Creative Personality : ಸೃಜನಶೀಲ ಮನಸ್ಸನ್ನು ಹೊಂದಿರುವವರು ಸದಾ ಹೊಸ ಪ್ರಯತ್ನಗಳಲ್ಲಿ ಆಸಕ್ತರಾಗಿರುತ್ತಾರೆ. ಒಂದೇ ತೆರನಾದ ಕೆಲಸಗಳು ಅವರಿಗೆ ಬಲುಬೇಗನೆ ಬೇಸರ ತರಿಸುತ್ತವೆ. ಸಾಹಸೀ ಮನೋಭಾವದ ಅವರು ಸೋಲು, ಗೆಲುವನ್ನು ಸಮನಾಗಿಯೇ ಸ್ವೀಕರಿಸುತ್ತಾರೆ. ಯಾವ ಸಂದರ್ಭದಲ್ಲಿಯೂ ಸೃಜನಶೀಲವಾಗಿಯೇ ಹರಿಯಲು ಬಯಸುತ್ತಾರೆ. ಹಾಗಿದ್ದರೆ ಸೃಜನಶೀಲತೆಯು ಸ್ವಭಾವಜನ್ಯವೇ ಅಥವಾ ಕೌಶಲದ ಮೂಲಕ ಅದನ್ನು ರೂಢಿಸಿಕೊಳ್ಳಬಹುದೇ? ಎಂಬ ಪ್ರಶ್ನೆಗೆ ಉತ್ತರವಾಗಿ ನೋಡಿದಾಗ, ಮನಃಶಾಸ್ತ್ರಜ್ಞ ಮಿಹಾಲಿ ಸಿಝೆಂಟಿಹಾಲಿ ಅವರ ಸಂಶೋಧನಾ ಕೃತಿ ‘ದಿ ವರ್ಕ್ ಅಂಡ್ ಲೈವ್ಸ್ ಆಫ್ 91 ಎಮಿನೆಂಟ್ ಪೀಪಲ್’ನಲ್ಲಿ, ‘ನಮ್ಮ ಎಲ್ಲಾ ಚಟುವಟಿಕೆಗಳಲ್ಲಿಯೂ ಸೃಜನಶೀಲತೆ ಅಡಗಿದೆ. ಜೀವನದಲ್ಲಿ ನಮಗೇನು ಬೇಕೋ ಅದನ್ನು ಪಡೆಯುವತ್ತ ಅದು ಬಗೆಬಗೆಯಲ್ಲಿ ನಮ್ಮನ್ನು ಉದ್ದೀಪಿಸುತ್ತಿರುತ್ತದೆ’ ಎಂದು ಉಲ್ಲೇಖಿಸಲಾಗಿದೆ.
1. ಶಕ್ತಿಯುತ ಮತ್ತು ಕೇಂದ್ರೀಕೃತ
ಸೃಜನಶೀಲ ಮನಸ್ಸುಳ್ಳವರು ದೈಹಿಕ ಮತ್ತು ಮಾನಸಿಕವಾಗಿ ಇತರರಿಗಿಂತ ಹೆಚ್ಚಿನ ಶಕ್ತಿಯುಳ್ಳವರಾಗಿರುತ್ತಾರೆ. ಯಾವಾಗಲೂ ಉತ್ಸಾಹಿಗಳಾಗಿರುತ್ತಾರೆ. ಇತರರ ಗಮನವನ್ನು ಕೇಂದ್ರೀಕರಿಸಿಕೊಳ್ಳಲು ಗಂಟೆಗಳ ಕಾಲ ಮನಸ್ಸನ್ನು ತೊಡಗಿಸಿಕೊಂಡಿರುತ್ತಾರೆ. ಆದರೆ ಸೃಜನಶೀಲ ಎಂದತಕ್ಷಣ ಅದು ಸದಾ ಮನಸ್ಸನ್ನು ಕೇಂದ್ರೀಕರಿಸುವ, ಸೃಜನಶೀಲ ಅಥವಾ ಕಲಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಎಂದಲ್ಲ. ಸೃಜನಾತ್ಮಕ ವ್ಯಕ್ತಿತ್ವ ಹೊಂದಿದವರು ಕುತೂಹಲ, ವಿಶ್ರಾಂತಿಯಲ್ಲಿ ಹೆಚ್ಚಿನ ಸಮಯವನ್ನು ಕಳೆಯಲಿಚ್ಛಿಸುತ್ತಾರೆ. ಅವರ ಆಸಕ್ತಿ ವಿಷಯಗಳು ಸದ್ದಿಲ್ಲದೆ ಸಂವಹನದ ಮೂಲಕ ಪ್ರತಿಬಿಂಬಿಸುವ ಸಾಮರ್ಥ್ಯವನ್ನು ಪಡೆದುಕೊಂಡಿರುತ್ತವೆ. ಬಹುಮುಖ್ಯವಾಗಿ ಅವರು ಕುಳಿತಲ್ಲಿಯೇ ಮನಸ್ಸಿನ ಮೂಲಕ ಚಲಿಸಬಲ್ಲರು.
2. ಬುದ್ಧಿವಂತರು ಮತ್ತು ನಿಷ್ಕಪಟಿಗಳು
ಸೃಜನಾತ್ಮಕ ಮನೋಭಾವದವರು ಬುದ್ಧಿವಂತರಾಗಿರುತ್ತಾರೆ, ಅಂದಮಾತ್ರಕ್ಕೆ ಹೆಚ್ಚಿನ ಮಟ್ಟದಲ್ಲಿ ಬುದ್ಧಿಮತ್ತೆ (IQ) ಹೊಂದಿದವರೆಲ್ಲ ಸೃಜನಶೀಲವಾಗಿ ಮಹಾನ್ ಸಾಧನೆ ಗೈಯ್ಯುತ್ತಾರೆ ಎಂದಲ್ಲ. ಹಾಗಾಗಿ ಬುದ್ಧಿವಂತಿಕೆಗೂ ಸೃಜನಶೀಲತೆಗೂ ಪರಸ್ಪರ ಸಂಬಂಧವಿಲ್ಲ ಎಂದೇ ಹೇಳಲಾಗುತ್ತದೆ.
ಪ್ರತಿಭಾನ್ವಿತರೆನ್ನಿಸಿಕೊಂಡ ಮಕ್ಕಳು ಹೆಚ್ಚಿನ ಬುದ್ಧಿಮತ್ತೆ ಹೊಂದಿದ್ದು ಒಟ್ಟಾರೆ ಜೀವನವನ್ನು ಚೆನ್ನಾಗಿ ರೂಪಿಸಿಕೊಳ್ಳುತ್ತಾರೆ. ಆದರೆ ಅವರೆಲ್ಲರೂ ಸೃಜನಶೀಲ ಪ್ರತಿಭೆಗಳಾಗಿರುವುದಿಲ್ಲ. ಸೃಜನಶೀಲರು ಕಲೆಯ ಮೂಲಕ ಅಸಾಧಾರಣವಾದದ್ದನ್ನು ಸಾಧಿಸುತ್ತಾರೆ.
ಸಿಝೆಂಟಿಹಾಲಿ ಹೇಳುವಂತೆ, ‘ಅಧ್ಯಯನಗಳು ಸೂಚಿಸುವ ಪ್ರಕಾರ ಸುಮಾರು 120 ರಷ್ಟು ಬುದ್ಧಿಮತ್ತೆಯನ್ನು ಹೊಂದಿದವರು ಸೃಜನಶೀಲವಾಗಿ ಕೊಡುಗೆ ನೀಡಬಲ್ಲರು. ಆದರೆ 120ಕ್ಕಿಂಥ ಹೆಚ್ಚಿನ ಬುದ್ಧಿಮತ್ತೆ ಹೊಂದಿರುವವರು ಸೃಜನಶೀಲ ಕೊಡುಗೆ ನೀಡುವುದು ಸಂಶಯವೇ.’
‘ಮನಸಿನ ಆಲೋಚನೆಗಳೊಂದಿಗೆ ನಮಗಿರುವ ಪ್ರಾಯೋಗಿಕ ಆಲೋಚನೆಗಳನ್ನು ಸಮತೋಲನಗೊಳಿಸುವುದೇ ಸೃಜನಶೀಲತೆ. ಯಾವ ಆಲೋಚನೆಗಳನ್ನು ಹೇಗೆ ಕೇಂದ್ರೀಕರಿಸಬೇಕು. ಹೇಗೆ ಅವುಗಳನ್ನು ಒಂದಕ್ಕೊಂದು ಜೋಡಿಸುತ್ತಾ ಹೋಗಬೇಕು. ಮತ್ತೆ ಮತ್ತೆ ಅವುಗಳ ಮೇಲೆ ಗಮನಕೊಟ್ಟು ಕೆಲಸ ಮಾಡಿ ಅದಕ್ಕೊಂದು ಸ್ವರೂಪ ತರಬೇಕು, ಯಾವುದು ಬೇಡ ಮತ್ತೆ ಯಾಕದನ್ನು ಕೈಬಿಡಬೇಕು ಎಂಬ ಖಚಿತತೆ ಅರ್ಥ ಮಾಡಿಕೊಂಡು ಸಾಗುವುದೇ ಸೃಜನಶೀಲ ಪ್ರಕ್ರಿಯೆ. ಹೀಗೆ ಯೋಚಿಸಿ ಬದುಕುವವರು ತಾಜಾ ವಿಚಾರಗಳಿಂದ ಕೂಡಿರುತ್ತಾರೆ. ನಿಷ್ಕಪಟ ರೀತಿಯಲ್ಲಿ ವಿಷಯಗಳನ್ನು ನೋಡುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಹೀಗಿರುವುದಕ್ಕೇ ಅವರು ಬದುಕನ್ನು ಕೌತುಕದಿಂದ ನೋಡುವ ಆಸ್ಥೆ ಬೆಳೆಸಿಕೊಂಡಿರುತ್ತಾರೆ. ಹಾಗಾಗಿ ಅವರು ಯಾವುದೇ ಪ್ರಭಾವಕ್ಕೆ ಸುಲಭವಾಗಿ ಒಳಗಾಗಲಾರರು’ ಎನ್ನುತ್ತದೆ ಸಿಝೆಂಟಿಹಾಲಿ ಸಂಶೋಧನೆ.
ಇದನ್ನೂ ಓದಿ : Personality Test: ನಿಮ್ಮ ಮೂಗು ನಿಮ್ಮ ಬಗ್ಗೆ ಏನು ಹೇಳುತ್ತಿದೆ?
3. ಸೃಜನಾತ್ಮಕ ಮತ್ತು ಪರಿಶ್ರಮ
ತಮಾಷೆಯ ವರ್ತನೆಯು ಸೃಜನಶೀಲ ವ್ಯಕ್ತಿಗಳ ವಿಶಿಷ್ಟ ಲಕ್ಷಣಗಳಲ್ಲಿ ಒಂದಾಗಿದೆ. ಆದರೆ ಲಘು ಮತ್ತು ಉತ್ಸಾಹವು ವಿರೋಧಾಭಾಸದ ಲಕ್ಷಣಗಳಿಂದ ಪ್ರತಿಬಿಂಬಿತವಾಗಿದೆ. ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡುವಾಗ ಅಥವಾ ಮಹತ್ವದ ನಿರ್ಣಯ ಕೈಗೊಳ್ಳುವಾಗ ಸೃಜನಶೀಲ ವ್ಯಕ್ತಿಗಳು ದಡ್ಡತನ ಪ್ರದರ್ಶಿಸುವುದು ಸಜಹ. ಆದರೆ ಅವರು ಗಂಟೆಗಟ್ಟಲೆ ಯಾವುದೋ ಒಂದು ಕೆಲಸದಲ್ಲಿ ಕೆಲಸ ಮಾಡುವ ವಿಶೇಷ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಅದರಲ್ಲಿ ತೃಪ್ತಿ ಕಾಣುವ ತನಕ ರಾತ್ರಿಯೆಲ್ಲಾ ಎಚ್ಚರವಾಗಿರುತ್ತಾರೆ ಎನ್ನುವುದನ್ನು ಗಮನಿಸಬೇಕು.
ನೀವು ಕಲಾವಿದರನ್ನು ಭೇಟಿಯಾದಿರಿ ಎಂದುಕೊಳ್ಳಿ. ಅವರನ್ನು ಮಾತನಾಡಿಸುತ್ತಾ ಹೋಗಿ, ಅವರ ಮಾತಿನುದ್ದಕ್ಕೂ ರೋಮಾಂಚನಕಾರಿ, ರೋಮ್ಯಾಂಟಿಕ್ ಅನುಭವಯಾನವೇ ಧ್ವನಿಸುತ್ತದೆ. ಆದರೆ ಕಲಾಸಾಧನೆಯ ವಿಷಯವಾಗಿ ಅವರು ಅಷ್ಟೇ ಪರಿಶ್ರಮ ಪಟ್ಟಿರುತ್ತಾರೆ. ಹಾಗಾಗಿಯೇ ಅವರು ಯಶಸ್ವಿ ಕಲಾವಿದರು. ನಿಜವಾದ ಸೃಜನಶೀಲ ವ್ಯಕ್ತಿಗಳಲ್ಲಿ ವಿನೋದ ಪ್ರಜ್ಞೆ ಮತ್ತು ಕಠಿಣ ಪರಿಶ್ರಮ ಎರಡೂ ಮಿಳಿತಗೊಂಡಿರುತ್ತವೆ.
4. ವಾಸ್ತವಿಕ ಮತ್ತು ಕಾಲ್ಪನಿಕ
ಸೃಜನಶೀಲರು ಹಗಲುಗನಸು ಕಾಣಲು ಇಷ್ಟಪಡುತ್ತಾರೆ ಮತ್ತು ಜಗತ್ತಿನ ಸಾಧ್ಯಾಸಾಧ್ಯತೆ, ಅದ್ಭುತಗಳನ್ನು ಊಹಿಸಬಲ್ಲವರಾಗಿರುತ್ತಾರೆ. ಕಲ್ಪನೆ ಮತ್ತು ಫ್ಯಾಂಟಸಿಯಲ್ಲಿ ಸದಾ ಮುಳುಗಿರುತ್ತಾರೆ. ಆದರೆ ತಮ್ಮ ಹಗಲುಗನಸುಗಳನ್ನು ಕಲೆಯ ಮೂಲಕ ವಾಸ್ತವಕ್ಕೆ ತಿರುಗಿಸುವ ಪ್ರಯತ್ನದಲ್ಲಿ ಅವರು ಸದಾ ನಿರತರಾಗಿರುತ್ತಾರೆ. ಕಲಾವಿದರು, ಲೇಖಕರು, ಸಂಗೀತಗಾರರು ಜಗತ್ತಿನ ಸಮಸ್ಯೆಗಳಿಗೆ ಕಲೆಯ ಮೂಲಕ ಕಾಲ್ಪನಿಕ ಪರಿಹಾರಗಳನ್ನು ಕೊಡಬಲ್ಲರು. ಆದರೆ ನಿಜದಲ್ಲಿ ಇತರರು ಇವರ ಈ ಕೊಡುಗೆಯನ್ನು ಅಪ್ತಸ್ತುತವೆಂದು ಭಾವಿಸುವ ಸಾಧ್ಯತೆಯೂ ಹೆಚ್ಚು. ಆದರೆ ಸೃಜನಶೀಲ ಮನಸ್ಸುಳ್ಳವರು ತಮ್ಮ ಕಲ್ಪನೆಗಳನ್ನು ವಾಸ್ತವ ಸಂಗತಿಗಳಿಗೆ ತಿರುಗಿಸಿ ಸಾಬೀತುಪಡಿಸುವ ವಿಶೇಷ ಸಾಮರ್ಥ್ಯವನ್ನು ಹೊಂದಿರುತ್ತಾರೆ ಎನ್ನುವುದನ್ನು ಮರೆಯಬಾರದು.
5. ಬಹಿರ್ಮುಖಿ ಮತ್ತು ಅಂತರ್ಮುಖಿ
ಸಾಮಾನ್ಯವಾಗಿ ನಾವು ಬಹಿರ್ಮುಖಿ ಅಥವಾ ಅಂತರ್ಮುಖಿ ವ್ಯಕ್ತಿತ್ವ ಎಂದು ವರ್ಗೀಕರಿಸುವ ತೀರ್ಮಾನಕ್ಕೆ ಬರುತ್ತವೆ. ಸೃಜನಶೀಲತೆಗೆ ಈ ಎರಡೂ ವ್ಯಕ್ತಿತ್ವ ಪ್ರಕಾರಗಳನ್ನು ಸಂಯೋಜಿಸುವ ಅಗತ್ಯವಿದೆ. ಏಕೆಂದರೆ ಸೃಜನಶೀಲರು ಏಕಕಾಲದಲ್ಲಿ ಅಂತರ್ಮುಖಿ ಮತ್ತು ಬಹಿರ್ಮುಖಿ ಎರಡರ ಗುಣಲಕ್ಷಣಗಳನ್ನೂ ಪ್ರದರ್ಶಿಸುತ್ತಾರೆ ಎನ್ನುವುದು ಅಧ್ಯಯನದಿಂದ ಸಾಬೀತಾಗಿದೆ.
ಇದನ್ನೂ ಓದಿ : Color: ‘ಬಣ್ಣಸಂಬಂಧ’ ಉಡುಪಿಗೂ, ಆಫೀಸಿನ ಗೋಡೆಗಳಿಗೂ, ಬಿಸಿನೆಸ್ ಕಾರ್ಡುಗಳಿಗೂ
6. ಹೆಮ್ಮೆ ಮತ್ತು ಭವಿಷ್ಯ
ಸೃಜನಶೀಲರು ತಮ್ಮ ಸಾಧನೆಗಳ ಬಗ್ಗೆ ಹೆಮ್ಮೆಪಡುತ್ತಾರೆ. ತಮ್ಮ ಸ್ಥಾನಮಾನದ ಬಗ್ಗೆ ಹೆಚ್ಚು ಸೂಕ್ಷ್ಮವಾಗಿ ಯೋಚಿಸುತ್ತಾರೆ. ತಮ್ಮ ಕ್ಷೇತ್ರದಲ್ಲಿ ಕೆಲಸ ಮಾಡುವ, ಮಾಡಿರುವ ಇತರರ ಬಗ್ಗೆ ಅಪಾರ ಗೌರವ ವ್ಯಕ್ತಪಡಿಸುತ್ತಾರೆ. ಇತರರ ಆವಿಷ್ಕಾರಗಳು ಅವರ ಕೆಲಸದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ. ಇತರರು ಮಾಡುವ ಕೆಲಸಗಳಿಗೆ ಹೋಲಿಸಿದರೆ ಅವರ ಕೆಲಸಗಳು ಹೆಚ್ಚು ಗಮನಾರ್ಹವಾಗಿರುತ್ತವೆ. ಸಿಝೆಂಟ್ಮಿಹಾಲಿ ಪ್ರಕಾರ, ಸೃಜನಶೀಲರು ತಮ್ಮ ಮುಂದಿನ ಯೋಜನೆಗಳ ಬಗ್ಗೆ ಹೆಚ್ಚು ಗಮನಹರಿಸುತ್ತಾರೆ. ಹಿಂದಿನ ಸಾಧನೆಗಳ ಬಗ್ಗೆ, ಅವುಗಳ ಏರುಪೇರುಗಳನ್ನು ಯೋಚಿಸುತ್ತ ಕುಳಿತುಕೊಳ್ಳುವುದಿಲ್ಲ.
7. ಲಿಂಗ ಮತ್ತು ಸಂವೇದನೆ
ಸೃಜನಶೀಲ ವ್ಯಕ್ತಿಗಳು ಸಮಾಜವು ಸಾಮಾನ್ಯವಾಗಿ ಜಾರಿಗೊಳಿಸಿರುವ ನಿಯಮಗಳನ್ನು ವಿರೋಧಿಸುತ್ತಾರೆ. ಅವುಗಳಲ್ಲಿ ಲಿಂಗತ್ವಕ್ಕೆ ಸಂಬಂಧಿಸಿದ ವಿಷಯವೂ ಒಂದು. ಸೃಜನಾತ್ಮಕ ಹುಡುಗಿಯರು ಮತ್ತು ಮಹಿಳೆಯರು, ಇತರೇ ಮಹಿಳೆಯರಿಗಿಂತ ಹೆಚ್ಚು ಆಲೋಚಿಸುವ ಶಕ್ತಿಯನ್ನು, ಸೂಕ್ತ ನಿರ್ಧಾರ ಕೈಗೊಳ್ಳುವ ಧೈರ್ಯವನ್ನು ಹೊಂದಿರುತ್ತಾರೆ. ಸೃಜನಶೀಲ ಹುಡುಗರು ಮತ್ತು ಪುರುಷರು ಇತರ ಪುರುಷರಿಗಿಂತ ಕಡಿಮೆ ಆಕ್ರಮಣಕಾರಿ ಮತ್ತು ಹೆಚ್ಚು ಸಂವೇದನಾಶೀಲರಾಗಿರುತ್ತಾರೆ. ಹೆಣ್ಣಿನಲ್ಲಿ ಗಂಡು, ಗಂಡಿನಲ್ಲಿ ಹೆಣ್ಣು ಎನ್ನುವ ಅರ್ಥದಲ್ಲಿ ಪರಸ್ಪರ ಎರಡೂ ಸ್ವಭಾವ-ಗುಣಗಳನ್ನು ಏಕಕಾಲಕ್ಕೆ ಅಳವಡಿಸಿಕೊಳ್ಳುವ ಸಂವೇದನಾಶೀಲತೆ ಇವರಲ್ಲಿ ಪೋಷಣೆಯಾಗಿರುತ್ತದೆ. ಇದನ್ನು ವಿಶೇಷ ಸಾಮರ್ಥ್ಯವೆಂದೇ ಹೇಳಬಹುದು.
8. ಸಂಪ್ರದಾಯವಾದಿ ಮತ್ತು ಬಂಡಾಯ
ಸೃಜನಾತ್ಮಕ ವ್ಯಕ್ತಿಗಳು ಯಾವಾಗಲೂ ‘ಔಟ್ ಆಫ್ ದಿ ಬಾಕ್ಸ್’ ಯೋಚಿಸುತ್ತಿರುತ್ತಾರೆ. ಅವರಲ್ಲಿ ಅನುಸರಿಸಿಕೊಂಡು ಹೋಗುವ ನಡೆ ಇಲ್ಲವೆನ್ನುವ ಕಾರಣಕ್ಕೆ ಇತರರು ಅವರನ್ನು ಬಂಡಾಯಗಾರರು ಎನ್ನುತ್ತಾರೆ. ಆದರೆ, ಆಂತರ್ಯದಲ್ಲಿ ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ಆಳ ಅರಿವಿದ್ದವರೇ ನಿಜವಾದ ಸೃಜನಶೀಲರು. ಅದನ್ನು ತೊಡೆದುಹಾಕುವಲ್ಲಿ ಹೊಸ, ಸುಧಾರಿತ ಪರಿಹಾರ ಮಾರ್ಗಗಳನ್ನು ರಚಿಸುವ ಪ್ರಕ್ರಿಯೆಯಲ್ಲಿ ಅವರ ಮನಸ್ಸು ಸದಾ ತೊಡಗಿಕೊಂಡಿರುತ್ತದೆ. ಜ್ಞಾನದ ಮೂಲಕ ಭೂತಕಾಲವನ್ನು ಪರಾಮರ್ಶಿಸುವ, ಸ್ವೀಕರಿಸುವ ಸಾಮರ್ಥ್ಯ ಅವರಿಗೆ ಸಾಧ್ಯವಾಗುತ್ತದೆ. ಸೃಜನಾತ್ಮಕ ವ್ಯಕ್ತಿಗಳಲ್ಲಿ ಅನೇಕರು ಸಂಪ್ರದಾಯವಾದಿಗಳೂ ಆಗಿರಬಹುದು. ಅಂಥವರು ಹೆಚ್ಚು ಅಪಾಯಕ್ಕೆ ತೆರೆದುಕೊಳ್ಳಲಾರರು.
ಇದನ್ನೂ ಓದಿ : Personality Test: ನೀವು ಕುಳಿತುಕೊಳ್ಳುವ ಭಂಗಿಯಿಂದ ನಿಮ್ಮ ವ್ಯಕ್ತಿತ್ವದ ಗುಣಲಕ್ಷಣ ತಿಳಿಯಿರಿ
9. ಭಾವೋದ್ರಿಕ್ತ ಮತ್ತು ಉದ್ದಿಶ್ಯ
ಸೃಜನಾತ್ಮಕ ವ್ಯಕ್ತಿತ್ವದವರು ತಮ್ಮ ಕೆಲಸವನ್ನು ಉತ್ಸಾಹದಿಂದ ಪ್ರೀತಿಸುತ್ತಾರೆ. ಆದರೆ ಭಾವೋದ್ರಿಕ್ತ ಮನಸ್ಥಿತಿಯಿಂದಾಗಿ ಅವರು ಮಾಡುವ ಕೆಲಸ ಯಾವಾಗಲೂ ಮಹಾನ್ ಎನ್ನಿಸಿಕೊಳ್ಳುತ್ತದೆ ಎಂದು ಹೇಳಲಾಗದು. ಒಬ್ಬ ಬರಹಗಾರನು ತನ್ನ ಬರವಣಿಗೆಯನ್ನು ಪ್ರೀತಿಸುತ್ತಾನೆ ಎಂದು ಊಹಿಸಿಕೊಳ್ಳಿ. ಅವನು ಒಂದೇ ಒಂದು ವಾಕ್ಯವನ್ನು ಎಡಿಟ್ ಮಾಡಲು ಇಷ್ಟಪಡುವುದಿಲ್ಲ. ಆದರೆ ಸೃಜನಶೀಲ ವ್ಯಕ್ತಿಗಳು ತಮ್ಮ ಕೆಲಸವನ್ನು ಸ್ವತಃ ವಿಮರ್ಶಾತ್ಮಕವಾಗಿ ಪರಿಶೀಲಿಸುವಲ್ಲಿ ಖುಷಿಪಡುತ್ತಾರೆ. ಬದ್ಧತೆಯುಳ್ಳ ಅವರು ವಸ್ತುನಿಷ್ಠವಾದ ಟೀಕೆಗಳನ್ನು ಸ್ವೀಕರಿಸುತ್ತಾರೆ.
10. ಸೂಕ್ಷ್ಮ ಮತ್ತು ಸಂತೋಷ
ಸೃಜನಾತ್ಮಕ ಮನೋಭಾವದವರು ಹೆಚ್ಚು ಮುಕ್ತ ಮತ್ತು ಸಂವೇದನಾಶೀಲರಾಗಿರಲು ಒಲವು ತೋರುತ್ತಾರೆ. ಪರಿಣಾಮವಾಗಿ ನೋವು ಮತ್ತು ಸುಖ ಎರಡರ ಪ್ರತಿಫಲವೂ ಇರುತ್ತದೆ. ಹೊಸದೇನಾದರೂ ಆಲೋಚಿಸುವುದು, ರೂಪಿಸಲು, ಯೋಜಿಸಲು ಹೋಗುವುದು ಏನನ್ನಾದರೂ ಅಪಾಯಕ್ಕೆ ತೆರೆದುಕೊಳ್ಳುವುದು ನಿರಂತರವಾಗಿರುತ್ತದೆ. ಹಾಗಾಗಿ ಜನಸಾಮಾನ್ಯರ ಟೀಕೆಗೆ ತಿರಸ್ಕಾರಕ್ಕೆ ಇವರು ಒಳಗಾಗುತ್ತಲೇ ಇರುತ್ತಾರೆ.
ಒಟ್ಟಾರೆಯಾಗಿ, ಸೃಜನಾತ್ಮಕ ಅನುಭವಕ್ಕೆ ತೆರೆದುಕೊಳ್ಳುವುದು ಒಂದು ರೀತಿಯಲ್ಲಿ ಸಂತೋಷಯಾನ. ಆದರೆ, ಬದುಕಿನಲ್ಲಿ ಎದುರಾಗುವ ಯಾವುದೇ ನೋವು, ಘಟನೆ, ಸಂಕಟವೇ ಇವರ ಈ ಯಾನಕ್ಕೆ ಮೂಲ ಪರಿಕರ.
Published On - 7:28 pm, Tue, 28 June 22