ಗಲಾಟೆ-ಗದ್ದಲ: ವಿಧಾನಸಭೆ ಕಲಾಪದಿಂದ 6 ತಿಂಗಳವರೆಗೆ 18 ಬಿಜೆಪಿ ಸದಸ್ಯರ ಅಮಾನತು
ಸದನದಲ್ಲಿ ಭಾರೀ ಗಲಾಟೆ ಗದ್ದಲ ಎಬ್ಬಿಸಿದ್ದರಿಂದ ವಿಪಕ್ಷ ಬಿಜೆಪಿಯ 18 ಸದಸ್ಯರನ್ನು ಅಮಾನತು ಮಾಡಲಾಗಿದೆ. ಸ್ಪೀಕರ್ ಪೀಠಕ್ಕೆ ಅಗೌರವ ತೋರಿದ ಆರೋಪ ಮೇಲೆ 8 ಸದಸ್ಯರರುಗಳನ್ನು ವಿಧಾನಸಭೆ ಕಲಾಪದಿಂದ 6 ತಿಂಗಳ ಕಾಲ ಅಮಾನತುಗೊಳಿಸಿ ಸ್ಪೀಕರ್ ಯು.ಟಿ ಖಾದರ್ ರೂಲಿಂಗ್ ಹೊರಡಿಸಿದ್ದಾರೆ. ಏಕೆ ಅಮಾನತು? ಯಾಕಾಗಿ ಗದ್ದಲ? ಅಮಾನತುಗೊಂಡುವರು ಯಾರ್ಯಾರು?

ಬೆಂಗಳೂರು, (ಮಾರ್ಚ್ 21): ವಿಧಾನಸಭೆ ಸದನದ (Karnataka Assembly Session 20255) ಕಾರ್ಯಕಲಾಪಕ್ಕೆ ಅಡ್ಡಿಪಡಿಸಿದ ವಿಪಕ್ಷ ಬಿಜೆಪಿಯ 18 ಸದಸ್ಯರರುಗಳನ್ನು 6 ತಿಂಗಳ ಕಾಲ ಅಮಾನತುಗೊಳಿಸಿ ಸ್ಪೀಕರ್ ಯು.ಟಿ ಖಾದರ್ ರೂಲಿಂಗ್ ಹೊರಡಿಸಿದ್ದಾರೆ. ಸ್ಪೀಕರ್ ಸ್ಥಾನದಲ್ಲಿ ಕುಳಿತ ಖಾದರ್ ನಿಮ್ಮನ್ನು ಕ್ಷಮಿಸಬಹುದು. ಆದರೆ ಸ್ಪೀಕರ್ ಪೀಠಕ್ಕೆ ಅಗೌರವ ತೋರಿದವರನ್ನು ಕ್ಷಮಿಸಲಾಗಲ್ಲ ಎಂದು ಪೀಠಕ್ಕೆ ಅಗೌರವ ತೋರಿದ್ದಾರೆಂದು ವಿಧಾನಸಭೆ ಕಲಾಪದಿಂದ ಆರು ತಿಂಗಳು 18 ಸದಸ್ಯರನ್ನು ಅಮಾನತುಗೊಳಿಸಿದ್ದಾರೆ. ಸ್ಪೀಕರ್ ಯುಟಿ ಖಾದರ್ ಅವರು ಸದನದಲ್ಲಿಅಮಾನತುಗೊಳಿಸಿದವರನ್ನು ಹೆಸರು ಹೇಳುತ್ತಿದ್ದಂತೆಯೇ ಮಾರ್ಷಲ್ಸ್, ಒಬ್ಬೊಬ್ಬರನ್ನೇ ಎತ್ತಿಕೊಂಡು ಬಂದು ಹೊರಹಾಕಿದರು.
ಅಮಾನತುಗೊಂಡುವರು ಯಾರ್ಯಾರು?
ದೊಡ್ಡನಗೌಡ ಪಾಟೀಲ್, ಡಾ. ಅಶ್ವಥ್ ನಾರಾಯಣ, ಬೈರತಿ ಬಸವರಾಜ, ಡಾ. ಶೈಲೇಂದ್ರ ಬೆಲ್ದಾಳೆ, ಮುನಿರತ್ನ, ಧೀರಜ್ ಮುನಿರಾಜು, ಬಿ.ಪಿ. ಹರೀಶ್, ಡಾ. ಭರತ್ ಶೆಟ್ಟಿ, ಚಂದ್ರು ಲಮಾಣಿ, ಉಮಾನಾಥ ಕೋಟ್ಯಾನ್., ಸಿ.ಕೆ. ರಾಮಮೂರ್ತಿ. ಯಶಪಾಲ್ ಸುವರ್ಣ, ಬಿ. ಸುರೇಶ್ ಗೌಡ, ಶರಣು ಸಲಗಾರ್, ಚನ್ನಬಸಪ್ಪ, ಬಸವರಾಜ ಮತ್ತಿಮೂಡ., ಎಸ್. ಆರ್. ವಿಶ್ವನಾಥ್, ಎಂ.ಆರ್. ಪಾಟೀಲ್ ಅವರನ್ನು ವಿಧಾನಸಭೆ ಕಲಾಪದಿಂದ ಆರು ತಿಂಗಳುಗಳ ಕಾಲ ಅಮಾನತು ಮಾಡಿ ಸ್ಪೀಕರ್ ಯುಟಿ ಖಾದರ್ ರೂಲಿಂಗ್ ಹೊರಡಿಸಿದ್ದಾರೆ.
ಇದನ್ನೂ ಓದಿ: ವಿಧಾನಸಭೆಯಲ್ಲಿ ಹೈಡ್ರಾಮಾ: ಸ್ಪೀಕರ್ ಮೇಲೆ ಕಾಗದ ಚೂರು ಎಸೆದ ಶಾಸಕರು!
s ಸ್ಪೀಕರ್ ರೂಲಿಂಗ್‌ಗೆ ವಿಪಕ್ಷ ಸದಸ್ಯರು ತೀವ್ರ ಖಂಡನೆ ವ್ಯಕ್ತಪಡಿಸಿದ್ದು, ಸದನದ ಬಾವಿಗಿಳಿದು ಧರಣಿ ನಡೆಸಿದ್ದಾರೆ. ಇನ್ನು ಬಿಜೆಪಿಗೆ ಮೈತ್ರಿ ಪಕ್ಷ ಜೆಡಿಎಸ್ ಸದಸ್ಯರು ಸಹ ಬೆಂಬಲಿಸಿದ್ದಾರೆ.
ಗಲಾಟೆಗೆ ಕಾರಣವೇನು?
ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಎಬ್ಬಿಸಿರುವ ಹನಿಟ್ರ್ಯಾಪ್ ಹಾಗೂ ಮುಸ್ಲಿಂ ಮೀಸಲಾತಿ ವಿಚಾರಗಳು ವಿಧಾನಸಭೆ ಕಲಾಪದಲ್ಲಿ ಇಂದು(ಮಾರ್ಚ್ 21) ಬೆಳಗ್ಗೆಯಿಂದಲೇ ಭಾರೀ ಹೈಡ್ರಾಮಾಕ್ಕೆ ಕಾರಣವಾಯಿತು. ಬೆಳಗ್ಗೆ ಸದನ ಶುರುವಾಗುತ್ತಿದ್ದಂತೆಯೇ ಹನಿಟ್ರ್ಯಾಪ್ ವಿಚಾರ ಪ್ರಸ್ತಾಪ ಮಾಡಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕೆಂದು ಪ್ರತಿಪಕ್ಷ ಪಟ್ಟು ಹಿಡಿಯಿತು. ನಂತರ ಮುಸ್ಲಿಂ ಮೀಸಲಾತಿ ವಿಧೇಯಕದ ಕುರಿತು ಸರ್ಕಾರ ಚರ್ಚೆಗೆ ಮುಂದಾಯಿತು. ಇದೇ ವೇಳೆ ಬಿಜೆಪಿ ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿದರು. ಅಲ್ಲದೆ, ವಿಧೇಯಕದ ಪ್ರತಿಗಳನ್ನು ಹರಿದು ಸ್ಪೀಕರ್ ಮೇಲೆ ಎಸೆಯುತ್ತಾ, ‘ಹನಿಟ್ರ್ಯಾಪ್ ಸರ್ಕಾರ’ ಎಂದು ಘೋಷಣೆಗಳನ್ನು ಕೂಗಿದರು. ಇದೇ ವೇಳೆ ಸ್ಪೀಕರ್ ಸಹ ಶಾಸಕರು ತಾಳ್ಮೆ ವಹಿಸುವಂತೆ, ಕಲಾಪಕ್ಕೆ ಅಡ್ಡಿಪಡಿಸದಂತೆ ಮನವಿ ಮಾಡಿದರು. ಆದರೂ ಸಹ ವಿಪಕ್ಷ ಬಿಜೆಪಿ ಸದಸ್ಯರು ಪ್ರತಿಭಟನೆ ಮುಂದುವರಿಸಿದರು. ಇದರಿಂದ ಸ್ಪೀಕರ್ 18 ಬಿಜೆಪಿ ಸದಸ್ಯರನ್ನು 6 ತಿಂಗಳು ಕಲಾಪದಿಂದ ಅಮಾನತುಗೊಳಿಸಿ ರೂಲಿಂಗ್ ಹೊರಡಿಸಿದರು.
ವಿಪಕ್ಷ ನಾಯಕ ಅಶೋಕ್ ಕೆಂಡಾಮಂಡಲ
ಇನ್ನು ತಮ್ಮ ಪಕ್ಷದ ಸದಸ್ಯರನ್ನು 6 ತಿಂಗಳು ಕಾಲ ಅಮಾನತು ಮಾಡಿದ್ದರಿಂದ ವಿಪಕ್ಷ ನಾಯಕ ಆರ್ ಅಶೋಕ್ ಆಕ್ರೋಶಗೊಂಡಿದ್ದಾರೆ. ಹನಿಟ್ರ್ಯಾಪ್ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ್ದೆವು. ನ್ಯಾಯ ಕೇಳಿದ ಶಾಸಕರ ಮೇಲೆಯೇ ಗದಾಪ್ರಹಾರ ಮಾಡಿದ್ದಾರೆ. ನಾವು ಸದನಕ್ಕೆ ಗೌರವವಾಗಿ ಕೇಳಿದ್ದೆವು. ಆದ್ರೆ, 18 ಶಾಸಕರನ್ನು ಅಮಾನತು ಮಾಡಿದ್ದು ಅನ್ಯಾಯ. ಸ್ಪೀಕರ್ ಯು.ಟಿ.ಖಾದರ್ರಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಶಾಸಕರನ್ನು ಸಸ್ಪೆಂಡ್ ಮಾಡಿದ್ದನ್ನು ಖಂಡಿಸುತ್ತೇನೆ ಎಂದು ವಾಗ್ದಾಳಿ ನಡೆಸಿದರು.
ಬಿವೈ ವಿಜಯೇಂದ್ರ ಕಿಡಿ
ಇನ್ನು ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾತನಾಡಿ, 18 ಶಾಸಕರ ಅಮಾನತು ಪ್ರಜಾಪ್ರಭುತ್ವ ವಿರೋಧಿ ನಡೆ. 224 ಶಾಸಕರ ಗೌರವಕ್ಕೆ ಧಕ್ಕೆ ಬಂದಾಗ ರಕ್ಷಣೆಗೆ ಬರಬೇಕು. ಆಡಳಿತ ಪಕ್ಷದ ಸದಸ್ಯರ ಪರವಾಗಿ ನಾವು ಹೋರಾಟ ಮಾಡುತ್ತಿದ್ದೆವು. ಅವರ ಪರ ಹೋರಾಟ ಮಾಡಿದ್ದಕ್ಕೆ ನಮ್ಮನ್ನು ಹೊರ ಹಾಕಿದ್ದಾರೆ. ಬಿಜೆಪಿಯ 18 ಶಾಸಕರನ್ನು ಅಮಾನತು ಮಾಡಿದ್ದು ಸರಿಯಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯಗೆ ದಲಿತರ ಬಗ್ಗೆಯೂ ಕಾಳಜಿ ಇಲ್ಲ ಎಂದು ಕಿಡಿಕಾರಿದರು.
ನಾನು ಸ್ಪೀಕರ್ ಆಗಿದ್ರೆ 2 ವರ್ಷ ಅಮಾನತು ಮಾಡುತ್ತಿದ್ದೆ
ಇನ್ನು ಸ್ಪೀಕರ್ ಪೀಠಕ್ಕೆ ಅಗೌರವ ತೋರಿದ ಆರೋಪದ ಮೇಲೆ ಬಿಜೆಪಿಯ 18 ಸದಸ್ಯರನ್ನು ಅಮಾನತು ಮಾಡಿರುವ ಬಗ್ಗೆ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಪ್ರತಿಕ್ರಿಯಿಸಿ, ಬುಕ್, ಪೇಪರ್ ಎಸೆದರೆ ಸುಮ್ಮನಿರಬೇಕಾ? ನಾನು ಸ್ಪೀಕರ್ ಆಗಿದ್ದರೆ 2 ವರ್ಷಗಳ ಕಾಲ ಅಮಾನತು ಮಾಡುತ್ತಿದ್ದೆ ಬಿಜೆಪಿ ಶಾಸಕರು ಸದನದಲ್ಲಿ ಜನಪರ ಸಮಸ್ಯೆ ಬಗ್ಗೆ ಚರ್ಚೆ ಮಾಡಿಲ್ಲ. ನನ್ನನ್ನು ವಿಪಕ್ಷಗಳಿಗಿಂತ ಸ್ಪೀಕರ್ ಬೈದಿದ್ದೆ ಹೆಚ್ಚು. ದೈತ್ಯಾಕಾರದ ದೇಹವನ್ನು ಮಾರ್ಷಲ್ಗಳು ಹೊತ್ತೊಯ್ದಿದ್ದಾರೆ ಎಂದರು.
Published On - 4:37 pm, Fri, 21 March 25