Art With Heart : ಪ್ರೇಕ್ಷಕರನ್ನು ರಸಗಂಗೆಯಲ್ಲಿ ಮೀಯಿಸುವ ವೃತ್ತಿಪರ ‘ರಂಗ ನಿರ್ವಾಹಕರು‘ ನೀವಾಗಬೇಕೆ?
Theatre Management : ‘ರಂಗಭೂಮಿಯಲ್ಲಿ ಕೆಲಸ ಮಾಡುತ್ತಿರುವ ಹಲವರಿಗೆ ‘ಆಸಕ್ತಿ ಇರದ’ Micro economics, work and dignity ಹೀಗೆ ಮುಂತಾದ ವಿಷಯಗಳ ತರಗತಿಗಳು ಹೊಸ ಸವಾಲುಗಳನ್ನು ಒಡ್ಡುತ್ತವೆ. ಒಮ್ಮೆ ಒಳಹೊಕ್ಕು ಕಲಿತು ನೋಡಿದಾಗಲೇ ರಂಗಭೂಮಿಗೂ ಮತ್ತು ಇವೆಲ್ಲದಕ್ಕೂ ಇರುವ ನಿಕಟ ಸಂಬಂಧ ತೆರೆದುಕೊಳ್ಳುತ್ತದೆ.‘ ಸುಷ್ಮಾ ರಾವ್
ಟಿವಿ9 ಕನ್ನಡ ಡಿಜಿಟಲ್ : ‘ಆರ್ಟ್ ವಿಥ್ ಹಾರ್ಟ್ (Art With Heart) ಪ್ರತೀ ಭಾನುವಾರ ಪ್ರಕಟವಾಗುವ ಈ ಸರಣಿಯಲ್ಲಿ ಪ್ರದರ್ಶನ ಕಲೆ ಮತ್ತದರ ಅದಕ್ಕೆ ಸಂಬಂಧಿಸಿದ ವಿವಿಧ ವಿಭಾಗಗಳ ಆನ್‍ಲೈನ್ ಕೋರ್ಸ್, ತರಗತಿಗಳನ್ನು ನಿರ್ವಹಿಸುತ್ತಿರುವ ಪರಿಣತರು ಮಾಹಿತಿ ಮತ್ತು ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ನೀವೆಲ್ಲ ಓದುತ್ತಿದ್ದೀರಿ. ಒಂದು ಕಲೆ ಯಾವಾಗ ಶೈಕ್ಷಣಿಕ ಪರಿಧಿಗೆ ಒಳಪಡುತ್ತದೆಯೋ ಆಗ ಅದರ ಸಾಧ್ಯತೆ ಮತ್ತು ಸ್ವರೂಪಗಳೂ ಬೇರೊಂದು ಸ್ತರದಲ್ಲಿ ವಿಸ್ತರಿಕೊಳ್ಳುತ್ತವೆ. ವೃತ್ತಿಪರ ಅವಕಾಶಗಳು ಹೆಚ್ಚಿ, ಕಲಾವಿದರು ಈ ಕ್ಷೇತ್ರದಲ್ಲಿ ಸಂಪೂರ್ಣವಾಗಿ ನೆಲೆಗೊಳ್ಳಲು ಭರವಸೆಯನ್ನು ತೋರುತ್ತದೆ. ಹಿಂದೆ ಕಂಪನಿ ನಾಟಕದ ಬೆನ್ನೆಲುಬಾಗಿರುತ್ತಿದ್ದವರು ‘ಮ್ಯಾನೇಜರ್’. ಆಧುನಿಕ ರಂಗಭೂಮಿಯ ಭಾಷೆಯಲ್ಲಿ ಅವರಿಂದು ‘ರಂಗ ನಿರ್ವಾಹಕರು’. ವಿದೇಶಗಳಲ್ಲಿ ಈಗಾಗಲೇ ಕಲೆಯ ನಿರ್ವಹಣೆಗೆಂದೇ ಪದವಿ, ಸ್ನಾತಕೋತ್ತರ ಪದವಿಗಳು ಲಭ್ಯವಿದ್ದರೂ ನಮ್ಮ ದೇಶದಲ್ಲಿ ಅಪರೂಪಕ್ಕೆ ಕಾರ್ಯಾಗಾರ, ಕೋರ್ಸ್ಗಳು ಏರ್ಪಡುತ್ತಿರುತ್ತವೆ.
ಕೊರೊನಾದ ಈ ಸಂದರ್ಭದಲ್ಲಿ ಕಲೆ ಮತ್ತು ಜ್ಞಾನದ ಸಾವಿರಾರು ಕವಲುಗಳು ಆನ್‍ಲೈನ್ ಕೋರ್ಸ್ನ ಪರಿಧಿಗೆ ಒಳಪಟ್ಟ ಬೆನ್ನಲ್ಲೇ ‘ರಂಗ ನಿರ್ವಹಣೆ’ಯಂಥ ಅಪರೂಪದ ವಿಷಯವನ್ನು ನ್ಯೂ ವಾಯ್ಸಸ್ ಆರ್ಟ್ಸ್ ಪ್ರಾಜೆಕ್ಟ್ ಇಂಡಿಯಾ (New Voices Arts Project India) ಮತ್ತು ಬೆಂಗಳೂರು ಥಿಯೇಟರ್ ಕಲೆಕ್ಟಿವ್ ಒಂದಾಗಿ ಆನ್‍ಲೈನ್ ಕಾರ್ಯಾಗಾರವನ್ನು ಪ್ರಾರಂಭಿಸಿದೆ. ರಂಗಭೂಮಿ ಸ್ಥಿರಭವಿಷ್ಯಕ್ಕೆ ಈ ಕಾರ್ಯಾಗಾರದ ಆಲೋಚನೆ ಮತ್ತು ಉದ್ದೇಶ ಅತ್ಯಂತ ಪ್ರಸ್ತುತ ಕೂಡ. ಉತ್ಸಾಹಿ ಯುವರಂಗಕರ್ಮಿಗಳಾದ ಮುಂಬೈನ ಸಾತ್ವಿಕಾ ಕಾಂಟೆಮ್ನೇನಿ, ಅಭಿಷೇಕ್ ಮಜುಮ್ದಾರ್, ಕೋಮಿತಾ ದಂಡಾ, ಸುಬ್ರತ್ ಬಿಯೂರಾ ಮತ್ತು ವೆಂಕಟೇಶ್ವರನ್ ಅವರುಗಳನ್ನೊಳಗೊಂಡ ತಂಡದ ಆಶಯವನ್ನು, ರಂಗಕಲಾವಿದೆ, ರಂಗ ನಿರ್ವಾಹಕಿ ಮತ್ತು ಈ ತಂಡದ ಮುಖ್ಯಸದಸ್ಯೆ ಸುಷ್ಮಾ ರಾವ್ ಇಲ್ಲಿ ಹಂಚಿಕೊಂಡಿದ್ದಾರೆ.
*
ರಂಗ ಪ್ರದರ್ಶನ/ಪ್ರಯೋಗ ಎಂದ ತಕ್ಷಣ ಎಲ್ಲರ ಮನಸಿಗೆ ಬರುವುದು ನಟನೆ, ನಿರ್ದೇಶನ, ಬೆಳಕು, ವಸ್ತ್ರ ವಿನ್ಯಾಸ ಹೀಗೆ, ರಂಗದ ಮೇಲೆ ಕಾಣುವಂತಹ ಹಲವು ಅಂಶಗಳು. ಇದೆಲ್ಲದರ ಬೆನ್ನೆಲುಬಾಗಿ ರಂಗ ಪ್ರಯೋಗದಲ್ಲಿರುವ ಅತಿ ಮುಖ್ಯ ಅಂಶ ಎಂದರೆ ರಂಗ ನಿರ್ವಹಣೆ.
ರಂಗ ಪ್ರಯೋಗದ ಸ್ಕ್ರಿಪ್ಟ್, ನಿರ್ದೇಶಕರ ದೃಷ್ಟಿಕೋನ, ನಟರ ಆಯ್ಕೆ, ತಾಲೀಮಿನ ಎಲ್ಲ ಜವಾಬ್ದಾರಿ, ರಂಗ ಪರಿಕರಗಳ ಮೇಲುಸ್ತುವಾರಿ, ರಂಗ ವಿನ್ಯಾಸದ ಭಾಷೆ, ಪ್ರಯೋಗದ ಮರು ಪ್ರದರ್ಶನಗಳ ಜವಾಬ್ದಾರಿ ಮತ್ತು ಈ ಎಲ್ಲದಕ್ಕೂ ಬೇಕಾಗುವ ಅಂದಾಜು ಹಣ ಮತ್ತು ಅದರ ವ್ಯವಸ್ಥೆ, ಹೀಗೆ ರಂಗ ನಿರ್ವಹಣೆಯು ಒಂದು ರಂಗ ಪ್ರಯೋಗವನ್ನು ಪ್ರೇಕ್ಷಕರಿಗೆ ಪರಿಪೂರ್ಣ ಪದಾರ್ಥವಾಗಿ ತಲುಪಿಸುವಲ್ಲಿ ಹಲವು ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತದೆ.
ಭಾರತದ ಅನೇಕ ಭಾಷೆಗಳ ರಂಗ ಸಂಪ್ರದಾಯದಲ್ಲಿ ರಂಗ ನಿರ್ಮಾಪಕರಿಗೆ ಹೆಚ್ಚಿನ ಪ್ರಾಮುಖ್ಯ ಸಾಮಾನ್ಯವಾಗಿ ಕಂಡುಬರುವುದಿಲ್ಲ. ರಂಗ ಪ್ರಕ್ರಿಯೆಗೆ ಅವಶ್ಯಕವಾದ ರಂಗ ನಿರ್ಮಾಪಕರ ಪಾತ್ರವನ್ನು ಹೆಚ್ಚಿನ ಮಟ್ಟಿಗೆ ನಿರ್ದೇಶಕರು ಅಥವಾ ನಟರು ನಿರ್ವಹಿಸುತ್ತಾರೆ. ಕೇವಲ ಕೆಲವು ರಂಗ ತಂಡಗಳಲ್ಲಿ ಮಾತ್ರ ಪ್ರತ್ಯೇಕ ನಿರ್ವಾಹಕ/ನಿರ್ಮಾಪಕರು ಇರುವುದನ್ನು ಕಾಣುತ್ತೇವೆ.
ನಮ್ಮ ಬಹುತೇಕ ರಂಗ ಪ್ರಯೋಗಗಳ ಸಿದ್ಧತೆಯ ಸಮಯದಲ್ಲಿ, ನಟನೆಗೆ ‘ಯೋಗ್ಯ’ರಲ್ಲ ಎಂದು ನಿರ್ದೇಶಕರು ಗುರುತು ಮಾಡಿದ, ಅಥವಾ ಸಿದ್ಧತೆಯ ಸಮಯದಲ್ಲಿ ತಾಲೀಮಿಗೆ ಪರಿಪೂರ್ಣವಾಗಿ ತೊಡಗಿಸಿಕೊಳ್ಳಲಾಗದ ಕಲಾವಿದರನ್ನು ‘Back stage’ ಕಲಾವಿದರೆಂದೂ, ಅವರು ರಂಗ ಪ್ರಯೋಗಕ್ಕೆ ಕಾಫೀ/ಟೀ ತರುವುದು, ಮಾರ್ಕೆಟ್ನಿಂದ ರಂಗ ಪರಿಕರಗಳನ್ನು ತರುವುದು ಇಂತಹ ಕೆಲವು ಕೆಲಸಗಳಿಗಾಗಿ ಮಾತ್ರ ಸೀಮಿತವಾಗಿರುತ್ತಾರೆ.
ಆದರೆ, ರಂಗ ನಿರ್ವಾಹಕರಿಗೆ ವಿಶಿಷ್ಟವಾದ ಪಾತ್ರವಿದೆ. ಅವರು ರಂಗ ಪ್ರಕ್ರಿಯೆಯ ಉದ್ದಕ್ಕೂ ಹಲವು ಮುಖ್ಯ ನಿರ್ಧಾರದ ಜವಾಬ್ದಾರಿಗಳನ್ನು ಹೊತ್ತಿರುತ್ತಾರೆ. ನಮ್ಮ ‘ಕಂಪನಿ’ ನಾಟಕಗಳ ಸಂಪ್ರದಾಯದಲ್ಲಿ, ಪ್ರತಿ ರಂಗ ಸಂಸ್ಥೆಗೂ ಪ್ರತ್ಯೇಕ ‘ಮ್ಯಾನೇಜರ್’ ಇರುತ್ತಿದ್ದರು. ಇವರು ರಂಗದ ಮೇಲೆ ಕಾಣಸಿಗುವುದು ಅಪರೂಪ, ಆದರೆ ಆ ರಂಗ ಸಂಸ್ಥೆಯ ಎಲ್ಲ ಜವಾಬ್ದಾರಿಗಳನ್ನು ಅವರು ನಿಭಾಯಿಸುತ್ತಿದ್ದರು. ಕಾಲಕ್ರಮೇಣ ಆಧುನಿಕ ರಂಗಭೂಮಿ ಮತ್ತು ಹವ್ಯಾಸಿ ರಂಗ ಪ್ರಯೋಗಗಳ ತಾಲೀಮಿನ ಪ್ರಕ್ರಿಯೆಯೂ ಬದಲಾಗುತ್ತ ಬಂದಿತು. ವೀಕೆಂಡ್ ರಿಹರ್ಸಲ್ಗಳ ಪದ್ಧತಿಯಲ್ಲಿ ಅದು ಮುಂದುವರಿದಾಗ ಅಲ್ಲಿ ರಂಗ ನಿರ್ವಾಹಕರ ಉಪಸ್ಥಿತಿ ಅತ್ಯವಶ್ಯವೆನ್ನಿಸಲಿಲ್ಲ ಎನ್ನುವುದನ್ನು ಗಮನಿಸಬೇಕು.
ಇಂಥ ಎಲ್ಲ ಆಲೋಚನೆಯ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಮತ್ತು ರಂಗ ನಿರ್ವಹಣೆಯ ಕುರಿತಾದ ಸೂಕ್ತ ತರಬೇತಿ ನೀಡುವ ದೃಷ್ಟಿಯಿಂದ ‘ನ್ಯೂ ವಾಯ್ಸಸ್ ಆರ್ಟ್ಸ್ ಪ್ರಾಜೆಕ್ಟ್’ ಮತ್ತು ಬೆಂಗಳೂರು ಥಿಯೇಟರ್ ಕಲೆಕ್ಟಿವ್ 8 ವಾರಗಳ ರಂಗ ನಿರ್ವಹಣೆ ಮತ್ತು ನಿರ್ಮಾಣದ ಬಗ್ಗೆ ಆನ್‍ಲೈನ್ ತರಬೇತಿ ಕಾರ್ಯಾಗಾರವನ್ನು ಹುಟ್ಟುಹಾಕಿತು. ಈ ತರಬೇತಿಯನ್ನು ಪಡೆಯಲಿಚ್ಛಿಸುವ ಆಸಕ್ತರಿಂದ ವಿವರಗಳನ್ನು ಆಹ್ವಾನಿಸಿ ಆಯ್ಕೆ ಮಾಡಿಕೊಳ್ಳಲಾಗಿತ್ತು. ಈ ವರ್ಷದ ಕಾರ್ಯಾಗಾರವು ಬೆಂಗಳೂರಿನ ನಿವಾಸಿಗಳಿಗೆ ಮಾತ್ರ ಸೀಮಿತವಾಗಿದ್ದು, ಮುಂದಿನ ಕಂತುಗಳಲ್ಲಿ ರಾಜ್ಯದ ಬೇರೆ ಜಿಲ್ಲೆಗಳ ಮತ್ತು ಹೊರ ರಾಜ್ಯದ ಆಸಕ್ತರಿಗಾಗಿಯೂ ಆಯೋಜಿಸುವ ಉದ್ದೇಶವಿದೆ.
ನಾಟಕ ನಿರ್ವಾಹಕರ ಜವಾಬ್ದಾರಿ ನಾಟಕದ ಅವಶ್ಯಕತೆಗಳನ್ನು ನಿರ್ವಹಿಸುವುದು ಮಾತ್ರವಲ್ಲ, ನಾಟಕದ ಸೌಂದರ್ಯ ಮತ್ತು ಆರ್ಥಿಕ ಅಂಶಗಳನ್ನು ಅರ್ಥಮಾಡಿಕೊಳ್ಳುವುದು ಕೂಡ ಮುಖ್ಯವಾಗಿದೆ. ಒಂದು ನಾಟಕದ ವಸ್ತುವಿಗೆ ಅನುಗುಣವಾಗಿ ಅದರ ಸೌಂದರ್ಯ ಪ್ರಜ್ಞೆ, ನಿರ್ದೇಶಕರ ದೃಷ್ಟಿಕೋನಕ್ಕೆ ತಕ್ಕಂತೆ ಪ್ರಯೋಗದ ಒಟ್ಟು ಅಂದಾಜು ವೆಚ್ಚ, ಇವೆಲ್ಲದರ ಅರಿವು ನಿರ್ವಾಹಕರಿಗಿರಬೇಕಾಗುತ್ತದೆ. ಇದೇ ಅವರ ಮುಖ್ಯ ಜವಾಬ್ದಾರಿ. ತಾಲೀಮಿನ ಕೊಠಡಿಯಲ್ಲಿನ ಶಿಸ್ತು ಮಾತ್ರವಲ್ಲದೇ, ಎಲ್ಲ ಕಲಾವಿದರ ಸುರಕ್ಷತೆಯೂ ನಿರ್ವಾಹಕರ ಜವಾಬ್ದಾರಿ.
ವಿದೇಶದಲ್ಲಿ, ಹೆಚ್ಚಾಗಿ ಯುರೋಪಿನ ಹಲವು ಶಿಕ್ಷಣ ಸಂಸ್ಥೆಗಳಲ್ಲಿ ರಂಗ ನಿರ್ವಹಣೆಯ ಸ್ನಾತಕೋತ್ತರ ಪದವಿಗಳ ಹಲವು ಕೋರ್ಸ್ಗಳನ್ನು ರಂಗಭೂಮಿ ಕಲಿಯುವ ಆಸಕ್ತರು ಆಯ್ಕೆ ಮಾಡಿಕೊಳ್ಳಬಹುದು. ನಮ್ಮ ದೇಶದಲ್ಲಿ ಈ ಕೋರ್ಸ್ ಲಭ್ಯವಿಲ್ಲದೇ ಇರುವುದರಿಂದ ರಂಗ ಸಂಘಟನೆಗಳಲ್ಲಿ ಕೆಲಸಮಾಡುವ ಯುವತಿ ಯುವಕರಿಗೆ ನಮ್ಮ ಕಾರ್ಯಾಗಾರ ಪ್ರಯೋಜನವಾಗಬಹುದು ಎಂಬ ಹಿನ್ನೆಲೆಯಲ್ಲಿ ನಾವಿದನ್ನು ಹುಟ್ಟುಹಾಕಿದೆವು. ಇಡೀ ಕಾರ್ಯಾಗಾರವು ಉಚಿತವಾಗಿದ್ದು, ಸಂಪೂರ್ಣ ಆದ್ಯತೆಯನ್ನು ಈ ಕಲಿಕೆಯಲ್ಲಿ ತೊಡಗಿಕೊಳ್ಳಲು ಇಚ್ಛಿಸುವ ಆಸಕ್ತರಿಗೆ ಮಾಸಿಕ ವೇತನವನ್ನೂ ಕೊಡಲಾಗುವುದು.
ಜೂನ್ 21ಕ್ಕೆ ಪ್ರಾರಂಭವಾದ ಮೊದಲ ಕಾರ್ಯಾಗಾರದಲ್ಲಿ ಮುಂಬೈನ ಸಾತ್ವಿಕಾ ಕಾಂಟೆಮ್ನೇನಿಯವರ ಅಭಿಷೇಕ್ ಮಜುಮ್ದಾರ್, ಕೋಮಿತಾ ದಂಡಾ, ಸುಬ್ರತ್ ಬಿಯೂರಾ, ಸುಷ್ಮ, ವೆಂಕಟೇಶ್ವರನ್ ಮುಖ್ಯ ತರಬೇತುದಾರರಾದ್ದರು. ಭಾರತದ ಕೆಲ ರಂಗತಜ್ಞರು ಅತಿಥಿ ಉಪನ್ಯಾಸಕರಾಗಿ ಭಾಗವಹಿಸಿದ್ದರು. ಈ ಕಾರ್ಯಾಗಾರವು ಮೂರು ವಿಷಯಗಳ ಮೇಲೆ ಕೇಂದ್ರಿತವಾಗಿತ್ತು.
1. ಸೃಜನಶೀಲ ರಂಗನಿರ್ಮಾಣ : ರಂಗನಿರ್ಮಾಣ, ರಂಗನಿರ್ವಹಣೆ, ನಿಧಿ ಸಂಗ್ರಹಣೆ, ಮಾರ್ಕೆಟಿಂಗ್, ಪ್ರದರ್ಶನ ಸ್ಥಳ ನಿರ್ವಹಣೆ ಇತ್ಯಾದಿ. 2. ಸಾಂಸ್ಕೃತಿಕ ಮತ್ತು ಆರ್ಥಿಕ ರೂಪುರೇಷೆ 3. ರಂಗನಿರ್ಮಾಣದ ಸೌಂದರ್ಯಶಾಸ್ತ್ರ
ಈ ಕಾರ್ಯಾಗಾರದ ನಂತರ ಎರಡು ತಿಂಗಳುಗಳ ಕಾಲ ಭಾರತದ ಯಾವುದಾದರೂ ರಂಗತಂಡದ ಅಥವಾ ರಂಗಮಂದಿರದ ಜೊತೆ ಪ್ರಾಯೋಗಿಕ ತರಬೇತಿಯನ್ನು ಏರ್ಪಡಿಸಲಾಗುತ್ತದೆ. ನಂತರ ತಮ್ಮದೇ ಆದ ನಾಟಕ ಕಂಪನಿಯನ್ನು ರಚಿಸಬಹುದು ಅಥವಾ ಅಸ್ತಿತ್ವದಲ್ಲಿರುವ ಕಂಪನಿಗಳೊಂದಿಗೆ ತಮ್ಮ ದೃಷ್ಟಿಕೋನಗಳನ್ನು ಹಂಚಿಕೊಂಡು, ಹೊಸ ರಂಗ ಪ್ರಯೋಗಗಳಲ್ಲಿ ಕೂಡ ತೊಡಗಿಕೊಳ್ಳಬಹುದು.
ರಂಗ ನಿರ್ವಹಣೆಯ ಕುರಿತಾದ ಈ ಅಲ್ಪಾವಧಿಯ ಕಾರ್ಯಾಗಾರವು ರಂಗಭೂಮಿಯ ಹಲವು ಆಯಾಮಗಳು ಮತ್ತು ಸಮಕಾಲೀನ ಸಾಮಾಜಿಕ-ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ದೃಷ್ಟಿಕೋನಗಳ ನಡುವಿನ ಸಂಪರ್ಕವನ್ನು ಕೇಂದ್ರೀಕರಿಸುತ್ತದೆ ಮತ್ತು ನಾಟಕ ನಿರ್ವಹಣಾ ಕ್ಷೇತ್ರದಲ್ಲಿ ನುರಿತ ವೃತ್ತಿಪರರನ್ನು ರೂಪಿಸುವ ಮೂಲಕ ಸಾಮಾಜಿಕ ಕಳಕಳಿಯುಳ್ಳ ರಂಗ ನಿರ್ವಾಹಕರನ್ನು ರಂಗಭೂಮಿಗೆ ನೀಡುತ್ತದೆ ಎಂಬ ಆಶಯ ಈ ತಂಡದ್ದಾಗಿದೆ.
ಈ ನಿಟ್ಟಿನಲ್ಲಿ ಇದಕ್ಕೇ ಆದ ಪಠ್ಯಕ್ರಮವೂ ಇದೆ. ತರಗತಿಗಳಲ್ಲಿ ಸಂಬಂಧಿಸಿದ ವಿಷಯಗಳ ಅಧ್ಯಯನ, ರಂಗಮಂದಿರ ಭೇಟಿ, ವಿಶ್ಲೇಷಣಾತ್ಮಕ ಮತ್ತು ವಿಮರ್ಶಾತ್ಮಕ ದೃಷ್ಟಿಕೋನದಿಂದ ಕೂಡಿದ ಚರ್ಚೆಗಳು, ಗೋಷ್ಠಿಗಳು ಇರುತ್ತವೆ. ಈ ಎಲ್ಲ ಪ್ರಕ್ರಿಯೆಗಳು ಕಲಾವಿದರಲ್ಲಿ ಅವರವರ ಕಲಾತ್ಮಕ ದೃಷ್ಟಿಯನ್ನು ವಿಸ್ತರಿಸಿಕೊಳ್ಳಲು ಇಂಬು ನೀಡುತ್ತವೆ. ಕಲೆಯನ್ನು ಗುರುತಿಸುವ ಮತ್ತು ಅರ್ಥ ಮಾಡಿಕೊಳ್ಳುವ ಸಾಧ್ಯತೆಗಳನ್ನು ವಿಸ್ತರಿಸುತ್ತವೆ.
ಸದ್ಯದ ಪರಿಸ್ಥಿತಿಯಲ್ಲಿ ರಂಗ ನಿರ್ವಹಣೆಯನ್ನು ಆನ್‍ಲೈನ್ ತರಗತಿಗಳ ಮೂಲಕ ಕಲಿಸುವುದು ಹೊಸ ಸವಾಲಾಗಿ ರೂಪುಗೊಂಡಿದೆ. ರಂಗಭೂಮಿಯಲ್ಲಿ ಕೆಲಸ ಮಾಡುತ್ತಿರುವ ಹಲವರಿಗೆ ‘ಆಸಕ್ತಿ ಇರದ’ Micro economics, work and dignity ಹೀಗೆ ಮುಂತಾದ ವಿಷಯಗಳ ತರಗತಿಗಳು ಹೊಸ ಸವಾಲುಗಳನ್ನು ಒಡ್ಡುತ್ತವೆ. ಒಮ್ಮೆ ಒಳಹೊಕ್ಕು ಕಲಿತು ನೋಡಿದಾಗಲೇ ರಂಗಭೂಮಿಗೂ ಮತ್ತು ಇವೆಲ್ಲದಕ್ಕೂ ಇರುವ ನಿಕಟ ಸಂಬಂಧ ತೆರೆದುಕೊಳ್ಳುತ್ತದೆ.
ರಂಗ ಪ್ರಯೋಗದ ಎಲ್ಲ ಆಯಾಮಗಳ ಜವಾಬ್ದಾರಿ ಹೊರಬೇಕಾದ ರಂಗ ನಿರ್ವಾಹಕರ ತರಬೇತಿಯಿಂದ ನಮ್ಮ ಸುತ್ತಲಿನ ರಂಗಾಸಕ್ತರಲ್ಲಿ, ರಂಗಭೂಮಿಯಲ್ಲಿ ವೃತ್ತಿಪರತೆ ಬೆಳೆಸಬೇಕೆನ್ನುವುದೇ ನಮ್ಮ ಸಣ್ಣ ಆಶಯ ಎನ್ನುತ್ತದೆ ಈ ತಂಡ.
ಇದನ್ನೂ ಓದಿ : Art With Heart : ಆನ್‍ಲೈನ್ ತರಗತಿಗಳಿಗೆಂದೇ ವೈಜ್ಞಾನಿಕ ರಂಗಪಠ್ಯ ರೂಪಿಸಿದ ‘ರಂಗರಥ’
Published On - 5:35 pm, Sun, 18 July 21