Poetry : ಅವಿತಕವಿತೆ : ನಾ ಸ್ವಾಗತಿಸುವ ಭವಿಷ್ಯದ ಹೆಸರು ‘ಋಜು ಮಾರ್ಗ’

|

Updated on: Jul 18, 2021 | 1:31 PM

Poems : ‘ಇಪ್ಪತ್ತೈದು ವರ್ಷಗಳ ಹಿಂದೆ ಪಂಜಾಬೀ ಕವಿ ಅಮೃತಾ ಪ್ರೀತಂ ಬರೆದ ಕವಿತೆಗಳ ಭಾವ ನನ್ನದೂ ಎನ್ನಿಸಿ ‘ನಾನು ಹೀಗೆ ಹೇಳುವುದಿದೆ’ ಎಂದು ನನ್ನದೇ ಧಾಟಿಯಲ್ಲಿ ಕವಿತೆ ಬರೆಯಲು ಆರಂಭಿಸಿದೆ. ಈಗ ಶಿಶುನಾಳರ ತತ್ವ ಪದಗಳಲ್ಲಿ ನನ್ನ ಭಾವಕ್ಕೆ ಸಾಮ್ಯತೆ ಸಿಗುತ್ತದೆ.’ ಜ್ಯೋತಿ ಗುರುಪ್ರಸಾದ

Poetry : ಅವಿತಕವಿತೆ : ನಾ ಸ್ವಾಗತಿಸುವ ಭವಿಷ್ಯದ ಹೆಸರು ‘ಋಜು ಮಾರ್ಗ’
Follow us on

ಪ್ರತೀ ಭಾನುವಾರ ನಿಮ್ಮ ಬೆರಳತುದಿಯಿಂದ ನಿಮ್ಮ ಅಂತರಂಗವನ್ನು ಪ್ರವೇಶಿಸುತ್ತಿದೆ ‘ಅವಿತಕವಿತೆ’. ಇಲ್ಲಿ ಕವಿತೆಯೊಂದಿಗೆ ಕವಿಯೊಂದಿಗೆ ಕವಿಯ ಮಾತಿನೊಂದಿಗೆ ಕವಿಯ ಕೈಬರಹವೂ ಇರುತ್ತದೆ ಜೊತೆಗೆ ಅವರ ಕವಿತ್ವದ ಬಗ್ಗೆ ಸಹೃದಯರು ಬರೆದ ಆಪ್ತಸಾಲುಗಳೂ ಇರುತ್ತವೆ. ಈ ವಾರ ಕವಿ, ಲೇಖಕಿ ಜ್ಯೋತಿ ಗುರುಪ್ರಸಾದ ಅವರ ಕವಿತೆಗಳು ನಿಮ್ಮ ಓದಿಗೆ.
*
ಜ್ಯೋತಿಯವರ ಕವನಗಳು ನಮ್ಮ ವ್ಯಾಖ್ಯಾನಕ್ಕಾಗಲೀ, ವಿವರಣೆಗಾಗಲೀ ಒಪ್ಪಿಕೊಳ್ಳುವ ರಚನೆಗಳಲ್ಲ. ಸಾಹಿತ್ಯದಲ್ಲಿ ಔಚಿತ್ಯ ಜ್ಞಾನದ ಮಾತಿದೆ; ಇದು ಕಾವ್ಯ ರಚನೆಯ ಪರಿಕರಗಳಿಗೆ ಸಂಬಂಧಿಸಿದ ವಿಚಾರ ಇದು. ಇಂಗ್ಲಿಷ ವಿಮರ್ಶಕರು Relevance of response ಎನ್ನುತ್ತಾರೆ ಇದನ್ನು. ಕವಿತೆಯ ಮಾತು ನಿರೀಕ್ಷಿಸುವ ಹದ ಹಿಡಿದು ನಾವು ಕವಿತೆಗೆ ಪ್ರತಿಕ್ರಿಯಿಸಬೇಕು. ಹೆಚ್ಚೂ ಅಲ್ಲ; ಕಮ್ಮಿಯೂ ಅಲ್ಲ ಎನ್ನುವಂತೆ. ಇದು ಕಷ್ಟ. ಜ್ಯೋತಿಯವರ ಬೆಡಗಿಲ್ಲದ ನೇರ ನುಡಿಯ ಕಾವ್ಯದ ಬಗೆಗಂತೂ ಇದು ಕಷ್ಟವೇ. ಆಪ್ತರೊಬ್ಬರು ಬಿಂಕಬಿನ್ನಾಣಗಳಿಲ್ಲದೆ ತಮಗೇ ಆಡಿಕೊಂಡಂತಹ ಮಾತನ್ನು ನಾವು ಕೇಳಿಸಿಕೊಂಡಾಗ ತಲೆದೂಗುವಂತೆ ಜ್ಯೋತಿಯವರ ರಚನೆಗಳು ಕೆಲವೊಮ್ಮೆ ನಮ್ಮ ಮೌನದ ಸಮ್ಮತಿಗೆ ಎದುರಾಗುತ್ತವೆ. ಕಾಣದೆ ಇರುವುದನ್ನು ಕಾಣಿಸುವುದೇ ಜ್ಯೋತಿಯವರ ಪಾಲಿಗೆ ಕಾವ್ಯ. ಇಲ್ಲಿನ ಬಹುತೇಕ ಎಲ್ಲ ಕವನಗಳನ್ನೂ ಈ ಒಂದು ವಿಚಾರ ಪದೇಪದೆ ಪ್ರತ್ಯಕ್ಷವಾಗುತ್ತದೆ. ಕಿಸಾಗೌತಮಿ ಸಾವಿಲ್ಲದ ಮನೆಯ ಸಾಸಿವೆಯನ್ನು ಹುಡುಕಿಕೊಂಡು ಹೋಗಿ ಸತ್ತ ಕಂದನನ್ನು ತನ್ನೊಳಗೇ ಮತ್ತೆ ಕಂಡುಕೊಳ್ಳುತ್ತಾಳೆ. ಇದೇ ಜ್ಯೋತಿಯವರ ಪಾಲಿಗೆ ಕಾವ್ಯ.

ನಮ್ಮ ನಿತ್ಯದ ದೈನಿಕಗಳೇ ಇವರಲ್ಲಿ ಕಾವ್ಯವಾಗುತ್ತದೆ. ಇಲ್ಲೊಂದು ಕುಶಲವಾದ, ತೋರಿಕೆಯಿಲ್ಲದ ಕಲೆಗಾರಿಕೆ ಇದೆ. ಗೊತ್ತಿರುವ ಮಾತೇ ಅಪರೂಪದ ಅರ್ಥವನ್ನು ಕಣ್ಣು ಮಿಟುಕಿಸಿದಂತೆ ಮಿಟುಕಿ ಹೊಳೆಯಿಸುತ್ತದೆ. ಗರಿಕೆಯ ಮೇಲಿನ ಇಬ್ಬನಿಯ ಶುಭ್ರತೆ ಇವರ ಉತ್ತಮ ಪದ್ಯಗಳ ಮಾತಿನಲ್ಲಿ ಕಾಣುತ್ತದೆ. ತನ್ನ ಒಳಜೀವನದಲ್ಲಿ ಸತತವಾಗಿ ಬೆಳೆಯುತ್ತಿರುವ ಕವಿ ಇವರು.
ಡಾ. ಯು. ಆರ್. ಅನಂತಮೂರ್ತಿ, ಖ್ಯಾತ ಸಾಹಿತಿ

*

ಜ್ಯೋತಿ ಗುರುಪ್ರಸಾದ, ‘ಸ್ವಾಂತ ಸುಖಾಯ’ದ ಕವಿ. ತನ್ನ ಕಾವ್ಯ ನೌಕೆಯನ್ನು ನಿಧನಿಧಾನವಾಗಿ ಹುಟ್ಟು ಹಾಕುತ್ತಾ ತನ್ನೊಳಗೇ ಸ್ವಗತವೋ ಎಂಬಂತೆ ಮಾತನಾಡಿಕೊಳ್ಳುವ ಕಾವ್ಯದ ಕವಿ ತೋರಿಕೆಯಿಲ್ಲದ, ಮಹತ್ವಾಕಾಂಕ್ಷೆಯ ಒತ್ತಡವಿಲ್ಲದ ಇದರ ಕಾವ್ಯಲೋಕದೊಂದಿಗೆ ಮಾತನಾಡಲು ಹವಣಿಸುವಂಥದ್ದಲ್ಲ. ಅದು ಬದುಕಿನೊಂದಿಗೆ ತನ್ನ ಸಂವಾದವನ್ನು ಏರ್ಪಡಿಸಿಕೊಳ್ಳಲು ಬಯಸುವಂಥದ್ದು. ಒಟ್ಟಾರೆ ಅವರ ಕಾವ್ಯವನ್ನು ಗಮನಿಸಿದಾಗ, ಬದುಕಿನ ಮೇಲೆ ಆರೋಪಪಟ್ಟಿ ಹೊರಿಸಲು ನೂರು, ನೂರಾರು ಕಾರಣಗಳಿದ್ದಾಗಲೂ ಆ ಆರೋಪಪಟ್ಟಿಯನ್ನು ಖುಲಾಸೆ ಮಾಡಲು ಆರ್ದ್ರತೆಯಿಂದ ಪ್ರಯತ್ನಿಸುವವರಂತೆ ಕಾಣಿಸುತ್ತಾರೆ. ಬಿರು ಬೇಸಗೆಯಲ್ಲೂ ಯಾವುದೋ ಕಲ್ಲುಂಡಿಯ ಸಂದಿನಿಂದ ಒಸರುವ ನೀರಿನ ಒರತೆಯು ಬದುಕಿನ ಬಗೆಗಿನ ನಮ್ಮ ಪ್ರೀತಿ ಮತ್ತು ನಂಬಿಕೆಯನ್ನು ಮತ್ತೆ ಚಿಗುರಿಸುವಂತೆ ಇವರ ಕಾವ್ಯ ಬದುಕನ್ನು ಪ್ರೀತಿಸಲು, ಗೌರವಿಸಲು ತೆರೆದ ಕಣ್ಣುಗಳಿಂದ ಸುತ್ತಲಿನ ಬದುಕನ್ನು ಸಂದರ್ಭಗಳನ್ನು ಒಳಗಣ್ಣಿನಿಂದ ನೋಡುತ್ತದೆ.
ಡಾ. ಎಂ. ಎಸ್. ಆಶಾದೇವಿ, ಹಿರಿಯ ವಿಮರ್ಶಕರು

*

ನಿಶ್ಯಬ್ದ ಸುಖ ಕೊಡುತ್ತದೆ

ಶಬ್ದಗಳು
ಬೇಕಾಗಿರುವುದು
ಕಿವಿಗೆ ಇಂಪಿಗೆ
ಮೆದುಳು ಅರಿವುದಕ್ಕೆ
ಹೃದಯ ತಲುಪುವುದಕ್ಕೆ

ನಂಬಿದ ಪ್ರೀತಿ
ಓಗೊಡದಾಗ
ಇಂಪು ಕರ್ಕಶವೆನಿಸುವಾಗ
ನಮ್ಮ ಹೃದಯಕ್ಕೆ ನಾವು
ಓಗೊಡಬೇಕಾಗುವಾಗ
ನಿಶ್ಯಬ್ದ ಸುಖ ಕೊಡುತ್ತದೆ
ಕ್ರಮಿಸಲೇಬೇಕಾದ
ಅಗ್ನಿ ದಿವ್ಯವನ್ನು
ಹಾದು ಹೋಗುತ್ತಿರುವಂತೆ

*

ಪ್ರೇಮದ ಮಧುರಾಕ್ಷರ

ದೀಪ ಹಚ್ಚಿಬಿಟ್ಟಾಕ್ಷಣ
ಕಾಟಾಚಾರಕ್ಕೆ
ಕತ್ತಲೆ ಸರಿದು ಬಿಡುವುದಿಲ್ಲ
ಮನದ ಮಬ್ಬು ಕಳೆಯದೆ

ಇಷ್ಟಗಲ ನಕ್ಕು
ಎಲ್ಲರನೂ ನಗಿಸುವೆನೆಂದು
ಪಟ್ಟದ ಮೇಲೆ ಕೂತೊಡನೆ
ಅಧಿಪತಿಯಾಗುವುದಿಲ್ಲ
ಪ್ರತಿಷ್ಠೆಯಾಸೆ ಕಳೆಯದೆ

ಧ್ವನಿಯೆತ್ತಿ ಮಾತಾಡಿದಾಕ್ಷಣ
ಕಾನೂನಾಗಿ ಬಿಡುವುದಿಲ್ಲ
ಬರಿಯ ದರ್ಪದಿಂದ
ಅಧಿಕಾರ ಲಭಿಸುವುದಿಲ್ಲ
ಪ್ರಮಾಣವಾಗಿ ಜೀವಿಸದೆ

ಪ್ರೇಮದ ಮಧುರಾಕ್ಷರ
ಫೋರ್ಜರಿ ಸಹಿಯಲ್ಲ
ಅಂತರಂಗದ ಕಣಕಣವೂ
ಸೇರಿದರೆ ಮಾತ್ರ
ಆಗುವ ಸಹಜ ಬರವಣಿಗೆ;
ಮಣ್ಣಿಂದ ಕುಡಿಯೊಡೆವ ಸಸಿ

ಕವಿ ಜ್ಯೋತಿ ಗುರುಪ್ರಸಾದ

ಬದುಕಿನ ತಪಸ್ಯೆಗೆ ನನಗೆ ಕಾವ್ಯ ಮಾರ್ಗವೇ ನೆರವಾಗಿರುವುದು. ನನ್ನೊಳಗೆ ಏನು ಅವಿತಿದೆ ಎಂದು ಕಂಡುಕೊಳ್ಳಲೆಂಬಂತೆ ನಾನು ಏನನ್ನೋ ಬರೆಯಲು ತೊಡಗಿದೆ. ಅದು ಕವಿತೆಯಾಯಿತು, ಅಂಕಣವಾಯಿತು, ಲೇಖನವಾಯಿತು, ಕಥೆಯಾಯಿತು. ಸುಮಾರು ಇಪ್ಪತ್ತೈದು ವರ್ಷಗಳಿಂದ ಬರೆಯುತ್ತಲೇ ಇದ್ದೇನೆ. ಇದು ನನ್ನ ಬರವಣಿಗೆಗೆ ‘ಬೆಳ್ಳಿ ಹಬ್ಬ’ ದ ವರ್ಷವೆನ್ನಬಹುದು. ನನಗಾಗಿ ನಾನು ಬರೆದುಕೊಳ್ಳುವಾಗ ಕವಿತೆಯೇ ನನಗೆ ಹೆಚ್ಚು ಆಪ್ತವೆನಿಸುತ್ತದೆ. ಅತ್ಯಂತ ಕಡಿಮೆ ಸಾಲುಗಳಲ್ಲಿ ಭಾವ ತೀವ್ರತೆಯೊಡನೆ ರೂಪಕ – ಉಪಮೆಗಳ ಮೂಲಕ ಅಕ್ಷರಗಳನ್ನು ಬರೆಯುವಾಗ ಸಿಗುವ ಬಿಡುಗಡೆಯ ಅನುಭವ ಅವರ್ಣನೀಯವೆನಿಸುತ್ತದೆ.

ಜೀವನದ ಹಲವು ಏರು ಪೇರುಗಳ ದುಃಖದ ಹಂತವನ್ನು ಮೀರುವ ಚೈತನ್ಯವನ್ನು ನನಗೆ ‘ಕವಿತೆ’ ತಂದುಕೊಟ್ಟಿರುವುದರಿಂದ ಇದು ನನ್ನ ನೆಚ್ಚಿನದು. ಒಂದು ಕಾಲದಲ್ಲಿ ಎಂದರೆ ಇಪ್ಪತ್ತೈದು ವರ್ಷಗಳ ಹಿಂದೆ ಪಂಜಾಬೀ ಕವಿ ಅಮೃತಾ ಪ್ರೀತಂ ಬರೆದ ಕವಿತೆಗಳ ಭಾವ ನನ್ನದೂ ಎನ್ನಿಸಿ ‘ನಾನು ಹೀಗೆ ಹೇಳುವುದಿದೆ’ ಎಂದು ನನ್ನದೇ ಧಾಟಿಯಲ್ಲಿ ಕವಿತೆ ಬರೆಯಲು ಆರಂಭಿಸಿದೆ. ಈಗ ಪ್ರಸ್ತುತದಲ್ಲಿ ಶಿಶುನಾಳಧೀಶನನ್ನು ನೆಚ್ಚಿಕೊಂಡಂಥ ಶಿಶುನಾಳ ಶರೀಫರ ತತ್ವಪದಗಳಲ್ಲಿ ನನಗೆ ನನ್ನ ಭಾವಕ್ಕೆ ಸಾಮ್ಯತೆ ಸಿಗುತ್ತದೆ. ‘ನಂದಿಸಿ ಮನಸನು ಆತ್ಮದ ಜಲದಲಿ’ ನನಗೆ ಬಹಳ ಇಷ್ಟವಾದ ಸಾಲು. ಇದು ದಿಢೀರ್ ಎಂದು ಇಷ್ಟವಾಗಿದ್ದಲ್ಲ. ಇದರ ಹಿಂದೆ ಮನಸು ವಿಕಸಿಸುವ ಸುದೀರ್ಘ ಪ್ರಕ್ರಿಯೆಯೇ ಇದೆ.

ಪ್ರೇಮ – ವಿರಹ -ಶೋಷಣೆ ನನ್ನನ್ನು ಕಾಡಿರುವ ಸಂಗತಿಗಳು. ಇವನ್ನೆಲ್ಲಾ ಜೀವನ ಪ್ರೀತಿಯ ಭಾಗವಾಗಿ ನನಗೆ ಅಡಕವಾಗಿ ಹೇಳಲು ಸಾಧ್ಯವಾಗಿರುವುದೇ ಕವಿತೆ ಮೂಲಕ ಕವಿತೆ ನನಗೆ ಬದುಕುವ ಧೈರ್ಯ ಕಲಿಸಿದೆ. ಜೊತೆಗೆ ಪ್ರೇಮದ ಸ್ಥಾಯೀ ಭಾವವೆಂದರೇನೆಂಬ ಸಂಶೋಧಕಿಯನ್ನಾಗಿ ಮಾಡಿದೆ.

ಬರೆದರೂ- ಬರೆಯದಿದ್ದರೂ ಕವಿತೆಯೆಂಬುದು ನಮ್ಮೊಳಗನ್ನು ಹದ ಮಾಡುತ್ತಲೇ ಇರುವ ‘ನೇಗಿಲು’ ಎಂಬುದು ನನ್ನ ನಂಬಿಕೆ. ಕೆಲವೊಮ್ಮೆ ರಸ ಭಾವಗಳು, ಕೆಲವೊಮ್ಮೆ ವಿಚಾರಗಳು, ಕೆಲವೊಮ್ಮೆ ಸುಮ್ಮನಿರುವ ಸುಮ್ಮಾನ. ಆದರೆ ಸದಾ ಅರ್ಪಣಾ ಮನೋಭಾವದ ಎಚ್ಚರ… ಹೇಗೆ ಹೇಗೆ ಕಟ್ಟಿಕೊಡುವುದು ಕವಿತೆಯ ಪರಿಣಾಮವನ್ನು!? ಎಲ್ಲಾ ಛಂದಸ್ಸಿಗೂ ಮೀರಿದ್ದು. ಚಲನಚಿತ್ರಗೀತೆಯೊಂದರ ಸಾಲು ಹೇಳುವ ಹಾಗೆ- ‘ಭರವಸೆಯ ಬೆಳ್ಳಿ ಬೆಳಕು.

*

ಅಕ್ರಮ

ಅಲ್ಲಿ ಏನು ನಡೆಯುತ್ತಿದೆ ನನಗೆ ಗೊತ್ತಿಲ್ಲ
ಆದರೆ ಆ ದೂರದ ಸದ್ದು
ಎದೆ ನಡುಗಿಸುತಿದೆ

ಬುಲ್‍ಡೋಜರಿನ ಕರ್ಕಶ ಸದ್ದು
ಕಣ್ಣಾರೆ ನೋಡದಿದ್ದರೂ ಕಿವಿಯ
ಶಾಂತಿಯ ಮೇಲೆ ಅಪ್ಪಳಿಸಿದೆ
ಮುಖವನ್ನು ಮ್ಲಾನಗೊಳಿಸುತ್ತಿದೆ

ಚಿಕ್ಕಂದಿನಲ್ಲಿ ಏರೋಪ್ಲೇನ್ ಸಂಚರಿಸುವಾಗ
ಆ ಸದ್ದಿಗೆ ಮನ ಸೋತು ಆಕಾಶ ನೋಡಲು
ಹೊರಗೋಡುತ್ತಿದ್ದ ಸಮಯವಲ್ಲವಿದು;
ಹಸಿರೆಲ್ಲ ಕುಸಿದು ರಸ್ತೆ ಬಿರುಕು ಬಿಟ್ಟಿರುವ ಸಮಯ.

*

ದಯವಿಟ್ಟು ಅಪ್ಡೇಟ್ ಮಾಡಿ

ಕನ್ನಡಿಯ ಬಿಂಬ
ಕುಟುಕುತ್ತಿದೆ
ತಕ್ಕಡಿ ಸಮ ತೂಗದೆ
ಒಂದು ಬದಿ ಮೇಲೇರುತ್ತಲೇ ಇಲ್ಲ
ಕ್ಷಮಯಾಧರಿತ್ರಿಯೆಂದು
ಹೆಣ್ಣಿನ ಗುಣವನ್ನು ಅಭಿನಂದಿಸುವ
ಮನುಜರ ಮಾಹಿತಿ ಕೋಶಕ್ಕೆ
ದಯವಿಟ್ಟು ಇದೊಂದು ಮಾಹಿತಿ
ಅಪ್ಡೇಟ್ ಮಾಡಿ

“ಕ್ಷಮಿಸ ಬೇಕು
ಅರಿಯದೆ ತಪ್ಪು ಮಾಡಿದ ಮಗುವನ್ನು

ಕ್ಷಮಯಾಧರಿತ್ರಿ ಪಟ್ಟ ಹೊರೆಸಿ
ನಡೆವ ಹಾದಿಯಲ್ಲಿ ಜೊತೆಗೆ ಕರೆದೊಯ್ಯದೆ
ಏನು ಬೇಕಾದರೂ ಮಾಡಿ
ಪ್ರತಿ ಬಾರಿ ಕ್ಷಮೆ ಕೋರುವ
ಊಸರವಳ್ಳಿ ಮನುಷ್ಯನಿಗೆ
ಇನ್ನು ಕ್ಷಮೆಯಿಲ್ಲ.’’

ಜ್ಯೋತಿ ಅವರ ಪ್ರಕಟಿತ ಕೃತಿಗಳು

ಎತ್ತರದ ಏಕಾಂತ

ಇಲ್ಲಿ
ನನಗೆ ನಾನೇ
ಕೊಟ್ಟುಕೊಳ್ಳುವ
ಉತ್ತರ ಮಾತ್ರ
ನನ್ನ ಮುಂದಣ ಹೆಜ್ಜೆ

ಗಾಳಿ ಬೆಳಕಿಗೆ ಒಡ್ಡಿರುವ
ಬಾಗಿಲುಗಳು
ಕಾಣುವ ಹಸಿರು
ಮನದ ಬಾಗಿಲಿಗಿಂತ
ಹೊರತಾಗಿಲ್ಲ

ಹೃದಯ ಮಿಡಿತ-ಆಲೋಚನೆ
ಸಮತೋಲನ ಸಾಧಿಸಿದ ಘಳಿಗೆ
ಯಾರ ಹಂಗೂ ಇಲ್ಲದೆ
ಈ ಕ್ಷಣದ ಬೆಳಕಿಗೆ
ಮುಖವೊಡ್ಡಲು
ಸಿದ್ಧವಿರುವೆ

ನಾ ಸ್ವಾಗತಿಸುವ ಭವಿಷ್ಯದ
ಹೆಸರು :
ಋಜು ಮಾರ್ಗ.

*

ಪರಿಚಯ : ಲೇಖಕಿ, ಉಪನ್ಯಾಸಕಿಯಾಗಿರುವ ಜ್ಯೋತಿ ಆರ್. (ಜ್ಯೋತಿ ಗುರುಪ್ರಸಾದ) ಅವರಿಗೆ ಕವಿತೆ ಇಷ್ಟದ ಮಾಧ್ಯಮ. ಮೈಸೂರು ಜಿಲ್ಲೆಯ ಟಿ. ನರಸೀಪುರದಲ್ಲಿ ಹುಟ್ಟಿ ಬೆಳೆದು 1988ನೇ ಇಸವಿಯಿಂದ ಇದುವರೆಗೂ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ವಾಸ. 2017ರಿಂದ ಕಾರ್ಕಳದ ಶ್ರೀ ವೆಂಕಟರಮಣ ಮಹಿಳಾ ಪದವಿ ಕಾಲೇಜಿನಲ್ಲಿ (ಎಸ್.ವಿ. ಮಹಿಳಾ ಕಾಲೇಜಿನಲ್ಲಿ) ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೃತಿಗಳು : ಚುಕ್ಕಿ,  ಮಾಯಾಪೆಟ್ಟಿಗೆ, ವರನಂದಿ ಪ್ರತಿಮೆ, ಜಟಾಯು ಪಕ್ಷಿಗೆ ಶ್ರದ್ಧಾಂಜಲಿ-ಕವನ ಸಂಕಲನಗಳು. ಈ ಕ್ಷಣ, ಜೋಲಿಲಾಲಿ, ಕಣ್ಣಭಾಷೆ-ಅಂಕಣ ಬರಹ. ಪ್ರೀತಿ ಮತ್ತು ಪ್ರೀತಿ ಮಾತ್ರ, ಹೊಸ ಪಕ್ಷಿ ರಾಗ- ಲೇಖನ ಸಂಗ್ರಹ. ತಂತಿ ಪಕ್ಷಿ- ಕಥಾಸಂಕಲನ. ‘ಮನಸು ಮಾಗಿದ ಸುಸ್ವರ’ ಚಿತ್ರಗೀತೆಗಳನ್ನು ಆಧರಿಸಿದ ಅಂಕಣ ಕೃತಿ ಅಚ್ಚಿನಲ್ಲಿದೆ.

ಕಡೆಂಗೋಡ್ಲು ಕಾವ್ಯ ಪ್ರಶಸ್ತಿ, ಅಮ್ಮ ಪ್ರಶಸ್ತಿ, ಲೇಖಕಿ ಪ್ರಶಸ್ತಿ, ಮುದ್ದಣ ಕಾವ್ಯ ಪ್ರಶಸ್ತಿ, ಹಾ.ಮಾ.ನಾಯಕ ಪ್ರಶಸ್ತಿ, ಹಂಸ ಕಾವ್ಯ ಪ್ರಶಸ್ತಿ, ಗೀತಾ ದೇಸಾಯಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ನೀಲ ಗಂಗಾ ಪ್ರಶಸ್ತಿ, ಅಂತಾರಾಷ್ಟ್ರೀಯ ಮಹಿಳಾ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಸಂದಿವೆ.

ಇದನ್ನೂ ಓದಿ : Poetry : ಅವಿತಕವಿತೆ ; ‘ಈಗ ಆ ಗಾಳಿ ನನ್ನ ಪೂರ್ವಿಕರ ದಿವ್ಯ ಪ್ರಾರ್ಥನೆಯಂತೆ ಕೇಳಿಸುತ್ತಿದೆ’

Published On - 11:38 am, Sun, 18 July 21