ಕಾವೇರಿ ನದಿ ನೀರು ಹಂಚಿಕೆ, ಸುಪ್ರೀಂಕೋರ್ಟ್ ಪ್ರತ್ಯೇಕ ಪೀಠ ರಚನೆ ಮಾಡಿದೆ: ಡಿಸಿಎಂ ಡಿಕೆ ಶಿವಕುಮಾರ್
ತಮಿಳುನಾಡಿಗೆ ಕಾವೇರಿ ನೀರು ಹರಿಸಿದ್ದಕ್ಕೆ ರಾಜ್ಯದಲ್ಲಿ ಆಕ್ರೋಶ ಹೆಚ್ಚಿದೆ. ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ತಮಿಳುನಾಡಿನವರು ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಸುಪ್ರೀಂಕೋರ್ಟ್ CJI ನೇತೃತ್ವದಲ್ಲಿ ಪ್ರತ್ಯೇಕ ಪೀಠ ರಚನೆ ಮಾಡಿದೆ ಎಂದು ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು, ಆಗಸ್ಟ್ 21: ಕಾವೇರಿ (Cauvery) ನದಿ ನೀರು ಹಂಚಿಕೆ ವಿಚಾರವಾಗಿ ತಮಿಳುನಾಡಿನವರು ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಸುಪ್ರೀಂಕೋರ್ಟ್ CJI ನೇತೃತ್ವದಲ್ಲಿ ಪ್ರತ್ಯೇಕ ಪೀಠ ರಚನೆ ಮಾಡಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ಹೇಳಿದರು. ನಗದರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಸುಪ್ರೀಂಕೋರ್ಟ್’ ಹೇಳಿದಂತೆ ಪೂರ್ಣ ಪ್ರಮಾಣ ನೀರು ಹರಿಸಲು ಸಾಧ್ಯವಾಗಿಲ್ಲ. ಬಿಜೆಪಿ, ಜೆಡಿಎಸ್ ನಾಯಕರು ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಈ ಹಿಂದೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕರ್ನಾಟಕ-ತಮಿಳುನಾಡಿನ ಜನ ಅಣ್ಣತಮ್ಮಂದಿರಿದ್ದಂತೆ ಎಂದು ಹೇಳಿದ್ದರು. ಅವರ ಮಾತನ್ನು ನಾವು ಫಾಲೋ ಮಾಡುತ್ತಿದ್ದೇವೆ. ನಮಗೆ ರಾಜ್ಯದ ಜನರ ಹಿತಾಸಕ್ತಿ ಮುಖ್ಯ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲು ಬುಧವಾರ ಸರ್ವಪಕ್ಷ ಸಭೆ ಕರೆದಿದ್ದೇವೆ. ಮಾಜಿ ಸಿಎಂಗಳಿಗೆ ಮತ್ತು ಸಂಸದರಿಗೆ ಸಭೆಗೆ ಆಹ್ವಾನ ಕೊಟ್ಟಿದ್ದೇವೆ. ಸಭೆಗೆ ಬಂದು ಎಲ್ಲರೂ ತಮ್ಮಮ್ಮ ಸಲಹೆ ಕೊಡಬಹುದು. ಕಾವೇರಿ, ಮಹದಾಯಿ ಯೋಜನೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ತಿಳಿಸಿದರು.
ರಾಜ್ಯದ ಸದ್ಯದ ಸ್ಥಿತಿಗತಿ, ನೀರು ಸಂಗ್ರಹದ ವಸ್ತುಸ್ಥಿತಿಯನ್ನು ಸುಪ್ರೀಂಕೋರ್ಟ್ಗೆ ಮನವರಿಕೆ ಮಾಡಲು ಸರ್ಕಾರ ಮುಂದಾಗಿತ್ತು. ಈ ಬಗ್ಗೆ ಸುಪ್ರೀಂಕೋರ್ಟ್ಗೆ ಮನವಿ ಸಲ್ಲಿಸಲು ಕ್ಯಾಬಿನೆಟ್ನಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಕಾನೂನು ಸಂಸದೀಯ ಸಚಿವ ಹೆಚ್.ಕೆ.ಪಾಟೀಲ್ ಹೇಳಿದ್ದರು.
ಸರ್ವಪಕ್ಷ ಸಭೆಗೆ ನಮಗೆ ಇನ್ನೂ ಆಹ್ವಾನ ಬಂದಿಲ್ಲ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ
ತಮಿಳುನಾಡಿಗೆ ಕೆಆರ್ಎಸ್ ಡ್ಯಾಮ್ನಿಂದ ನೀರು ಬಿಡುವ ವಿಚಾರವಾಗಿ ನಗರದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು, ರಾಜ್ಯದ ಜನತೆಗೆ, ಮೈಸೂರು ಭಾಗದ ರೈತರಿಗೆ ರಾಜ್ಯದ ಜಲಸಂಪನ್ಮೂಲ ಇಲಾಖೆ ಸಚಿವರು ಡಿಕೆ ಶಿವಕುಮಾರ್ ಉತ್ತರ ಕೊಡಲಿ. ವಿರೋಧ ಪಕ್ಷವಾಗಿ ನಾವು ಪ್ರಶ್ನೆ ಮಾಡಿದ್ದೇವೆ, ಉತ್ತರ ಕೊಡಲಿ ಎಂದು ವಾಗ್ದಾಳಿ ಮಾಡಿದ್ದಾರೆ.
ರೈತರೇ ನೇರವಾಗಿ ಹೋಗಿ ಕೋರ್ಟ್ನಲ್ಲಿ ಪ್ರಶ್ನೆ ಮಾಡಲು ಆಗುತ್ತಾ? ಈ ವಿಚಾರದಲ್ಲಿ ರಾಜಕೀಯ ಮಾಡುವ ಅವಶ್ಯಕತೆ ಇಲ್ಲ. ಕಾವೇರಿ ಜಲಾಶಯ ಪ್ರದೇಶದ ಜನತೆಯ ಒಳಿತಿಗೆ ಕೆಲಸ ಮಾಡಲಿ. ಸರ್ವಪಕ್ಷ ಸಭೆಗೆ ನಮಗೆ ಇನ್ನೂ ಆಹ್ವಾನ ಬಂದಿಲ್ಲ. ಆಹ್ವಾನ ಬಂದರೆ ಸಹಕಾರ ನೀಡುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.