Column: ‘ಎಲ್ರೂ ಬದುಕಬೇಕಲ್ವಾ?’ ಆಫೀಸಿನಲ್ಲಿ ಹುಟ್ಟಿಕೊಂಡ ನರಕ!

| Updated By: ಅಕ್ಷಯ್​ ಪಲ್ಲಮಜಲು​​

Updated on: Jul 09, 2022 | 6:51 PM

Dr. Sahana Prasad: ಇಷ್ಟು ದಿವಸ ಇಲ್ಲದ ಊಹಾಪೋಹಗಳು ಆಫೀಸಿನಲ್ಲಿ ಹುಟ್ಟಿಕೊಂಡರು. ಪಾಪ ಆತ ನನ್ನ ಇಂದಿಗೂ ಆ ದೃಷ್ಟಿಯಿಂದ ನೋಡಿದ್ದಲ್ಲ ಆದರೂ ಆದರೂ ಎಲುಬಿಲ್ಲದ ನಾಲಿಗೆಗಳು ಬೇಕಾಬಿಟ್ಟಿ ಹರಿದಾಡಿದವು.

Column: ‘ಎಲ್ರೂ ಬದುಕಬೇಕಲ್ವಾ?’ ಆಫೀಸಿನಲ್ಲಿ ಹುಟ್ಟಿಕೊಂಡ ನರಕ!
Image Source: Internet
Follow us on

ಎಲ್ರೂ ಬದುಕಬೇಕಲ್ವಾ?: ಇದೇನೇ ಎಲ್ಲಿಂದ ಬರ್ತಾ ಇದಿಯಾ.. ಯಾವುದೋ ಸೀರೆ ಉಟ್ಟು, ತಲೆಯಲ್ಲ ಕೆದರಿ, ಸಪ್ಪೆ ಮುಖದಿಂದ ಬರುತ್ತಿದ್ದ ಅವಳನ್ನು ಕಂಡು ಅಚ್ಚರಿಗೊಂಡೆ. ಕೆಲಸಕ್ಕೆ ಹೋಗಿ ಬರ್ತಾ ಇದ್ದೀನಿ ಕಣೆ, ಆರು ಗಂಟೆ ಆಯ್ತಲ್ಲ. ಅಂದ್ಲು ಯಾವಾಗಲೂ ಸಿಂಗಾರ ಮಾಡಿಕೊಂಡು, ಚಂದದ ಚೂಡಿದಾರ್​ಗಳನ್ನು ಐರನ್ ಮಾಡಿ ಹಾಕಿಕೊಂಡು ಕೆಲಸಕ್ಕೆ ಹೋಗುತ್ತಿದ್ದವಳು ಈ ರೀತಿ ಬರುತ್ತಿರುವುದನ್ನು ಕಂಡು ನನಗೆ ಬಹಳ ಅಚ್ಚರಿ ಮತ್ತು ದುಃಖವಾಯಿತು. ಯಾಕೆ ಏನಾಯ್ತು ನಿನಗೆ? ಯಾವಾಗಲೂ ನೀಟಾಗಿ ಡ್ರೆಸ್ ಮಾಡಿಕೊಂಡು ಹೋಗ್ತಾ ಇದ್ದ ನೀನು ಹೀಗಾಗಿದೀಯಲ್ಲ. ಇವತ್ತು ಮಾತ್ರ ಈ ತರ ಅಥವಾ ನಿನ್ನ ಡ್ರೆಸ್ ಸೆನ್ಸ್ ಬದಲಾಗಿದ್ಯಾ? ವಾತಾವರಣವನ್ನು ತಿಳಿಗೊಳಿಸಲು ಹೇಳಿದೆ. ಬಾ ಮನೆಗೆ ಹೋಗಿ ಕಾಫಿ ಕುಡಿತಾ ಮಾತಾಡೋಣ ಎಂದು ಕರೆದವಳ ಹಿಂದೆ ಹೆಜ್ಜೆ ಹಾಕಿದೆ. ಬೀಗ ತೆಗೆದು ಕೈಕಾಲು ಮುಖ ತೊಳೆದುಕೊಂಡು ಬಂದು ಅವಳು ಅಡಿಗೆ ಮನೆಯತ್ತ ನಡೆದಳು. ಅವಳ ಹಿಂದೆ ನಾನು ಕೂಡ. ಡಾ. ಸಹನಾ ಪ್ರಸಾದ್ (Dr. Sahana Prasad)

ಬಾಕ್ಸಿನಲ್ಲಿ ಇದ್ದ ಬಿಸ್ಕೆಟ್, ಚೌ ಚೌ ತೆಗೆದು ಪ್ಲೇಟಲ್ಲಿ ಹಾಕಿ ಅವಳು ಕಾಫಿ ನೀರಿಟ್ಟಳು. ಅಚ್ಚುಕಟ್ಟಾದ ಮನೆ, ಎಲ್ಲ ವಸ್ತುಗಳೂ ನೀಟಾಗಿ ಜೋಡಿಸಲ್ಪಟ್ಟಿದ್ದವು. ಮನೆ ಒಡತಿಯ ಶಿಸ್ತು ಸಾರಿ ಹೇಳುತ್ತಿದ್ದ ಮನೆಯನ್ನು ಮೆಚ್ಚುಗೆಯಿಂದ ನೋಡುತ್ತಾ ಇರುವಷ್ಟರಲ್ಲಿ ಕಾಫಿ ರೆಡಿ ಆಯಿತು. ಅವಳ ಮನಸ್ಸನ್ನು ಬೇರೆಡೆ ತಿರುಗಿಸಲು ಅವಳ ದಿನಚರಿಯ ಬಗ್ಗೆ ಕೇಳಿದೆ. ಬೆಳಗ್ಗೆ ಆರು ಗಂಟೆಗೆ ಏಳುತ್ತೇನೆ, ಅಡುಗೆ, ಮನೆ ಕೆಲಸಗಳನ್ನು ಮುಗಿಸಿ 8 ಗಂಟೆಗೆ ಮನೆ ಬಿಡುತ್ತೇನೆ. ಬರುವುದು ಇಷ್ಟೊತ್ತಿಗೆ. ಬಂದ ಮೇಲೆ ರಾತ್ರಿ ಅಡಿಗೆ ಇತ್ಯಾದಿ ಎಂದವಳ ಮಾತುಗಳಲ್ಲಿ ಬೇಸರವಿರಲಿಲ್ಲ.

ಮದುವೆಗೆ ಮುಂಚೆ ಹಾಯಾಗಿ ಹಕ್ಕಿಯಂತೆ ಹಾರಾಡುತ್ತಿದ್ದೆ. ಈಗ ಬರೀ ಕೆಲಸ ಎಂದು ಕಷ್ಟವಾಗುತ್ತಾ ಇದ್ದೀಯ? ಮುಂದೆ ಮಕ್ಕಳು ಮರಿಯಾದರೆ ಇನ್ನೂ ಕಷ್ಟ ಆಗುತ್ತೆ. ಮನೆಯಲ್ಲಿ ನೀವಿಬ್ಬರು ಮಾತ್ರ ಇರುವುದು, ಮೊದಲಿನಿಂದ ಕೆಲಸ ಮಾಡಿದ ಆಫೀಸ್ ಅದೇ ಕೆಲಸ ಯಾಕೆ ಟೆನ್ಶನ್ ಎಂದು ಕೇಳಿದೆ. ನಿಟ್ಟುಸಿರಿಟ್ಟು ಅವಳು ಕಾಫಿ ಹೀರಿದಳು ನಿಜ ಹೇಳಬೇಕು ಅಂದರೆ ಮಾಡುವೆ ಆಗಿರುವುದು, ಆಫೀಸಿಗೆ ಹೋಗುತ್ತಿರುವುದು ಯಾವುದು ಟೆನ್ಶನ್ ಅಲ್ಲ. ಅಲ್ಲಿ ಬಂದಿರುವ ಹೊಸ ಬಾಸ್ ದುಗುಡ ತುಂಬಿತ್ತು ಅವಳ ದನಿಯಲ್ಲಿ. ಹೌದೇನು? ತೊಂದರೆ ಕೊಡುತ್ತಿದ್ದಾನ? ಎಂದೆ.

ಇದನ್ನೂ ಓದಿ
Poetry: ಅವಿತಕವಿತೆ; ಅವರ ಮನೆಯೊಡೆದರೆ ಆ ಪಾಪದಲ್ಲಿ ನನ್ನ ಪಾಲೆಷ್ಟು?
Reporter’s Diary : ‘ಅಮ್ಮಾ, ಅಪ್ಪನನ್ನು ಸರಿಯಾಗಿ ನೋಡಿಕೋ’
New Book: ಅಚ್ಚಿಗೂ ಮೊದಲು; ದಿವ್ಯಾ ರಾವ್ ಅವರ ‘ನಿತ್ಯಜೀವನದ ಸತ್ಯಕಥೆಗಳು’ ಜುಲೈ 3ರಂದು ಬಿಡುಗಡೆ
Translated Story: ನೆರೆನಾಡ ನುಡಿಯೊಳಗಾಡಿ; ‘ನಿನ್ನ ಹೊಸ ತಾಯಿ ಸತ್ತು ಹೋದಳು’

ಹೇಳಲೋ ಬೇಡವೋ ಎಂದು ಸಪ್ಪಿಗೆ ಕುಳಿತವಳನ್ನು ಮಾತನಾಡಮ್ಮಾ, ಏನಾಯ್ತು ಹೇಳಿಕೋ. ಏನಾದರೂ ಪರಿಹಾರ ಸೂಚಿಸಬಲ್ಲೆ ಮನವೊಲಿಸಲು ಪ್ರಯತ್ನ ಪಟ್ಟೆ. ಆಗಲೋ ಈಗಲೋ ಕಣ್ಣಿಂದ ಗಂಗಾ ಜಮುನಾ ಉಕ್ಕುವಂತೆ ಕಾಣುತ್ತಿತ್ತು. ಆದರೂ ಸಂಭಾಳಿಸಿಕೊಂಡು ಅವಳು ಮೆಲ್ಲನೆ ನುಡಿದಳು, ಮದುವೆಯಾಗಿ ಆರು ತಿಂಗಳಾಗಿದೆ. ಜೋಡಿ ಹಕ್ಕಿಗಳಂತೆ ನಾವಿಬ್ಬರೂ ಹಾಯಾಗಿ ತಿರುಗಾಡಿಕೊಂಡು ಇದ್ವಿ ಇದ್ದೂರಿನಲ್ಲಿ ಕೆಲಸ, ಒಳ್ಳೆಯ ಗಂಡ , ನನ್ನದೇ ಆದ ಪುಟ್ಟ ಮನೆ. ಅವನು ತಿಂಗಳಲ್ಲಿ 20 ದಿನ ಟೂರ್ನಲ್ಲಿ ಇರುತ್ತಾನೆ ಹಾಗೂ ಇದೇ ಊರಿನಲ್ಲಿ ಇರುವಾಗ ಕೂಡ ಕೆಲಸ ಮುಗಿಸಿ ಲೇಟಾಗಿ ಬರುತ್ತಾನೆ ಎನ್ನುವುದನ್ನು ಬಿಟ್ಟರೆ ನಾನು ಪರಮಸುಖಿಯಾಗಿದ್ದೆ. ಮುಂದೆ? ಎನ್ನುವಂತೆ ಮುಖ ನೋಡಿದೆ. ಈಗ ಒಂದು ತಿಂಗಳಿಂದ ನಮ್ಮ ಆಫೀಸಿಗೆ ಹೊಸ ಬಾಸ್ ಬಂದಿದ್ದಾನೆ. ಸೊಗಸುಗಾರ ಪುಟ್ಟಸ್ವಾಮಿ. ನನಗಿಂತ ಸುಮಾರು ಏಳೆಂಟು ವರ್ಷ ವಯಸ್ಸು ದೊಡ್ಡವರಿರಬಹುದು. ನಿಜ ಹೇಳಬೇಕೆಂದರೆ ಭಾರಿ ಸಭ್ಯಸ್ತ. ಯಾರ ಕಡೆಗೂ ಕಣ್ಣೆತ್ತಿ ಕೂಡ ನೋಡುವುದಿಲ್ಲ ನಿನಗೆ ಗೊತ್ತಲ್ಲ ನಾನು ಯಾವಾಗಲೂ ಸೊಗಸಾಗಿ ಡ್ರೆಸ್ ಮಾಡಿಕೊಂಡು ಒಳ್ಳೆ ಬಟ್ಟೆಗಳನ್ನು ಉಟ್ಟು ಆಫೀಸಿಗೆ ಹೋಗುತ್ತಿದ್ದೆ. ಮದುವೆಯಾದ ಮೇಲೆ ಅದು ಇನ್ನೂ ಜಾಸ್ತಿಯಾಯಿತು. ಮನೆಯಲ್ಲಿ ಮೆಚ್ಚಿಸಲಿಕ್ಕೆ ಇವರು ಬೇರೆ, ಮದುವೆಗೆ ಎಂದು ಹೊಸ ಬಟ್ಟೆಗಳನ್ನು ಖರೀದಿ ಮಾಡಿದ್ದೆ. ಮುಂಚಿನಿಂದ ನಾನು ವೇಷಭೂಷಣದಲ್ಲಿ ಅಚ್ಚುಕಟ್ಟು ಎಂದು ಬಲ್ಲವರು ಕೂಡ ಯಾವುದೋ ಮಾಯೆಯಲ್ಲಿ ನನಗೂ ಬಸ್ ಗೆ ಸಂಬಂಧ ಕಟ್ಟಿಬಿಟ್ಟರು. ಒಂದು ದಿನ ಯಾವುದೋ ಪ್ರೆಸೆಂಟೇಶನ್ ಮುಗಿದ ಮೇಲೆ ಆತ ನನ್ನನ್ನು ಸ್ಮಾರ್ಟ್ ಗರ್ಲ್ ಎಂದಿದೆ ತಪ್ಪಾಯ್ತು.

ಇಷ್ಟು ದಿವಸ ಇಲ್ಲದ ಊಹಾಪೋಹಗಳು ಆಫೀಸಿನಲ್ಲಿ ಹುಟ್ಟಿಕೊಂಡರು. ಪಾಪ ಆತ ನನ್ನ ಎಂದಿಗೂ ಆ ದೃಷ್ಟಿಯಿಂದ ನೋಡಿದ್ದಲ್ಲ ಆದರೂ  ಎಲುಬಿಲ್ಲದ ನಾಲಿಗೆಗಳು ಬೇಕಾಬಿಟ್ಟಿ ಹರಿದಾಡಿದವು. ಹದಿನೈದು ದಿವಸದ ಒಳಗೆ ಅದು ಇವರ ಕಿವಿಗೂ ಬಿದ್ದಿತ್ತು ಅಲ್ಲಿಂದ ಶುರುವಾಯಿತು ನರಕ. ಅಲ್ಲಿ ಆಫೀಸಿನ ಜನರು, ಎಲ್ಲಿ ಇವರು. ಸಾಕಾಗಿದೆ ನನಗೆ, ಈ ಅನುಮಾನದ ದೃಷ್ಟಿ ಎದುರಿಸಿ ಒಂದೇ ಸಮನೆ ಹೇಳಿದ ಅವಳು ತುಟಿಗಚ್ಚಿ ಅಳುವನ್ನು ತಡೆದಿದ್ದಳು. ಅಲ್ಲ, ಗಂಡನೊಡನೆ ಮಾತನಾಡಿ ಅನುಮಾನ ಪರಿಹರಿಸಿಕೊಳ್ಳಬಹುದಲ್ಲ. ಈ ರೀತಿ ಹಳೆ ಬಟ್ಟೆ ತೊಟ್ಟು, ಮನಸ್ಸಿಗೆ ಹಿಂಸೆ ಪಡುವುದರಲ್ಲಿ ಏನು ಸಾಬೀತು ಪಡಿಸುತ್ತೀಯಾ? ಎಂದೆ. ಅಸಲಿಗೆ ಅವಳ ಗಂಡನ ಬಗ್ಗೆ ನನಗೆ ಏನೂ ತಿಳಿದಿರಲಿಲ್ಲ.

ನಾನಾಗಿ ಅದರ ವಿಷಯ ಎತ್ತಲು ನನಗೆ ಭಯ. ಏನೋ ಅಪರಾಧಿ ಅನಿಸುತ್ತದೆ ಎಂದವಳಿಗೆ ಕೆಲವು ಪಿಸುಮಾತುಗಳನ್ನು ಹೇಳಿದೆ. ಚಂದದ, ವಯಸ್ಸಿನ ಹುಡುಗಿಯರಿಗೆ ಅಪವಾದ ತಪ್ಪಿದ್ದಲ್ಲ. ಸಮಾಜ ಎಷ್ಟೇ ಮುಂದುವರೆದರೂ, ಕೀಳು ಮನಸ್ಥಿತಿಯವರು ಇದ್ದೇ ಇರುತ್ತಾರೆ. ಅವರಿಗೆ ತಮ್ಮ ನಾಲಿಗೆ ಚಪಲ ತೀರಿಸಿಕೊಳ್ಳಲು ಯಾರಾದರೂ ಬೇಕು. ಕಚೇರಿಗಳಲ್ಲಿ, ಗಂಡು ಹೆಣ್ಣು ಒಟ್ಟಿಗೆ ಕೆಲಸ ಮಾಡುವ ಎಲ್ಲಾ ಕ್ಷೇತ್ರದಲ್ಲೂ ಇದು ಸಾಮಾನ್ಯ. ಅದಕ್ಕೆ ಪೂರಕವಾಗಿ ನಾವು ನಡೆಯದಿದ್ದರೆ ಸಾಕು. ಒಬ್ಬರಿಗೆ ಹೆದರಿ ನಮ್ಮ ವ್ಯಕ್ತಿತ್ವವನ್ನು ಬದಲಾಯಿಸಿಕೊಂಡರೆ ನಮಗೆ ಹಿಂಸೆ. ನೀನು ಹಳೆ ಬಟ್ಟೆ ಧರಿಸಿ ಅಲಂಕಾರ ಮಾಡಿಕೊಳ್ಳದೆ ಹೋದರೆ, ಅದಕ್ಕೂ ಕಥೆ ಕಟ್ಟುತ್ತಾರೆ, ಅಷ್ಟೇ. ಇನ್ನು ಗಂಡನ ವಿಷಯಕ್ಕೆ ಬಂದರೆ, ಅವನು ಕೂಡ ನಿನ್ನ ಬಳಿ ಇದನ್ನು ಹೇಗೆ ಪ್ರಸ್ತಾಪಿಸುವುದು ಎಂದು ಯೋಚಿಸುತ್ತಾ ಇರುತ್ತಾನೆ, ಭಾನುವಾರದ ಉಪಹಾರ ಮುಗಿಸಿ ಆರಾಮಾಗಿ ಕುಳಿತಿದ್ದಾಗ ನೀನೆ ಶುರು ಮಾಡು. ಅತ್ತು ಕರೆದು ಮಾಡದೆ ಸಮಾಧಾನವಾಗಿ ಮಾತನಾಡು. ಅವನ ಮನಸ್ಸಿನ ದುಗುಡವೂ ಪರಿಹಾರವಾಗುತ್ತದೆ. ಮುಖ ಸ್ವಲ್ಪ ಅರಳಿತು. ಮೊದಲು ಈ ಡ್ರೆಸ್ ಬದಲಾಯಿಸು ಎಂದಾಗ ಇಬ್ಬರ ಮುಖದಲ್ಲೂ ನಗೆ ಉಕ್ಕಿತು.

ಪ್ರತಿಕ್ರಿಯೆಗಾಗಿ : tv9kannadadigital@gmail.com

ಸಹನಾ ಪ್ರಸಾದ್ ಬರೆದ ಈ ಬರಹವನ್ನೂ ಓದಿ : Smart Phone : ಎರಡೇ ತಿಂಗಳಲ್ಲಿ ಅತ್ತೆಯನ್ನು ಬದಲಾಯಿಸಿದ ಕಥೆ ಇದು!

Published On - 2:37 pm, Thu, 7 July 22