ಸದನದಲ್ಲಿ ಹನಿಟ್ರ್ಯಾಪ್ ಚರ್ಚೆ ವೇಳೆ ಪರಸ್ಪರ ಕಿತ್ತಾಡಿಕೊಂಡ ಬಿಜೆಪಿ ನಾಯಕರು..!
ಹನಿಟ್ರ್ಯಾಪ್ ಪ್ರಕರಣದಲ್ಲಿ ಕೆಲ ರಾಜಕೀಯ ನಾಯಕರು, ತಮ್ಮ ಅಸ್ತಿತ್ವವೇ ಕಳೆದುಕೊಂಡಿರೋ ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ. ಇದರ ಮಧ್ಯೆಯೇ ಇದೀಗ ಹಿರಿಯ ಸಚಿವ ಕೆಎನ್ ರಾಜಣ್ಣ ಅವರನ್ನ ಹನಿಟ್ರ್ಯಾಪ್ಗೆ ಯತ್ನಿಸಿದ್ದು, ಈ ಸಂಬಂಧ ವಿಧಾನಸಭೆ ಸದನದಲ್ಲಿ ಭಾರೀ ಚರ್ಚೆಯಾಯಿತು. ಮತ್ತೊಂದೆಡೆ ಹನಿಟ್ರ್ಯಾಪ್ ಚರ್ಚೆ ಮಧ್ಯೆಯೇ ವಿರೋಧ ಪಕ್ಷ ಬಿಜೆಪಿ ಪಾಳೆಯದಲ್ಲಿ ಜೋರು ಗಲಾಟೆಯಾಗಿದೆ.

ಬೆಂಗಳೂರು, (ಮಾರ್ಚ್ 20): ವಿಧಾನಸಭೆಯಲ್ಲಿ ಹನಿಟ್ರ್ಯಾಪ್ (honeytrap Case )ವಿಚಾರದ ಬಗ್ಗೆ ಚರ್ಚೆಯಾದ ಬಳಿಕ ರಾಜ್ಯ ರಾಜಕೀಯದಲ್ಲಿ ಸಂಚಲನವೇ ಸೃಷ್ಟಿಯಾಗಿದೆ. ಸದನದಲ್ಲಿ ಪ್ರಸ್ತಾಪವಾದ ಬಳಿಕ ರಾಜ್ಯ ಸರ್ಕಾರ ಇಕ್ಕಟ್ಟಿಗೆ ಸಿಲುಕಿದ್ದು, ಯಾವ ರೀತಿಯ ತನಿಖೆಗೆ ಆದೇಶ ನೀಡುತ್ತದೆ ಅನ್ನೋದು ಎಲ್ಲರಿಗೂ ಕುತೂಹಲ ಕೆರಳಿಸಿದೆ. ಇನ್ನು ತಮಗೆ ಹನಿಟ್ರ್ಯಾಪ್ ಯತ್ನ ಮಾಡಿರುವ ಬಗ್ಗೆ ಸಚಿವ ರಾಜಣ್ಣ ಪ್ರಸ್ತಾಪಿಸುತ್ತಿದ್ದಂತೆಯೇ ವಿರೋಧ ಪಕ್ಷದ ಕೆಲ ನಾಯಕರು ಯತ್ನಾಳ್, ಮುನಿರತ್ನ ಹಾಗೂ ಸುನಿಲ್ ಕುಮಾರ್ ಸಹ ತಮ್ಮ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಅಲ್ಲದೇ ಸೂಕ್ತ ತನಿಖೆ ಮಾಡಿ ಹನಿಟ್ರ್ಯಾಪ್ ಹಿಂದಿರುವವರನ್ನು ಪತ್ತೆ ಮಾಡಬೇಕೆಂದು ಆಗ್ರಹಿಸಿದರು. ಆದ್ರೆ, ವಿರೋಧ ಪಕ್ಷದ ನಾಯಕ ಆರ್. ಅಶೋಕ್(R Ashoka)) ಸೈಲೆಂಟ್ ಆಗಿದ್ದರಿಂದ ಸ್ವಪಕ್ಷದ ನಾಯಕರೇ ಆಕ್ರೋಶ ವ್ಯಕ್ತಪಡಿಸಿದ್ದು, ಇಬ್ಬರು ನಾಯಕರು ಪರಸ್ಪರ ಬೈದಾಡಿಕೊಂಡಿರುವ ಪ್ರಸಂಗ ನಡೆದಿದೆ. ಈ ಮೂಲಕ ನಾಯಕರಲ್ಲಿ ಒಗ್ಗಟ್ಟಿಲ್ಲ ಎನ್ನುವುದನ್ನು ಮತ್ತೊಮ್ಮೆ ಸಾಬೀತಾಗಿದೆ.
ಹೌದು..ಇಂದು(ಮಾರ್ಚ್ 20) ಹನಿಟ್ರ್ಯಾಪ್ ಬಗ್ಗೆ ಸದನದಲ್ಲಿ ಚರ್ಚೆ ಆಯ್ತು. ಮತ್ತೊಂದರಡೆ ವಿಪಕ್ಷ ಬಿಜೆಪಿ ಪಾಳಯದಲ್ಲಿ ಜೋರು ಗಲಾಟೆಯಾಗಿದೆ. ಸಚಿವರೇ ಹನಿಟ್ರ್ಯಾಪ್ ವಿಚಾರ ಪ್ರಸ್ತಾಪಿಸಿದರೂ ಸಹ ವಿರೋಧ ಪಕ್ಷದ ನಾಯಕ ಅಶೋಕ್ ಹೆಚ್ಚಾಗಿ ಮಾತನಾಡೇ ಮೌನಕ್ಕೆ ಶರಣಾಗಿದ್ದಕ್ಕೆ ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಸದನದೊಳಗೆ ಹನಿ ಟ್ರ್ಯಾಪ್ ವಿಚಾರದಲ್ಲಿ ಅಶೋಕ್ ಮೌನಕ್ಕೆ ಶರಣಾಗಿರುವುದಕ್ಕೆ ಸಿಟ್ಟಾದ ಸುನಿಲ್ ಕುಮಾರ್ ಅಶೋಕ್ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ಅಶೋಕ್ ಹಾಗೂ ಸುನಿಲ್ ನಡುವಿನ ವಾಗ್ವಾದ ಈ ಕೆಳಗಿನಂತಿದೆ.
ಇದನ್ನೂ ಓದಿ: ಹನಿಟ್ರ್ಯಾಪ್ ಕೇಸ್: ಡಿಕೆ ಶಿವಕುಮಾರ್ ವಿರುದ್ಧ ಹೊಸ ಬಾಂಬ್ ಸಿಡಿಸಿದ ಬಿಜೆಪಿ ಶಾಸಕ
ಕಿತ್ತಾಡಿದ ಅಶೋಕ್-ಸುನಿಲ್ ಕುಮಾರ್
ಸುನಿಲ್ ಕುಮಾರ್: “ಅಲ್ರೀ ಅಶೋಕ್ ಅವರೇ ನಿಮಗೆ ನ್ಯಾಯಾಂಗ ತನಿಖೆ ಕೊಡಿ ಅಂತಾ ಹೇಳಲು ಆಗೋಲ್ವಾ? ನಾನು ಅಲ್ಲಿ ಎದ್ದು ನಿಂತು ಮಾತನಾಡ್ತಾ ಇದ್ದೀನಿ. ನೀವು ಬಾಯಿ ಬಿಟ್ಟು ತನಿಖೆಗೆ ಕೇಳೋಕೆ ಆಗೋಲ್ವಾ?” ಎಂದು ಗರಂ ಆಗಿದ್ದಾರೆ.
ಆರ್ ಅಶೋಕ್: ಸುನಿಲ್ ಕುಮಾರ್ ಮಾತಿಗೆ ಪ್ರತಿಕ್ರಿಯಿಸಿದ ಅಶೋಕ್ “ಏಯ್.. ನಾನೇ ಮೊದಲಿಗೆ ತನಿಖೆ ಬಗ್ಗೆ ಮಾತನಾಡಿದ್ದು ಎಂದಿದ್ದಾರೆ.
ಸುನಿಲ್ ಕುಮಾರ್: ಇಷ್ಟಕ್ಕೆ ಬಿಡದ ಸುನಿಲ್ ಕುಮಾರ್, ಎಲ್ರಿ ನೀವು ಮಾತನಾಡಿದ್ದು. ನಾನು ಪ್ರಸ್ತಾಪ ಮಾಡಿದ ಮೇಲೆ ನೀವು ನಿಂತಿದ್ದು. ನಾನು ನ್ಯಾಯಾಂಗ ತನಿಖೆಗೆ ಕೊಡಿ ಎಂದು ಹೇಳಬೇಕಾ. ನೀವು ಎದ್ದು ನಿಂತು ಹೇಳಬೇಕಿತ್ತಲ್ವಾ? ನಾನು ಎದ್ದು ನಿಲ್ಲೋವರೆಗೀ ನೀವು ಕಾಯಬೇಕಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆರ್ ಅಶೋಕ್: ಇಲ್ಲ ನಾನೇ ಹೇಳಿದ್ದು..
ಸುನಿಲ್ ಕುಮಾರ್: ನಾನೇ ನಿಮಗೆ ಹೇಳಿಕೊಟ್ಟಿದ್ದು. ಆಮೇಲೆ ನೀವು ಹೇಳಿದ್ದು ಎಂದರು.
ಆರ್ ಅಶೋಕ್: ಇಲ್ಲ.. ಇಲ್ಲ.. ನಾನೇ ಹೇಳಿದೆ ಎಂದರು. ಬಳಿಕ ಅಶೋಕ್ ಹಾಗೂ ಸುನಿಲ್ ಕುಮಾರ್ ಮೌನಕ್ಕೆ ಜಾರಿದರು.
ಹೀಗೆ ಸದನದೊಳಗೆ ಸ್ವಪಕ್ಷದ ನಾಯಕರೇ ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಒಂದೆಡೆ ಹನಿಟ್ರ್ಯಾಪ್ ಬಗ್ಗೆ ಗಂಭೀರವಾಗಿ ಚರ್ಚೆ ನಡೆಯುತ್ತಿದ್ದರೆ, ಇತ್ತ ಬಿಜೆಪಿ ನಾಯಕರು ಜೋರಾಗಿ ಪರಸ್ಪರ ಗಲಾಟೆ ಮಾಡಿಕೊಂಡಿದ್ದಾರೆ. ಈ ರೀತಿ ಚರ್ಚೆಯಾಗುತ್ತಿರುವಾಗ ವಿರೋಧ ಪಕ್ಷದ ನಾಯಕ ಎದ್ದು ನಿಂತು ಗಟ್ಟಿಯಾಗಿ ಮಾತನಾಡಬೇಕು. ಆದ್ರೆ, ಅಶೋಕ್ ಮೌನವಾಗಿದ್ದರಿಂದ ಸುನಿಲ್ ಕುಮಾರ್ ಅವರ ಆಕ್ರೋಶಕ್ಕೆ ಕಾರಣವಾಗಿದೆ.
ಮೊದಲೇ ಕರ್ನಾಟಕ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ. ಒಬ್ಬರದ್ದು ಒಂದೊಂದು ಬಣ ರಾಜಕೀಯ. ಇದರ ಮಧ್ಯ ಸದನದೊಳಗೆ ಉಭಯ ನಾಯಕರು ಈ ರೀತಿ ವಾಗ್ದಾದ ಮಾಡಿಕೊಂಡಿದ್ದಾರೆ. ಈ ಮೂಲಕ ಬಿಜೆಪಿ ನಾಯಕರಲ್ಲಿ ಹೊಂದಾಣಿಕೆ ಇಲ್ಲ ಎನ್ನುವುದನ್ನು ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ.
Published On - 8:33 pm, Thu, 20 March 25