ರಾಜಕೀಯ ವಿಶ್ಲೇಷಣೆ | ರಮೇಶ್ ಜಾರಕಿಹೊಳಿ ಸಿಡಿ ಬಿಡುಗಡೆ ಹಿಂದಿದೆ ಹಲವು ಲೆಕ್ಕಾಚಾರ: ‘ಸಾಹುಕಾರ’ನ ಮುಂದಿನ ನಡೆ ನಿಗೂಢ

ರಮೇಶ್​ ಜಾರಕಿಹೊಳಿ ರಾಜೀನಾಮೆ ಕೊಟ್ಟ ಬೆನ್ನಲ್ಲೇ ಚರ್ಚೆ ನಡೆಯುತ್ತಿರುವ ವಿಷಯ- ಇದನ್ನು ಯಾರು ಮಾಡಿಸಿರಬಹುದು? ‘ಇಬ್ಬರು ವಿರೋಧ ಪಕ್ಷದ ನಾಯಕರು ಈ ಬೆಳವಣಿಗೆಯ ಹಿಂದಿದ್ದಾರೆ’ ಎಂದು ಮೂಲಗಳು ಹೇಳುತ್ತವೆ. ಬಿಡುಗಡೆಯಾದ ಒಂದು ಸಿಡಿಯಿಂದ ಎಷ್ಟು ಹಕ್ಕಿಗಳನ್ನು ಇವರು ಹೊಡೆದರು?

  • ಭಾಸ್ಕರ ಹೆಗಡೆ / ಸಹದೇವ ಮಾನೆ
  • Published On - 22:25 PM, 4 Mar 2021
ರಾಜಕೀಯ ವಿಶ್ಲೇಷಣೆ | ರಮೇಶ್ ಜಾರಕಿಹೊಳಿ ಸಿಡಿ ಬಿಡುಗಡೆ ಹಿಂದಿದೆ ಹಲವು ಲೆಕ್ಕಾಚಾರ: ‘ಸಾಹುಕಾರ’ನ ಮುಂದಿನ ನಡೆ ನಿಗೂಢ
ರಮೇಶ್ ಜಾರಕಿಹೊಳಿ

ರಮೇಶ್ ಜಾರಕಿಹೊಳಿ‌ ಅಂದ್ರೇ ಹಠವಾದಿ, ಒಂದು ಸಾರಿ ಮಾತುಕೊಟ್ರೆ ಅದನ್ನ ಮೀರದೇ ಮಾಡಿ ತೋರಿಸುವ ಛಲದಂಕಮಲ್ಲ. ನೇರ ನುಡಿಯ ಮುಕ್ತ ಮನಸ್ಸಿನ  ಮಾತುಗಾರ. ಹಲವು ವಿಷಯಗಳನ್ನು ಚಾಲೆಂಜ್ ಆಗಿ ಸ್ವೀಕಾರ ಮಾಡಿ ಗೆದ್ದವರು. ಜಿಲ್ಲಾ ಮಟ್ಟದ ಸಂಘ ಸಂಸ್ಥೆ, ಸಹಕಾರಿ ಸಂಸ್ಥೆಗಳಲ್ಲೂ ತಮ್ಮದೇ ಹಿಡಿತ ಸಾಧಿಸುವ ಎದೆಗಾರಿಕೆ ಹೊಂದಿರುವ ರಮೇಶ್. ಮುಲಾಜಿಲ್ಲದೇ ಎದುರಾಳಿಗಳಿಗೆ ತಕ್ಕ ಉತ್ತರ ನೀಡುವ ವ್ಯಕ್ತಿತ್ವದವರು. ತಮ್ಮದೇ ಆದ ನೆಟವರ್ಕ್ ಮತ್ತು ಜನ ಸಂಪರ್ಕದ ಮೂಲಕ ಗೋಕಾಕದ ಜನರ ಮನ ಗೆದ್ದಿದ್ದಾರೆ. ಬಿಜೆಪಿ ಹೈಕಮಾಂಡ್​ಗೂ ಇತ್ತಿಚಿನ ದಿನಗಳಲ್ಲಿ ಹತ್ತಿರವಾಗ್ತಿದ್ದ ರಮೇಶ್​ಗೆ ಎಲ್ಲಿಲ್ಲದ ಬೆಂಬಲ ಕೂಡ ಸಿಕ್ತಿತ್ತು. ಹೀಗಿದ್ದ ರಮೇಶ್ ಜಾರಕಿಹೊಳಿ‌ ಇಂದು ಇಡೀ ರಾಜ್ಯದ ಜನರ ಮುಂದೆ ಬೆತ್ತಲಾಗಿದ್ದಾರೆ. ಜೈ ಅಂತಿದ್ದವರೇ ಧಿಕ್ಕಾರ ಕೂಗುತ್ತಿದ್ದಾರೆ ಅದಕ್ಕೆ ಕಾರಣ ಅದೊಂದು ಸಿಡಿ..

ರಮೇಶ್ ಜಾರಕಿಹೊಳಿ‌ ಮೂರನೇ ಬಾರಿ ಸಚಿವರಾಗಿ ಜಲಸಂಪನ್ಮೂಲ ಖಾತೆಯನ್ನ ನಿಭಾಯಿಸುತ್ತಿದ್ದರು. ರಮೇಶ್​ಗೆ ಇತ್ತೀಚಿನ ದಿನಗಳಲ್ಲಿ ಪಕ್ಷದ ಹೊರಗೂ ಮತ್ತು ಹೊರಗೂ ವಿರೋಧಿಗಳ ಸಂಖ್ಯೆ ಹೆಚ್ಚಾಗುತ್ತ ಹೋಗುತ್ತಿದ್ದಾರೆ. ಬಿಜೆಪಿ ಹೈಕಮಾಂಡ್​ಗೆ ರಮೇಶ್ ದಿನೆ ದಿನೇ ಹತ್ತಿರ ಆಗಿದ್ದರು. ಜಲಸಂಪನ್ಮೂಲ ಖಾತೆಯಲ್ಲಿ ಅನೇಕ ಯೋಜನೆಗಳು ಅನುಮೋದನೆ ಪಡೆದು ಹಣ ಕೂಡ ಸಾಕಷ್ಟು ಪ್ರಮಾಣದಲ್ಲಿ ಬಿಡುಗಡೆ ಮಾಡಿದ್ದರು. ಇದೆಲ್ಲದರ ನಡುವೆ, ಸಮ್ಮಿಶ್ರ ಸರ್ಕಾರ ಪತನಗೊಳಿಸಿದ ಸೇಡನ್ನ ತೀರಿಸಿಕೊಳ್ಳಲು ಪ್ಲ್ಯಾನ್ ಮಾಡಿ ರಮೇಶ್​ ಅವರನ್ನು ಖೆಡ್ಡಾಗೆ ಬೀಳಿಸಬೇಕು ಅಂತಾ ಮಾಸ್ಟರ್ ಪ್ಲ್ಯಾನ್ ಮಾಡಿದ ಹಾಗೆ ಕಾಣುತ್ತೆ.

ಒಂದು ವರ್ಷದ ಹಿಂದೆಯೇ ರೆಕಾರ್ಡ್ ಆಗಿತ್ತು ಪಲ್ಲಂಗದಾಟ
ರಮೇಶ್ ಜಾರಕಿಹೊಳಿ‌ ಪಲ್ಲಂಗದಾಟ ಒಂದು ವರ್ಷದ ಹಿಂದೆಯೇ ರೆಕಾರ್ಡ್ ಆಗಿದ್ದು. ಸೆಕ್ಸ್ ವಿಡಿಯೋದಲ್ಲಿರುವ ಯುವತಿ ಉತ್ತರ ಕರ್ನಾಟಕ ಮೂಲದವಳು ಮತ್ತು ರಮೇಶ್ ಅವರಿಗೆ ಕೆಲಸದ ವಿಚಾರವಾಗಿ ಪರಿಚಯ ಆದವಳು. ರಮೇಶ್ ಜಾರಕಿಹೊಳಿ‌ ಆಪ್ತರೊಬ್ಬರ ಮೂಲಕ ಪರಿಚಯ ಆಗಿದ್ದ ಆಕೆ, ನಂತರ ರಮೇಶ್ ಅವರಿಗೆ ತೀರಾ ಹತ್ತಿರ ಆಗುತ್ತಾಳೆ. ರಮೇಶ್​ಗೆ ಸಮಯ ಸಿಕ್ಕಾಗ ಆಕೆಗೆ ಕರೆ ಮಾಡಿ ಮಾತನಾಡಲು ಶುರು ಮಾಡಿದ್ದರ ಬಗ್ಗೆ ವರದಿ ಇದೆ. ಇದಾದ ಬಳಿಕ ಬೆಂಗಳೂರಿನಲ್ಲಿ ಇಬ್ಬರು ಭೇಟಿ ಮಾಡುತ್ತಾರೆ. ಅಂದು ಎಲ್ಲಾ ವ್ಯವಸ್ಥಿತವಾಗಿ ಪ್ಲ್ಯಾನ್ ಮಾಡಿಯೇ ರಮೇಶ್ ರೂಮ್​ಗೆ ಎಂಟ್ರಿಯಾಗುವ ಮೊದಲೇ ಅಲ್ಲಿ ಕ್ಯಾಮೆರಾ ಫಿಕ್ಸ್ ಮಾಡಿರುತ್ತಾರೆ. ಇದಾದ ಬಳಿಕ ಯುವತಿ ರಮೇಶ್ ಬಳಿ ಬಂದು ಹೋಗುವವರೆಗೂ ಎಲ್ಲವನ್ನೂ ರೆಕಾರ್ಡ್ ಮಾಡಲಾಗುತ್ತೆ.

ಸೆಕ್ಸ್ ಸಿಡಿ ಬಿಡುಗಡೆ ಮರ್ಮ
ಒಂದು ಸಿಡಿಯನ್ನಿಟ್ಟುಕೊಂಡು ಒಂದಾದ ವಿರೋಧಿಗಳು ತಮ್ಮ ವಿರೋಧಿಯಾಗಿದ್ದ ಹೋರಾಟಗಾರ ದಿನೇಶ್ ಕಲ್ಲಹಳ್ಳಿಯನ್ನ ಕರೆ ತಂದರು. ಹೀಗೆ ಬಂದವನಿಗೆ ಎಲ್ಲಾ ವಿಚಾರ ತಿಳಿಸಿ ಸಿಡಿ ಬಿಡುಗಡೆ ನಂತರ ಆಗುವ ಬೆಳವಣಿಗೆ ಹಾಗೂ ಆ ನಂತರ ಕೂಡ ತಮ್ಮೊಂದಿಗೆ ಇರ್ತೇವಿ ಅನ್ನುವ ಮಾತು ಕೂಡ ಆ ನಾಯಕರು ದಿನೇಶ್ ಗೆ ಹೇಳಿದರು. ಎಲ್ಲದಕ್ಕೂ ಓಕೆ ಅಂದ ದಿನೇಶ್ ಮಾರ್ಚ್ 2ರಂದು ಸಂಜೆ ವಿಡಿಯೋ ಬಿಡುಗಡೆ ಮಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದಾದ ಬಳಿಕ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆದ್ರೆ ಇಂದು (ಮಾರ್ಚ್ 4) ದಿನೇಶ್​ಗೆ ಪೊಲೀಸರು ವಿಚಾರಣೆಗೆ ಕರೆದ್ರೂ ಗೈರಾಗಿದ್ದು ಹಲವು ಅನುಮಾನ ಹುಟ್ಟುವಂತೆ ಮಾಡಿದೆ. ನೊಂದ ಯುವತಿ ದೇಶ ತೋರೆದಿದ್ದಾಳೆ ಎಂಬ ಮಾತಿದ್ದು ಹಾಗೆನಾದ್ರೂ ಆಗಿದ್ರೆ ಇದೆಲ್ಲವೂ ಪ್ರೀಪ್ಲ್ಯಾನ್ ಅನ್ನುವುದಕ್ಕೆ ಮತ್ತಷ್ಟು ಪುಷ್ಟಿ ಸಿಗುತ್ತೆ. ಆಕೆ ಜೀವ ಭಯದಿಂದಲೂ ಆಕೆ ದೇಶ ಬಿಟ್ಟಿರಬಹುದು. ಆದರೆ ಆಕೆಯ ಹಿಂದೆ ದೊಡ್ಡ ಶಕ್ತಿಯೊಂದು ಇರುವುದು ಮಾತ್ರ ಖಚಿತ.

ಇದನ್ನೂ ಓದಿ: ರಮೇಶ್​ ಜಾರಕಿಹೊಳಿ ರಾಜೀನಾಮೆಗೆ ಕಾರಣರಾದ ದಿನೇಶ್ ಕಲ್ಲಹಳ್ಳಿ ಸಂದರ್ಶನ

RAMESH JARKIHOLI CD LEAD FINAL

ವಿವಾದಾತ್ಮಕ ಸಿಡಿಯಲ್ಲಿರುವ ದೃಶ್ಯ

ವಿರೋಧಿಗಳು ಒಂದಾಗಿ ಜಂಟಿ ಕಾರ್ಯಾಚರಣೆ ರಮೇಶ್ ವಿರುದ್ಧ ಷಡ್ಯಂತ್ರ
ಗೋಕಾಕಿನ ಜನ ಮಾತನಾಡಿಕೊಳ್ಳುವ ಪ್ರಕಾರ, ಇದು ಇಬ್ಬರು ವಿರೋಧ ಪಕ್ಷದ ನಾಯಕರು ಸೇರಿ ಮಾಡಿದ ತಂತ್ರದ ಫಲ. ಅವರಿಗೆ ರಮೇಶ್ ಯಾವಾಗಲೂ ಕಿರಿಕ್​ ಮಾಡುತ್ತಲೇ ಇದ್ದರು ಎಂಬುದು ಎಲ್ಲರಿಗೂ ಗೊತ್ತು. ಆ ಕಾರಣಕ್ಕಾಗಿಯೇ ಈ ಇಬ್ಬರು ನಾಯಕರು ರಮೇಶ್ ಅವರನ್ನು ಹಣಿಯಲು ಸ್ಕೆಚ್​ ಹಾಕಿದರು. ಈರ್ವರಲ್ಲಿ, ಒಬ್ಬರು ಬೆಳಗಾವಿ-ಕರ್ನಾಟಕದ ಕಡೆಯವರು ಮತ್ತೊಬ್ಬರು, ದಕ್ಷಿಣದವರು.  ಆ ಪ್ರಕಾರ, ಈ ಸಿಡಿ ತಯಾರಾಯ್ತು.

ಇನ್ನು ಕೆಲವರು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಹತ್ತರವಿದ್ದವರೇ ಯಾರಾದರೂ ಈ ಸಿಡಿ ಮಾಡಿಸಿರಬೇಕು ಎಂದು ಅನುಮಾನಿಸುತ್ತಾರೆ. ಕಳೆದ ಒಂದು ವರ್ಷದ ರಾಜಕೀಯ ಬೆಳವಣಿಗೆಯನ್ನು ಸೂಕ್ಷ್ಮವಾಗಿ ನೋಡಿದವರಿಗೆ ಗೊತ್ತಾಗುತ್ತದೆ ಈ ವಾದದಲ್ಲಿ ಹುರುಳಿಲ್ಲ ಎಂಬುದು. ಮೊದಲನೆಯದಾಗಿ ಯಡಿಯೂರಪ್ಪ ಆಗಲಿ ಅಥವಾ ಅವರ ಜೊತೆ ಇರುವ ಯಾರೂ ಕೂಡ ಇಷ್ಟು ಆಳಕ್ಕಿಳಿದು (deep) ರಾಜಕೀಯ ತಂತ್ರಗಾರಿಕೆ ಮಾಡಿದ ಇತಿಹಾಸ ಇಲ್ಲ. ಎರಡನೆಯ ವಿಚಾರವೇನೆಂದರೆ, ಕಳೆದ ಒಂದು ವರ್ಷದಲ್ಲಿ ತನ್ನ ವಿರುದ್ಧ ತಂತ್ರಗಾರಿಯನ್ನು ಮಾಡುತ್ತಿರುವ ರಮೇಶ್ ಅವರ ಚಲನವಲನ ನೋಡುತ್ತ ಯಡಿಯೂರಪ್ಪ ಕೈ ಕೈ ಹೊಸಕುತ್ತ ಸುಮ್ಮನೆ ಕೂಡುತ್ತಿರಲಿಲ್ಲ. ಈ ಸಿಡಿ ಏನಾದರೂ ಮೊದಲೇ ಯಡಿಯೂರಪ್ಪನವರ ಕೈನಲ್ಲಿ ಇದ್ದಿದ್ದರೆ ಇತ್ತೀಚೆಗೆ ನಡೆದ ಸಂಪುಟ ವಿಸ್ತರಣೆ ಸಮಯದಲ್ಲಿ ಬೇರೆ ಕಥೆ ಆಗುತ್ತಿತ್ತು. ತನ್ನ ಕೈ ಕಟ್ಟಿ ಸಿ.ಪಿ. ಯೋಗೇಶ್ವರ್ ಅವರನ್ನು ಮಂತ್ರಿ ಮಾಡುವಲ್ಲಿ ರಮೇಶ್ ಜಾರಕಿಹೊಳಿ ಯಶಸ್ವಿಯಾದರು ಎಂಬ ಅಭಿಪ್ರಾಯ ಇದೆಯಲ್ಲ, ಅದು ಖಂಡಿತ ಆಗುತ್ತಿರಲಿಲ್ಲ. ಯಡಿಯೂರಪ್ಪ ಈ ಸಿಡಿಯನ್ನು ಆ ಸಮಯದಲ್ಲಿಯೇ ತೋರಿಸಿ ರಮೇಶ್ ಅವರ ಕೈ ಕಟ್ಟುತ್ತಿದ್ದರು.

ಈ ಎಲ್ಲ ವಿಚಾರಗಳನ್ನು ಗಮನಿಸಿದಾಗ, ಕಾಂಗ್ರೆಸ್​ನವರು ಏನೇ ಹೇಳಿದರೂ, ಪ್ರಾಯಶಃ ಯಡಿಯೂರಪ್ಪ ಇಂಥ ಕೆಲಸ ಮಾಡಿರಲಿಕ್ಕಿಲ್ಲ ಎಂದು ಮೂಲಗಳು ಹೇಳುತ್ತವೆ. ಬಿಜೆಪಿಯ ನಾಯಕರು ಕಾಂಗ್ರೆಸ್​ ನಾಯಕರಿಗೆ ಸುಪಾರಿ ಕೊಟ್ಟು ಮಾಡಿಸಿರಬಹುದೇ ಎಂಬ ಪ್ರಶ್ನೆಗಳೂ ಚಾಲ್ತಿಯಲ್ಲಿವೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಇನ್ನೂ ಸಾಕ್ಷ್ಯಗಳು ಸಿಗುತ್ತಿಲ್ಲ, ಹಾಗಾಗಿ ಇದನ್ನು ನಾವು ಒಪ್ಪಿಕೊಳ್ಳಲು ಆಗುತ್ತಿಲ್ಲ.

ಬಜೆಟ್​ ನಂತರ ಮುಖ್ಯಮಂತ್ರಿಯನ್ನು ತೆಗೆದೇ ತೆಗೆಯುತ್ತೇನೆ ಎಂಬ ಮಾತಿನೊಂದಿಗೆ ಹೊರಟಿದ್ದರು ಜಾರಕಿಹೊಳಿ ಎಂದು ಕೆಲವು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಇದು ಯಾವಾಗ ಕಾಂಗ್ರೆಸ್​ ನಾಯಕರಿಗೆ ಗೊತ್ತಾಯ್ತೋ ಅವರು ಬಿಜೆಪಿಯ ನಾಯಕರಿಗೆ ಸಿಡಿ ವಿಚಾರ ತಿಳಿಸಿ, ಒಂದೇ ಕಲ್ಲಿನಿಂದ ಎರಡು ಹಕ್ಕಿ ಹೊಡೆಯುವ ತಂತ್ರ ಹೆಣೆದರು. ಒಂದು ಕಡೆ ಮುಖ್ಯಮಂತ್ರಿ ಅವರನ್ನು ತಾನು ಉಳಿಸಿದೆ. ಹಾಗಾಗಿ ಯಡಿಯೂರಪ್ಪ ತನಗೆ ಯಾವಾಗಲೂ ಗೆಳೆಯರಾಗಿರಬೇಕು ಎಂಬ ತಂತ್ರ ಒಂದುಕಡೆಯಾದರೆ, ಈ ಸಿಡಿ ಮೂಲಕ ರಮೇಶ್​ ಅವರನ್ನು ಮುಗಿಸಿದಂತೆಯೂ ಆಗುತ್ತದೆಯಲ್ಲ. ಇದೇ ಆ ಕೆಲವು ಕಾಂಗ್ರೆಸ್​ ನಾಯಕರ ತಂತ್ರವಾಗಿರಬಹುದು ಎಂದು ಮೂಲಗಳು ತಿಳಿಸಿವೆ.  ಹಾಗಂತ ಖಚಿತವಾಗಿ ನಿರ್ಣಯಿಸಲು ನಮಗಿನ್ನೂ ಸಾಕ್ಷ್ಯ ಸಿಕ್ಕಿಲ್ಲ.

ಇದನ್ನೂ ಓದಿ: Tv9 Digital Live | ಜಾರಕಿಹೊಳಿ ಸಿಡಿ: ಮುನ್ನೆಲೆಗೆ ಬಂದ ಕಾನೂನು ಮತ್ತು ನೈತಿಕ ಪ್ರಶ್ನೆಗಳು

ರಮೇಶ್ ಜಾರಕಿಹೊಳಿ (ಸಂಗ್ರಹ ಚಿತ್ರ)

ಒಂದು ಸಿಡಿ ಎರಡು ಹಕ್ಕಿ ಹೊಡೆದ ಚಾಣಾಕ್ಷರು
ಸದ್ಯ ರಮೇಶ್ ಜಾರಕಿಹೊಳಿ‌ ಸೆಕ್ಸ್ ಸಿಡಿ ಬಿಡುಗಡೆ ಹಿನ್ನೆಲೆ ಜಾರಕಿಹೊಳಿ‌ ಕೋಟೆಯಲ್ಲಿ ತಲ್ಲಣ ಶುರುವಾಗಿದೆ. ಸಹೋದರರು ಮುಜುಗರ ತಪ್ಪಿಸಿಕೊಳ್ಳಲು ಪಡಬಾರದ ಪರದಾಟ ನಡೆಸುತ್ತಿದ್ದಾರೆ. ಆದರೆ ಒಂದು ಸಿಡಿ ಬಿಡುಗಡೆಯಿಂದ ಬಿಜೆಪಿ ಪಕ್ಷದಲ್ಲಿದ್ದ ವಿರೋಧ ಬಣ ಇದೀಗ ಹಾಲು ಕುಡಿಯುವಂತಾಗಿದೆ. ರಮೇಶ್ ಜಾರಕಿಹೊಳಿ‌ ಜಲಸಂಪನ್ಮೂಲದಂಥ ದೊಡ್ಡ ಖಾತೆಯನ್ನ ಬಿಟ್ಟು ಕೆಳಗಿಳಿದಿದ್ದಾರೆ. ಇದರ ಜತೆಗೆ ಜಾರಕಿಹೊಳಿ‌ ಕುಟುಂಬಕ್ಕೂ ಇದೊಂದು ಕಪ್ಪು ಚುಕ್ಕೆಯಾಗಿದ್ದು ಸತೀಶ್ ಜಾರಕಿಹೊಳಿ‌ಯಂತ ಲೀಡರ್​ಗೂ ಕೂಡ ಹಿನ್ನಡೆ ಮಾಡಿದೆ. ಕಾಂಗ್ರೆಸ್​ನಲ್ಲಿ ಹೈಕಮಾಂಡ್ ಮಟ್ಟದಲ್ಲಿ ಪ್ರಭಾವ ಹೊಂದಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಇದೀಗ ಡಲ್ ಹೊಡೆದಿದ್ದು ಇದು ಅವರ ಪಕ್ಷದ ಕೆಲವರಿಗೆ ಅನುಕೂಲ ಮಾಡಿಕೊಡುವುದರ ಜತೆಗೆ ಸತೀಶ್ ಜಾರಕಿಹೊಳಿ‌ಯನ್ನ ಪಕ್ಷದಲ್ಲಿ ಹಿಂದೆ ತಳ್ಳುವ ಪ್ರಯತ್ನಗಳೂ ನಡೆಯುತ್ತಿವೆ ಎನ್ನಲಾಗಿದೆ. ಇತ್ತ ಬಿಜೆಪಿಯಲ್ಲಿ ಪ್ರಭಾವಶಾಲಿ ಆಗ್ತಿದ್ದ ರಮೇಶ್ ಅಲ್ಲಿಯೂ ಡೌನ್ ಆಗಿದ್ದು ಸರ್ಕಾರದಲ್ಲಿ ಎನೂ ಮಾತಾಡದ ಪರಿಸ್ಥಿತಿಗೆ ಬಂದು ನಿಂತಿದ್ದಾರೆ. ಈ ಮೂಲಕ ವಿರೋಧಿ ಗ್ಯಾಂಗ್ ಒಂದು ಸಿಡಿಯಿಂದ ಎರಡು ಹಕ್ಕಿ ಹೊಡೆದಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ‌‌.

ಜಾರಕಿಹೊಳಿ‌ ಸಹೋದರರ ಮುಂದಿನ ನಡೆ ಹೇಗಿರುತ್ತೆ
ಪಕ್ಷ ಬೇರೆ ಬೇರೆ ಇದ್ರೂ ಜಾರಕಿಹೊಳಿ‌ ಸಹೋದರರು ಕಷ್ಟ, ಸಂಕಷ್ಟದ ಸಮಯದಲ್ಲಿ ಒಂದಾಗಿಯೇ ಇರ್ತಾರೆ. ಸದ್ಯ ಈ ಬೆಳವಣಿಗೆ ಸೋದರರನ್ನು ಮತ್ತೆ ಒಗ್ಗೂಡಿಸಿದ್ದು ಶೀಘ್ರದಲ್ಲಿ ಐದು ಜನ ಅಣ್ತಮ್ಮಂದಿರಾದ ರಮೇಶ್, ಸತೀಶ್, ಭೀಮಶಿ, ಬಾಲಚಂದ್ರ ಮತ್ತು ಲಖನ್ ಸೇರಿ ಸಭೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈ ಸಭೆಯಲ್ಲಿ ಮುಂದಿನ ರಾಜಕೀಯ ಹೆಜ್ಜೆ ಹೇಗಿಡಬೇಕು ಯಾವ ರೀತಿ ರಾಜಕೀಯದಲ್ಲಿ ಮತ್ತೆ ಮೇಲೆಳಬೇಕು ಎಂಬ ನಿಟ್ಟಿನಲ್ಲಿ ಚರ್ಚೆ ಮಾಡಲಿದ್ದಾರೆ.

ಇದರ ಜತೆಗೆ ಸಿಡಿ ಬಿಡುಗಡೆ ಹಿಂದೆ ಯಾರ ಕೈವಾಡ ಇದೆ ಎಂಬುದನ್ನ ಅರಿತು ಅವರನ್ನ ಹೇಗೆ ರಾಜಕೀಯವಾಗಿ ಮುಗಿಸಬೇಕು ಅಂತಾ ಪ್ಲ್ಯಾನ್ ಮಾಡಲಿದ್ದಾರೆ. ಇತ್ತ ಕಾನೂನು ಹೋರಾಟ ಮಾಡುವುದರ ಮೂಲಕ ಪ್ರಕರಣದಿಂದ ಹೊರ ಬರುವ ಕುರಿತು ಕೂಡ ಚರ್ಚೆ ಮಾಡಲಿದ್ದಾರಂತೆ. ಇನ್ನೂ ರಮೇಶ್ ಜಾರಕಿಹೊಳಿ‌ ಸ್ವಲ್ಪ ದಿನಗಳ ಕಾಲ ಸೈಲೆಂಟ್ ಆಗಿರಬೇಕು ಜತೆಗೆ ಯಾರ ವಿರುದ್ಧ ಕೂಡ ಮಾತಾಡಬಾರದು ಎಂಬ ಸೂಚನೆಯನ್ನ ಅವರಿಗೆ ನೀಡಿ ಸೈಲೆಂಟ್ ಮಾಡಲಿದ್ದಾರೆ. ಅಷ್ಟೇ ಅಲ್ಲದೇ ಈ ವಿಚಾರ ಜನರ ಮನಸ್ಸಿಂದ ಮಾಸುವವರೆಗೂ ಸುಮ್ಮನಿದ್ದು ಅವಕಾಶ ಬಂದಾಗ ರಾಜಕೀಯ ದಾಳಗಳನ್ನ ಪ್ರಯೋಗ ಮಾಡಿ ಜಾರಕಿಹೊಳಿ‌ ಬ್ರದರ್ಸ್ ಅಂದ್ರೇ ಏನು ಎಂದು ಮತ್ತೊಮ್ಮೆ ತೋರಿಸಿ ತಮ್ಮ ತಂಟೆಗೆ ಬಂದ್ರೇ ಎನಾಗುತ್ತೆ ಎಂಬ ಸಂದೇಶ ವಿರೋಧಿಗಳಿಗೆ ರವಾನಿಸಲಿದ್ದಾರೆ.

(ಭಾಸ್ಕರ ಹೆಗಡೆ, ಬೆಂಗಳೂರು ಮತ್ತು ಸಹದೇವ ಮಾನೆ, ಬೆಳಗಾವಿ)

ಇದನ್ನೂ ಓದಿ: Tv9 Digital Live | ರಮೇಶ್ ಜಾರಕಿಹೊಳಿ ಮಂತ್ರಿಗಿರಿ ಹೋಗಲು ರಾಜಕೀಯ ವೈಷಮ್ಯ ಕಾರಣವೇ?

ಇದನ್ನೂ ಓದಿ: ರಾಜಕೀಯ ವಿಶ್ಲೇಷಣೆ | ರಮೇಶ್ ಜಾರಕಿಹೊಳಿ ಮುಂದಿರುವ ಮೂರು ಆಯ್ಕೆಗಳು