New Book ; ಅಚ್ಚಿಗೂ ಮೊದಲು : ಬರಲಿದೆ ಕಾಳುಮೆಣಸಿನರಾಣಿ ಚೆನ್ನಭೈರಾದೇವಿಯ ಅಕಳಂಕ ಚರಿತೆ

'ಗಜಾನನ ಶರ್ಮರು ಚರಿತ್ರೆಯ ಬೆನ್ನುಹತ್ತಿದ್ದಾರೆ. ಚೆನ್ನಭೈರಾದೇವಿಯ ಬದುಕಿನ ಅಪರೂಪದ ಘಟನೆಗಳನ್ನು ತಂದು ನಮ್ಮ ಮುಂದಿಟ್ಟಿದ್ದಾರೆ. ಪುಟಪುಟದಲ್ಲೂ ರೋಮಾಂಚನಗೊಳಿಸುವ ವಿವರಗಳ ಜತೆಗೇ ರಾಜನೀತಿ, ಜೀವನ ವಿಧಾನ, ಧೀಮಂತಿಕೆ, ಉತ್ಕಟವಾದ ಪ್ರೇಮ ಮತ್ತು ಹೆಣ್ಣಿನ ಅಂತಃಸತ್ವವನ್ನು ತೆರೆದಿಡುವ ಈ ಕೃತಿ ಕನ್ನಡ ಚಾರಿತ್ರಿಕ ಕಥನಗಳ ಪಟ್ಟಿಗೆ ಅಮೂಲ್ಯ ಸೇರ್ಪಡೆ. ಇತ್ತೀಚಿನ ಮೂರು ನಾಲ್ಕು ದಶಕಗಳಲ್ಲಿ ನಾನು ಇಷ್ಟು ಸಮೃದ್ಧವಾದ ಪ್ರಾಮಾಣಿಕವಾದ ಐತಿಹಾಸಿಕ ಕಾದಂಬರಿಯನ್ನು ಓದಿಲ್ಲ.‘ ಜೋಗಿ

New Book ; ಅಚ್ಚಿಗೂ ಮೊದಲು : ಬರಲಿದೆ ಕಾಳುಮೆಣಸಿನರಾಣಿ ಚೆನ್ನಭೈರಾದೇವಿಯ ಅಕಳಂಕ ಚರಿತೆ
ಡಾ. ಗಜಾನನ ಶರ್ಮಾ

ಕಾರಣ ಹುಡುಕುತ್ತ ಹೊರಟರೆ ನೂರೆಂಟಿರಬಹುದು, ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.

ಟಿವಿ9 ಕನ್ನಡ ಡಿಜಿಟಲ್​ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್​ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com

ಇದೇ 28ರಂದು ಬೆಂಗಳೂರಿನ ಅಂಕಿತ ಪುಸ್ತಕದಿಂದ ಸಾಹಿತಿ ಡಾ. ಗಜಾನನ ಶರ್ಮಾ ಅವರ ಹೊಸ ಕಾದಂಬರಿ ‘ಚೆನ್ನಭೈರಾದೇವಿ’ ಆನ್​ಲೈನ್​ ಮೂಲಕ ಬಿಡುಗಡೆಯಾಗಲಿದೆ. ಆಯ್ದ ಭಾಗ ನಿಮ್ಮ ಓದಿಗೆ. 

ಕೃತಿ : ಚೆನ್ನಭೈರಾದೇವಿ ಕರಿಮೆಣಸಿನ ರಾಣಿಯ ಅಕಳಂಕ ಚರಿತೆ (ಐತಿಹಾಸಿಕ ಕಾದಂಬರಿ) ಲೇ :  ಡಾ. ಗಜಾನನ ಶರ್ಮಾ ಪುಟ : 432 ಬೆಲೆ : 395 ರೂ. ಮುಖಪುಟ ಕಲೆ : ಪೂರ್ಣಿಮಾ ಆಚಾರ್ಯ ಅಕ್ಷರ ವಿನ್ಯಾಸ : ಸುಧಾಕರ ದರ್ಬೆ ಪ್ರಕಾಶನ : ಅಂಕಿತ ಪುಸ್ತಕ, ಬೆಂಗಳೂರು 

ಸಂಕಷ್ಟದಲ್ಲಿರುವವರಿಗೆ ದೂರದಲ್ಲೇ ಇದ್ದು ಕಾಪಾಡುವ ಅವ್ವರಸಿ, ಹತ್ತಿರದಿಂದ ಕಂಡವರಿಗೆ ಸಣ್ಣಮ್ಮ, ಶತ್ರುಗಳ ಪಾಲಿಗೆ ಎದೆನಡುಗಿಸುವ ಚೆನ್ನಭೈರಾದೇವಿ, ಬಂಧುಮಿತ್ರರಿಗೆ ಎಂದೂ ಎಚ್ಚರ ತಪ್ಪದ ನಿರ್ದಾಕ್ಷಿಣ್ಯ ಹೆಣ್ಣು, ಪೋರ್ಚುಗೀಸರ ಪಾಲಿಗೆ ರೈನಾ ದ ಪಿಮೆಂಟಾ. ದಕ್ಷಿಣ ಕೊಂಕಣ ಹಾಗೂ ಮಲೆನಾಡನ್ನು 54 ವರ್ಷಗಳ ಕಾಲ ಆಳಿದ ಚೆನ್ನಾಭೈರಾದೇವಿಯ ಕಥೆಯನ್ನು ಎಷ್ಟು ವಸ್ತುನಿಷ್ಠವಾಗಿ ಹೇಳಲು ಸಾಧ್ಯವೋ ಅಷ್ಟು ಅಚ್ಚುಕಟ್ಟಾಗಿ ಹೇಳಿದ್ದಾರೆ ಡಾ. ಗಜಾನನ ಶರ್ಮ. ಇದು ಕೇವಲ ಚೆನ್ನಭೈರಾದೇವಿಯ ಕಥೆಯಷ್ಟೇ ಅಲ್ಲ, ನೂರು ವರುಷಗಳ ಶರಾವತಿ ದಂಡೆಯ ಚರಿತ್ರೆ. ಕರಾವಳಿ-ಪಶ್ಚಿಮ ಮಲೆನಾಡಿನ ವೈವಿಧ್ಯಮಯ ಜೀವನ ಶೈಲಿಯ ಕಷ್ಟಕತೆ, ಜೈನಧರ್ಮೀಯರ ಸಾಹಸ ತ್ಯಾಗದ ಚಿತ್ರ, ಬಿಜಾಪುರದ ಸುಲ್ತಾನರು ಹಾಗೂ ವಿಜಯನಗರದ ಅರಸರೊಂದಿಗಿನ ಸಂಬಂಧ ಕಡಿದುಕೊಳ್ಳದೇ ಒತ್ತೊತ್ತಿ ಬಂದ ಪೋರ್ಚುಗೀಸರಿಂದ ಒಂದಿಡೀ ತಲೆಮಾರನ್ನು ಕಾಪಾಡಿದ ರಾಣಿಯ ಸಾಹಸ, ಪ್ರೇಮ, ತ್ಯಾಗ ಮತ್ತು ಧೀಮಂತ ವ್ಯಕ್ತಿತ್ವದ ಸಮಗ್ರ ಚಿತ್ರ.

ಚಾರಿತ್ರಿಕ ಕಾದಂಬರಿಗಳನ್ನು ಬರೆಯುವುದು ಸುಲಭವಲ್ಲ. ಏಕಕಾಲಕ್ಕೆ ಇತಿಹಾಸಕ್ಕೂ ನಿಷ್ಠರಾಗಿದ್ದುಕೊಂಡು ರೋಚಕತೆಗೂ ಮೋಸವಾಗದಂತೆ ಬರೆಯಲಿಕ್ಕೆ ಅಗಾಧವಾದ ಪರಿಶ್ರಮ, ಪ್ರತಿಭೆ ಮತ್ತು ಅಧ್ಯಯನ ಬೇಕು. ಡಾ. ಗಜಾನನ ಶರ್ಮರಿಗೆ ಅದು ಸಿದ್ಧಿಸಿದೆ. ಈ ಹಿಂದೆ ಪುನರ್ವಸು ಕಾದಂಬರಿಯ ಮೂಲಕ ಶರಾವತಿಯ ಕಥನವನ್ನು ಕಟ್ಟಿಕೊಟ್ಟ ಗಜಾನನ ಶರ್ಮರು, ಇಲ್ಲಿ ಚರಿತ್ರೆಯ ಬೆನ್ನುಹತ್ತಿದ್ದಾರೆ. ಚೆನ್ನಭೈರಾದೇವಿಯ ಬದುಕಿನ ಅಪರೂಪದ ಘಟನೆಗಳನ್ನು ತಂದು ನಮ್ಮ ಮುಂದಿಟ್ಟಿದ್ದಾರೆ. ಪುಟಪುಟದಲ್ಲೂ ರೋಮಾಂಚನಗೊಳಿಸುವ ವಿವರಗಳ ಜತೆಗೇ ರಾಜನೀತಿ, ಜೀವನ ವಿಧಾನ, ಧೀಮಂತಿಕೆ, ಉತ್ಕಟವಾದ ಪ್ರೇಮ ಮತ್ತು ಹೆಣ್ಣಿನ ಅಂತಃಸತ್ವವನ್ನು ತೆರೆದಿಡುವ ಈ ಕೃತಿ ಕನ್ನಡ ಚಾರಿತ್ರಿಕ ಕಥನಗಳ ಪಟ್ಟಿಗೆ ಅಮೂಲ್ಯ ಸೇರ್ಪಡೆ. ಇತ್ತೀಚಿನ ಮೂರು ನಾಲ್ಕು ದಶಕಗಳಲ್ಲಿ ನಾನು ಇಷ್ಟು ಸಮೃದ್ಧವಾದ ಪ್ರಾಮಾಣಿಕವಾದ ಐತಿಹಾಸಿಕ ಕಾದಂಬರಿಯನ್ನು ಓದಿಲ್ಲ. ಜೋಗಿ, ಹಿರಿಯ ಸಾಹಿತಿ, ಪತ್ರಕರ್ತ

ಹದಿನಾರನೆಯ ಶತಮಾನದಲ್ಲಿ ದಕ್ಷಿಣ ಭಾರತದ ಅತ್ಯಂತ ಶ್ರೀಮಂತ ಸಂಸ್ಥಾನವೆಂದು ಗೇರುಸೊಪ್ಪೆ ರಾಜ್ಯ ಹೆಸರಾಗಲು ಚೆನ್ನಭೈರಾದೇವಿಯ ವ್ಯವಹಾರ ಕೌಶಲವೇ ಕಾರಣ. ವರ್ತಕರು ಅನ್ಯ ರಾಜ್ಯಗಳಲ್ಲಿ  ಖರೀದಿಸಿದ ವಸ್ತುಗಳನ್ನು ತನ್ನ ರಾಜ್ಯದಲ್ಲಿ ವಿದೇಶೀಯರಿಗೆ ಮಾರಿ ಲಾಭಗಳಿಸಲು ಮುಕ್ತ ಪರವಾನಗಿ ಕೊಟ್ಟು ವ್ಯವಹಾರ ನೈಪುಣ್ಯವನ್ನು ಮೆರೆದ ರಾಣಿ, ತನ್ನ ರಾಜ್ಯದ ವರ್ತಕರಿಗೆ ವಿಧಿಸುವ ಅಗ್ಗದ ಸುಂಕವನ್ನೇ ಅನ್ಯ ರಾಜ್ಯಗಳ ವರ್ತಕರಿಗೂ ವಿಸ್ತರಿಸಿ, ಭಟ್ಕಳ,  ಬೈಂದೂರು, ಹೊನ್ನಾವರ, ಕುಮುಟ, ಮಿರ್ಜಾನ, ಅಂಕೋಲ, ಕಾರವಾರ, ಹಳ್ಳಿಕೇರಿ ರೇವುಗಳನ್ನು ವ್ಯಾಪಾರ  ಕೇಂದ್ರಗಳಾಗಿ ಪರಿವರ್ತಿಸಿ, ರಾಜ್ಯದಲ್ಲಿ ಸದಾ ವಾಣಿಜ್ಯ ಚಟುವಟಿಕೆ ನಡೆಯುವಂತೆ ನೋಡಿಕೊಂಡ ಚತುರೆ. ಗೋವೆಯ ಕುಶಲಕರ್ಮಿಗಳಿಗೆ ತನ್ನ ರಾಜ್ಯದಲ್ಲಿ ಆಶ್ರಯವಿತ್ತು ರಥ, ಮೇನೆ, ಎತ್ತಿನಗಾಡಿ ಕುದುರೆಬಂಡಿಗಳನ್ನು ತಯಾರಿಸಿ,  ಇಡೀ ರಾಜ್ಯದಲ್ಲಿ ರಸ್ತೆಗಳ ಜಾಲವನ್ನು ನಿರ್ಮಿಸಿ ಜನರ ಮತ್ತು ವಸ್ತುಗಳ ಸುಲಭದ ಸಾಗಣೆಗೆ ಅವಕಾಶ ಕಲ್ಪಿಸಿದವಳು.  ನೌಕೆ ಮತ್ತು ದೋಣಿಗಳ ನಿರ್ಮಾಣಕ್ಕೆ ಆದ್ಯತೆ ಕೊಟ್ಟು ಸಾಗರೋತ್ತರ ವ್ಯಾಪಾರವನ್ನು ಪ್ರೋತ್ಸಾಹಿಸಿದವಳು. ಬಿಳಿಮೆಣಸಿಗೆ ಬರುತ್ತಿದ್ದ ಬೇಡಿಕೆಯನ್ನು ಮುಂದಾಗಿ ಗ್ರಹಿಸಿ ಮೆಣಸನ್ನು ಬಿಳಿಮೆಣಸನ್ನಾಗಿ ಪರಿವರ್ತಿಸಿ, ಅಧಿಕ ದರದಲ್ಲಿ ನಿರ್ಯಾತು ಮಾಡಿ  ಅಪಾರ ಲಾಭ ಗಳಿಸಿದವಳು. ಮಲೆಯಾಳದಿಂದ ಮೆಣಸಿನ ಕುಡಿ ತರಿಸಿ ಕಾಳುಮೆಣಸನ್ನು ತೋಟದ ಬೆಳೆಯಾಗಿ ಬೆಳೆಯುವುದನ್ನು ಕೆನರಾ ಮತ್ತು ಮಲೆನಾಡಿಗೆ ವಿಸ್ತರಿಸಿದ ಬುದ್ಧಿವಂತೆ. ಭಟ್ಕಳ ಹೊನ್ನಾವರ ರೇವುಗಳ ಮೂಲಕ ವಿಜಯನಗರದ  ಚಕ್ರವರ್ತಿಗಳಿಗೆ ಪರ್ಶಿಯಾದಿಂದ ಉತ್ತಮ ಜಾತಿಯ ಕುದುರೆಗಳನ್ನು ತರಿಸಿ ತಲುಪಿಸುತ್ತಿದ್ದ ಆಕೆ ಗೋವೆ ಪರಂಗಿಗಳ ಪಾಲಾದ ಮೇಲೆ ಬಿಜಾಪುರದವರಿಗೂ ಕುದುರೆಗಳನ್ನು ಒದಗಿಸುತ್ತಿದ್ದ ವ್ಯವಹಾರ ಕುಶಲಿ.

ಯುರೋಪು ಬೆಳ್ಳಿಯ ಅತಿಪ್ರಸರಣಕ್ಕೆ ಸಿಲುಕಿ ಬಳಲುತ್ತಿದ್ದ ಸಂದರ್ಭದಲ್ಲಿ ತಾನು ಸಾಂಬಾರು ಪದಾರ್ಥಗಳಿಗೆ ಬಂಗಾರದ ಬದಲಿಗೆ ಬೆಳ್ಳಿ ವಿನಿಮಯವನ್ನು ಒಪ್ಪಿ ಅದಕ್ಕೆ ಅನುಗುಣವಾಗಿ ವ್ಯಾಪಾರದ ಒಪ್ಪಂದಗಳನ್ನು ಪರಿಷ್ಕರಿಸಿ ಲಾಭಗಳಿಸಿ ಸಾಗರೋತ್ತರ ವ್ಯವಹಾರದಲ್ಲಿ ಮುಂಚೂಣಿಯಲ್ಲಿ ನಿಂತ ಹೆಣ್ಣುಮಗಳು. ತನ್ನ ರಾಜ್ಯದಲ್ಲಿ ಬೆಳ್ಳಿಯ ನಾಣ್ಯವನ್ನು ಠಂಕಿಸಿ ವ್ಯವಹಾರವನ್ನು ಸರಳಗೊಳಿಸಿದವಳು. ತನ್ನ ವ್ಯಾಪ್ತಿಯ ಕಾನೂರು, ಮೇದಿನಿ, ಮಿರ್ಜಾನಗಳಲ್ಲಿ ಪಾಳುಬಿದ್ದಿದ್ದ ಹಳೆಯ ಕೋಟೆಗಳನ್ನು ಪುನರ್ನಿರ್ಮಿಸಿ ಅಲ್ಲಿ ಕಾಳುಮೆಣಸು ಮತ್ತು ಸಂಪತ್ತನ್ನು ಸಂಗ್ರಹಿಸಿದವಳು. ರಾಜ್ಯದುದ್ದಕ್ಕೂ ಕೋಟೆ, ಕೆರೆ ಬಾವಿ ರಸ್ತೆ ಕಾಲುವೆ ಸಂತೆಕಟ್ಟೆಗಳನ್ನು ನಿರ್ಮಿಸಿ ಅಥವಾ ದುರಸ್ತಿಗೊಳಿಸಿ ರಾಜ್ಯದ ಸಮೃದ್ಧಿಗೆ ಕಾರಣಳಾದವಳು. ನಾಡಿನ ಹಲವೆಡೆ ದೇಗುಲ, ಬಸಿದಿ, ಚೈತ್ಯಾಲಯಗಳನ್ನು ನಿರ್ಮಿಸಿದವಳು. ಚತುರ್ಮುಖ ಬಸಿದಿಯಂತಹ ಬಹು ಅಪರೂಪದ ನಿರ್ಮಾಣಕ್ಕೆ ಇಂಬುಗೊಟ್ಟವಳು.  ನೂರಾರು ದೇಗುಲ ಮತ್ತು ಬಸಿದಿಗಳಿಗೆ ದಾನ ಧರ್ಮ ದತ್ತಿ ಉಂಬಳಿಗಳನ್ನಿತ್ತು ಸಮಾಜದಲ್ಲಿ ಧರ್ಮಕಾರ್ಯದ ಸುಸ್ಥಿರತೆಯನ್ನು ಕಾಪಾಡಿದವಳು.

1606ರಲ್ಲಿ ಕೆಳದಿಯವರ ವಂಚನೆಗೆ ಕೈಸೆರೆ ಸಿಕ್ಕಿ ಸೆರೆಮನೆಯಲ್ಲೇ ಸಲ್ಲೇಖನ ಪುಣ್ಯವ್ರತ ಕೈಗೊಂಡು ಅಮರಳಾದ ಆಕೆಯನ್ನು ಪ್ರಸ್ತುತ ಅಮೆರಿಕೆಯ ಟೆಕ್ಸಾಸ್ ಯೂನಿವರ್ಸಿಟಿಯಲ್ಲಿ ಪ್ರೊಫೆಸರ್ ಆಗಿರುವ ಡಾ. ವೋಜೋವಸ್ಕಿಯಂತಹ  ಪಾಶ್ಚಾತ್ಯ ವಿದ್ವಾಂಸರು ಆಕೆಯನ್ನು ಅವಳ ಸಮಕಾಲೀನಳಾಗಿದ್ದ ಇಂಗ್ಲೆಂಡಿನ ರಾಣಿ ಮೊದಲನೇ ಎಲಿಜಬೆತ್ತಳಿಗೆ ಹೋಲಿಸಿದ್ದರಲ್ಲಿ ಕಿಂಚಿತ್ತೂ ಆಶ್ಚರ್ಯವಿಲ್ಲ. ಆದರೆ ಇಟಲಿ ದೇಶದ ವಿಕ್ಷಿಪ್ತ ಮನಸ್ಸಿನ ಪ್ರವಾಸಿ ಡೆಲ್ಲವೆಲ್ಲೆಯ  ಕ್ಷುಲ್ಲಕ ಆಪಾದನೆಯೊಂದರ ದೆಸೆಯಿಂದ ಅವಳಂತಹ ದಿಟ್ಟ, ಧೀಮಂತ ರಾಣಿಯನ್ನು ನಮ್ಮ ಚರಿತ್ರೆ ಕಡೆಗಣಿಸಿದ್ದು ಕರುನಾಡಿನ ದೌರ್ಭಾಗ್ಯ. ಆ ಕಾರಣಕ್ಕಾಗಿಯೇ ಕರಿಮೆಣಸಿನ ರಾಣಿಯ ಈ ಅಕಳಂಕ ಚರಿತೆಯನ್ನು ನಿಮ್ಮ ಕೈಗಿಡುತ್ತಿದ್ದೇನೆ. ಸ್ಪಷ್ಟವಾಗಿ ಹೇಳುತ್ತೇನೆ, ಇದು ಆಕೆಯ ನೈಜ ಕತೆಯಲ್ಲ. ಅವಳ ಜೀವನ ಚರಿತ್ರೆಯೂ ಅಲ್ಲ. ಆ ಕಾಲದ ಹಲವು ಸತ್ಯಘಟನೆಗಳನ್ನು ಆಧರಿಸಿ, ದೇಶಕಾಲಗಳಿಗೆ ಅನ್ವಯವಾಗುವಂತೆ ಹೆಣೆದ ಕಾಲ್ಪನಿಕ ಚಿತ್ರಣ.

ಡಾ. ಗಜಾನನ ಶರ್ಮ, ಕೃತಿಯ ಲೇಖಕರು
achchigoo modhalu

ಪಾಳುಬಿದ್ದ ಚೆನ್ನಭೈರಾದೇವಿಯ ಕಾನೂರು ಕೋಟೆ

ಬೀಟ್ರಿಜ್ ಡಿಸಿಲ್ವಾ, ಒಂದೆರಡು ಬಾರಿ ದೊರೆ ಸೆಬಾಸ್ಟೀನನ ನಿವಾಸವಾಗಿದ್ದ ಪ್ಯಾಸೋ ಡ ರಿಬೀರೊದ ಉದ್ಯಾನದವರೆಗೆ ಹೋಗಿದ್ದಳಾದರೂ ಅರಮನೆಯ ಒಳಗಾಗಲೀ, ಪ್ರಾಕಾರದಲ್ಲಿದ್ದ ಕಾರ್ಯಾಲಯ ಸಂಕೀರ್ಣಕ್ಕಾಗಲೀ ಭೇಟಿಯಿತ್ತಿರಲಿಲ್ಲ. ಲಿಸ್ಬನ್ ನಗರದ ನಟ್ಟನಡುವೆ, ಜಗತ್ಪ್ರಸಿದ್ಧ ಹಡಗು ನಿರ್ಮಾಣ ಕೇಂದ್ರ ‘ರಿಬೀರಾ ಡ ನಾವ್ಸ್’ ಪಕ್ಕದಲ್ಲಿ, ತೇಜೋ ನದಿಗೆ ಮುಖ ಮಾಡಿ, ಹದಿನಾರನೇ ಶತಮಾನದ ಆರಂಭದಲ್ಲಿ ನಿರ್ಮಾಣಗೊಂಡಿದ್ದ ಪ್ಯಾಸೋ ಡ ರಿಬೀರೋಗೆ ಹೋಗಲು ಅರಮನೆಯ ಅನುಮತಿ ಪತ್ರವಿಲ್ಲದಿದ್ದರೆ ಕಾರ್ಯಾಲಯದ ಆಹ್ವಾನ ಪತ್ರವಾದರೂ ಬೇಕಿತ್ತು. ಅರಮನೆಯ ದಕ್ಷಿಣಭಾಗದಲ್ಲಿದ್ದ ರಾಜಗೋಪುರ, ಟೊರೋ ಡ ಮೊನಾರ್ಕಾ ಮೇಲೆ ನಿಂತರೆ ನದಿಯ ತೀರದುದ್ದಕ್ಕೂ ತಲೆಯೆತ್ತಿ ನಿಂತಿದ್ದ ಸಾಗರೋತ್ತರ ವ್ಯಾಪಾರದ ಮಳಿಗೆಗಳು, ವಾಣಿಜ್ಯ ಕಾರ್ಯಾಲಯಗಳು ಮತ್ತು ಪಕ್ಕದ ಹಡಗು ನಿರ್ಮಾಣ ಸಂಕೀರ್ಣ ಸ್ಪಷ್ಟವಾಗಿ ಕಾಣಿಸುವುದೆಂದೂ, ಭಾರತದ ಆಡಳಿತವನ್ನು ನೋಡಿಕೊಳ್ಳುವ, ‘ಕಾಸಾ ಡ ಇಂಡಿಯಾ’ ಈ ಗೋಪುರದ ಕೆಳ ಅಂತಸ್ತಿನಲ್ಲೇ ಇದೆಯೆಂದೂ ಜನ ಹೇಳುವುದನ್ನು ಕೇಳಿದ್ದ ಆಕೆ ತನಗೆ ಕರೆ ಕಳಿಸಿದ್ದ ಪತ್ರವನ್ನು ಹಿಡಿದು ಕಾಸಾ ಡ ಇಂಡಿಯಾ ಕಛೇರಿಯತ್ತ ಹೊರಟಿದ್ದಳು.

ಇಂಡಿಯಾ ಕಚೇರಿಯನ್ನು ಒಳಹೊಕ್ಕ ಆಕೆ ಅಲ್ಲಿದ್ದ ತರುಣ ಅಧಿಕಾರಿಯೊಬ್ಬನಿಗೆ ಪತ್ರವನ್ನು ತೋರಿಸುತ್ತಿದ್ದಂತೆ ಆತ ಒಂದು ಕ್ಷಣ ಅವಳನ್ನೇ ದಿಟ್ಟಿಸಿ ನೋಡಿ, ಪತ್ರವನ್ನು ಕೈಯ್ಯಲ್ಲೇ ಹಿಡಿದು ಅವಳಿಗೆ ಬರುವಂತೆ ಬೆರಳಲ್ಲೇ ಸನ್ನೆಮಾಡಿ, ಒಳಜಗುಲಿಯ ಬಲಭಾಗದಲ್ಲಿ ವಿಶಾಲ ಕೊಠಡಿಯೊಂದರೊಳಗೆ ಕೂತಿದ್ದ ವಿಕರಾಳ ಆಕೃತಿಯ ಅಧಿಕಾರಿಯೊಬ್ಬನ ಮುಂದೆ ತಂದು ನಿಲ್ಲಿಸಿದ. ಬೋಳು ತಲೆ, ದಪ್ಪಮೀಸೆ, ಪೊದೆಹುಬ್ಬು, ಉರಿಗಣ್ಣು, ಸಿಂಡರಿಸಿಕೊಂಡ ಮೈಲಿಮುಖದ ದಡೂತಿ ಅಧಿಕಾರಿ, ಪತ್ರವನ್ನು ಕಾಣುತ್ತಿದ್ದಂತೆಯೇ, ಇವಳನ್ನು ದುರುಗುಟ್ಟಿ ನೋಡಿ, ಕುಳಿತುಕೊಳ್ಳಲು ಹೇಳುವ ಸೌಜನ್ಯವನ್ನೂ ತೋರದೆ, ‘ಓ ನೀನೇ ಏನು ಮಿಸ್ಟ್ರಿಸ್ ಬೀಟ್ರಿಜ್ ಡಿಸಿಲ್ವ. ವಂಚಕ ಪಾಗನ್ನನ ಪವಿತ್ರ ಪೋಷಕಿ. ಚಕ್ರವರ್ತಿಗಳಿಗೆ ದ್ರೋಹ ಎಸೆಗುತ್ತಿರುವ ನೀಚನನ್ನು ಪೊರೆಯುವುದು ಎಷ್ಟು ದೊಡ್ಡ ಅಪರಾಧವೆಂದು ಗೊತ್ತು ತಾನೇ? ಗೊತ್ತಿದ್ದರೂ ಎಲ್ಲಿ ಬಿಡುತ್ತೀರಿ ನಿಮ್ಮ ದರಿದ್ರ ಯಹೂದೀ ಹುಟ್ಟುಬುದ್ಧಿಯನ್ನು?’ ಎಂದು ಏರುಸ್ವರದಲ್ಲಿ ಅಬ್ಬರಿಸಿದ. ಡಿಸಿಲ್ವಳಿಗೆ ಆತ ತನ್ನ ಧರ್ಮಮೂಲವನ್ನು ಕೆದಕಿದ್ದು ಇಷ್ಟವಾಗಲಿಲ್ಲ. ಆಕೆಯೂ ದೃಢವಾಗಿ, ‘ನಾನೀಗ ಯಹೂದಿಯಲ್ಲ. ಒಬ್ಬ ಕ್ರಿಶ್ಚಿಯನ್’ ಎಂದು ತನ್ನ ಕೊರಳಲ್ಲಿ ಕಟ್ಟಿಕೊಂಡಿದ್ದ ಕ್ರಾಸನ್ನು ಗೌನಿನಾಚೆ ಎಳೆದು ತೋರಿಸಿದಳು. ‘ಗೊತ್ತು, ನಾಚಿಕೆಗೆಟ್ಟ ನೋವೀಸ್ ತಾನೆ? ಜೀವ ಉಳಿಸಿಕೊಳ್ಳಲು ಧರ್ಮವನ್ನೇ ಬಿಟ್ಟ ಹೆಂಬೇಡಿ. ಇರಲಿ, ನಿನ್ನ ಬಾಡಿಗೆಯವನ ಚಟುವಟಿಕೆಗಳ ಕುರಿತು ಸರ್ಕಾರಕ್ಕೆ ವರದಿಯೊಪ್ಪಿಸಲು ಸೂಚನೆ ಕೊಡಲಾಗಿತ್ತು ತಾನೆ? ಯಾಕೆ ಒಂದೂ ವರದಿ ಸಲ್ಲಿಸಿಲ್ಲ. ಆ ಕುನ್ನಿಗೆ ನೀನು ಬೆಂಬಲವಾಗಿ ನಿಂತಿರುವುದು ನಿಜವೇ?’ ಎಂದು ಮೇಜಿನ ಮೇಲಿದ್ದ ದೊಣ್ಣೆಯನ್ನು ಕೈಗೆತ್ತಿಕೊಂಡ. ಡಿಸಿಲ್ವಳಿಗೆ ಅವನ ಮಾತು ಮತ್ತು ವರ್ತನೆಗಳು ಭಯ ಹುಟ್ಟಿಸುವ ಬದಲು ರೇಜಿಗೆ ಹುಟ್ಟಿಸಿದವು. ಆಕೆಯೂ ಅವನಷ್ಟೇ ಗಟ್ಟಿಯಾಗಿ, ‘ನನಗೆ ತಿಳಿದಂತೆ ಆತ ಒಬ್ಬ ಸಂಭಾವಿತ. ವಂಚನೆ ನಡೆಸಲು ಪ್ರಯತ್ನಿಸಿರುವುದು ನನ್ನ ಕಣ್ಣಿಗಂತೂ ಬಿದ್ದಿಲ್ಲ. ಅವನ ಭೇಟಿಗೂ ಅನ್ಯರ್ಯಾರೂ ಬರುತ್ತಿಲ್ಲ. ಹಾಗಿದ್ದಾಗ ಏನು ವರದಿ ಕೊಡಲಿ?’ ಎಂದಳು. ಇವಳ ಒರಟು ಉತ್ತರ ಅಧಿಕಾರಿಯನ್ನು ರೊಚ್ಚಿಗೆಬ್ಬಿಸಿತು. ಮುಷ್ಟಿ ಬಿಗಿದು ಎದ್ದು ನಿಂತುಕೈಯಲ್ಲಿದ್ದ ದೊಣ್ಣೆಯನ್ನು ಜೋರಾಗಿ ನೆಲಕ್ಕೆಸೆದು, ‘ಅಂದ್ರೆ ನಿನ್ನ ಪ್ರಕಾರ ಆ ಪಾಪಿ, ಗೊಜ್ಜ ಪಾಗನ್ ಒಬ್ಬ ನಿರಪರಾಧಿ’ ಎಂದು ಅವಳ ಕೂದಲನ್ನು ಹಿಡಿದು ಹಿಂದಕ್ಕೆ ಬಗ್ಗಿಸಲು ಹೊರಟವನು ತನ್ನನ್ನೇ ತಾನು ನಿಯಂತ್ರಿಸಿಕೊಂಡು ಕೈಬಿಟ್ಟು, ‘ಇರಲಿ, ಇನ್ನೊಂದು ತಿಂಗಳಲ್ಲಿ ಇಬ್ಬರ ಹಣೆಬರಹವೂ ನಿರ್ಧಾರವಾಗಲಿದೆ. ಸಾಕ್ಷಿ ಸಿಕ್ಕ ತಕ್ಷಣವೇ ನಿನ್ನನ್ನೂ ಅವನ ಜೊತೆಗೇ ಬೀದಿಯಲ್ಲಿ ಬತ್ತಲಾಗಿ ನಿಲ್ಲಿಸಿ ಗುಂಡಿಟ್ಟು ಕೊಲ್ಲುತ್ತೇವೆ, ಮಾನಗೆಟ್ಟ ಮುದುಕಿ. ಇಲ್ಲಿ ಕೇಳು, ಇದು ನಿನಗೆ ಕೊನೇ ಎಚ್ಚರಿಕೆ. ಆ ನಾಲಿಗೆ ಸತ್ತವನ ದುಷ್ಕೃತ್ಯವನ್ನು ವರದಿ ನೀಡದಿದ್ದರೆ ನಿನಗೂ ಮರಣದಂಡನೆಯೇ ಗತಿ. ಸಂಭಾವಿತನ ಸೋಗಿನಲ್ಲಿ ಪೋರ್ಚುಗಲ್ ರಹಸ್ಯವನ್ನೆಲ್ಲ ಗುಟ್ಟಾಗಿ ಪತ್ರ ಬರೆದು ಇಂಡಿಯಾದ ಅರಸರನ್ನೆಲ್ಲ ಎತ್ತಿಕಟ್ಟುತ್ತಿದ್ದಾನೆ ಪಾತಕಿ. ಆಯಸ್ಸು ಮುಗಿಯಿತೆಂದು ಆ ಪಾಗನ್ನನಿಗೆ ತಿಳಿಸು ಹೋಗು. ನೆನಪಿಟ್ಟುಕೋ, ತಿದ್ದಿಕೊಳ್ಳದಿದ್ದರೆ ಅವನ ಜೊತೆ ನೀನೂ ಫಿನಿಷ್’ ಎಂದು ವಿಕಟವಾಗಿ ನಕ್ಕು, ಸಹಾಯಕನಿಗೆ ಕರೆದೊಯ್ಯಲು ಸನ್ನೆ ಮಾಡಿದ.

ಡಿಸಿಲ್ವ, ಕೋಪದಿಂದ ಭುಸುಗುಡುತ್ತ ಹೊರಗೆ ಬಂದಳು. ಅವಳಿಗೆ ಅಲ್ಲೆಲ್ಲೂ ನಿಲ್ಲಲು ಮನಸ್ಸಾಗಲಿಲ್ಲ. ಮನಸ್ಸಿನ ತುಂಬ ಆಕ್ರೋಶ ಹೊಗೆಯಾಡುತ್ತಿತ್ತು. ಅವಳಿಗೆ ಅವಮಾನವಾಗಿತ್ತು. ಇಡೀ ಅರಮನೆ ದ್ವೇಷ ಹಾಗೂ ವಂಚನೆಗಳ ಪಾಪಕೂಪ ಎನ್ನಿಸಿತು. ಅಸಮಾಧಾನದಿಂದ ಅರಮನೆಯ ಆವರಣವನ್ನು ದಾಟಿ ಹೊರಬರುತ್ತಿದ್ದಂತೆ ಬಾಡಿಗೆಗೆಂದು ಸಾಲಾಗಿ ನಿಂತ ಕುದುರೆಗಾಡಿಗಳಲ್ಲಿ ಒಂದನ್ನು ಹಿಡಿದು ಮನೆಗೆ ಬಂದಳು. ಯಾಕೋ ಅಡುಗೆ ಮಾಡುವುದಕ್ಕೂ ಮನಸ್ಸಾಗಲಿಲ್ಲ. ಕಪಾಟಿಲ್ಲಿದ್ದ ಬ್ರೆಡ್ಡನ್ನು ತೆಗೆದು ತುಂಡರಿಸಿ, ಒಂದಿಷ್ಟು ಚೀಸಿನೊಂದಿಗೆ ಬಾಯಿಗೆ ತುರುಕಿಕೊಂಡು, ನೀರು ಕುಡಿದು ಮಲಗಿದಳು.

ಪೋರ್ಚುಗಲ್ ಪ್ರಭುತ್ವ ಗೂಢಚಾರಿಕೆ ನಡೆಸಲು ಸೂಚಿಸಿದ ನಂತರವೇ ಆಕೆಯ ಸಂಬಂಧ ಜಿನದತ್ತನ ಜೊತೆಗೆ ಗಾಢವಾಗುತ್ತ ಬಂದಿದ್ದು. ಆತ ಆಕೆಯನ್ನು ಮಾಯಿ ಎಂದೇ ಕರೆಯುತ್ತಿದ್ದ. ಆತನ ನತದೃಷ್ಟ ಬದುಕಿನ ಸಂಪೂರ್ಣ ವಿವರ ಅವಳಿಗೀಗ ತಿಳಿದಿತ್ತು. ಶುದ್ಧಸಂಸ್ಕಾರಗಳಿಂದ ಸಮೃದ್ಧವಾಗಿದ್ದ ಆತನ ಸಾತ್ವಿಕ ಬದುಕು ಧೂರ್ತ ಪೋರ್ಚುಗೀಸರ ತಣ್ಣನೆಯ ಕ್ರೌರ್ಯಕ್ಕೆ ಸಿಲುಕಿ ನಾಶದಂಚಿಗೆ ಬಂದು ನಿಂತ ಕುರಿತು ಆಕೆಗೆ ಮರುಕವಿತ್ತು. ಹತಭಾಗ್ಯ ಜಿನದತ್ತನ ದುಃಸ್ಥಿತಿಗಾಗಿ ಅವಳು ಮಮ್ಮಲ ಮರುಗುತ್ತಿದ್ದಳು. ಅವನ ದುರದೃಷ್ಟ ಇನ್ನೂ ಮುಗಿದಿಲ್ಲವೆಂಬುದೇ ಅವಳ ಸಂಕಟವಾಗಿತ್ತು. ಸದ್ಯದಲ್ಲೇ ಅವನ ಬದುಕು ಕೊನೆಯಾಗಲಿದೆ ಎಂಬುದಕ್ಕೆ ಇಂದಿನ ಘಟನೆ ಸಾಕ್ಷಿಯಾಗಿತ್ತು. ಅವಳಿಗೆ ತನ್ನ ಕುರಿತು ಚಿಂತೆಯಿರಲಿಲ್ಲ. ನಡೆದ ವಿಷಯವನ್ನು ಆತನಿಗೆ ತಿಳಿಸುವುದು ಹೇಗೆಂಬುದು ಅವಳ ಸಂಕಟವಾಗಿತ್ತು. ಅವನನ್ನು ಗುಂಡಿಕ್ಕಿ ಕೊಲ್ಲುವರೆಂಬುದು ಅವಳಿಗೆ ಖಚಿತವಾಗಿತ್ತು. ‘ಅವನೇನು ದ್ರೋಹ ಮಾಡಿದ್ದಾನೆ? ಇಲ್ಲಿ ನಡೆಯುತ್ತಿರುವ ಸತ್ಯಸಂಗತಿಯನ್ನು ತಾನೆ ತನ್ನ ಗೆಳೆಯನಿಗೆ ಪತ್ರ ಬರೆದು ತಿಳಿಸಿದ್ದು? ಅದರಲ್ಲಿ ತಪ್ಪೇನು? ಸಮುದ್ರವನ್ನು ದಾಟಿ ತಮ್ಮದಲ್ಲದ ನಾಡಿಗೆ ಹೋಗಿ ಅಲ್ಲಿ ನೆಲೆಸಿದ್ದ ನಿವಾಸಿಗಳನ್ನು ಸದೆಬಡಿದು ಅವರ ಧರ್ಮ, ನಂಬಿಕೆ, ಭಾಷೆ, ಬದುಕನ್ನು ನಾಶಗೈಯ್ಯುತ್ತಿರುವ ನಿಮ್ಮದು ತಪ್ಪೋ, ತಮ್ಮತನವನ್ನು ಉಳಿಸಿಕೊಳ್ಳಲು ಒಗ್ಗೂಡುತ್ತಿರುವ ಆ ದೇಶವಾಸಿಗಳದು ತಪ್ಪೋ? ದ್ರೋಹಿಗಳು ಅವರಲ್ಲ, ನೀವು. ಯಹೂದಿಗಳು, ಜಿಂಟೂಗಳು, ಮೂರರು, ಎಂದು ಇತರ ಧರ್ಮದವರಿಗೆಲ್ಲ ತುಚ್ಛ ಹೆಸರಿಟ್ಟು ನಿಂದಿಸುವ ನೀವೆಷ್ಟು ಸುಭಗರು? ಮನಸಿನ ತುಂಬ ಶತ್ರುತ್ವ ತುಂಬಿಕೊಂಡು ಬಾಯಲ್ಲಿ ಮಾತ್ರ ಬ್ರಾತೃತ್ವವೆಂದು ಬೊಗುಳುವ ಆಷಾಡಭೂತಿಗಳು ನೀವು’ ಎಂದು ಮನಸಿನಲ್ಲೇ ಪೋರ್ಚುಗೀಸರನ್ನು ಬೈದು ತನ್ನ ಸಿಟ್ಟನ್ನು ಹೊರಹಾಕಲು ಯತ್ನಿಸಿದಳು. ಏನು ಬೈದು ಎಷ್ಟು ಹೊರಳಾಡಿದರೂ ನಿದ್ದೆ ಅವಳ ಹತ್ತಿರ ಸುಳಿಯಲಿಲ್ಲ. ಜಿನದತ್ತ ಬರುವುದನ್ನೇ ಕಾಯತೊಡಗಿದಳು.

achchigoo modhalu

ಗೇರುಸೊಪ್ಪೆಯ ಚತುರ್ಮುಖ ಬಸದಿ

ಜಿನದತ್ತ ಸಂಜೆ ಕಾರ್ಯಾಲಯದಿಂದ ಬಹಳ ಖುಷಿಯಿಂದ ಮಾಯೀ ಎಂದು ಕರೆಯುತ್ತಲೇ ಬಂದಿದ್ದ. ಆಕೆಗೆ ಮಾತು ಆರಂಭಿಸಲು ಬಿಡದೆ, ‘ಮಾಯೀ, ನಿಮಗೊಂದು ವಿಷಯ ಗೊತ್ತಾ’ ಎಂದು ಗೊಜಗಲು ಶುರು ಮಾಡಿದ್ದ.

ಆತ ಏನು ಹೇಳುವನೋ, ಸುತ್ತಮುತ್ತ ಯಾರೆಲ್ಲ ನೋಡುತ್ತಿರುವರೋ ಎಂಬ ಭಯದಲ್ಲಿ ಆಕೆ, ‘ಮೊದಲು ಒಳಗೆ ಬಾ. ಕ್ಯಾರೆಟ್ ಹಾಕಿ ಜೋಳದ ಸೂಪ್ ಮಾಡಿದ್ದೇನೆ. ಬಿಸಿ ಬಿಸಿ ಸೂಪ್ ಕುಡಿಯುತ್ತ ಹೇಳುವಿಯಂತೆ’ ಎಂದರೂ ಆತ ಅದಕ್ಕೆ ಗಮನ ಕೊಡದೆ ತನ್ನದೇ ಲಹರಿಯಲ್ಲಿ, ‘ಮೊದಲು ಇಲ್ಲಿ ಕೇಳಿ ಮಾಯಿ’ ಎಂದು ಮಾತಿಗೆ ಹಾತೊರೆದಿದ್ದ. ಬೇಹುಗಾರರ ಭಯದಲ್ಲಿ ಆಕೆ ಅವನ ರಟ್ಟೆ ಹಿಡಿದು ಒಳಗೆ ಎಳೆದೊಯ್ದು ಬಾಗಿಲು ಹಾಕಿ, ‘ಹೇಳುವಿಯಂತೆ, ಮೊದಲು ಬಾಯ್ಮುಚ್ಚಿ ಕುಳಿತುಕೋ’ ಎಂದು ಬಲವಂತವಾಗಿ ಕುರ್ಚಿಯಲ್ಲಿ ಕೂರಿಸಿದಳು. ಆತನಿಗೆ ಮಾಯಿ ಯಾಕೆ ಹೀಗೆ ವರ್ತಿಸುತ್ತಿದ್ದಾಳೆ ಎನ್ನಿಸಿತು. ಡಿಸಿಲ್ವ ಬಿಸಿಬಿಸಿ ಸೂಪನ್ನು ತಂದು ಆತನ ಕೈಗಿಟ್ಟು ‘ಅದೇನು ಹೇಳು’ ಎಂದಳು.

‘ಮಾಯೀ, ಇವತ್ತು ನಂಗೆ ತುಂಬ ಖುಷಿಯಾಗಿದೆ. ಇಷ್ಟು ಕಾಲ ಬದುಕಿದ್ದಕ್ಕೂ ಸಾರ್ಥಕವೆನ್ನಿಸುತ್ತಿದೆ. ಮನುಷ್ಯ ಬಹುಕಾಲ ಸಾಯದೆ ಬದುಕಿದ್ದರೆ, ಕೊನೆಗಾದರೂ ಒಂದು ದಿನ ಆನಂದವೆಂಬುದು ಸಿಕ್ಕೀತು ಅಂತ ನಮ್ಮ ರಾಮಾಯಣದಲ್ಲಿ ಸೀತೆ ಹನುಮಂತನಿಗೆ ಹೇಳುವ ಮಾತು ಬರುತ್ತದೆ. ಇವತ್ತು ನನಗೂ ಈ ಮಾತು ನಿಜ ಅನ್ನಿಸ್ತಿದೆ’ ಎಂದ.

ಆತ ಹೇಳುತ್ತಿರುವುದು ಆಕೆಗೆ ಅರ್ಥವಾಗಲಿಲ್ಲ. ಅರ್ಥವಾಗುವುದು ಬೇಕಿರಲಿಲ್ಲ. ಏನೋ ಹೇಳುತ್ತಿದ್ದಾನೆ ಹೇಳಿಕೊಳ್ಳಲೆಂಬ ಮರುಕದಿಂದ ಸುಮ್ಮನೆ ಕೇಳಿಸಿಕೊಂಡಿದ್ದಳು. ತಲೆಗೆ ಸುತ್ತಿಕೊಂಡಿರುವ ಸಮಸ್ಯೆಯನ್ನು ಅರಿಯದೆ ತನ್ನದೇ ಪುರಾಣಲೋಕದಲ್ಲಿ ವಿಹರಿಸುತ್ತಿದ್ದಾನೆಂದು ಆಕೆ ಮರುಕಪಡುತ್ತಿದ್ದಳು. ನನಗೀವತ್ತು ಖುಷಿಯಾಗಿದೆ ಎನ್ನುವ ಜಿನದತ್ತನ ಮಾತು ಹೃದಯಕ್ಕೆ ನಾಟಿ ಅವಳ ಕಣ್ಣು ಒದ್ದೆಯಾಗಿತ್ತು.

ಸೂಪ್ ಕುಡಿಯುತ್ತ ಜಿನದತ್ತ ಮಾಯಿಯ ಕಣ್ಣಂಚು ಒದ್ದೆಯಾಗಿದ್ದನ್ನು ಕಂಡು ಸಪ್ಪಗಾದ. ಮಾಯಿ ಯಾವುದೋ ನೋವಿನಲ್ಲಿದ್ದಾಳೆಂದು ಭಾವಿಸಿ, ‘ಕ್ಷಮಿಸಿ ಮಾಯಿ. ನೀವು ದುಃಖದಲ್ಲಿರುವಂತಿದೆ. ನಿಮಗೇನೋ ಹೇಳುವುದಕ್ಕಿದೆ ಎನ್ನುವುದನ್ನು ಗಮನಿಸದ ನನ್ನ ವರ್ತನೆಗಾಗಿ ಸಂಕೋಚವಾಗುತ್ತಿದೆ. ದಯವಿಟ್ಟು ಕ್ಷಮಿಸಿ’ ಎಂದ ಮುಖ ಚಿಕ್ಕದು ಮಾಡಿಕೊಂಡು.

ಸ್ವತಃ ಅಪಾಯದಲ್ಲಿ ಸಿಲುಕಿರುವ ಜೋ ಅದರ ಕಲ್ಪನೆಯಿಲ್ಲದೆ ತನಗೆ ನೋವಾಗಿದೆಯೆಂದು ಸಂತೈಸುತ್ತಿರುವ ಕುರಿತು ಡಿಸಿಲ್ವಾಳಿಗೆ ದುಃಖ ಒತ್ತರಿಸಿಕೊಂಡು ಬಂತು. ಅವನನ್ನು ತಬ್ಬಿ ಮನದಣಿಯೆ ಅತ್ತಳು. ಮಾಯಿಗೆ ಯಾರಿಂದಲೋ ಕೆಟ್ಟ ಸುದ್ದಿ ಬಂದಿರಬೇಕೆಂದು ಭಾವಿಸಿದ ಜಿನದತ್ತ, ‘ಮಾಯಿ, ಸುಧಾರಿಸಿಕೊಳ್ಳಿ. ನಡೆದದ್ದನ್ನು ಬದಲಾಯಿಸಲಾಗದು ಎಂದ ಮೇಲೆ ವೃಥಾ ದುಃಖಪಡುವುದೇಕೆ? ಸಮಾಧಾನ ಮಾಡಿಕೊಳ್ಳಿ’ ಎಂದು ಸಂತೈಸಿದ. ಡಿಸಿಲ್ವ ಕಣ್ಣೊರೆಸಿಕೊಂಡು ಅವನ ಮುಖವನ್ನೇ ನೋಡುತ್ತ, ‘ನನ್ನ ಪ್ರೀತಿಯ ಜೋ, ಸಂಕಟ ಬಂದೊದಗಿರುವುದು ನನಗಲ್ಲ, ನಿನಗೆ. ನಿನಗೀಗ ದೊಡ್ಡ ವಿಪತ್ತು ಎದುರಾಗಿದೆ. ಅವರು ಇಂಡಿಯಾದಿಂದ ಬರುವ ಸಾಕ್ಷಿಗೆ ಕಾದಿದ್ದಾರೆ. ಸಾಕ್ಷಿ ಸಿಕ್ಕ ಕ್ಷಣ ನಿನ್ನನ್ನೂ ಜೊತೆಗೆ ನನ್ನನ್ನೂ ಮುಗಿಸುತ್ತಾರೆ’ ಎಂದು ದುಃಖಿಸುತ್ತ, ತಾನು ಇಂಡಿಯಾ ಕಚೇರಿಗೆ ಹೋಗಿ ಬಂದ ಕತೆಯನ್ನು ಹೇಳಿದಳು.

achchigoo modhalu

ಕಾನೂರಿನಲ್ಲಿರುವ ಚೆನ್ನಭೈರಾದೇವಿ ಸನ್ನಿಧಿ

ಡಿಸಿಲ್ವ ತೀವ್ರ ಸಂಕಟದಿಂದ ಅಧಿಕಾರಿಯ ಅಂತಿಮ ಎಚ್ಚರಿಕೆಯ ಕುರಿತು ಹೇಳುತ್ತಿದ್ದರೆ ಜಿನದತ್ತ ಜೋರಾಗಿ ನಕ್ಕುಬಿಟ್ಟ. ಆಕೆಗೆ ದಿಗಿಲಾಯಿತು. ಅವನ ಮುಖವನ್ನೇ ದಿಟ್ಟಿಸಿದಳು. ಮರಣದಂಡನೆಯ ಸುದ್ದಿ ಕೇಳಿ ಆಘಾತವಾಗಿ ಬುದ್ಧಿಭ್ರಮಣೆ ಆಗಿಬಿಟ್ಟಿತೇನೋ ಎಂದು ಆಕೆಗೆ ದಿಗಿಲಾಯಿತು. ಅವನನ್ನು ಸಂತೈಸುವುದು ಹೇಗೆಂದು ಆಕೆಗೆ ತಿಳಿಯಲಿಲ್ಲ. ಆಕೆಯ ತಳಮಳ ಕಂಡು ಜಿನದತ್ತನೇ ಹೇಳಿದ,

‘ಮಾಯೀ, ಚಿಂತಿಸಬೇಡಿ. ವಿಷಯ ನನಗೂ ತಿಳಿದಿದೆ. ಹಾಗೆಂದೇ ನನಗೆ ಇಷ್ಟು ಸಂತೋಷವಾಗಿರುವುದು. ನಿಮಗೆ ಸತ್ಯ ಹೇಳಬೇಕೆಂದರೆ ಬಹುಕಾಲದಿಂದ ನಾನು ತಾನಾಗಿ ಒದಗಿ ಬರುವ ಇಂತದ್ದೊಂದು ಶುಭಮುಹೂರ್ತಕ್ಕೆ ಕಾದಿದ್ದೆ. ಎಂದೂ ಆತ್ಮಹತ್ಯೆ ನನ್ನ ಆಯ್ಕೆಯಾಗಿರಲಿಲ್ಲ. ನನ್ನದಾದ ಒಂದು ಕರ್ತವ್ಯವನ್ನು ಈಡೇರಿಸಿ ದೇಹತ್ಯಾಗ ಮಾಡಲು ಎಂದೋ ನಿಶ್ಚಯಿಸಿದ್ದೆ. ಈಗ ನನ್ನ ಕರ್ತವ್ಯ ಮುಗಿದಿದೆ. ಹಾಗಾಗಿ ಸ್ವತಃ ಸಾವನ್ನು ಸಂತೋಷದಿಂದ ಸ್ವಾಗತಿಸುವ ತೀರ್ಮಾನಕ್ಕೆ ಬಂದಿದ್ದೇನೆ’ ಎಂದ. ಆತನ ಮಾತು ಡಿಸಿಲ್ವಾಳಿಗೆ ಇಷ್ಟವಾಗಲಿಲ್ಲ. ಬದಲಿಗೆ ಸಿಟ್ಟು ಬಂತು. ಆತನ ಭುಜ ಹಿಡಿದು, ‘ಜೋ ಏನು ಹೇಳುತ್ತಿರುವೆ. ನಿನಗೆ ಹುಚ್ಚು ಹಿಡಿಯಿತೇನು? ಸಾಯುತ್ತಾನಂತೆ, ಮೂರ್ಖ. ಮಾತಿಗೊಂದು ಅರ್ಥ ಬೇಡವೇ?’ ಎಂದು ಗಟ್ಟಿಯಾಗಿ ಬೈದಳು.

‘ಬದುಕಿನ ಅರ್ಥ ಮತ್ತು ಅನರ್ಥ ಎರಡನ್ನೂ ತಿಳಿದೇ ಮಾತನಾಡುತ್ತಿದ್ದೇನೆ ಮಾಯಿ. ನಮ್ಮ ಜೈನಧರ್ಮದಲ್ಲಿ ಮನುಷ್ಯ ಸ್ವತಃ ಸಾವನ್ನು ಸ್ವಾಗತಿಸುವ ಒಂದು ವ್ರತವಿದೆ. ಅದಕ್ಕೆ ಸಲ್ಲೇಖನ ಎನ್ನುತ್ತೇವೆ.

‘ಸ್ವತಃ ಸಾವನ್ನು ಸ್ವಾಗತಿಸುವುದೆಂದರೆ!?’ ಅವಳ ಧ್ವನಿ ಗಡುಸಾಗಿತ್ತು.

‘ಸ್ವಂತ ಇಚ್ಚೆಯಿಂದ ಪ್ರಾಣ ತ್ಯಾಗ ಮಾಡುವುದು.

‘ಅಂದರೆ! ಸೂಸೈಡ್!?’ ಧ್ವನಿಯಲ್ಲಿ ವ್ಯಂಗ್ಯ ಮತ್ತು ಆಕ್ರೋಶ ಬೆರೆತಿತ್ತು.

‘ಅಲ್ಲ ಮಾಯಿ. ಅದು ಭಗ್ನ ಮನಃಸ್ಥಿತಿಯ ಕಾರಣದಿಂದ ಬಲವಂತವಾಗಿ ಮಾಡುವ ದೇಹತ್ಯಾಗವಲ್ಲ. ಹಾಗೆ ಸತ್ತರೆ ಅದು ಆತ್ಮಹತ್ಯೆ. ವ್ಯಕ್ತಿಯು ತನ್ನ ಸಾಮಾಜಿಕ ಹೊಣೆಗಾರಿಕೆಗೆ ವಿಮುಖನಾಗಿ, ತನ್ನ ವ್ಯಕ್ತಿಗತ ಹಿತ, ಭಯ, ಆತಂಕ ಅಥವಾ ಲೌಕಿಕ ಉದ್ದೇಶಕ್ಕಾಗಿ ಸತ್ತರೆ ಅದು ಆತ್ಮಹತ್ಯೆ. ಸಮಾಜಕ್ಕೆ ಸೇವೆ ಸಲ್ಲಿಸುವ ಸಾಮರ್ಥ್ಯವುಳ್ಳವನು, ಸಮಾಜದ ಋಣ ಉಳಿಸಿಕೊಂಡವನು, ದೇಹ ಮತ್ತು ಮನಸ್ಸು ವಿಕಸನಗೊಳ್ಳದವನು ಸತ್ತರೆ ಅದು ಆತ್ಮಹತ್ಯೆ. ಆದರೆ ಕೋಪ, ಗರ್ವ, ಮೋಹ ಮತ್ತು ಮೋಸಗಳೆಂಬ ಚತುರ್ವಿಧ ಕಷಾಯಗಳಿಂದ ಮುಕ್ತನಾದವನು ತನ್ನ ಸ್ವಂತ ಇಚ್ಚೆಯಿಂದ ಮರಣವನ್ನು ಸ್ವಾಗತಿಸಿದರೆ ಅದು ಸಲ್ಲೇಖನ ಮಹಾವ್ರತ’.

‘ಅಂದರೆ ನೀನು ನಿನ್ನ ಸಮಾಜದ ಋಣವನ್ನು ತೀರಿಸಿರುವೆಯೇನು? ನಿನ್ನ ಕರ್ತವ್ಯಗಳೆಲ್ಲ ಮುಗಿದವೇನು?

‘ಹೌದು ಮಾಯಿ. ನನಗೆ ಸಲ್ಲೇಖನಕ್ಕಿಳಿಯುವ ಅರ್ಹತೆ ಇದೆ. ಯಾಕೆಂದರೆ ನಾನು ಕೈಲಾದ ಮಟ್ಟಿಗೆ ನನ್ನ ಕರ್ತವ್ಯಗಳನ್ನು ಮುಗಿಸಿದ್ದೇನೆ’ ಎಂದ.

‘ಅದು ಹೇಗೆ? ನೀನು, ಪೋರ್ಚುಗೀಸರನ್ನು ಭಾರತದಿಂದ ಹೊರಗಟ್ಟುವುದು ನನ್ನ ಬದುಕಿನ ಗುರಿ ಎನ್ನುತ್ತಿದ್ದೆ. ಈಗ ಗುರಿಯಿಂದ ಹಿಂದೆ ಸರಿಯುತ್ತಿರುವೆಯೇನು!?’

‘ಮಾಯಿ, ನೀವು ಈಗ ವಿಷಯಕ್ಕೆ ಬಂದಿರಿ. ಇವತ್ತು ನಿಮ್ಮನ್ನು ಇಂಡಿಯಾ ಕಚೇರಿಗೆ ಯಾಕೆ ಕರೆಸಿದ್ದು ಹೇಳಿ? ಭಾರತದಲ್ಲಿ ಗುಜರಾತ್ ಸುಲ್ತಾನನಿಂದ ಹಿಡಿದು ಕೇರಳದ ಜಾಮೋರಿನ್ ತನಕ ಪಶ್ಚಿಮ ಕರಾವಳಿಯ ಉದ್ದಕ್ಕೂ ಪೋರ್ಚುಗೀಸರ ವಿರುದ್ಧ ಹೋರಾಡಲು ಸಂಯುಕ್ತ ಮೈತ್ರಿಪಡೆಯೊಂದು ಸಿದ್ಧವಾಗುತ್ತಿದೆ, ಅದಕ್ಕೆ ಮೂಲಕಾರಣ ಈ ಜಿನದತ್ತನೆಂಬ ಪಾಪಿ ಎಂಬುದಕ್ಕಾಗಿ ತಾನೇ? ನನ್ನ ಉದ್ದೇಶವೂ ನಮ್ಮವರಲ್ಲಿ ಇಂತದ್ದೊಂದು ಅರಿವನ್ನು ಮೂಡಿಸಬೇಕು ಎಂಬುದಾಗಿತ್ತು. ಈಗ ಅಂತದ್ದೊಂದು ಅರಿವು ಮೂಡಿ, ಪ್ರಭುತ್ವಗಳು ಒಂದಾಗುತ್ತಿವೆ ಎಂದ ಮೇಲೆ ನನ್ನ ಕರ್ತವ್ಯದಲ್ಲಿ ನಾನು ಯಶಸ್ಸು ಪಡೆದಂತಾಯಿತಲ್ಲವೇ?

‘ಫೂಲ್. ಅದಿನ್ನೂ ಕಾರ್ಯರೂಪಕ್ಕಿಳಿದಿಲ್ಲ, ಮಾತುಕತೆಯ ಹಂತದಲ್ಲಿದೆ. ಅದು ಅನುಷ್ಠಾನಗೊಂಡು ಪೋರ್ಚುಗೀಸರನ್ನು ನಿಮ್ಮ ದೇಶದಿಂದ ಹೊರದಬ್ಬಿದ ಮೇಲಷ್ಟೇ ನಿನಗೆ ಯಶಸ್ಸು ದಕ್ಕಿದಂತೆ’

‘ಮಾಯಿ, ನಾನು ಪ್ರಯತ್ನ ಮಾಡುವವನೇ ಹೊರತು ಫಲಿತಾಂಶವನ್ನು ನಿರ್ಣಯಿಸುವವನಲ್ಲ. ಕರ್ಮವಷ್ಟೇ ನನ್ನ ಹೊಣೆಗಾರಿಕೆ. ನಮ್ಮ ರಾಜರುಗಳಲ್ಲಿ ಇಂತದ್ದೊಂದು ಮನೋಭಾವವನ್ನು ಉತ್ತೇಜಿಸುವುದು ನನ್ನ ಉದ್ದೇಶವಾಗಿತ್ತು. ನಾನು ಚೆನ್ನಭೈರಾದೇವಿಗೆ ಬರೆದ ಪತ್ರ ಭಾರತದಲ್ಲಿ ಅಂತದ್ದೊಂದು ಒಮ್ಮತವನ್ನು ಹುಟ್ಟುಹಾಕುವಲ್ಲಿ ಯಶಸ್ಸು ಕಂಡಿದೆಯಾದರೆ ನನಗಷ್ಟು ಸಾಕು. ಫಲಿತಾಂಶ ಭಗವಂತನಿಗೆ ಬಿಟ್ಟದ್ದು. ನನ್ನ ದೃಷ್ಟಿಯಲ್ಲಿ ನಾನೀಗ ಕೃತಕೃತ್ಯ’.

‘ಜೋ, ನೀನು ದುಡುಕಿ ತಪ್ಪು ನಿರ್ಧಾರ ಕೈಗೊಳ್ಳುತ್ತಿರುವೆ. ನಿಜ, ಇನ್ನೊಂದು ತಿಂಗಳಲ್ಲಿ ಹೇಗೂ ನಿನಗೆ ಮರಣದಂಡನೆ ವಿಧಿಸುತ್ತಾರೆ. ಆದರೂ ಹೆದರಬೇಡ. ತಪ್ಪಿಸಿಕೊಳ್ಳಲು ಒಂದು ತಿಂಗಳು ಬಹುದೀರ್ಘ ಅವಧಿ. ಮುಂದಿನ ವಾರ ನನ್ನ ಮಗನ ಹಡಗು ಬರುತ್ತಿದೆ. ಬಂದ ಒಂದು ವಾರದಲ್ಲೇ ಆತ ಅರಬ್ ದೇಶಗಳಿಗೆ ಹಿಂದಿರುಗುತ್ತಾನೆ. ಅವನಿಗೆ ನಿನ್ನನ್ನು ಕರೆದೊಯ್ಯಲು ಹೇಳುತ್ತೇನೆ. ಮೊದಲು ಈ ದರಿದ್ರ ಪೋರ್ಚುಗಲ್ಲಿನಿಂದ ತಪ್ಪಿಸಿಕೊಂಡುಬಿಡು. ವೃಥಾ ಪ್ರಾಣ ಕಳೆದುಕೊಳ್ಳಬೇಡ. ಜೋ, ದಯವಿಟ್ಟು ನನ್ನ ಮಾತು ಕೇಳು’

‘ಮಾಯಿ, ನಿಮ್ಮ ಪ್ರೀತಿಗೆ ನಾನು ಕೃತಜ್ಞ. ಆದರೆ ನನಗೆ ಬದುಕುವ ಸಣ್ಣ ಆಸೆ ಕೂಡ ಉಳಿದಿಲ್ಲ. ದಯವಿಟ್ಟು ತಪ್ಪು ತಿಳಿಯಬೇಡಿ. ನನಗೋಸ್ಕರ ನಿಮ್ಮ ಜೊತೆ ನಿಮ್ಮ ಮಗನನ್ನೂ ಅಪಾಯಕ್ಕೆ ಸಿಲುಕಿಸಬೇಡಿ. ನಿಮಗೆ ನನ್ನ ಮೇಲೆ ಪ್ರೀತಿಯಿರುವುದೇ ಹೌದಾದರೆ ದಯವಿಟ್ಟು ಸಲ್ಲೇಖನ ವ್ರತ ಪೂರ್ಣಗೊಳಿಸಲು ಸಹಕರಿಸಿ’ ಎಂದು ಕೈಮುಗಿದ.

‘ನೋ, ಸಾಧ್ಯವಿಲ್ಲ. ನಾನು ನಿಮ್ಮ ಈ ಅಮಾನವೀಯ ಆಚರಣೆಗೆ ನನ್ನ ಮನೆಯಲ್ಲಿ ಆಸ್ಪದ ಕೊಡುವುದಿಲ್ಲ’ ಎಂದು ಒರಟಾಗಿ ಹೇಳಿ ತನ್ನ ಕೊಠಡಿಗೆ ಹೋಗಿಬಿಟ್ಟಳು. ಜಿನದತ್ತ ಮಾಯಿ ಎಂದು ಕರೆಯುತ್ತ ಸ್ವಲ್ಪ ಹೊತ್ತು ಅಲ್ಲೇ ಕಾದು ನಿಂತ. ಆದರೆ ಒಳಗೆ ಹೋಗಿ ದಿಂಬಿಗೆ ಮುಖವೊತ್ತಿ ಅಳತೊಡಗಿದ ಮಾಯಿ ಅವನೆಷ್ಟೇ ಕರೆದರೂ ಸ್ಪಂದಿಸಲಿಲ್ಲ. ಕಾದು ಕಾದು ಕೊನೆಗೆ ಜಿನದತ್ತ ಮಹಡಿಯ ಮೇಲಿನ ತನ್ನ ಕೊಠಡಿಗೆ ಬಂದ. ಅವನು ಅಂತಿಮವಾಗಿ ತನ್ನ ನಿರ್ಧಾರಕ್ಕೆ ಬದ್ದನಾಗಲು ನಿಶ್ಚಯಿಸಿ ರಾಗದ್ವೇಷಗಳಿಂದ ಹೊರತಾಗುವ ಮೊದಲ ಪ್ರಯತ್ನವಾಗಿ ಮಾಯಿಯ ಬಗ್ಗೆ ಯೋಚಿಸುವುದನ್ನು ಬಿಟ್ಟು ಧ್ಯಾನಕ್ಕೆ ಕುಳಿತ. ಬಹುಹೊತ್ತು ಕಣ್ಮುಚ್ಚಿ ಧ್ಯಾನಾವಸ್ಥೆಯಲ್ಲಿ ಮುಳುಗಿದ್ದ ಅವನಿಗೆ ಮಾಯಿ ಬಿಸಿಬಿಸಿ ಗಂಜಿ ತಂದು ಕರೆಯುವವರೆಗೂ ಎಚ್ಚರವಿರಲಿಲ್ಲ.

ಅಂತೂ ಎರಡು ದಿನಗಳ ಕಾಲ ಮಾಯಿ ಹೇರಿದ ಎಲ್ಲ ಬಗೆಯ ಒತ್ತಡವನ್ನು ದಾಟಿ, ಅವಳ ಮನವೊಲಿಸಿ ಸಲ್ಲೇಖನ ವ್ರತಕ್ಕಿಳಿಯುವಲ್ಲಿ ಜಿನದತ್ತ ಯಶಸ್ವಿಯಾಗಿದ್ದ. ಆರಂಭದ ದಿನ ಬೆಳಗಿನ ಝಾವದಲ್ಲೇ ಎದ್ದು ತೇಜೋ ನದಿಯಲ್ಲಿ ಸ್ನಾನ ಮಾಡಿಬಂದು, ಮಾಯಿಗೆ ನಮಸ್ಕರಿಸಿ, ಪಂಚಪರಮೇಷ್ಠಿಗಳನ್ನು ಧ್ಯಾನಿಸಿ, ಎಲ್ಲ ತೀರ್ಥಂಕರರನ್ನು ಮನಸಾ ಸ್ಮರಿಸಿ, ತನ್ನ ತಂದೆ ತಾಯಿ, ಗುರುಹಿರಿಯರೆಲ್ಲರಿಗೂ ಮನಸ್ಸಿನಲ್ಲೇ ವಂದಿಸಿ ಸಲ್ಲೇಖನ ವ್ರತವನ್ನು ಸಂಕಲ್ಪಿಸಿ ಕುಳಿತ. ಮೊದಲೆರಡು ದಿನ ಮಾಯಿ, ಅಕ್ಕಿಗಂಜಿ ಮಾಡಿಕೊಡುತ್ತಿದ್ದಳು. ಮೂರನೆಯ ದಿನ ಕೇವಲ ಬಾರ್ಲಿ ಗಂಜಿ ಸಾಕು ಎಂದ. ಅರೆಮನಸ್ಸಿನಿಂದ ಅದಕ್ಕೂ ಒಪ್ಪಿದಳು. ನಾಲ್ಕನೆಯ ದಿನ ನೀರಿನ ಹೊರತಾಗಿ ಇನ್ನೇನೂ ಬೇಡವೆಂದು ಹೇಳಿದಾಗ ಮಾಯಿ ಆಕ್ಷೇಪಿಸಿದಳು. ಬಾರ್ಲಿಗಂಜಿಯನ್ನಾದರೂ ಕುಡಿಯಲೇಬೇಕೆಂದು ಹಠ ಹಿಡಿದಳು. ಕುಡಿಯದಿದ್ದರೆ ತಾನೂ ಉಪವಾಸವಿರುವುದಾಗಿ ಬೆದರಿಸಿದಳು. ಆತ್ಮಹತ್ಯೆಗೆ ಪ್ರಯತ್ನಿಸುತ್ತಿರುವೆಯೆಂದು ದೂರು ಕೊಡುವುದಾಗಿ ಭಯ ಪಡಿಸಿದಳು. ಜಿನದತ್ತ ಯಾವುದಕ್ಕೂ ಜಗ್ಗದಿದ್ದಾಗ ನೀನು ಬದುಕಿನಲ್ಲಿ ನಿರಾಶನಾಗಿ ವ್ರತದ ನೆಪ ಹೂಡಿ ಆತ್ಮಹತ್ಯೆಗೆ ಪ್ರಯತ್ನಿಸುತ್ತಿರುವೆ. ನೀನು ಅಂಜುಬುರುಕನೆಂದು ದೂರಿದಳು. ವಾಸ್ತವವನ್ನು ಎದುರಿಸಲಾರದ ಹೇಡಿಯೆಂದು ಜರೆದಳು. ಆದರೆ ಜಿನದತ್ತನದು ಗಟ್ಟಿ ಮನಸ್ಸು. ಅವಳ ಯಾವ ತಿವಿತಕ್ಕೂ ಆತ ಸ್ಪಂದಿಸಲಿಲ್ಲ. ಸಮರ್ಥನೆಗೂ ಇಳಿಯಲಿಲ್ಲ. ಶಾಂತಚಿತ್ತನಾಗಿ ಮುಗುಳ್ನಗುತ್ತಿದ್ದ. ಮಾಯಿ ಆತನನ್ನು ವ್ರತದ ಹುಚ್ಚಿನಿಂದ ವಿಮುಖಗೊಳಿಸಿ ಪ್ರಾಣರಕ್ಷಣೆ ಮಾಡಲೇಬೇಕೆಂಬ ಹಠತೊಟ್ಟು ಮತ್ತೆ ಕೆಣಕಿದಳು.

achchigoo modalu

ಚೆನ್ನಭೈರಾದೇವಿಗೆ ಶರಣಾದ ಗೋವೆಯ ಪೋರ್ಚುಗೀಸ್ ಗವರ್ನರ್ ಲೂಯಿಸ್ ಅಟಾಯ್ಡೆ

‘ನಾನು ನಿಜ ಹೇಳಲೇನು? ವ್ರತದ ನೆಪದಲ್ಲಿ ನೀನು ಆತ್ಮಹತ್ಯೆಗಿಳಿಯಲು ನಿಜವಾದ ಕಾರಣ ನಿನ್ನ ಪ್ರೇಮವೈಫಲ್ಯ. ನಿನ್ನ ಒಳಮನಸ್ಸಿನಲ್ಲಿ ಇನ್ನೂ ಆ ರಾಣಿ ಕುಳಿತಿದ್ದಾಳೆ. ಈಗಲೂ ನಿನ್ನ ಮನಸ್ಸು ಹೃದಯಗಳು ಅವಳಿಗಾಗಿ ತುಡಿಯುತ್ತಿವೆ. ಅವಳು ಸಿಗಲಿಲ್ಲವೆಂಬ ಹತಾಶೆಯೇ ನಿನ್ನ ಸೂಸೈಡ್ ನಿರ್ಧಾರಕ್ಕೆ ಕಾರಣ’ ಎಂದು ಛೇಡಿಸಿದಳು. ಜಿನದತ್ತ ಅವಳ ಮಾತಿಗೆ ಮುಗುಳ್ನಕ್ಕು ನಿರುದ್ವಿಗ್ನನಾಗಿ,

‘ಮಾಯಿ, ಎಲ್ಲರಂತೆ ನೀವೂ ನನ್ನನ್ನು ತಪ್ಪು ಭಾವಿಸಿದ್ದೀರಿ ಅಥವಾ ನನ್ನನ್ನು ವ್ರತದಿಂದ ಹಿಂದೆ ಸರಿಯುವಂತೆ ಮಾಡಲು ಕೆಣಕುತ್ತಿದ್ದೀರಿ. ನಿಜ ಹೇಳುವುದಾದರೆ ನಾನು ಭೈರಾದೇವಿಯನ್ನು ಹೃತ್ಪೂರ್ವಕವಾಗಿ ಪ್ರೀತಿಸಿದ್ದು ಹೌದು. ಅದರಲ್ಲಿ ಎರಡು ಮಾತಿಲ್ಲ. ಆದರೆ ಎಂದೂ ನಾನು ಅವಳನ್ನು ಬಯಸಿರಲಿಲ್ಲ. ಸ್ವಂತದ್ದನ್ನಷ್ಟೇ ಪ್ರೀತಿಸಬೇಕು ಅಥವಾ ಪ್ರೀತಿಸುವುದೆಲ್ಲ ಸ್ವಂತವಾಗಬೇಕು ಎಂಬ ಸ್ವಾರ್ಥ ನನ್ನದಲ್ಲ. ಪ್ರೀತಿಯ ಮಹತ್ವ ಒಲಿದವರಿಗೆ ಒಳಿತನ್ನು ಬಯಸುವುದರಲ್ಲಿದೆಯೇ ಹೊರತು ತನ್ನದಾಗಿಸಿಕೊಳ್ಳುವುದರಲ್ಲಲ್ಲ. ನಾನು ಅವಳನ್ನು ಎಂದೂ ನನ್ನವಳನ್ನಾಗಿ ಭಾವಿಸಿರಲಿಲ್ಲ. ಅವಳನ್ನು ಆಕರ್ಷಿಸುವ ಪ್ರಯತ್ನವನ್ನೂ ಮಾಡಿರಲಿಲ್ಲ. ನಾನೂ ಆಕೆಯತ್ತ ಆಕರ್ಷಿತನಾಗಿರಲಿಲ್ಲ. ನನ್ನದು ನಿಷ್ಕಾಮ ಪ್ರೇಮ.

‘ಪ್ರೀತಿಸಿದ್ದೆ, ಆದರೆ ಬಯಸಿರಲಿಲ್ಲ! ನನ್ನವಳೆಂದು ಭಾವಿಸಲಿಲ್ಲ! ಹಾಗೆಂದರೆ ನಿನ್ನ ಪ್ರೀತಿಗೆ ಏನರ್ಥ? ಇದು ಆತ್ಮವಂಚನೆ’.

‘ಪ್ರೀತಿಯ ಅರ್ಥ ಬಯಸುವುದರಲ್ಲಿಲ್ಲ, ಮಾಯಿ. ಪ್ರೀತಿಸುವುದರಲ್ಲಿದೆ, ಅಷ್ಟೆ. ಪ್ರೀತಿಯೊಂದು ಅನುಭವ. ಅದು ವ್ಯಾಖ್ಯಾನಕ್ಕೆ ಸಿಗುವ ಸಂಗತಿಯಲ್ಲ. ಮಾಯಿ, ನಾನವಳನ್ನು ಮನಃಪೂರ್ವಕವಾಗಿ ಪ್ರೀತಿಸಿದ್ದು ನಿಜ. ಆದರೆ ಒಂದೇ ಒಂದು ಕ್ಷಣವೂ ನನ್ನವಳನ್ನಾಗಿ ಪಡೆಯಲು ಯೋಚಿಸಿರಲಿಲ್ಲ.‌ ಅವಳು ರಾಣಿಯಾಗಿ ಯಶಸ್ವಿಯಾಗಲಿ, ಕೀರ್ತಿಗಳಿಸಲಿ, ಸದಾ ಸುಖಿಯಾಗಿರಲಿ ಎಂದೆಲ್ಲ ಬಯಸುತ್ತಿದ್ದೆ, ಅಷ್ಟೆ. ನನ್ನ ಒಂದು ಪ್ರಶ್ನೆಗೆ ನೀವು ಪ್ರಾಮಾಣಿಕವಾಗಿ ಉತ್ತರಿಸಿ ಮಾಯಿ, ನಿಮ್ಮ ಜೀವವನ್ನು ಒತ್ತೆಯಿಟ್ಟು ನನ್ನನ್ನು ಪ್ರೀತಿಸುತ್ತೀದ್ದೀರಲ್ಲ, ನೀವು ನನ್ನಿಂದ ಏನನ್ನು ಬಯಸುತ್ತಿದ್ದೀರಿ? ಏನೂ ಇಲ್ಲ. ಇದು ಜಸ್ಟ್ ಪ್ರೀತಿ ಮಾತ್ರ, ಅಲ್ಲವೇ? ಯಾವತ್ತಾದರೂ ಒಂದು ಕ್ಷಣ ನೀವು ನನ್ನನ್ನು ಮಗನ ಹೊರತಾಗಿ ಬೇರೆ ಭಾವದಲ್ಲಿ ನೋಡಿದ್ದೀರಾ? ಇಲ್ಲ ತಾನೆ? ಹೋಗಲಿ ಮಗನೆಂದು ಭಾವಿಸಿ ಪ್ರೀತಿಸುವಾಗಲೂ ನನ್ನಿಂದ ಯಾವುದೋ ಪ್ರತಿಫಲವನ್ನು ನಿರೀಕ್ಷಿಸಿದ್ದೀರಾ? ಇಲ್ಲ. ಈ ನಿಷ್ಕಾಮ ಪ್ರೀತಿಯನ್ನು ಹ್ಯಾಗೆ ವ್ಯಾಖ್ಯಾನಿಸುತ್ತೀರಿ?’

ಮಾಯಿ ನಿರುತ್ತರಳಾಗಿ ಅವನನ್ನೇ ನೋಡುತ್ತ ಸುಮ್ಮನೆ ನಿಂತಿದ್ದಳು.

‘ನಾನು ಅವಳ ಜೊತೆ ಅತ್ಯಂತ ಆತ್ಮೀಯವಾಗಿದ್ದದ್ದು, ಹೌದು. ಅವಳಿಗೆ ಸದಾ ಒಳಿತನ್ನು ಬಯಸುತ್ತಿದ್ದೆ, ನಿಜ. ಒಳ್ಳೆಯ ವ್ಯಕ್ತಿತ್ವ ಕಟ್ಟಿಕೊಳ್ಳಲು ಸಹಕರಿಸುತ್ತಿದ್ದೆ, ಸತ್ಯ. ಆದರೆ ಎಂದೂ ನನ್ನನ್ನು ಪ್ರೀತಿಸಲು ಉತ್ತೇಜಿಸಲಿಲ್ಲ. ನನ್ನ ಸ್ವಾರ್ಥಕ್ಕೆ ದಕ್ಕುವಂತೆ ನಾನೆಂದೂ ಅವಳನ್ನು ಸಜ್ಜುಗೊಳಿಸಲಿಲ್ಲ. ಮಾಯಿ, ನನ್ನ ಪ್ರಕಾರ ಇಷ್ಟವಾದದ್ದೆಲ್ಲ ಸ್ವಂತವಾಗಬೇಕು ಎಂಬುದು ಮನುಷ್ಯ ಸ್ವಭಾವವಲ್ಲ. ಅದು ರಾಕ್ಷಸರ ಸ್ವಭಾವ. ನಮ್ಮಲ್ಲಿ ಅದಕ್ಕೆ ಶುಂಭನೆಂಬ ರಾಕ್ಷಸನನ್ನು ಉದಾಹರಿಸುತ್ತೇವೆ.

ಸತ್ರಾಜಿತನೂ ಸೇರಿದಂತೆ ಬಹಳ ಜನ ಅವರವರ ಮಿತಿಯಲ್ಲಿ, ಅವರವರ ತಿಳಿವಳಿಕೆಗೆ ಒಳಪಟ್ಟು ನಮ್ಮಿಬ್ಬರ ಪ್ರೀತಿಯನ್ನು ವ್ಯಾಖ್ಯಾನಿಸಿದರು. ಆದರೆ ನಮ್ಮಿಬ್ಬರ ಪ್ರೀತಿ ಇವರೆಲ್ಲರ ವ್ಯಾಖ್ಯಾನವನ್ನು ಮೀರಿತ್ತು. ನನ್ನ ನಂಬಿಕೆಯಂತೆ ಅವಳೂ ನನ್ನನ್ನು ಸ್ವಂತವೆಂದು ಭಾವಿಸದೆ ಗೌರವಾದರಗಳಿಂದಷ್ಟೇ ಪ್ರೀತಿಸಿದಳು. ನನಗೆ ಅವಳ ಯೋಗಕ್ಷೇಮದ ಕುರಿತು ಆಸಕ್ತಿ ಇತ್ತು. ಅದು ತಾಯಿ ಮಗುವನ್ನು ಪ್ರೀತಿಸುವಂತೆ, ನೀವು ನನ್ನನ್ನು ಪ್ರೀತಿಸಿದಂತೆ. ಮಾಯಿ, ತಾಯಿ ಮಗುವಿನಿಂದ ಒಂದಿಷ್ಟು ಪ್ರೀತಿಯ ಹೊರತಾಗಿ ಇನ್ನೇನು ಬಯಸುತ್ತಾಳೆ ಹೇಳಿ?

ರೂಪವೋ ಗುಣವೋ ಸಂಸ್ಕಾರವೋ ಬುದ್ಧಿಯೋ ರಕ್ತಸಂಬಂಧವನ್ನು ಆಧರಿಸಿ ಹರಿಯಬಹುದು. ಆದರೆ ಪ್ರೀತಿ ಹರಿಯುವುದಕ್ಕೆ ಯಾವ ಸಂಬಂಧವೂ ಬೇಡ. ಹಾಗೇನಾದರೂ ಇದ್ದಿದ್ದರೆ ನಿಮ್ಮ ನನ್ನ ನಡುವೆ ಇಂತದ್ದೊಂದು ಪ್ರಾಂಜಲ ಪ್ರೀತಿ ಸಾಧ್ಯವಿತ್ತೆ? ದೇಶ ಭಾಷೆ, ವೇಷ, ಸಂಸ್ಕೃತಿ, ಪರಂಪರೆ ಕೊನೆಗೆ ಇಟ್ಟ ಹೆಸರನ್ನೂ ಕಳೆದುಕೊಂಡು, ಸೂತ್ರ ಹರಿದ ಪಟದಂತೆ ನಿಮ್ಮ ಅಂಗಳದಲ್ಲಿ ಅಕ್ಷರಶಃ ಅನಾಥನಾಗಿ ಬಂದು ಬಿದ್ದ ನನ್ನನ್ನು ಮತ್ತು ಯಾವುದೋ ಧರ್ಮದಲ್ಲಿ ಹುಟ್ಟಿ ಯಾವುದೋ ಧರ್ಮದಲ್ಲಿ ಬೆಳೆದು ಅದೆಷ್ಟೋ ಕಷ್ಟನಷ್ಟಗಳನ್ನು ಎದುರಿಸಿ ಇಲ್ಲಿ ಬದುಕಿರುವ ನಿಮ್ಮನ್ನು ನಿಷ್ಕಲ್ಮಷ ಪ್ರೀತಿ ಬಂಧಿಸಿಲ್ಲವಾ?

ಮಾಯಿ, ನನ್ನ ಮೇಲಿರುವ ಈ ಪ್ರೀತಿಯನ್ನು ಹರಿದುಕೊಂಡು ನಿರ್ಲಿಪ್ತರಾಗಿ ಸಲ್ಲೇಖನಕ್ಕೆ ಸಹಕರಿಸಿ ನನ್ನನ್ನು ಕರ್ಮಬಂಧನದಿಂದ ಮುಕ್ತಗೊಳಿಸಿ’ ಗದ್ಗದ ಸ್ವರದಲ್ಲಿ ಹೇಳಿ ಜಿನದತ್ತ ಕೈ ಮುಗಿದಿದ್ದ. ಹನಿದುಂಬಿದ ಕಣ್ಣುಗಳಿಂದ ಅವನ ಮುಖವನ್ನೇ ದಿಟ್ಟಿಸುತ್ತಿದ್ದ ಮಾಯಿಗೆ ಇಲ್ಲವೆನ್ನಲು ಬಾಯಿ ಬರಲಿಲ್ಲ. ಅಳುತ್ತ ನಿಂತಿದ್ದ ಆಕೆಯ ಕಣ್ಣೀರು, ಪ್ರೀತಿಗೆ ದೇಶ ಧರ್ಮ ಭಾಷೆಗಳ ಗಡಿಯಿಲ್ಲವೆಂದು ಸಾರುತ್ತ ಕೆಳಗಿಳಿದು ಆಕೆಯ ಕೆನ್ನೆಯನ್ನು ತೋಯಿಸಿತ್ತು.

*

ಪರಿಚಯ : ಡಾ. ಗಜಾನನ ಶರ್ಮಾ ಅವರು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ ಅಧೀಕ್ಷಕ ಎಂಜಿನಿಯರ್ ಆಗಿ ನಿವೃತ್ತಿಗೊಂಡಿದ್ದಾರೆ. ನಟ, ನಾಟಕಕಾರ, ನಿರ್ದೇಶಕ, ಸಾಹಿತಿಯಾಗಿರುವ ಇವರು ‘ನಾಣಿ ಭಟ್ಟನ ಸ್ವರ್ಗದ ಕನಸು’, ‘ಗೊಂಬೆ ರಾವಣ’, ‘ಮೃಗ ಮತ್ತು ಸುಂದರಿ’, ‘ಹಂಚಿನಮನೆ ಪರಸಪ್ಪ’, ‘ಪುಸ್ತಕ ಪಾಂಡಿತ್ಯ’ ಮಕ್ಕಳ ನಾಟಕ ರಚಿಸಿದ್ದಾರೆ. ಕನ್ನಂಬಾಡಿಯ ಕಟ್ಟದಿದ್ದರೆ, ದ್ವಂದ್ವ ದ್ವಾಪರ, ಬೆಳ್ಳಿಬೆಳಕಿನ ಹಿಂದೆ, ಮುಂತಾದ ನಾಟಕಗಳು ಇವರಿಂದ ರಚಿತಗೊಂಡಿವೆ. ಪುನರ್ವಸು ಇವರ ಕಾದಂಬರಿ. ಕೈಲಾಸ ಮಾನಸ ಇವರ ಪ್ರವಾಸ ಕಥನ.

*

ಈ ಕಾದಂಬರಿಯ ಖರೀದಿಗೆ ಸಂಪರ್ಕಿಸಿ : ankitapustaka.com 

navakarnatakaonline.com

ಇದನ್ನೂ ಓದಿ : New Book ; ಅಚ್ಚಿಗೂ ಮೊದಲು : ತನ್ನ ತಿಳಿವಳಿಕೆಗೆ ಅನ್ಯದ ಮುಖವಾಡ

achchigoo modhalu a new kannada novel excerpt from chennabhairadevi by gajanana sharma

Published On - 12:43 pm, Tue, 20 April 21

Click on your DTH Provider to Add TV9 Kannada