
ಬೆಂಗಳೂರು, ಮೇ 25: ಬಿಜೆಪಿಯ 18 ಶಾಸಕರ ಅಮಾನತು (BJP MLA’s Suspension) ವಾಪಸ್ ಪಡೆಯಲಾಗಿದೆ. ಸ್ಪೀಕರ್ ಯುಟಿ ಖಾದರ್ (UT Khader) ನೇತೃತ್ವದ ನಡೆದ ಸಂಧಾನ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಹನಿಟ್ರ್ಯಾಪ್ ಮತ್ತು ಮುಸ್ಲಿಮರಿಗೆ ಶೇ. 4ರಷ್ಟು ಮೀಸಲಾತಿ ವಿಚಾರವಾಗಿ ವಿಧಾನಸಭೆಯಲ್ಲಿ ಚರ್ಚೆ ವೇಳೆ ಭಾರೀ ಗಲಾಟೆ ನಡೆದಿತ್ತು. ಆ ವೇಳೆ ಬಿಜೆಪಿ ಶಾಸಕರು ಸ್ಪೀಕರ್ ಯು.ಟಿ ಖಾದರ್ ಅವರ ಮೇಲೆ ಪೇಪರ್ ತೂರಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಮೂಲಕ ಪೀಠಕ್ಕೆ ಅಗೌರವ ತೋರಿದ ಆರೋಪದ ಮೇಲೆ ಬಿಜೆಪಿಯ 18 ಶಾಸಕರನ್ನು 6 ತಿಂಗಳು ಕಾಲ ಅಮಾನತು ಮಾಡಿ ಖಾದರ್ ಆದೇಶಿಸಿದ್ದರು. ಆದರೆ, ಇದೀಗ ಶಾಸಕ ಅಮಾನತು ಆದೇಶವನ್ನು ಹಿಂಪಡೆಯಲು ಸಭೆಯಲ್ಲಿ ತೀರ್ಮಾನವಾಗಿದೆ.
ಬಿಜೆಪಿಯ 18 ಶಾಸಕರ ಅಮಾನತು ಹಿಂಪಡೆಯುವ ಸಂಬಂಧ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ನೇತೃತ್ವದಲ್ಲಿ ಸಂಧಾನ ಸಭೆ ನಡೆಯಿತು. ಸಭೆಯಲ್ಲಿ, ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಆರ್. ಅಶೋಕ್, ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಭಾಗಿಯಾಗಿದ್ದರು. ಈ ಸಂಧಾನ ಸಭೆಯಲ್ಲಿ ಸಂಧಾನ ಸಭೆಯಲ್ಲಿ ಬಿಜೆಪಿಯ 18 ಶಾಸಕರ ಅಮಾನತು ಆದೇಶವನ್ನು ಹಿಂಪಡೆಯಲು ತೀರ್ಮಾನಿಸಲಾಗಿದೆ.
ಶಾಸಕರ ಅಮಾನತು ಆದೇಶವನ್ನ ಹಿಂಪಡೆಯಲಾಗಿದೆ. ಘಟನೆ ಬಗ್ಗೆ ಎಲ್ಲ ಶಾಸಕರು ವಿಷಾದ ವ್ಯಕ್ತಪಡಿಸಿದ್ದಾರೆ. ವಿಪಕ್ಷ ನಾಯಕರು ಕೂಡ ನನಗೆ ಮನವಿ ಸಹ ಸಲ್ಲಿಸಿದರು. ಇನ್ಮುಂದೆ ಹೀಗಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. 18 ಶಾಸಕರನ್ನು ಅಮಾನತು ಮಾಡಿ ಎರಡು ತಿಂಗಳಾಗಿದೆ. ಸಂತೋಷದಿಂದ ಶಾಸಕರ ಅಮಾಮತು ಹಿಂಪಡೆದಿದ್ದೇನೆ. ಯಾವುದೇ ಷರತ್ತು ಇಲ್ಲ, ಎಲ್ಲರೂ ನಮ್ಮ ಮಿತ್ರರು. ಆ ಸಮಯದಲ್ಲಿ ದುರ್ನಡತೆ ತೋರಿದ್ದಕ್ಕೆ ಕ್ರಮಕೈಗೊಂಡೆ. ಕ್ರಮತೆಗೆದುಕೊಳ್ಳುವುದಕ್ಕೆ ನನಗೆ ಅಧಿಕಾರವಿದೆ ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದರು.
ಸಂಧಾನ ಸಭೆ ಬಳಿಕ ಮಾತನಾಡಿದ ವಿಪಕ್ಷ ನಾಯಕ ಅಶೋಕ್, ನಮ್ಮ ಶಾಸಕರು ಈಗಾಗಲೇ ವಿಷಾದ ವ್ಯಕ್ತಪಡಿಸಿದ್ದಾರೆ. ಸ್ಪೀಕರ್ 6 ತಿಂಗಳು ಅಮಾನತು ಮಾಡಿದ್ದು ಸರಿಯಲ್ಲ. ಹೀಗೆ ಆದ್ರೆ ಸದನದಲ್ಲಿ ಆಡಳಿತ ಪಕ್ಷವೇ ಇರಬೇಕಾಗುತ್ತೆ. ಸಿಎಂ ಸಹ ಇದು ಇಲ್ಲಿಗೆ ಮುಗಿಯಬೇಕು ಎಂದಿದ್ದಾರೆ. ಇದನ್ನು ಇಲ್ಲಿಗೆ ಅಂತ್ಯ ಮಾಡಬೇಕು. ಸಿಎಂ, ಸ್ಪೀಕರ್ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.
ಬಜೆಟ್ ಅಧಿವೇಶನದಲ್ಲಿ ಹನಿಟ್ರ್ಯಾಪ್ ಹಾಗೂ ಮುಸ್ಲಿಂ ಮೀಸಲಾತಿ ವಿಚಾರಗಳು ಕೋಲಾಹಲ ಎಬ್ಬಿಸಿದ್ದವು.
ಮಾರ್ಚ್ 21 ರಂದು ವಿಧಾನಸಭೆ ಕಲಾಪದಲ್ಲಿ ಭಾರಿ ಹೈಡ್ರಾಮಾಕ್ಕೆ ಕಾರಣವಾಗಿದ್ದವು. ಸದನ ಶುರುವಾಗುತ್ತಿದ್ದಂತೆಯೇ ಹನಿಟ್ರ್ಯಾಪ್ ವಿಚಾರ ಪ್ರಸ್ತಾಪ ಮಾಡಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕೆಂದು ಪ್ರತಿಪಕ್ಷ ಪಟ್ಟು ಹಿಡಿದಿತ್ತು. ನಂತರ ಮುಸ್ಲಿಂ ಮೀಸಲಾತಿ ವಿಧೇಯಕದ ಕುರಿತು ಸರ್ಕಾರ ಚರ್ಚೆಗೆ ಮುಂದಾಗಿತ್ತು.
ಇದೇ ವೇಳೆ ಬಿಜೆಪಿ ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ, ವಿಧೇಯಕದ ಪ್ರತಿಗಳನ್ನು ಹರಿದು ಸ್ಪೀಕರ್ ಮೇಲೆ ಎಸೆಯುತ್ತಾ, ‘ಹನಿಟ್ರ್ಯಾಪ್ ಸರ್ಕಾರ’ ಎಂದು ಘೋಷಣೆಗಳನ್ನು ಕೂಗಿದ್ದರು. ಈ ವೇಳೆ ಸ್ಪೀಕರ್, ಶಾಸಕರು ತಾಳ್ಮೆ ವಹಿಸುವಂತೆ, ಕಲಾಪಕ್ಕೆ ಅಡ್ಡಿಪಡಿಸದಂತೆ ಮನವಿ ಮಾಡಿದ್ದರು. ಆದರೂ ಸಹ ವಿಪಕ್ಷ ಬಿಜೆಪಿ ಸದಸ್ಯರು ಪ್ರತಿಭಟನೆ ಮುಂದುವರಿಸಿದ್ದರು. ಇದರಿಂದ ಸ್ಪೀಕರ್ 18 ಬಿಜೆಪಿ ಸದಸ್ಯರನ್ನು 6 ತಿಂಗಳು ಕಲಾಪದಿಂದ ಅಮಾನತುಗೊಳಿಸಿ ರೂಲಿಂಗ್ ಹೊರಡಿಸಿದ್ದರು.
ಇದನ್ನೂ ಓದಿ: ಗಲಾಟೆ-ಗದ್ದಲ: ವಿಧಾನಸಭೆ ಕಲಾಪದಿಂದ 6 ತಿಂಗಳವರೆಗೆ 18 ಬಿಜೆಪಿ ಸದಸ್ಯರ ಅಮಾನತು
ಶಾಸಕರಾದ ದೊಡ್ಡನಗೌಡ ಪಾಟೀಲ್, ಡಾ. ಅಶ್ವಥ್ ನಾರಾಯಣ, ಬೈರತಿ ಬಸವರಾಜ, ಡಾ. ಶೈಲೇಂದ್ರ ಬೆಲ್ದಾಳೆ, ಮುನಿರತ್ನ, ಧೀರಜ್ ಮುನಿರಾಜು, ಬಿ.ಪಿ. ಹರೀಶ್, ಡಾ. ಭರತ್ ಶೆಟ್ಟಿ, ಚಂದ್ರು ಲಮಾಣಿ, ಉಮಾನಾಥ ಕೋಟ್ಯಾನ್, ಸಿ.ಕೆ. ರಾಮಮೂರ್ತಿ, ಯಶಪಾಲ್ ಸುವರ್ಣ, ಬಿ. ಸುರೇಶ್ ಗೌಡ, ಶರಣು ಸಲಗಾರ್, ಚನ್ನಬಸಪ್ಪ, ಬಸವರಾಜ ಮತ್ತಿಮೂಡ, ಎಸ್. ಆರ್. ವಿಶ್ವನಾಥ್, ಎಂ.ಆರ್. ಪಾಟೀಲ್ ಅವರನ್ನು ವಿಧಾನಸಭೆ ಕಲಾಪದಿಂದ ಆರು ತಿಂಗಳುಗಳ ಕಾಲ ಅಮಾನತು ಮಾಡಿ ಸ್ಪೀಕರ್ ಯುಟಿ ಖಾದರ್ ರೂಲಿಂಗ್ ಹೊರಡಿಸಿದ್ದರು.
Published On - 6:12 pm, Sun, 25 May 25