ದೆಹಲಿ: ಮಹಾರಾಷ್ಟ್ರ ವಿಧಾನಸಭೆಯಲ್ಲಿ ಅಲ್ಪಮತಕ್ಕೆ ಕುಸಿದಿರುವ ಶಿವಸೇನಾದ ಉದ್ಧವ್ ಠಾಕ್ರೆ (Uddhav Thackeray) ಬಣ, ಪಕ್ಷದ ಸಂಸದರ ಬಂಡಾಯದ ಭೀತಿಯಿಂದ ಲೋಕಸಭೆಗೆ (Lok Sabha) ನೂತನ ಮುಖ್ಯ ಸಚೇತಕರನ್ನು ನೇಮಿಸಿದೆ. ಪಕ್ಷದ ಹಿರಿಯ ನಾಯಕ ಸಂಜಯ್ ರಾವುತ್ ಅವರು ಬುಧವಾರ ಲೋಕಸಭೆ ಸ್ಪೀಕರ್ಗೆ ಪತ್ರ ಬರೆದಿದ್ದು, ಭಾವನಾ ಗಾವ್ಲಿ ಅವರ ಸ್ಥಾನಕ್ಕೆ ರಾಜನ್ ವಿಚಾರೆ ಅವರನ್ನು ಮುಖ್ಯ ಸಚೇತಕರನ್ನಾಗಿ ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ. ಲೋಕಸಭೆಯಲ್ಲಿ 19 ಮತ್ತು ರಾಜ್ಯಸಭೆಯಲ್ಲಿ ಮೂರು ಸದಸ್ಯರನ್ನು ಹೊಂದಿರುವ ಶಿವಸೇನಾಗೆ ಸಂಸದರ ಬಂಡಾಯ ದೊಡ್ಡ ನಷ್ಟವನ್ನುಂಟು ಮಾಡಿದೆ. ಕಳೆದ ತಿಂಗಳು ಏಕನಾಥ್ ಶಿಂಧೆ (Eknath Shinde) ಅವರ ಬಂಡಾಯದ ನಂತರ, ಉದ್ಧವ್ ಠಾಕ್ರೆ ಅವರು ತಮ್ಮ 55 ಶಾಸಕರ ಪೈಕಿ 40 ಶಾಸಕರನ್ನು ಕಳೆದುಕೊಂಡರು. ಇದರಿಂದಾಗಿ ರಾಜ್ಯದಲ್ಲಿ ಅಧಿಕಾರವನ್ನು ಕಳೆದುಕೊಳ್ಳಬೇಕಾಯಿತು.
ಕಳೆದ ವಾರ ಉದ್ಧವ್ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದರು. ಒಂದು ದಿನದ ನಂತರ, ಶಿಂಧೆ ಬಣ ಅಧಿಕೃತವಾಗಿ ಬಿಜೆಪಿಯೊಂದಿಗೆ ಕೈಜೋಡಿಸಿತು ಮತ್ತು ಸರ್ಕಾರ ರಚಿಸಲು ಹಕ್ಕು ಸಾಧಿಸಿತು. ಸೋಮವಾರ ವಿಧಾನಸಭೆಯಲ್ಲಿ ನಡೆದ ವಿಶ್ವಾಸ ಮತ ಯಾಚನೆಯಲ್ಲಿ, 288 ಸದಸ್ಯರ ವಿಧಾನಸಭೆಯಲ್ಲಿ ಏಕನಾಥ್ ಶಿಂಧೆ ಪಾಳಯವು 164 ಮತಗಳನ್ನು ಪಡೆದು ಬಹುಮತ ಸಾಬೀತು ಮಾಡಿತು. ಹೊಸ ಮೈತ್ರಿಕೂಟವು ಈಗಾಗಲೇ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸ್ಪೀಕರ್ ಮತ್ತು ಮುಖ್ಯ ಸಚೇತಕರನ್ನು ಆಯ್ಕೆ ಮಾಡಿದೆ. ವಿಧಾನಸಭೆಯಲ್ಲಿ ವಿಶ್ವಾಸ ಮತದ ವೇಳೆ ವಿಪ್ ಧಿಕ್ಕರಿಸಿದ ಠಾಕ್ರೆ ತಂಡದ ಶಾಸಕರನ್ನು ಅನರ್ಹಗೊಳಿಸುವಂತೆಯೂ ಇವರು ಮನವಿ ಮಾಡಿದ್ದಾರೆ.
ಮೂರನೇ ಎರಡರಷ್ಟು ಬಹುಮತದ ಆಧಾರದ ಮೇಲೆ ತಮ್ಮ ಬಣವೇ ನಿಜವಾದ ಶಿವಸೇನಾ ಎಂದು ಶಿಂಧೆ ಹೇಳಿಕೊಂಡಿದ್ದಾರೆ. ಸುಪ್ರೀಂಕೋರ್ಟ್ನಲ್ಲಿ ಮೊದಲು ಹಕ್ಕು ಮಂಡಿಸಿದ ಅವರು, ಉದ್ಧವ್ ಠಾಕ್ರೆ ಅವರು ಅಧಿಕಾರಕ್ಕೆ ಅಂಟಿಕೊಳ್ಳಲು ಪ್ರಯತ್ನಿಸುತ್ತಿರುವ “ಹತಾಶ ಅಲ್ಪಸಂಖ್ಯಾತರ” ನಾಯಕ ಎಂದು ಹೇಳಿದ್ದಾರೆ.
ಆದಾಗ್ಯೂ, ಶಾಸಕರ ದಂಗೆಯ ಹೊರತಾಗಿಯೂ ಠಾಕ್ರೆ ಅವರಿಗೆ ಇನ್ನೂ ತಳಮಟ್ಟದ ಕಾರ್ಯಕರ್ತರು ಮತ್ತು ಜನರ ಬೆಂಬಲವಿದೆ ಎಂದು ಭಾವಿಸಲಾಗಿದೆ.
Published On - 8:36 pm, Wed, 6 July 22