ತಮಿಳುನಾಡು ವಿಧಾನಸಭಾ ಚುನಾವಣೆ: ಎಐಎಡಿಎಂಕೆ ಮೊದಲ ಪಟ್ಟಿ ಪ್ರಕಟ, ಸಿಎಂ ಪಳನಿಸ್ವಾಮಿ ಎಡಪ್ಪಾಡಿಯಿಂದ ಸ್ಪರ್ಧೆ
Tamilnadu Elections: ಸೇಲಂ ಜಿಲ್ಲೆಯ ಎಡಪ್ಪಾಡಿ ಕ್ಷೇತ್ರದಿಂದ ಮುಖ್ಯಮಂತ್ರಿ ಪಳನಿಸ್ವಾಮಿ, ತೇನಿ ಜಿಲ್ಲೆಯ ಬೋಡಿನಯಾಕ್ಕನೂರ್ ಕ್ಷೇತ್ರದಿಂದ ಉಪಮುಖ್ಯಮಂತ್ರಿ ಓ.ಪನ್ನೀರ್ಸೆಲ್ವಂ ಮತ್ತು ರಾಯಪುರಮ್ ಕ್ಷೇತ್ರದಿಂದ ಸಚಿವ ಜಯಕುಮಾರ್ ಸ್ಪರ್ಧಿಸಲಿದ್ದಾರೆ.
ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಗೆ ಆಡಳಿತಾರೂಢ ಎಐಎಡಿಎಂಕೆ ಪಕ್ಷದ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಮೊದಲ ಪಟ್ಟಿಯಲ್ಲಿ ಆರು ಪ್ರಭಾವಿ ನಾಯಕರ ಕ್ಷೇತ್ರಗಳನ್ನು ಅಂತಿಮಗೊಳಿಸಲಾಗಿದೆ. ಶಶಿಕಲಾ ರಾಜಕೀಯ ನಿವೃತ್ತಿ ಘೋಷಣೆಯ ನಂತರ ತಮಿಳುನಾಡು ರಾಜಕಾರಣ ದೇಶದ ಗಮನ ಸೆಳೆದಿತ್ತು. ಶಶಿಕಲಾ ನಿರ್ಧಾರ ಎಐಎಡಿಎಂಕೆ-ಬಿಜೆಪಿ ಮೈತ್ರಿಕೂಟದ ಹಿತಕ್ಕೆ ಪೂರಕವಾಗಬಹುದು ಎಂಬ ವಿಶ್ಲೇಷಣೆಗಳು ಚಾಲ್ತಿಗೆ ಬಂದಿದ್ದವು.
ಸೇಲಂ ಜಿಲ್ಲೆಯ ಎಡಪ್ಪಾಡಿ ಕ್ಷೇತ್ರದಿಂದ ಮುಖ್ಯಮಂತ್ರಿ ಪಳನಿಸ್ವಾಮಿ, ತೇನಿ ಜಿಲ್ಲೆಯ ಬೋಡಿನಯಾಕ್ಕನೂರ್ ಕ್ಷೇತ್ರದಿಂದ ಉಪಮುಖ್ಯಮಂತ್ರಿ ಓ.ಪನ್ನೀರ್ಸೆಲ್ವಂ ಸ್ಪರ್ಧಿಸಲಿದ್ದಾರೆ.
ಮೀನುಗಾರಿಕೆ ಸಚಿವ ಡಿ.ಜಯಕುಮಾರ್ ರಾಯಪುರಂ ಕ್ಷೇತ್ರದಿಂದ ಮತ್ತು ಮತ್ತು ಕಾನೂನು ಸಚಿವ ಸಿ.ವಿ.ಷಣ್ಮುಗಂ ಉತ್ತರ ತಮಿಳುನಾಡಿನ ವಿಲ್ಲುಪುರಂ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಶಾಸಕರಾದ ಎಸ್.ಪಿ.ಷಣ್ಮುಗನಾಥನ್ ಮತ್ತು ಎಸ್.ತೆನ್ಮೊಳಿ ಅವರಿಗೆ ಕ್ರಮವಾಗಿ ಶ್ರೀವೈಕುಂಠಂ ಮತ್ತು ನಿಲಕ್ಕೋಟಿ (ಮೀಸಲು) ಕ್ಷೇತ್ರಗಳನ್ನು ಘೋಷಿಸಲಾಗಿದೆ.
Tamil Nadu assembly elections: AIADMK releases the first list of six candidates; CM Edappadi K Palaniswami to contest from Edappadi and Deputy CM to contest from Bodinayakanur pic.twitter.com/5abWMjLCDj
— ANI (@ANI) March 5, 2021
ತಮಿಳುನಾಡಿನಲ್ಲಿ ಏಪ್ರಿಲ್ 6ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ.
ಶಶಿಕಲಾ ರಾಜಕೀಯ ನಿವೃತ್ತಿ ಘೋಷಣೆ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಅತ್ಯಾಪ್ತ ಗೆಳತಿಯಾಗಿದ್ದ ವಿ.ಕೆ.ಶಶಿಕಲಾ ಬುಧವಾರ (ಮಾರ್ಚ್ 3) ಸಕ್ರಿಯ ರಾಜಕಾರಣದಿಂದ ನಿವೃತ್ತರಾಗುವುದಾಗಿ ಘೋಷಿಸಿದ್ದರು. ತಮಿಳುನಾಡು ವಿಧಾನಸಭೆ ಚುನಾವಣೆಗೆ ಸುಮಾರು 30 ದಿನ ಬಾಕಿಯಿರುವಾಗ ಈ ಘೋಷಣೆ ಹೊರಬಿದ್ದಿರುವುದು ಆಡಳಿತಾರೂಢ ಎಐಎಡಿಎಂಕೆಯ ಕೆಲ ನಾಯಕರಿಗೆ ನೆಮ್ಮದಿ ತಂದಿತ್ತು. ಆದರೆ ಶಶಿಕಲಾ ಬೆಂಬಲಿಗರಲ್ಲಿ ‘ಚಿನ್ನಮ್ಮ’ನ ಈ ಹಠಾತ್ ನಿರ್ಧಾರ ಅಚ್ಚರಿ ಮೂಡಿಸಿತ್ತು.
ರಾಜಕೀಯ ನಿವೃತ್ತಿಯ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದ ಶಶಿಕಲಾ ‘ನಾನು ಅಧಿಕಾರ ಅಥವಾ ಹುದ್ದೆಗಾಗಿ ಎಂದೂ ಹಾತೊರೆಯಲಿಲ್ಲ. ಎಐಎಡಿಎಂಕೆ ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮಿಸಿ, ಡಿಎಂಕೆಯನ್ನು ಅಧಿಕಾರದಿಂದ ದೂರ ಇಡಬೇಕು. ಅಮ್ಮನ (ಜಯಲಲಿತಾ) ಸುವರ್ಣ ಆಡಳಿತವನ್ನು ಮರುಸ್ಥಾಪಿಸಬೇಕು’ ಎಂದು ಶಶಿಕಲಾ ಪತ್ರದಲ್ಲಿ ಕರೆನೀಡಿದ್ದರು.
ಇದನ್ನೂ ಓದಿ: ಸಕ್ರಿಯ ರಾಜಕಾರಣಕ್ಕೆ ಶಶಿಕಲಾ ನಟರಾಜನ್ ಗುಡ್ ಬೈ: ತಮಿಳುನಾಡು ರಾಜಕಾರಣದಲ್ಲಿ ಅಚ್ಚರಿಯ ಬೆಳವಣಿಗೆ
Published On - 3:00 pm, Fri, 5 March 21