ಶಾಲಾ ಪಠ್ಯದಲ್ಲಿ ಬದಲಾವಣೆ ಮಾಡುವುದು ಸಾಕಷ್ಟಿದೆ, ಹಿಂದಿನ ಸರ್ಕಾರದಲ್ಲಾದ ಅನಾಹುತ ಗೊತ್ತಿದೆ ಎಂದ ಸಾಣೇಹಳ್ಳಿಶ್ರೀ
ಶಾಲಾ ಪಠ್ಯದಲ್ಲಿ ಬದಲಾವಣೆ ಮಾಡೋದು ಇನ್ನೂ ಸಾಕಷ್ಟು ಇದೆ. ಹಿಂದಿನ ಸರ್ಕಾರವಿದ್ದ ವೇಳೆ ಏನೇನು ಅನಾಹುತವಾಗಿದೆ ಗೊತ್ತಿದೆ ಎಂದು ಬಿಜೆಪಿ ವಿರುದ್ಧ ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕಿಡಿಕಾರಿದ್ದಾರೆ.
ಬೆಂಗಳೂರು: ಶಾಲಾ ಪಠ್ಯ (Textbook) ಬದಲಾವಣೆಯಲ್ಲಿ ಹಿಂದಿನ ಸರ್ಕಾರವಿದ್ದ ವೇಳೆ ಏನೇನು ಅನಾಹುತವಾಗಿದೆ ಗೊತ್ತಿದೆ ಎಂದು ಬಿಜೆಪಿ ವಿರುದ್ಧ ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ (Sanehalli Shri) ಕಿಡಿಕಾರಿದ್ದಾರೆ. ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ನಡೆದ ವಚನ ಸಂಸ್ಕೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಲಾ ಪಠ್ಯದಲ್ಲಿ ಬದಲಾವಣೆ ಮಾಡೋದು ಇನ್ನೂ ಸಾಕಷ್ಟು ಇದೆ ಎಂದರು.
ಬಸವಣ್ಣ, ಕುವೆಂಪು ಸೇರಿದಂತೆ ಹಲವು ಪಠ್ಯಗಳಲ್ಲಿ ಏನೇನೋ ಆಗಿತ್ತು. ನಾವು ಹೇಳಿದ ಮೇಲೆ ಬಸವಣ್ಣನವರ ಪಠ್ಯ ಬದಲಾವಣೆ ಮಾಡಿದರು. ಸಿದ್ದರಾಮಯ್ಯ ಸರ್ಕಾರ ಪಠ್ಯ ಸರಿಪಡಿಸುತ್ತಾರೆ ಎಂಬ ವಿಶ್ವಾಸವಿದೆ. ಅಲ್ಲದೇ ಶಾಲಾ ಪಠ್ಯ ಪುಸ್ತಕದಲ್ಲಿ ವಚನ ಸಾಹಿತ್ಯವನ್ನು ಸೇರಿಸಬೇಕು ಎಂದು ಮನವಿ ಮಾಡಿದರು.
ಎಲ್ಲಾ ವಿದ್ಯಾರ್ಥಿಗಳು ವಚನ ಓದುವಂತಾಗಬೇಕು. ಪಠ್ಯಗಳಲ್ಲಿ ವಚನಗಳನ್ನ ಸೇರಿಸಿ ಬೇಕಾದರೆ, ನಾವು ಯಾವುದನ್ನ ಸೇರಿಸಬೇಕು ಎನ್ನುವುದನ್ನು ಪಟ್ಟಿ ಮಾಡಿಕೊಡುತ್ತೇವೆ ಎಂದು ಹೇಳಿದರು.
ಕೈಬಿಟ್ಟ ಪಠ್ಯಗಳು
ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಪಠ್ಯಪುಸ್ತಕ ಪರಿಷ್ಕರಿಸಿ ಆದೇಶ ಹೊರಡಿಸಿತ್ತು. ಅದರಂತೆಯೆ ಕೆಲ ಪಾಠಗಳನ್ನು ಸೇರಿಸುವುದರೊಂದಿಗೆ ಮತ್ತೆ ಕೆಲ ಪಾಠಗಳನ್ನು ಕೈಬಿಡಲಾಗಿತ್ತು. ಸಮಾಜ ವಿಜ್ಞಾನ ಪಠ್ಯಪುಸ್ತಕದ 9 ಪಾಠ, ಕನ್ನಡ ಭಾಷಾ ಪುಸ್ತಕದಲ್ಲಿ 9 ಪಾಠಗಳನ್ನು ಸರ್ಕಾರ ತೆಗೆದಿದೆ.
ಆರ್ಎಸ್ಎಸ್ ಸ್ಥಾಪಕ ಕೇಶವ್ ಹೆಡ್ಗೇವಾರ್ ಅವರು ಬರೆದಿದ್ದ “ನಿಜವಾದ ಆದರ್ಶಪುರುಷ ಯಾರಾಗಬೇಕು” ಪಠ್ಯ, ಚಕ್ರವರ್ತಿ ಸೂಲಿಬೆಲೆಯವರು ಬರೆದಿದ್ದ ತಾಯಿ ಭಾರತಿಯ ಅಮರ ಪುತ್ರರು ಪಾಠವನ್ನು ಕೈ ಬಿಡಲಾಗಿದೆ.
ಇದನ್ನೂ ಓದಿ: ಪಠ್ಯಪುಸ್ತಕ ಪರಿಷ್ಕರಣೆ ವಿವಾದ: ಶಿಕ್ಷಣ ಸಚಿವ ಬಿಸಿ ನಾಗೇಶ್ಗೆ ಸಿದ್ದರಾಮಯ್ಯರಿಂದ ಪ್ರಶ್ನೆಗಳ ಸುರಿಮಳೆ
ಶತಾವಧಾನಿ ಆರ್ ಗಣೇಶ್ ಅವರ ‘ಶ್ರೇಷ್ಠ ಭಾರತೀಯ ಚಿಂತನೆಗಳು’, ನಿರ್ಮಲಾ ಸುರತ್ಕಲ್, ರಮಾನಂದ ಆಚಾರ್ಯರ, ಪಾರಂಪಳ್ಳಿ ನರಸಿಂಹ ಐತಾಳ, ಲಕ್ಷ್ಮೀಶ, ಕೆಟಿ ಗಟ್ಟಿ ಪಾಠ ಮತ್ತು ಪಿ ಸತ್ಯನಾರಾಯಣ ಭಟ್ಟರ ಗದ್ಯವನ್ನು ತೆಗೆದು ಹಾಕಲಾಗಿದೆ.
ಸೇರ್ಪಡೆ ಮಾಡಿದ ಪಠ್ಯಗಳು
ಸಾವಿತ್ರಿಬಾಯಿ ಫುಲೆ, ಜವಹರಲಾಲ್ ನೆಹರು, ಡಾ. ಬಿಆರ್ ಅಂಬೇಡ್ಕರ್, ಸುಕುಮಾರಸ್ವಾಮಿ, ಸಾರಾ ಅಬೂಬ್ಕರ್, ವಿಜಯಮಾಲಾ ರಂಗನಾಥ್ ಅವರ ಪಾಠಗಳನ್ನು ಸೇರಿಸಲಾಗಿದೆ. ವಾಲ್ಮೀಕಿ ಮಹರ್ಷಿ, ಉರುಸ್ಗಳಲ್ಲಿ ಭಾವೈಕ್ಯತೆ ಪಾಠಗಳನ್ನು ಸೇರಿಸಲಾಗಿದೆ.
ಸಮಾಜ ವಿಜ್ಞಾನ ವಿಷಯದ ಪಠ್ಯದಲ್ಲೂ ಹಲವು ಅಧ್ಯಾಯಗಳನ್ನು ಸೇರ್ಪಡೆ ಮಾಡಲಾಗಿದೆ. ‘ವೇದ ಕಾಲದ ಸಂಸ್ಕೃತಿ, ಹೊಸ ಧರ್ಮಗಳ ಉದಯ, ಮಿರ್ಜಾ ಇಸ್ಮಾಯಿಲ್, ಸರ್ ಎಂ ವಿಶ್ವೇಶ್ವರಯ್ಯ, ಒಡೆಯರ್’ ಕುರಿತ ಪಾಠಗಳನ್ನು ಸೇರಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.