ಸುದ್ದಿ ವಿಶ್ಲೇಷಣೆ: ಮಂತ್ರಿಗಿರಿ ಇಲ್ಲದ ಜಾರಕಿಹೊಳಿ ಕುಟುಂಬದಿಂದ ಬಿಜೆಪಿ ಸರಕಾರ ಕೆಡವಲು ಸಾಧ್ಯವೇ?

2006 ರಿಂದ ಜಾರಕಿಹೊಳಿ ಕುಟುಂಬದ ಒಬ್ಬರಲ್ಲ ಒಬ್ಬರು ಬೇರೆ ಬೇರೆ ಸರಕಾರದಲ್ಲಿ ಮಂತ್ರಿ ಆಗಿ ಇದ್ದಾರೆ. ಈಗ ತಮ್ಮ ಕುಟುಂಬದ ಮೇಲೆ ಬಂದ ಕಪ್ಪು ಚುಕ್ಕೆಗೆ ಬದಲಾಗಿ ಹಗೆ ತೀರಿಸಿಕೊಳ್ಳಲು ಸರಕಾರ ಬೀಳಿಸುವ ತಂತ್ರಗಾರಿಕೆಗೆ ಅವರು ಹೋಗಲಾರರು. ಅದಕ್ಕೆ ಕಾರಣ ಇಲ್ಲಿದೆ ನೋಡಿ.

  • TV9 Web Team
  • Published On - 15:04 PM, 5 Mar 2021
ಸುದ್ದಿ ವಿಶ್ಲೇಷಣೆ: ಮಂತ್ರಿಗಿರಿ ಇಲ್ಲದ ಜಾರಕಿಹೊಳಿ ಕುಟುಂಬದಿಂದ ಬಿಜೆಪಿ ಸರಕಾರ ಕೆಡವಲು ಸಾಧ್ಯವೇ?
ರಮೇಶ್​ ಜಾರಕಿಹೊಳಿ, ಬಿ.ಎಸ್​.ಯಡಿಯೂರಪ್ಪ

ರಮೇಶ ಜಾರಕಿಹೊಳಿ ಅವರ ಖಾಸಗೀ ಸಿಡಿ ಆಧರಿಸಿ ನಡೆಯುತ್ತಿರುವ ರಾಜಕೀಯ ವಿದ್ಯಮಾನ ಮುಂದೆ ಎಲ್ಲಿಗೆ ಹೋಗಿ ಮುಟ್ಟುತ್ತೆ ಎನ್ನುವುದನ್ನು ಈಗ ಹೇಳಲಾಗದಿದ್ದರೂ ಈ ಬೆಳವಣಿಗೆಯನ್ನಿಟ್ಟುಕೊಂಡು ಜಾರಕಿಹೊಳಿ ಕುಟುಂಬ ಬಿಜೆಪಿ ಸರಕಾರವನ್ನೇ ಉರುಳಿಸಬಹುದು ಎಂಬ ಚರ್ಚೆ ಎಲ್ಲ ಕಡೆ ಪ್ರಾರಂಭವಾಗಿದೆ. ಅದು ನಿಜವೇ? ಎನ್ನುವುದನ್ನು ನೋಡುವ ಮೊದಲು ಈ ಚರ್ಚೆ ನಡೆಯಲು ಏನೇನು ಕಾರಣವಿದೆ ಎನ್ನುವುದನ್ನು ನೋಡೋಣ. ರಮೇಶ ಜಾರಕಿಹೊಳಿ ಅವರಿಗೆ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಮತ್ತು ಅವರ ಕುಟುಂಬದ ಮೇಲೆ ಸಿಟ್ಟಿತ್ತು. ಹಾಗಾಗಿ ಅವರನ್ನು ತೆಗೆಯಲೇ ಬೇಕೆಂದು ಅವರು ಪಣ ತೊಟ್ಟಿದ್ದರು. ಈ ಉದ್ದೇಶವಿಟ್ಟುಕೊಂಡು ಅವರು ಪದೇ ಪದೇ ದೆಹಲಿಗೆ ಹೋಗಿ ಪಕ್ಷದ ಕೇಂದ್ರ ನಾಯಕರನ್ನು ಭೇಟಿ ಮಾಡಿ ನಾಯಕತ್ವ ಬದಲಾವಣೆಗೆ ತಂತ್ರ ಹೆಣೆಯುತ್ತಿದ್ದರು. ಅದಕ್ಕೆ ಸಾಕ್ಷಿ ಏನು? ಈಗ ಬಿಡುಗಡೆ ಆಗಿರುವ ಸಿಡಿಯಲ್ಲಿ ರಮೇಶ ಜಾರಕಿಹೊಳಿ ಅವರು ಮಾತನಾಡಿದ್ದು ಇದೆ. ಆ ಪ್ರಕಾರ, ರಮೇಶ ಜಾರಕಿಹೊಳಿ ಅವರು ಯಡಿಯೂರಪ್ಪ ಭ್ರಷ್ಟ ಮತ್ತು ಸಿದ್ದರಾಮಯ್ಯ ಒಳ್ಳೆಯವರು. ಇದೇ ಹೇಳಿಕೆ ಅಥವಾ ಮಾತನ್ನಿಟ್ಟುಕೊಂಡು ಕಾಂಗ್ರೆಸ್ಸಿನ ಕೆಲವರು ಮತ್ತು ತುಂಬಾ ಜನ ರಾಜಕೀಯ ಪಂಡಿತರು ಈ ಲೆಕ್ಕಾಚಾರಕ್ಕೆ ಇಳಿದಿದ್ದು ನಿಜ.

ಸರಕಾರ ಕೆಡವಲು ಸಾಧ್ಯವೇ?
ಜಾರಕಿಹೊಳಿ ಕುಟುಂಬ ಇಲ್ಲಿವರೆಗೆ ಆಡಿರುವ ರಾಜಕೀಯವನ್ನು ವಿಶ್ಲೇಷಿಸಿದರೆ ಒಂದು ಅಂಶ ಸ್ಪಷ್ಟವಾಗುತ್ತದೆ: ಅವರು ಅಧಿಕಾರದಿಂದ ದೂರ ಇದ್ದು ರಾಜಕೀಯ ಮಾಡುವ ಕುಟುಂಬವಲ್ಲ. ಅದಕ್ಕೇ ಅವರ ಕುಟುಂಬದವರು ಎಲ್ಲಾ ಪಕ್ಷದಲ್ಲೂ ಇದ್ದಾರೆ. ಹಾಗಾಗಿ ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಅವರ ಕುಟುಂಬಕ್ಕೆ ಅಧಿಕಾರದಿಂದ ದೂರ ಇರುವ ಅನುಭವ ಆಗುವುದಿಲ್ಲ. ಹೆಚ್ಚು ಕಡಿಮೆ 2006 ರಿಂದ ಆ ಕುಟುಂಬದ ಒಬ್ಬರಲ್ಲ ಒಬ್ಬರು, ಬೇರೆ ಬೇರೆ ಪಕ್ಷದ ಸರಕಾರದ ಸಂಪುಟದಲ್ಲಿ ಅಧಿಕಾರದಲ್ಲಿ ಇದ್ದಾರೆ. ಅಧಿಕಾರ ಅನುಭವಿಸಿದ್ದಾರೆ. ಇದನ್ನ ನೋಡಿದರೆ ಗೊತ್ತಾಗುತ್ತೆ, ಅವರು ಅಧಿಕಾರದಿಂದ ದೂರ ಇರಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಕೆಲವು ತಿಂಗಳು ಯಾರೂ ಅಧಿಕಾರದಲ್ಲಿ ಇರಲಿಲ್ಲ.
ರಮೇಶ್ ಜಾರಕಿಹೊಳಿ ಕಾಂಗ್ರೆಸ್​ ಬಿಡುವುದಕ್ಕಿಂತ ಮೊದಲು ಅವರು ಸಮ್ಮಿಶ್ರ ಸರಕಾರದಲ್ಲಿ ಇದ್ದರು. ಆಗ ತನಗೆ ಡಿ.ಕೆ. ಶಿವಕುಮಾರ್​ ಅವರ ಕೈನಲ್ಲಿ ಇದ್ದ ಭಾರಿ ಮತ್ತು ಮಧ್ಯಮ ನೀರಾವರಿ ಖಾತೆ ತನಗೆ ಬೇಕೆಂದು ಹಠ ಹಿಡಿದಿದ್ದರು. ಆದರೆ ಆಗ ಅವರಿಗೆ ಕಾಂಗ್ರೆಸ್​ ಪಕ್ಷ ಸೊಪ್ಪು ಹಾಕಿರಲಿಲ್ಲ. ಒಂದು ಬಾರಿ ಪ್ರಯತ್ನ ಮಾಡಿ ಕೈ ಸುಟ್ಟುಕೊಂಡಿದ್ದ ಅವರು ಆ ಪ್ರಯತ್ನ ಬಿಟ್ಟಿದ್ದರು. ಕೊನೆಗೆ ಬಿಜೆಪಿ ನಾಯಕರ ಸಂಘಟಿತ ಪ್ರಯತ್ನ ಶುರುವಾದಾಗ ಜೊತೆಯಾದ ರಮೇಶ್​ ಜಾರಕಿಹೊಳಿ ಸರಕಾರ ಬರುವಲ್ಲಿ ಎಲ್ಲ ಪ್ರಯತ್ನ ಮಾಡಿದರು ಮತ್ತು ಮುಂದೆ ಅದೇ ಭಾರೀ ನೀರಾವರಿ ಖಾತೆ ತೆಗೆದುಕೊಂಡರು.

ಈಗ ಸದ್ಯಕ್ಕೆ ಅವರ ಕುಟುಂಬದವರು ಯಾರೂ ಸಂಪುಟದಲ್ಲಿ ಇಲ್ಲ. ಆದರೆ ಅವರ ತಮ್ಮ ಬಾಲಚಂದ್ರ ಕೆಎಂ​ಎಫ್​ ಅಧ್ಯಕ್ಷರಾಗಿದ್ದಾರೆ. ಕೆಲವು ಬಿಜೆಪಿ ನಾಯಕರು ಹೇಳುವಂತೆ, ರಮೇಶ್ ಜಾರಕಿಹೊಳಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರನ್ನು ತೆಗೆಯಲೇ ಬೇಕು ಎಂದು ಛಲ ತೊಟ್ಟು  ಓಡಾಡುತ್ತಿದ್ದರು. ಈಗ ಮಂತ್ರಿಗಿರಿ ಕಳೆದುಕೊಂಡು ಕುಳಿತಿರುವಾಗ ಸರಕಾರ ಕೆಡವಬಹುದಲ್ಲ? ಹಾಗೆ ಮಾಡಲು ಹೋದರೆ ಏನಾಗುತ್ತೆ? ಮೊದಲನೆಯದಾಗಿ ಇದರಿಂದ ಯಡಿಯೂರಪ್ಪ ಅವರಿಗೆ ಇನ್ನೂ ಸಿಟ್ಟು ಬರುವುದು ಸಹಜ. ಆಗ ಅವರು, ಪೊಲೀಸ್ ಮತ್ತು ಇತರೇ ಏಜೆನ್ಸಿಗಳ ಮೂಲಕ ಈ ಸಿಡಿ ಹಿಂದೆ ಯಾರಿದ್ದಾರೆ ಎಂಬುದನ್ನು ಕಂಡುಕೊಳ್ಳುವ ತನಿಖೆಯನ್ನು ನಿಧಾನಗೊಳಿಸಬಹುದು. ಅದು ಜಾರಕಿಹೊಳಿ ಅವರಿಗೆ ಮತ್ತು ಅವರ ಕುಟುಂಬಕ್ಕೆ ಜಾಸ್ತಿ ಹೊಡೆತ ನೀಡುವುದು ಖಂಡಿತ. ಅಷ್ಟೇ ಅಲ್ಲ, ಸರಕಾರ ಕೆಡವಲು ಕೈ ಹಾಕಿದರೆ ಬಿಜೆಪಿ ರಾಷ್ಟ್ರೀಯ ನಾಯಕರ ಜೊತೆ ಇತ್ತೀಚೆಗೆ ಬೆಳೆಸಿಕೊಂಡಿದ್ದ ಉತ್ತಮ ಸಂಪರ್ಕ ರಮೇಶ್​ ಮತ್ತು ಬಾಲಚಂದ್ರ ಅವರ ಪಾಲಿಗೆ ಮುಗಿದೇ ಹೋಗುತ್ತದೆ. ಇದರ ಪರಿಣಾಮ ಏನು ಎನ್ನುವುದು ಅವರಿಗೂ ಗೊತ್ತು. ಹಾಗಾಗಿ ಸರಕಾರ ಉರುಳಿಸುವ ಕೆಲಸಕ್ಕೆ ಕೈ ಹಾಕಲ್ಲ ಎಂದು ಜಾರಕಿಹೊಳಿ ಕುಟುಂಬವನ್ನು ಹತ್ತಿರದಿಂದ ನೋಡಿರುವ ಮೂಲಗಳು ತಿಳಿಸಿವೆ.

ಇದನ್ನೂ ಓದಿ:
ರಾಜಕೀಯ ವಿಶ್ಲೇಷಣೆ | ರಮೇಶ್ ಜಾರಕಿಹೊಳಿ ಸಿಡಿ ಬಿಡುಗಡೆ ಹಿಂದಿದೆ ಹಲವು ಲೆಕ್ಕಾಚಾರ: ‘ಸಾಹುಕಾರ’ನ ಮುಂದಿನ ನಡೆ ನಿಗೂಢ

ವಿಡಿಯೋ ಸಾಕ್ಷ್ಯ ಸಾಕಾಗಲ್ಲ, ದಾರೀಲಿ ಹೋಗುವವರು ದೂರು ಕೊಟ್ರೆ FIR ಹಾಕೋಕೆ ಆಗಲ್ಲ; ಜಾರಕಿಹೊಳಿ ಪರ​ ವಕೀಲ ರಮೇಶ್ ಬ್ಯಾಟಿಂಗ್