AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Abdul Kalam Inspirational Quotes: ಬೇರೆಯವರ ಅದೃಷ್ಟ ನಿಮ್ಮ ಹಣೆಬರಹ ಆಗಬಾರದು; ಅಬ್ದುಲ್ ಕಲಾಂ ಆಡಿದ್ದ 10 ಸ್ಫೂರ್ತಿದಾಯಕ ನುಡಿಮುತ್ತುಗಳಿವು

ನೀವು ಬದ್ಧತೆಯಿಂದ ಕಾರ್ಯತತ್ಪರಾಗದಿದ್ದರೆ ಬೇರೆಯವರ ಅದೃಷ್ಟವೇ ನಿಮ್ಮ ಹಣೆಬರಹವನ್ನೂ ಬರೆಯುತ್ತದೆ. ಬೇರೆಯವರ ಅದೃಷ್ಟ ಎಂದಿಗೂ ನಿಮ್ಮ ಹಣೆಬರಹ ಆಗಬಾರದು.

Abdul Kalam Inspirational Quotes: ಬೇರೆಯವರ ಅದೃಷ್ಟ ನಿಮ್ಮ ಹಣೆಬರಹ ಆಗಬಾರದು; ಅಬ್ದುಲ್ ಕಲಾಂ ಆಡಿದ್ದ 10 ಸ್ಫೂರ್ತಿದಾಯಕ ನುಡಿಮುತ್ತುಗಳಿವು
ಡಾ ಎ.ಪಿ.ಜೆ.ಅಬ್ದುಲ್ ಕಲಾಂ
Ghanashyam D M | ಡಿ.ಎಂ.ಘನಶ್ಯಾಮ
|

Updated on:Jul 27, 2022 | 7:59 AM

Share

ಭಾರತದ ರಾಷ್ಟ್ರಪತಿಯಾಗಿ ಜನಮನ ಗೆದ್ದಿದ್ದ ದೇಶದ ಹೆಮ್ಮೆಯ ‘ಮಿಸೈಲ್ ಮ್ಯಾನ್’ ಅಬ್ದುಲ್ ಕಲಾಂ ವೈವಿಧ್ಯಮಯ ವಿಷಯಗಳಲ್ಲಿ ಆಳವಾದ ಅಧ್ಯಯನ ನಡೆಸಿದ್ದವರು. ಎಲ್ಲಿಗೇ ಹೋದರೂ ಮಕ್ಕಳೊಂದಿಗೆ ಬೆರೆತು ಸಂವಾದ ನಡೆಸುತ್ತಿದ್ದ ಅವರನ್ನು ಭಾರತವು ‘ಅತ್ಯುತ್ತಮ ಶಿಕ್ಷಕ’ ಎಂದೂ ನೆನಪಿಟ್ಟುಕೊಂಡಿದೆ. ಭಾರತದ ರಕ್ಷಣೆ, ಬಾಹ್ಯಾಕಾಶ ಸಂಶೋಧನೆ, ಕ್ಷಿಪಣಿ ಯೋಜನೆಗಳಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದವರು ಕಲಾಂ. ಶಿಲಾಂಗ್​ನಲ್ಲಿ ಜುಲೈ 27, 2015ರಂದು ಭಾಷಣ ಮಾಡುತ್ತಿದ್ದಾಗ ಕಲಾಂ ಅವರು ಮೃತಪಟ್ಟರು. ಭಾರತದ ರಾಷ್ಟ್ರಪತಿಯಾಗಿ ಮಾತ್ರವೇ ಅಲ್ಲ, ಜನಮನ ಗೆದ್ದ ಸಜ್ಜನ ವಿದ್ವಾಂಸನಾಗಿಯೂ ಭಾರತವು ಕಲಾಂ ಅವರನ್ನು ನೆನಪಿಟ್ಟುಕೊಂಡಿದೆ. ಇಂದು ಅವರ 7ನೇ ಪುಣ್ಯಸ್ಮರಣೆ. ಈ ಹಿನ್ನೆಲೆಯಲ್ಲಿ ಕಲಾಂ ಅವರ ಜನಪ್ರಿಯ ನುಡಿಮುತ್ತುಗಳ ಝಲಕ್ ಇಲ್ಲಿದೆ.

  1. ಬದ್ಧತೆ ಎನ್ನುವುದು ಒಬ್ಬ ಮನುಷ್ಯನಿಗೆ ಇರಬಹುದಾದ ಅತಿದೊಡ್ಡ ಶಕ್ತಿ. ದೃಢವಿಶ್ವಾಸವನ್ನು ಇದು ಬೆಳೆಸುತ್ತದೆ. ನಮ್ಮ ಮೇಲೆ ನಾವು ಇರಿಸಿಕೊಳ್ಳುವ ದೃಢವಿಶ್ವಾಸವೇ ನಮ್ಮೆಲ್ಲ ಯಶಸ್ಸಿನ ಮೂಲವೂ ಆಗಿರುತ್ತದೆ.
  2. ಯುವಜನರು ತಮ್ಮ ದೃಷ್ಟಿಕೋನವನ್ನಾಗಲೀ, ಆಶೋತ್ತರಗಳನ್ನಾಗಲೀ, ಸಾಧಿಸುವ ಛಲವನ್ನಾಗಲೀ ಎಂದಿಗೂ ಕೈಬಿಡಬಾರದು. ಕಡಿಮೆ ಎತ್ತರಕ್ಕೂ ಇರಿಸಿಕೊಳ್ಳಬಾರದು. ಯುವಕರನ್ನು ಹತ್ತಿಕ್ಕುವ, ಅವರ ಛಲ ಕುಗ್ಗಿಸುವ ಯಾವುದೇ ಸಮಾಜ ಪ್ರಗತಿ ಸಾಧಿಸುವುದಿಲ್ಲ.
  3. ಮೊದಲ ಬಾರಿ ಜಯಗಳಿಸಿದೆವೆಂದು ಎಂದಿಗೂ ವಿಶ್ರಾಂತಿಗೆ ಜಾರಬೇಡಿ. ನೀವು ಗೆದ್ದಾಗ ಹೊಗಳುವ ಬಾಯಿಗಳಿಗಿಂತಲೂ ಗೆದ್ದವರು ಸೋತಾಗ ತೆಗಳುವ ಬಾಯಿಗಳು ಹೆಚ್ಚು ಎನ್ನುವುದು ನೆನಪಿರಲಿ.
  4. ಮುಂದೆ ನಮ್ಮ ಮಕ್ಕಳು, ಭವಿಷ್ಯದ ತಲೆಮಾರು ಚೆನ್ನಾಗಿರಬೇಕು ಎಂದಾದರೆ ಇಂದು ನಾವು ಕಷ್ಟಪಡಬೇಕು, ತ್ಯಾಗಕ್ಕೆ ಸಿದ್ಧರಾಗಿರಬೇಕು.
  5. ಕನಸು, ಕನಸು, ಕನಸು… ಕನಸು ಕಾಣಲು ಎಂದಿಗೂ ಹಿಂಜರಿಯಬೇಡಿ. ಕನಸುಗಳೇ ನಿಮ್ಮ ಆಲೋಚನೆಗಳಾಗುತ್ತವೆ. ಆಲೋಚನೆಗಳು ಕಾರ್ಯಕರೂಪಕ್ಕೆ ಬರುತ್ತವೆ.
  6. ಗೆದ್ದೇಗೆಲ್ಲುವೆ ಎನ್ನುವ ದೃಢವಿಶ್ವಾಸ ಇದ್ದಾಗ ಸೋಲು ಎಂದಿಗೂ ನಮ್ಮಲ್ಲಿ ಜಡತ್ವ ತುಂಬುವುದಿಲ್ಲ.
  7. ಯಾವುದೇ ಪ್ರಯತ್ನದಲ್ಲಿ ಯಶಸ್ಸುಗಳಿಸಬೇಕೆಂದರೆ ಏಕಾಗ್ರತೆ ಮತ್ತು ಗುರಿಯತ್ತ ಸಾಗುವ ಛಲ ಇರಲೇಬೇಕು.
  8. ಒಂದು ವೇಳೆ ನೀವು ಯಾವುದರಲ್ಲಿಯಾದರೂ ವಿಫಲರಾದರೆ, ಪ್ರಯತ್ನ ಕೈಬಿಡಬೇಡಿ. ವೈಫಲ್ಯವು ಕಲಿಕೆಯ ಮೊದಲ ಮೆಟ್ಟಿಲು ಎಂದುಕೊಳ್ಳಿ. ಪುನಃ ಪ್ರಯತ್ನಪಡಿ.
  9. ತರಗತಿಗಳಲ್ಲಿರುವ ಕೊನೆಯ ಬೆಂಚ್​ಗಳಲ್ಲಿ ದೇಶದ ಅತ್ಯುತ್ತಮ ಮಿದುಳುಗಳು (ಬುದ್ಧಿವಂತರು) ಇವೆ.
  10. ಸದಾ ಸಕ್ರಿಯರಾಗಿರಿ, ಜವಾಬ್ದಾರಿ ತೆಗೆದುಕೊಳ್ಳಲು ಹಿಂಜರಿಯಬೇಡಿ. ನೀವು ನಂಬುವ ವಿಚಾರಕ್ಕಾಗಿ ಕೆಲಸ ಮಾಡಿ. ನೀವು ಬದ್ಧತೆಯಿಂದ ಕಾರ್ಯತತ್ಪರಾಗದಿದ್ದರೆ ಬೇರೆಯವರ ಅದೃಷ್ಟವೇ ನಿಮ್ಮ ಹಣೆಬರಹವನ್ನೂ ಬರೆಯುತ್ತದೆ. ಬೇರೆಯವರ ಅದೃಷ್ಟ ಎಂದಿಗೂ ನಿಮ್ಮ ಹಣೆಬರಹ ಆಗಬಾರದು.

Published On - 7:39 am, Wed, 27 July 22