ಬೆಂಗಳೂರು, (ಫೆಬ್ರವರಿ 21): ಮಾಜಿ ಸಂಸದ ಮುದ್ದಹನುಮೇಗೌಡ (muddahanumegowda) ಅವರನ್ನು ಕಾಂಗ್ರೆಸ್ಗೆ (Congress) ಸೇರಿಸಿಕೊಳ್ಳಲು ನಾಯಕರು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಬಿಜೆಪಿ ತೊರೆದು ವಾಪಸ್ ಮಾತೃ ಪಕ್ಷ ಕಾಂಗ್ರೆಸ್ ಸೇರ್ಪಡೆಗೆ ಮುದ್ದಹನುಮೇಗೌಡ ಹಲವು ದಿನಗಳಿಂದ ಕಸರತ್ತು ನಡೆಸಿದ್ದರು. ಆದ್ರೆ, ತುಮಕೂರು ಜಿಲ್ಲೆಯ ಕೆಲ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಮುದ್ದಹನುಮೇಗೌಡ ಅವರ ಸೇರ್ಪಡೆಗೆ ಕಾಂಗ್ರೆಸ್ ನಾಯಕರಲ್ಲೇ ಹಗ್ಗಜಗ್ಗಾಟ ನಡೆದಿದ್ದು, ಇದೀಗ ಅಂತಿಮವಾಗಿ ಮುದ್ದಹನುಮೇಗೌಡ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಒಪ್ಪಿಗೆ ಸೂಚಿಸಿದ್ದಾರೆ. ಇದರಿಂದ ಮುದ್ದಹನುಮೇಗೌಡ ಅವರು ನಾಳೆ(ಫೆಬ್ರವರಿ 22) ಸಂಜೆ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗುವ ಸಾಧ್ಯತೆಗಳಿವೆ.
ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar), ಸಿಎಂ ಸಿದ್ದರಾಮಯ್ಯ(Siddaramaiah), ಸಚಿವರಾದ ಜಿ.ಪರಮೇಶ್ವರ್, ಕೆ ಎನ್ ರಾಜಣ್ಣ ಸಮ್ಮುಖದಲ್ಲಿ ಮುದ್ದಹನುಮೇಗೌಡ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಇತ್ತ ತುಮಕೂರು ಕಾಂಗ್ರೆಸ್ ಅಭ್ಯರ್ಥಿ ಸುಳಿವು ನೀಡಿದ ಸಚಿವ, ಅತ್ತ ಖರ್ಗೆ ಭೇಟಿಯಾದ ಬಿಜೆಪಿ ನಾಯಕ
2019ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್, ಕಾಂಗ್ರೆಸ್ ಮೈತ್ರಿಯಾಗಿದ್ದರಿಂದ ತುಮಕೂರು ಕ್ಷೇತ್ರ ಜೆಡಿಎಸ್ ಪಾಲಾಗಿತ್ತು. ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಎಚ್ಡಿ ದೇವೇಗೌಡ ಅವರು ಕಣಕ್ಕಿಳಿದಿದ್ದರು. ಇದರಿಂದ ಹಾಲಿ ಸಂಸದರಾಗಿದ್ದ ಮುದ್ದಹನುಮೇಗೌಡ ಅಸಮಾಧಾನಗೊಂಡು ಬಿಜೆಪಿ ಸೇರ್ಪಡೆಯಾಗಿದ್ದರು. ಆದ್ರೆ, 2023ರ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿಯಲ್ಲೂ ಟಿಕೆಟ್ ವಂಚಿತರಾಗಿದ್ದರು. ಹೀಗಾಗಿ ಈ ಬಾರಿ ತುಮಕೂರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ನತ್ತ ಮುಖಮಾಡಿದ್ದಾರೆ.
ಕೆಎನ್ ರಾಜಣ್ಣ ಅವರು ಮುದ್ದಹನುಮೇಗೌಡ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ಮುಂದಾಗಿದ್ದರು. ಅದರಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಸಹ ಮನವೊಲಿಸಿದ್ದರು. ಆದ್ರೆ, ಟಿಬಿ ಜಯಚಂದ್ರ ಸೇರಿದಂತೆ ಇನ್ನು ಕೆಲ ತುಮಕೂರು ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಮುದ್ದಹನುಮೇಗೌಡ ಅವರು ಸಚಿವ ಪರಮೇಶ್ವರ್ ಅವರ ದುಂಬಾಲು ಬಿದ್ದಿದ್ದರು. ಅಲ್ಲದೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಪಕ್ಷಕ್ಕೆ ಸೇರಿಸಿಕೊಳ್ಳುವಂತೆ ಮನವಿ ಮಾಡಿದ್ದರು. ಇದೀಗ ಅಂತಿಮವಾಗಿ ಮುದ್ದಹನುಮೇಗೌಡ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಒಪ್ಪಿಗೆ ಸೂಚಿಸಿದ್ದಾರೆ.
ಇನ್ನು ಮೂಲಗಳ ಪ್ರಕಾರ ತುಮಕೂರಿನಲ್ಲಿ ಕಾಂಗ್ರೆಸ್ನಿಂದ ಮುದ್ದಹನುಮೇಗೌಡ ಅವರನ್ನೇ ಕಣಕ್ಕಿಳಿಸುವ ಬಗ್ಗೆಯೂ ಚರ್ಚೆಯಾಗಿದೆ. ಮತ್ತೊಂದೆಡೆ ದೆಹಲಿ ಪ್ರತಿನಿಧಿ ಟಿಬಿ ಜಯಚಂದ್ರ ಅವರ ಹೆಸರುಗಳು ಸಹ ಕೇಳಿಬರುತ್ತಿದ್ದು, ಅಂತಿಮವಾಗಿ ಹೈಕಮಾಂಡ್ ಯಾರಿಗೆ ಮಣೆ ಹಾಕುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ