ಬೆಂಗಳೂರು: ‘ಏನನ್ನೂ ಓದದೆ, ಯಾವುದನ್ನೂ ಅರ್ಥ ಮಾಡಿಕೊಳ್ಳದೆ ಸತೀಶ್ ಜಾರಕಿಹೊಳಿಯಂಥ ರಾಜಕಾರಿಣಿಗಳು ಮನಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಇವರು ಶಾಸಕರು ಆಗಿದ್ದು ಹೇಗೆ? ಒಂದು ರಾಜಕೀಯ ಪಕ್ಷದ ಮುಖ್ಯಸ್ಥರಾಗಿದ್ದು’ ಹೇಗೆ ಎಂದು ಸಂಸ್ಕೃತಿ ಚಿಂತಕ ಡಾ ಜಿ.ಬಿ.ಹರೀಶ್ ಪ್ರಶ್ನಿಸಿದರು. ‘ಹಿಂದೂ ಎಂಬುದು ಹೀನಾರ್ಥವಿರುವ ಪದ’ ಎಂಬ ಸತೀಶ್ ಜಾರಕಿಹೊಳಿ ಹೇಳಿಕೆ ಕುರಿತು ‘ಟಿವಿ9’ ಸುದ್ದಿವಾಹಿನಿಗೆ ಪ್ರತಿಕ್ರಿಯಿಸಿದ ಅವರು, ‘ಹಿಂದೂಸ್ತಾನ ಎಂಬ ಪದವನ್ನು ಭಾರತಕ್ಕೆ ಪರ್ಯಾಯವಾಗಿ ಬಳಸಲಾಗುತ್ತಿದೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಬ್ರಿಟಿಷರ ವಿರುದ್ಧ ಕಟ್ಟಿದ ಸೇನೆಗೆ ‘ಆಜಾದ್ ಹಿಂದ್ ಫೌಜ್’ ಎಂಬ ಹೆಸರಿತ್ತು. ಅಂಬೇಡ್ಕರ್ ಅವರು ಸಂಸತ್ತಿನಲ್ಲಿ ‘ಹಿಂದೂ ಕೋಡ್’ ಮಂಡಿಸಿದ್ದರು. ಹಿಂದೂ ಪದಕ್ಕೆ ಹೀನಾರ್ಥವಿರುವುದು ನಿಜವಾಗಿದ್ದರೆ ಅಂಥ ಮಹಾನುಭಾವರು ಹಿಂದೂ ಪದ ಬಳಸುತ್ತಿದ್ದರೆ’ ಎಂದು ಕೇಳಿದರು.
‘ಬೆಂಗಳೂರಿನಲ್ಲಿರುವ ಪ್ರತಿಷ್ಠಿತ ಕಾರ್ಖಾನೆಗಳ ಪೈಕಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸಹ ಒಂದು. ಹಿಂದೂ ಪದವು ಹೀನಾರ್ಥ ಪ್ರತಿಪಾದಿಸುತ್ತಿದ್ದರೆ ಈ ಸಂಸ್ಥೆಯ ಹೆಸರಿನಲ್ಲಿ ಹಿಂದೂ ಇರುತ್ತಿತ್ತೇ. ಹಿಂದೂಸ್ತಾನ್ ಎನ್ನುವುದು ನಾಡು, ಸಂಸ್ಕೃತಿಯನ್ನು ವಿವರಿಸುವ ಪದ. ಅದನ್ನು ಸ್ಪಷ್ಟವಾಗಿ ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ’ ಎಂದು ಕರೆ ನೀಡಿದರು. ವಿಕಿಪಿಡಿಯಾ ಅಥವಾ ಕೋರಾದ ಉಲ್ಲೇಖ ನೀಡಿ ಸಾರ್ವಜನಿಕ ಭಾಷಣದಲ್ಲಿ ಹೀಗೆಲ್ಲಾ ಪ್ರಸ್ತಾಪಿಸಿವುದು ಬೇಜವಾಬ್ದಾರಿಯ ಪರಮಾವಧಿ ಎಂದು ಬೇಸರ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಕೆ.ಎಂ.ಮುನ್ಷಿ ಅವರು ಹಿಂದೂ ಸಂಸ್ಕೃತಿಯ ಪ್ರಸಾರಕ್ಕಾಗಿಯೇ ಭಾರತೀಯ ವಿದ್ಯಾಭವನ ಸ್ಥಾಪಿಸಿದ್ದರು. ತಮ್ಮದೇ ಪಕ್ಷದ ಹಿರಿಯರ ಬಗ್ಗೆಯಾದರೂ ಸತೀಶ್ ಜಾರಕಿಹೊಳಿಯವರು ತಿಳಿದುಕೊಳ್ಳಬೇಕು. ಹಿಂದೂ ಎಂಬುದನ್ನು ಸೀಮಿತ ಉಪಾಸನಾ ಪಂಥವಾಗಿ ತೆಗೆದುಕೊಳ್ಳಬಾರದು. ಅದನ್ನು ಒಂದು ಜೀವನ ಪದ್ಧತಿಯಾಗಿ ಪರಿಗಣಿಸಬೇಕು. ಒಟ್ಟಿಗೆ ಬದುಕೋಣ, ಬೆಳೆಯೋಣ, ಪ್ರಕೃತಿ ಉಳಿಸೋಣ ಎಂಬ ಆಶಯ ಹೊತ್ತ ಜೀವನ ಪದ್ಧತಿ ಅದು ಎಂದು ಡಾ ಜಿ.ಬಿ.ಹರೀಶ್ ಪ್ರತಿಪಾದಿಸಿದರು.
ಕಾಲಕ್ಕೆ ತಕ್ಕಂತೆ ಅರ್ಥ ಬದಲಾಗುತ್ತೆ: ಶೆಲ್ವಪಿಳ್ಳೆ ಅಯ್ಯಂಗಾರ್
ಮತ್ತೋರ್ವ ಸಂಸ್ಕೃತಿ ಚಿಂತಕ ಶೆಲ್ವಪಿಳ್ಳೆ ಅಯ್ಯಂಗಾರ್ ಮಾತನಾಡಿ, ಹಿಂದೂ ಎನ್ನುವ ಪದಕ್ಕೆ ಬೇರೆ ಯಾವ ದೇಶದವರು ಏನೋ ಕರೆದುಕೊಂಡರೆ ಆ ಅರ್ಥವನ್ನು ನಾವು ಒಪ್ಪಿಕೊಳ್ಳಬೇಕಿಲ್ಲ. ಭಾರತೀಯರನ್ನು ಬ್ರಿಟಿಷರು ಬಚ್ಚಲಿನ ಹುಳುಗಳು ಎಂದಿದ್ದರು. ಆದರೆ ಇಂದು ಭಾರತ ಮೂಲದವರೇ ಬ್ರಿಟನ್ ಆಳುತ್ತಿದ್ದಾರೆ. ಪರ್ಷಿಯನ್ ಭಾಷೆಯ ಹಲವು ಕವಿಗಳು ‘ಯಾರಿಗೆ ಕೆಟ್ಟಗಳು ಇಲ್ಲವೋ ಅವನು ಹಿಂದೂ’ ಎಂದು ಹೇಳಿದ್ದಾರೆ. ಮೂಲ ಪರ್ಷಿಯನ್ ಭಾಷೆಯಲ್ಲಿ ‘ಹಿಂದೂ ಎಂದರೆ ಕಪ್ಪು ಬಣ್ಣದವನು’ ಎಂಬ ಅರ್ಥವಿದೆ. ಕೆಲ ಕವಿಗಳು ಮಾತ್ರ ಭಾರತವನ್ನು ಹೀಗಳೆಯುವ ದೃಷ್ಟಿಯಿಂದ ‘ಹಿಂದೂಗಳು ಎಂದರೆ ಗುಲಾಮರು’ ಎಂದಿದ್ದಾರೆ. ಅಂದಿನ ಕಾಲಘಟ್ಟದಲ್ಲಿ ಎಲ್ಲರಿಗೂ ಭಾರತವನ್ನು ಗೆಲ್ಲುವ, ಆಳುವ ಆಸೆಯಿತ್ತು. ಅದರಂತೆ ಆ ಕವಿಗಳು ಬರೆದುಕೊಂಡರು. ಅದನ್ನು ನಾವು ಒಪ್ಪಿಕೊಳ್ಳಬೇಕು ಏಕೆ’ ಎಂದು ಪ್ರಶ್ನಿಸಿದರು.
ವಿಜಯನಗರದ ಅರಸರು ‘ಹಿಂದೂ ರಾಯ ಸುರತ್ರಾಣ’ ಎಂದು ತಮ್ಮನ್ನು ಕರೆದುಕೊಂಡಿದ್ದರು. ಮರಾಠರು ‘ಹಿಂದೂ ಧರ್ಮ ರಕ್ಷಕರು’ ಎಂದು ಕರೆದುಕೊಂಡಿದ್ದರು. ಗುಲಾಮ ಎಂಬ ಅರ್ಥವಿದ್ದರೆ ಈ ಅರಸರು ತಮ್ಮನ್ನು ತಾವು ಹೀಗೆ ಕರೆದುಕೊಳ್ಳುತ್ತಿದ್ದರೆ ಎಂದು ಕೇಳಿದರು.
ನಿಧಾನವಾಗಿ ಮನವರಿಕೆಯಾಗಲಿದೆ: ಸತೀಶ್ ಜಾರಕಿಹೊಳಿ
ನಾನು ಏನು ಹೇಳಿದ್ದೇನೋ ಅದು ನನ್ನ ವೈಯಕ್ತಿಕ ಹೇಳಿಕೆ. ಪಕ್ಷಕ್ಕೂ ಇದಕ್ಕೂ ಸಂಬಂಧವಿಲ್ಲ. ದಿನಕಳೆದಂತೆ ಮನಸ್ಥಿತಿಗಳು ತಿಳಿಯಾದ ನಂತರ ನನ್ನ ಹೇಳಿಕೆಯ ಅರ್ಥ ಎಲ್ಲರಿಗೂ ತಿಳಿಯುತ್ತದೆ. ನನ್ನ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ ಎಂದರು.
Published On - 10:13 am, Wed, 9 November 22