International Yoga Day 2022 : ವ್ಯಾಯಾಮದ ನಂತರ ಉಂಟಾಗುವ ಸ್ನಾಯುನೋವಿನ ಶಮನಕ್ಕೆ ಈ 4 ಆಸನಗಳನ್ನು ಮಾಡಿ
Yogasana : ಬಹಳಷ್ಟು ಜನ ಸೈಕ್ಲಿಂಗ್, ಜಾಗಿಂಗ್, ರನ್ನಿಂಗ್ ನಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಆದರೆ ಆನಂತರ ಅದರಿಂದ ಉಂಟಾಗುವ ಸ್ನಾಯುಸೆಳೆತ, ನೋವನ್ನು ಹೇಗೆ ಶಮನ ಮಾಡಿಕೊಳ್ಳಬೇಕು ಎನ್ನುವ ಅರಿವು ಅವರಿಗಿರುವುದಿಲ್ಲ.
Yoga : ಪ್ರತೀದಿನ ಯೋಗಾಭ್ಯಾಸ ಮಾಡುವುದು ನಮ್ಮ ದೇಹವನ್ನು ಆರೋಗ್ಯವನ್ನು ಸುಸ್ಥಿತಿಯಲ್ಲಿಡುತ್ತದೆ ಎನ್ನುವುದು ಸಾಬೀತಾಗಿದೆ. ಇದು ತೂಕ ನಿಯಂತ್ರಣಕ್ಕೆ, ಬಲವರ್ಧನೆಗೆ ಮತ್ತು ಉಸಿರಾಟದ ಮೇಲೆ ಕೇಂದ್ರೀಕರಿಸುವುದಕ್ಕೆ ಸಹಾಯ ಮಾಡುತ್ತದೆ. ಬಹಳಷ್ಟು ಜನ ಸೈಕ್ಲಿಂಗ್, ಜಾಗಿಂಗ್, ರನ್ನಿಂಗ್ ನಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಆದರೆ ಆನಂತರ ಅದರಿಂದ ಉಂಟಾಗುವ ಸ್ನಾಯುಸೆಳೆತ, ನೋವನ್ನು ಹೇಗೆ ಶಮನ ಮಾಡಿಕೊಳ್ಳಬೇಕು ಎನ್ನುವ ಅರಿವು ಅವರಿಗಿರುವುದಿಲ್ಲ. ಆಗ ಯೋಗ ಈ ಸಮಸ್ಯೆಗೆ ಪರಿಹಾರವನ್ನು ನೀಡುತ್ತದೆ. ದೈಹಿಕ ಚಲನೆಯಿಂದ ಸ್ನಾಯುಗಳ ಮೇಲೆ ಒತ್ತಡ ಉಂಟಾಗಿ ಗಾಯಗೊಳ್ಳುವ ಸಾಧ್ಯತೆ ಇರುತ್ತದೆ. ಆಗಲೇ ಅತಿಯಾದ ನೋವು ಅನುಭವಕ್ಕೆ ಬರುವುದು. ಹಾಗಾಗಿ ಆ ನೋವಿನಿಂದ ಬಿಡುಗಡೆಗೊಳಿಸಿಕೊಳ್ಳಲು ಇಲ್ಲಿರುವ ಯೋಗಾಭ್ಯಾಸವನ್ನು ನಿಯಮಿತವಾಗಿ ಮಾಡಿದಲ್ಲಿ ಇಡೀ ದಿನ ದೇಹ-ಮನಸ್ಸಿನಲ್ಲಿ ಚೈತನ್ಯ ಉಕ್ಕಿ ಹೆಚ್ಚು ಕೆಲಸಗಳನ್ನು ಮಾಡಲು ಅನುಕೂಲವಾಗುತ್ತದೆ.
ಭುಜಂಗಾಸನ : ಭುಜಂಗ ಎಂದರೆ ಸರ್ಪ. ಈ ಆಸನದಲ್ಲಿ ಹೆಡೆ ಎತ್ತಿದ ಸರ್ಪದ ಆಕಾರದಂತೆ ನಮ್ಮ ಶರೀರವು ತೋರುತ್ತದೆ. ಎರಡೂ ಪಾದಗಳನ್ನು ಒಟ್ಟಿಗೇ ಜೋಡಿಸಿ, ಎದೆ ಎತ್ತಿ, ನಮಸ್ಕಾರ ಮುದ್ರೆಯಲ್ಲಿ ನಿಲ್ಲಬೇಕು. ಕಾಲುಗಳನ್ನು ಅದೇ ಸ್ಥಿತಿಯಲ್ಲಿರಿಸಿಕೊಂಡು ಉಸಿರನ್ನು ಒಳಗೆಳೆದುಕೊಳ್ಳುತ್ತಾ ಎರಡೂ ಕೈಗಳನ್ನು ಮೇಲಕ್ಕೆ ಎತ್ತಿ ನೇರವಾಗಿಡಬೇಕು. ಉಸಿರನ್ನು ಹೊರಗೆ ಬಿಡುತ್ತಾ ಕಾಲುಗಳನ್ನು ಬಾಗಿಸದೇ ಮುಂದಕ್ಕೆ ಬಾಗಿ ಕೈಗಳನ್ನು ನೆಲಕ್ಕೂರಬೇಕು. ನಂತರ ಯಾವುದಾದರೂ ಒಂದು ಕಾಲನ್ನು ಹಿಂದೆ ಚಾಚಿ, ಇನ್ನೊಂದು ಕಾಲನ್ನು ಎರಡು ಕೈಗಳ ಮಧ್ಯೆ ಇಟ್ಟು, ಆದಷ್ಟೂ ಸೊಂಟವನ್ನು ಕೆಳಕ್ಕೆ ಒತ್ತಬೇಕು. ನಂತರ ಬೆನ್ನನ್ನು ಹಿಂದಕ್ಕೆ ಬಾಗಿಸಿ ತಲೆ ಎತ್ತಿ ಆಕಾಶಮುಖಿಯಾಗಬೇಕು. ನಂತರ ಎಡಗಾಲನ್ನು ಬಲಗಾಲಿಗೆ ಜೋಡಿಸಿ ಇಡೀ ದೇಹವನ್ನು ನೇರವಾಗಿ ಇರಿಸಿಕೊಳ್ಳಬೇಕು. ಇಡೀ ಶರೀರದ ಭಾರವನ್ನು ಅಂಗೈ, ಕಾಲಬೆರಳುಗಳ ಮೇಲೆ ಹೊರಿಸಿ ಬೆನ್ನನ್ನು ಸಾಧ್ಯವಾದಷ್ಟೂ ಹಿಂದಕ್ಕೆ ಬಾಗಿಸಬೇಕು. ಇದೇ ಸ್ಥಿತಿಯಲ್ಲಿ ಸುಮಾರು ಎರಡು ನಿಮಿಷಗಳಾದರೂ ಇರಬೇಕು. ಭುಜಂಗಾಸನದಿಂದ ಕೈಗಳು, ಸೊಂಟ ಬಲಶಾಲಿಯಾಗುತ್ತದೆ. ತೊಡೆಗಳಲ್ಲಿನ ನೋವು ಶಮನವಾಗುತ್ತದೆ. ಶ್ವಾಸಕೋಶ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಗೂ ಪರಿಹಾರ ಒದಗುತ್ತದೆ.
ಇದನ್ನೂ ಓದಿ : International Yoga Day 2022: ಮಕ್ಕಳಿಗಾಗಿ ಈ 5 ಯೋಗಾಸನಗಳು
ಬಾಲಾಸನ : ಮೊದಲು ಮಂಡಿ ಮೇಲೆ ಕುಳಿತುಕೊಳ್ಳಬೇಕು. ನಂತರ ಎರಡೂ ಕೈಗಳನ್ನು ಮೇಲೆ ಎತ್ತಿ, ನೆಲಕ್ಕೆ ಚಾಚಿ ತಲೆಯನ್ನು ನೆಲಕ್ಕೆ ತಾಕಿಸಬೇಕು. ಎದೆ, ತೊಡೆಯ ಮೇಲೆ ವಿಶ್ರಮಿಸಬೇಕು. ಈ ಆಸನವು ನಿಮ್ಮ ಕೆಳಬೆನ್ನು ಮತ್ತು ಸೊಂಟದ ಬಳಿ ಎಳೆದ ಅನುಭವವಾಗುವುದು. ಸುಮಾರು ಹತ್ತು ಸಲವಾದರೂ ಇದೇ ಭಂಗಿಯಲ್ಲಿ ಆಳ ಉಸಿರಾಟ ನಡೆಸಬೇಕು. ಆಗ ಮನಸ್ಸು ಶಾಂತಸ್ಥಿತಿಗೆ ಬರುತ್ತದೆ. ಇದು ದೈಹಿಕವಾಗಿ ಮತ್ತು ಮಾನಸಿಕವಾಗಿ ದೇಹವನ್ನು ವಿಶ್ರಾಂತಿ ನೀಡುವ ಆಸನವಾಗಿದೆ. ಆತಂಕ ಆಯಾಸವನ್ನು ಕಡಿಮೆ ಮಾಡಿ ಬೆನ್ನುಮೂಳೆ, ತೊಡೆ, ಸೊಂಟ, ಮೊಣಕಾಲುಗಳನ್ನು ಆರಾಮದಾಯಕಗೊಳಿಸುತ್ತದೆ.
ಆಂಜನೇಯಾಸನ : ತೊಡೆಗೆ ಬಲ ಮತ್ತು ಆರಾಮದಾಯಕ ಅನುಭವವನ್ನು ಈ ಆಸನ ಕೊಡುತ್ತದೆ. ಅಧೋಮುಖ ಶ್ವಾನಾಸನದ ಭಂಗಿಯಲ್ಲಿ ಮೊದಲು ಕುಳಿತುಕೊಳ್ಳಬೇಕು. ಬಲಪಾದವನ್ನು ಮುಂದೆ ಇಡಬೇಕು. ಬಲಮಂಡಿ, ಬಲ ಮೊಣಕಾಲನ್ನು ನೇರವಾಗಿ ಇರಿಸಬೇಕು. ಎ ಮಂಡಿಯನ್ನು ನೆಲದ ಮೇಲಿರಿಸಬೇಕು. ನಿಧಾನ ತೋಳುಗಳನ್ನು ಮೇಲಕ್ಕೆತ್ತಿ ಕೈಗಳನ್ನು ತಲೆಯ ಮೇಲಿರಿಸಬೇಕು. ನಿಮ್ಮ ಎರಡೂ ಕೈಗಳು ಅಭಿಮುಖವಾಗಿರಬೇಕು. ಸೈಕ್ಲಿಂಗ್, ಓಟದಿಂದ ಉಂಟಾದ ಸ್ನಾಯುಸೆಳೆತ, ದೈಹಿಕ ಒತ್ತಡದಿಂದ ಬಿಡುಗಡೆ ನೀಡುತ್ತದೆ. ಎದೆ, ಭುಜಗಳು ಮತ್ತು ತಲೆಯನ್ನು ಶಕ್ತಿಯುತಗೊಳಿಸುತ್ತದೆ.
ಇದನ್ನೂ ಓದಿ : International Yoga Day 2022: ನಿಮ್ಮ ಹೃದಯ ಜೋಪಾನಿಸಿಕೊಳ್ಳಲು ಈಗಿನಿಂದಲೇ ಯೋಗ ಮಾಡಿ
ಅರ್ಧ ಮತ್ಸ್ಯೇಂದ್ರಾಸನ : ಆಸನ ಪ್ರಾರಂಭಿಸುವ ಮೊದಲು ಎರಡೂ ಕಾಲುಗಳನ್ನು ಮುಂದಕ್ಕೆ ಚಾಚಿ ಕುಳಿತುಕೊಳ್ಳಿ. ನಂತರ ಎಡಗಾಲನ್ನು ಮಡಿಚಿ, ಎಡ ಹಿಮ್ಮಡಿಯು ಪೃಷ್ಠಭಾಗದ ಒಳಬದಿ ಬರುವಂತೆ ಇಡಿ. ಈ ಸ್ಥಿತಿಯಲ್ಲಿ ಎಡಗಾಲಿನ ತೊಡೆ ಮತ್ತು ಮೀನಖಂಡಗಳು ಪರಸ್ಪರ ಅಂಟಿಕೊಂಡಿರಲಿ. ಬಲಗಾಲನ್ನು ಮಡಿಚಿ, ಎಡಗಾಲಿನ ಮಂಡಿಯನ್ನು ಹೊರಚಾಚಿ ನಿಲ್ಲಿಸಿ. ನಂತರ ಎದೆಯನ್ನು ಸ್ವಲ್ಪ ಬಲಕ್ಕೆ ತಿರುಗಿಸಿ ಎಡಗೈಯಿಂದ ಬಲಮಂಡಿಯನ್ನು ಬಳಸಿ ಬಲಗಾಲಿನ ಹೆಬ್ಬೆರಳನ್ನು ಹಿಡಿಯಿರಿ. ಬಲಗೈಯನ್ನು ಬೆನ್ನಿನ ಮೇಲೆ ಇಟ್ಟು ಎಡತೊಡೆಯನ್ನು ಹಿಡಿದುಕೊಳ್ಳಲು ಪ್ರಯತ್ನಿಸಿ. ಸೊಂಟದಿಂದ ಮೇಲ್ಭಾಗದ ಶರೀರವು ತಿರುಚಿದಂತಾಗಿ ಎದೆ, ಬೆನ್ನು ಮತ್ತು ಕೈಗಳಲ್ಲಿ ವಿಶೇಷ ಚಲನೆಯ ಅನುಭವವಾಗುತ್ತದೆ. ನಂತರ ಸಾಧ್ಯವಾದಷ್ಟೂ ಈ ಸ್ಥಿತಿಯಲ್ಲಿದ್ದು, ನಿಧಾನ ಇನ್ನೊಂದು ಕಾಲಿನೊಂದಿಗೂ ಇದೇ ಪ್ರಯೋಗ ಮಾಡಿ . ಬೆನ್ನುಮೂಳೆಯ ಡಿಸ್ಕ್ ನಿರ್ಜಲೀಕರಣಗೊಳ್ಳದಂತೆ ಇದು ಸಹಾಯ ಮಾಡುತ್ತದೆ.