ ಬಂದು ಹಾಜರಿ ಹಾಕಬೇಕಿದ್ದ ಪುಡಿ ರೌಡಿಗಳು ಮತ್ತೆ ಇಸ್ಪೀಟ್ ಕ್ಲಬ್ಗಳನ್ನು ಶುರು ಮಾಡಿದ್ದಾರೆ. ಕಾಂಗ್ರೆಸ್ ಮುಖಂಡರ ಬೆಂಬಲ ಅವರಿಗೆ ಇದೆ. ಬೆಳಗಾವಿ ಮಹಿಳೆ ವಿವಸ್ತ್ರ ಪ್ರಕರಣದಲ್ಲಿ ಆಸ್ಪತ್ರೆಗೆ ಭೇಟಿ ನೀಡಿದರೆ ಇವರ ಕರ್ತವ್ಯ ಮುಗೀತಾ? ಪೊಲೀಸರೇ ಕ್ಲಬ್ಗಳನ್ನು ಚಾಲನೆ ಮಾಡಿ ಎಂದು ಹೇಳುತ್ತಿದ್ದಾರೆ. ಇದು ಜಂಗಲ್ ರಾಜ್ಯ ಆಗಿದೆ ವಿಪಕ್ಷದವರು ಇಂತಹದ್ದನ್ನು ಮಾತಾಡಿದರೆ ಅವರ ಮೇಲೆ ಕೇಸ್ ಹಾಕುತ್ತಾರೆ. ನ್ಯಾಯ ಕೇಳಿದರೆ ಕೇಸ್ ಹಾಕುತ್ತೀರಿ, ಅನ್ಯಾಯ ಮಾಡಿದವರನ್ನು ತಿರುಗಾಡಲು ಬಿಟ್ಟಿದ್ದೀರಿ ಎಂದು ಹರಿಹಾಯ್ದರು.
ಕರಾವಳಿ ಭಾಗದ ನೈತಿಕ ಪೊಲೀಸ್ಗಿರಿಗೂ ಹಾನಗಲ್ ಪ್ರಕರಣಕ್ಕೂ ಹೋಲಿಕೆ ಬೇಡ. ಅಲ್ಲಿ ಗ್ಯಾಂಗ್ ರೇಪ್ ಆಗಿಲ್ಲ. ಕರಾವಳಿ ಭಾಗದಲ್ಲಿ ಆ್ಯಂಟಿ ಕಮ್ಯುನಲ್ ಸೆಲ್ ಮಾಡುತ್ತೇವೆ ಅಂತಾ ಸಿಎಂ ಹೇಳಿದ್ದರು, ಕರಾವಳಿ ಭಾಗಕ್ಕೆ ಮಾತ್ರ ಯಾಕೆ? ರಾಜ್ಯದ ಬೇರೆ ಕಡೆಗಳಲ್ಲಿ ಕೂಡಾ ಸ್ಥಾಪನೆ ಮಾಡಿ ಎಂದು ಆಗ್ರಹಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:58 pm, Sat, 13 January 24