ಕೊರೊನಾ ವಿರುದ್ಧ ರಜೆಯಿಲ್ಲದೆ ದುಡಿಯುತ್ತಿದ್ದಾರೆ ಪಿಂಕ್‌ ವಾರಿಯರ್ಸ್‌!

ಕೊರೊನಾ ವಿರುದ್ಧ ರಜೆಯಿಲ್ಲದೆ ದುಡಿಯುತ್ತಿದ್ದಾರೆ ಪಿಂಕ್‌ ವಾರಿಯರ್ಸ್‌!

ಬೆಂಗಳೂರು: ಈ ಪಿಂಕ್‌ ಬ್ರಿಗೇಡ್‌ ಈಗ ಕೊರೊನಾ ವಿರುದ್ಧದ ಫೈಟ್‌ನಲ್ಲಿ ಮುಂಚೂಣಿಯ ವಾರಿಯರ್ಸ್‌. ರಜೆಯ ಬಗ್ಗೆ ತಲೆ ಕೆಡಿಸಿಕೊಳ್ಳದೆ, ಹಗಲಿರುಳೆನ್ನದೆ ಕೊರೊನಾ ಸೋಂಕಿತರು ಹಾಗೂ ಶಂಕಿತರ ಬಗ್ಗೆ ಕಾಳಜಿ ವಹಿಸುವ ಕೆಲಸ ಮಾಡ್ತಿರೋದು ಇದೇ ಆಶಾ ಕಾರ್ಯಕರ್ತೆಯರು.

ಇಂದು ಜನರ ಮನೆ ಮನೆಗಳಿಗೆ ಹೋಗಿ ಜಾಗೃತಿ ಮೂಡಿಸುವ ಇದೇ ಕೊರೊನಾ ವಾರಿಯರ್ಸ್‌ ಜನವರಿ ತಿಂಗಳಲ್ಲಿ ತಮ್ಮ ಸಂಬಳಕ್ಕಾಗಿ ಬೆಂಗಳೂರಿನಲ್ಲಿ ಬೀದಿಗಿಳಿದಿದ್ದರು. ತಿಂಗಳಿಗೆ ರಾಜ್ಯ ಸರ್ಕಾರಿಂದ ಕೇವಲ 4 ಸಾವಿರ ಗೌರವ ಧನ ಸಂಪಾದಿಸುವ ಈ ಆಶಾ ಕಾರ್ಯಕರ್ತೆಯರು ಅಂದು ಕೇಂದ್ರದಿಂದ ಬರುವ ಹಣಕ್ಕಾಗಿ ಹೋರಾಟದ ಹಾದಿ ತುಳಿದಿದ್ದರು.

ಅಂದು ಸಂಬಳಕ್ಕಾಗಿ ಹೋರಾಟ, ಇಂದು ಕೊರೊನಾ ವಿರುದ್ಧ ಕಾದಾಟ! ಹೌದು.. ಅಂದು ಸಂಬಳಕ್ಕೆ ಹೋರಾಡಿದ್ದ ಇದೇ ವನಿತೆಯರು ಇಂದು ಕೊರೊನಾ ಮಹಾಮಾರಿಯ ವಿಚಾರದಲ್ಲಿ ಮುಂಚೂಣಿ ಕಾರ್ಯಕರ್ತೆಯರಾಗಿದ್ದಾರೆ. ಮನೆ, ಮಕ್ಕಳು ಅನ್ನೋದನ್ನು ಲೆಕ್ಕಿಸದೆ ಪ್ರತಿದಿನ ಫೀಲ್ಡ್‌ಗಿಳಿದು ದುಡಿಯುತ್ತಿದ್ದಾರೆ. ಮನೆ ಮನೆಗೆ ಹೋಗಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಯಾರಿಗೆ ಜ್ವರ ಇದೆ.. ಯಾರಿಗೆ ಗಂಟಲು ನೋವಿದೆ.. ಯಾರಿಗೆ ಕೆಮ್ಮು ಹೆಚ್ಚಾಗಿದೆ.. ಹೀಗೆ ಪ್ರತಿಯೊಂದು ಅಂಶದ ಬಗ್ಗೆಯೂ ದಾಖಲೆ ಸಂಗ್ರಹಿಸುತ್ತಿದ್ದಾರೆ.

ಹೀಗೆ ಪ್ರತಿನಿತ್ಯ ಮನೆ ಮಠ ಮರೆತು ಕೆಲಸ ಮಾಡುವ ಈ ಆಶಾ ಕಾರ್ಯಕರ್ತೆಯರ ಮೇಲೆಯೇ ಕಿಡಿಗೇಡಿಗಳು ಹಲವೆಡೆ ಪೌರುಷ ತೋರಿದ್ದಾರೆ. ಬೆಂಗಳೂರಿನ ಹೆಗಡೆ ನಗರದಲ್ಲಿ ಆಶಾಕಾರ್ಯಕರ್ತೆಯರನ್ನು ಸುತುವರಿದು ಹಲ್ಲೆ ನಡೆಸಿದ್ದರು. ಪಾದರಾಯನಪುರದಲ್ಲಿ ಕ್ವಾರಂಟೇನ್‌ಗೆ ಕರೆದೊಯ್ಯಲು ಬಂದವರ ಮೇಲೆ ಪುಂಡಾಟ ಮೆರೆದಿದ್ದರು. ಮೈಸೂರಿನಲ್ಲಿ ಜಾಗೃತಿ ಮೂಡಿಸಲು ಬಂದ ಕಾರ್ಯಕರ್ತೆಯ ಮೇಲೆ ಪೌರುಷ ತೋರಿದ್ದರು.

ಆದ್ರೆ ಇದೇ ತಾಯಂದಿರು, ತಮ್ಮ ಪುಟ್ಟ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ಬಾಗಲಕೋಟೆಯ ಈ ಆಶಾ ಕಾರ್ಯಕರ್ತೆಯನ್ನೇ ನೋಡಿ.. ಮನೆಯಲ್ಲಿರುವ ಮೂರು ತಿಂಗಳ ಮಗುವನ್ನು ಬಿಟ್ಟು ಒಂದು ತಿಂಗಳಿಂದ ಕೊರೊನಾ ಜಾಗೃತಿ ಕಾರ್ಯದಲ್ಲಿ ತೊಡಗಿದ್ದಾರೆ. ಜನರನ್ನು ಕೊರೊನಾ ವೈರಸ್‌ನಿಂದ ಕಾಪಾಡಲು ಎಚ್ಚರಿಸುತ್ತಿದ್ದಾರೆ.

ರಜೆಯಿಲ್ಲದೆ ದುಡಿಯುತ್ತಿರುವ ಜೀವಗಳಿಗೆ 1 ಸಾವಿರ ಹೆಚ್ಚುವರಿ ಪ್ರೋತ್ಸಾಹಧನ! ಹೌದು.. ಈ ಪಿಂಕ್‌ ಬ್ರಿಗೇಡ್ಸ್‌ ಲಾಕ್‌ಡೌನ್‌ ಆದ ದಿನದಿಂದ ಒಂದೂ ರಜೆ ಪಡೆದಿಲ್ಲ. ಭಾನುವಾರ, ಸೋಮವಾರ ಅಂತ ಲೆಕ್ಕಿಸದೆ ಪ್ರತಿನಿತ್ಯ ಹಳ್ಳಿಹಳ್ಳಿಗಳಲ್ಲಿ.. ಗಲ್ಲಿ ಗಲ್ಲಿಗಳಲ್ಲಿ ಓಡಾಡುತ್ತಿದ್ದಾರೆ. ಒಂದು ದಿನಕ್ಕೆ ಐವತ್ತು ಮನೆಗಳನ್ನು ಸರ್ವೆ ಮಾಡಬೇಕು ಎನ್ನುವ ಟಾರ್ಗೆಟ್‌ ಸರ್ಕಾರ ಕೊಟ್ಟಿದೆ.

ಅಷ್ಟೂ ಮನೆಗಳಿಗೆ ಹೋಗಿ ದಾಖಲಿಸಿಕೊಂಡು ಬಂದಿರುವ ಮಾಹಿತಿಯನ್ನು ಸರ್ಕಾರಕ್ಕೆ ಪ್ರತಿನಿತ್ಯ ಅಪ್‌ಡೇಟ್‌ ಮಾಡಬೇಕು. ಕೊರೊನಾ ಶಂಕಿತರಿದ್ದರೆ ಮಧ್ಯರಾತ್ರಿಯಾದ್ರೂ ಸರಿ ಕೆಲಸಕ್ಕೆ ಹಾಜರಾಗಿ ಕ್ವಾರಂಟೇನ್‌ ಮಾಡಿಸಲು ಮುಂದಾಗಬೇಕು. ಇಷ್ಟೆಲ್ಲಾ ಇರೋ ಈ ಆಶಾ ಕಾರ್ಯಕರ್ತೆಯರಿಗೆ ಸದ್ಯ ಕೇಂದ್ರ ಸರ್ಕಾರ ಒಂದು ಸಾವಿರ ರೂಪಾಯಿ ಮಾತ್ರ ಹೆಚ್ಚುವರಿ ಪ್ರೋತ್ಸಾಹ ಧನವನ್ನು ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ಪಾವತಿಸುವ ಭರವಸೆ ಕೊಟ್ಟಿದೆ.

ಈಗೀಗ ಈ ಪಿಂಕ್‌ ವಾರಿಯರ್ಸ್‌ ಶ್ರಮ ಶಾಸಕರಿಗೂ ಅರ್ಥವಾಗಿದೆ. ಇದೇ ಕಾರಣಕ್ಕೆ ಹೊನ್ನಾಳಿಯಲ್ಲಿ ಶಾಸಕ ರೇಣುಕಾಚಾರ್ಯ ನಿನ್ನೆ ತನ್ನ ಸಾಮಾಜಿಕ ಅಂತರ ಕಾಳಜಿಯನ್ನು ಮರೆತ್ರೂ ಆಶಾಕಾರ್ಯಕರ್ತೆಯರ ಕೆಲಸ ಶ್ಲಾಘಿಸಿದ್ದಾರೆ.

ಇಷ್ಟೆಲ್ಲಾ ಇರೋ ಕೊರೊನಾ ವಾರಿಯರ್ಸ್‌ಗೆ ಆಗಾಗ್ಗೆ ಕಿಡಿಗೇಡಿಗಳ ಹಲ್ಲೆಯ ಭೀತಿ ಎದುರಾಗುತ್ತಿದೆ. ಜಾಗೃತಿ ಮೂಡಿಸಲು ಬಂದವರ ಮೇಲೆಯೇ ಕೊರೊನಾ ಅನುಮಾನ ವ್ಯಕ್ತಪಡಿಸಿ ಅವಮಾನಿಸುತ್ತಿದ್ದಾರೆ. ಇದೇ ಕಾರಣಕ್ಕೆ ಮಂಡ್ಯದಲ್ಲಿ ಓರ್ವ ಆಶಾ ಕಾರ್ಯಕರ್ತೆ ಆತ್ಮಹತ್ಯೆಗೆ ಪ್ರಯತ್ನವನ್ನೂ ಮಾಡಿದ್ದಾರೆ.

ಕೊರೊನಾ ಫೈಟ್‌ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ಅವಿರತವಾಗಿ ಶ್ರಮಿಸುತ್ತಿದ್ದು ಅವರಿಗೂ ಆರ್ಥಿಕ ಭದ್ರತೆ ತುಂಬುವ ಕೆಲಸ ಸರ್ಕಾರ ಮಾಡಲೇಬೇಕಿದೆ. ಕರ್ನಾಟಕದಲ್ಲಿ 41,750 ಮಂದಿ ಆಶಾ ಕಾರ್ಯಕರ್ತೆಯರಿದ್ದು ಕೇಂದ್ರ ಸರ್ಕಾರದ ಜತೆಗೆ ರಾಜ್ಯ ಸರ್ಕಾರ ಕೂಡ ಹೆಚ್ಚುವರಿ ಗೌರವ ಧನ ಕೊಟ್ಟಲ್ಲಿ ಈ ಪಿಂಕ್‌ ಬ್ರಿಗೇಡ್‌ ಕೆಲಸಕ್ಕೆ ಗೌರವ ಸಲ್ಲಿಸಿದಂತಾಗುತ್ತದೆ.

Click on your DTH Provider to Add TV9 Kannada