Color: ‘ಬಣ್ಣಸಂಬಂಧ’ ಉಡುಪಿಗೂ, ಆಫೀಸಿನ ಗೋಡೆಗಳಿಗೂ, ಬಿಸಿನೆಸ್ ಕಾರ್ಡುಗಳಿಗೂ
Lifestyle : ಒಂದು ಹೊಸ ಆಫೀಸು ತೆರೆಯುವಲ್ಲಿ, ಉದ್ಯೋಗಿಗಳನ್ನು ನೇಮಿಸಿಕೊಳ್ಳುವಲ್ಲಿ, ವೆಬ್ಸೈಟ್, ಬಿಝಿನೆಸ್ ಕಾರ್ಡ್ ವಿನ್ಯಾಸ ಮಾಡುವಲ್ಲಿ ಬಣ್ಣಗಳ ಪಾತ್ರವೇನು?
color : ಉದ್ಯೋಗದ ಸಂದರ್ಶನಗಳಲ್ಲಿ ಉಡುಗೆಯ ಬಣ್ಣವೇ ವ್ಯಕ್ತಿತ್ವವನ್ನೂ ಸೂಚಿಸುತ್ತದೆ ಎನ್ನುವುದು ಸಂಶೋಧನೆಗಳಿಂದ ದೃಢಪಟ್ಟಿದೆ. ನೀಲಿ, ಕಪ್ಪು, ಬೂದು, ಕಂದು, ಬಿಳಿ ಬಣ್ಣಗಳು ಸಂದರ್ಶನಕ್ಕೆ ಹೆಚ್ಚು ಸೂಕ್ತವಾಗಿದ್ದು, ಕಿತ್ತಳೆ ಬಣ್ಣವಂತೂ ಸೂಕ್ತವಲ್ಲ ಎಂದು ಜಗತ್ತಿನಾದ್ಯಂತ ಪರಿಗಣಿಸಲಾಗಿದೆ. ಹಾಗೆಯೇ ಹಳದಿ, ಹಸಿರು ಮತ್ತು ಜಾಂಬಳಿ ಬಣ್ಣಗಳೂ ಸೂಕ್ತವಲ್ಲ. ನೇವಿಬಣ್ಣದ ನೀಲಿಯು ಹೆಚ್ಚು ಸೂಕ್ತ. ಇದು ಶಾಂತ, ಸ್ಥಿರತೆ, ಆತ್ಮವಿಶ್ವಾಸ, ನಂಬಿಕೆಯನ್ನು ಸೂಚಿಸುತ್ತದೆ. ಬೂದು ಬಣ್ಣವು ನೀವು ಸ್ವತಂತ್ರ ಮತ್ತು ಅತ್ಯಾಧುನಿಕ ಮನೋಭಾವದವರು ಎಂಬುದನ್ನು ಸಾಂಕೇತಿಸುತ್ತದೆ. ಅಲ್ಲದೆ, ಇದು ಸಂದರ್ಶಕರ ಗಮನ ಬೇರೆಡೆ ಹರಿಯದಂತೆ ಕಾಪಾಡುತ್ತದೆ. ಕಪ್ಪು ಬಣ್ಣವು ನಾಯಕತ್ವ, ಅಧಿಕಾರಯುತ ಗುಣವನ್ನು ಪ್ರತಿನಿಧಿಸುತ್ತದೆ. ಉನ್ನತ ಸ್ಥಾನ ಮತ್ತು ಆಡಳಿತ ನಿರ್ವಹಣೆಗೆ ಸಂಬಂಧಿಸಿದ ಹುದ್ದೆಗೆ ಇದು ಹೆಚ್ಚು ಹೊಂದುತ್ತದೆ. ಕಂದುಬಣ್ಣವು ಅವಲಂಬನೆ, ಸುರಕ್ಷಿತ, ಬೆಚ್ಚನೆಯ ಭಾವವನ್ನು ಸಾಂಕೇತಿಸುತ್ತದೆ. ತಂಡದೊಂದಿಗೆ ಬೆರೆಯುವ ಗುಣವನ್ನು ಇದು ಹೊಂದಿರುತ್ತದೆ.
ವೆಬ್ಸೈಟ್ ಮತ್ತು ಬಣ್ಣಗಳು
ನೀವು ಯಾರಿಗೋಸ್ಕರ, ಯಾವ ಲಿಂಗದವರಿಗೋಸ್ಕರ ಮತ್ತು ಯಾವ ವಯಸ್ಸಿನವರಿಗೋಸ್ಕರ ವೆಬ್ಸೈಟ್ ರೂಪಿಸುತ್ತಿದ್ದೀರಿ ಎನ್ನುವುದರ ಮೇಲೆ ವಿನ್ಯಾಸಕ್ಕಾಗಿ ಬಣ್ಣಗಳ ಆಯ್ಕೆ ಮಾಡಿಕೊಳ್ಳಬಹುದು. ಇದು ಕಂಪೆನಿಯ ಬ್ರ್ಯಾಂಡ್ ನೇಮ್, ಬ್ಯಾಕ್ಗ್ರೌಂಡ್ ಕಲರ್ನ ಆಯ್ಕೆಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಆದರೆ ಕಂದು ಮತ್ತು ಬೂದು, ಕಿತ್ತಳೆ ಬಣ್ಣಗಳನ್ನು ಹೆಣ್ಣುಮಕ್ಕಳಿಗೆ ಸಂಬಂಧಿಸಿದ ವೆಬ್ ವಿನ್ಯಾಸದಿಂದ ದೂರವಿಡಿ. ಹಾಗೆಯೇ ಕಂದು ಮತ್ತು ಗುಲಾಬಿ ಬಣ್ಣಗಳನ್ನು ಪುರುಷರಿಗೆ ಸಂಬಂಧಿಸಿದ ವೆಬ್ ವಿನ್ಯಾಸದಿಂದ ದೂರವಿಡಿ.
ಹಣಕಾಸು ಮತ್ತು ಪರಿಸರಕ್ಕೆ ಸಂಬಂಧಿಸಿದ ಥೀಮ್ ಇದ್ದಲ್ಲಿ ತಿಳಿಹಸಿರು ಸೂಕ್ತ. ಕೆಂಪು ಬಣ್ಣವು ತುರ್ತು ಮತ್ತು ವೇಗವನ್ನು ಸಾಂಕೇತಿಸುವುದರಿಂದ ಓದುಗರು ತೀವ್ರವಾಗಿ ಸ್ಪಂದಿಸುವ ಸಾಧ್ಯತೆ ಇರುತ್ತದೆ. ತಿಳಿನೀಲಿ ಬಣ್ಣವು ವಿಶ್ವಾಸಾರ್ಹತೆ ಮತ್ತು ಪ್ರಾಮಾಣಿಕತೆಗೆ ಸಂಬಂಧಿಸಿದ್ದು ಓದುಗರನ್ನು ಥಟ್ಟನೆ ಸೆಳೆಯುತ್ತದೆ. ಗಾಢಬಣ್ಣಗಳಾದ ನೀಲಿ, ಕಪ್ಪು, ಕಂದು ಬಣ್ಣಕ್ಕೆ ಓದುಗರು ಆಕರ್ಷಿತರಾಗರು. ಆದರೆ ಗಾಢಕೆಂಪು, ಹಳದಿ, ಕಿತ್ತಳೆ, ಹಸಿರು ಬಣ್ಣಗಳಿಗೆ ಬಲುಬೇಗ ಆಕರ್ಷಿತರಾಗುತ್ತಾರೆ.
ಇದನ್ನೂ ಓದಿ : World Blood Donor Day 2022 : ನಿಮ್ಮ ರಕ್ತದ ಗುಂಪಿನ ಮೂಲಕ ನಿಮ್ಮ ವ್ಯಕ್ತಿತ್ವ ತಿಳಿಯಿರಿ
ಕಚೇರಿಗಳ ಗೋಡೆಬಣ್ಣ
ಇನ್ನು ಕಚೇರಿಗಳ ಗೋಡೆಯ ಬಣ್ಣಕ್ಕೂ ಅಲ್ಲಿಯ ವಾತಾವರಣಕ್ಕೂ ಸಂಬಂದವಿದೆ. ಉದ್ಯೋಗಿಗಳು ಶಾಂತಚಿತ್ತರಾಗಿ ಕೆಲಸದಲ್ಲಿ ಏಕಾಗ್ರತೆ ಸಾಧಿಸಲು, ದೈಹಿಕವಾಗಿ ಚಟುವಟಿಕೆಯಿಂದಿದ್ದು ಅವರಲ್ಲಿರುವ ಸೃಜನಶೀಲತೆ ಹೊಮ್ಮಲು ಬಣ್ಣಗಳ ಪಾತ್ರ ಹಿರಿದು. ನೀಲಿ, ಹಸಿರು, ಹಳದಿ, ಕಿತ್ತಳೆ ಮತ್ತು ಬಿಳಿ, ಕಂದು ಮುಂತಾದವುಗಳು ಗೋಡೆಗಳಿಗೆ ಇರಲಿ. ತಿಳಿನೀಲಿ ಬಣ್ಣವು ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಕೆಲಸ ತ್ವರಿತಗತಿಯಲ್ಲಿ ಸಾಗುತ್ತದೆ. ಹಳದಿ ಮತ್ತು ಕಿತ್ತಳೆ ಬಣ್ಣವು ಉದ್ಯೋಗಿಯನ್ನು ಬೆಚ್ಚಗಿನ ಭಾವದಲ್ಲಿರಿಸಿ ಕೆಲಸ ಮಾಡುವಂತೆ ಮನಸ್ಸನ್ನು ಉಲ್ಲಸಿತಗೊಳಿಸುತ್ತವೆ. ತಿಳಿ ಹಸಿರು ಉದ್ಯೋಗಿಗಳಲ್ಲಿರುವ ಆತಂಕವನ್ನು ಕಡಿಮೆಗೊಳಿಸಿ ಪ್ರಸನ್ನಚಿತ್ತರನ್ನಾಗಿಸುವುದಲ್ಲೆ ಹೆಚ್ಚು ಹೊತ್ತು ಕೆಲಸ ಮಾಡಲು ಪ್ರೇರೇಪಿಸುತ್ತದೆ. ಬಿಳಿ, ಕೆನೆಬಣ್ಣ, ಬೂದು ಬಣ್ಣಗಳು ಸ್ವಚ್ಛವೆನ್ನಿಸಬಹುದು. ಆದರೆ ಉದ್ಯೋಗಿಗಳನ್ನು ಕೆಲಸ ಮಾಡಲು ಉತ್ಸಾಹ ತುಂಬವು. ಕಂದುಬಣ್ಣವೂ ಖಿನ್ನತೆ ಮೂಡಿಸುವ ಸಾಧ್ಯತೆ ಇದೆ.
ಇದನ್ನೂ ಓದಿ : Color Psychology : ಬಣ್ಣಗಳ ಮೂಲಕ ನಿಮ್ಮ ವ್ಯಕ್ತಿತ್ವ ತಿಳಿಯಿರಿ
ಬಿಸಿನೆಸ್ ಕಾರ್ಡ್
ಬಿಸಿನೆಸ್ ಕಾರ್ಡ್ಗಳು ಕಂಪೆನಿಯ ಧ್ಯೇಯ ಮತ್ತು ನಿಮ್ಮ ವೈಯಕ್ತಿಕ ತಾತ್ವಿಕ ನಿಲುವುಗಳನ್ನು ಪ್ರತಿಪಾದಿಸುವಂತಿರಬೇಕು. ದಟ್ಟ ನೀಲಿ, ಹಸಿರು, ಮೆಜೆಂಟಾ, ಕೆಂಪು, ಜಾಂಬಳಿ, ಕಪ್ಪು, ಬಿಳಿ ಈ ಕಾಂಬಿನೇಷನ್ನಲ್ಲಿ ವಿನ್ಯಾಸಗೊಂಡಲ್ಲಿ ಅತ್ಯಾಕರ್ಷಕವಾಗಿರುವುದು. ಏಕೆಂದರೆ ಬಿಳಿಯೊಂದಿಗೆ ಈ ಮೇಲಿನ ಬಣ್ಣಗಳು ಕಾಂಬಿನೇಷನ್ ಮಾಡಿ ವಿನ್ಯಾಸ ಮಾಡಿದಾಗ ಇದು ಗಟ್ಟಿತನವನ್ನು ಸೂಚಿಸುತ್ತದೆ.
Published On - 2:53 pm, Wed, 22 June 22