Poetry: ಅವಿತಕವಿತೆ; ಅವರ ಮನೆಯೊಡೆದರೆ ಆ ಪಾಪದಲ್ಲಿ ನನ್ನ ಪಾಲೆಷ್ಟು?

Poem : ಯಾವುದೇ ದುರುದ್ದೇಶದಿಂದ ಮರ ಬೆಳೆಸಿರದಿದ್ದರೂ ಈಗದು ಸಮಸ್ಯೆಯನ್ನು ಹುಟ್ಟುಹಾಕಿದೆ. ನೆರಮನೆಯ ಅಡಿಪಾಯವನ್ನೇ ಅದು ಅಲ್ಲಾಡಿಸುತ್ತಿರುವಾಗ ಅ ಮರವನ್ನು ಬೆಳೆಸಿದವರಿಗೆ ಮನಸ್ಸು ಕದಡದೇ ಏನು?

Poetry: ಅವಿತಕವಿತೆ; ಅವರ ಮನೆಯೊಡೆದರೆ ಆ ಪಾಪದಲ್ಲಿ ನನ್ನ ಪಾಲೆಷ್ಟು?
Follow us
ಶ್ರೀದೇವಿ ಕಳಸದ
| Updated By: sandhya thejappa

Updated on:Jul 03, 2022 | 8:15 AM

ಅವಿತಕವಿತೆ | AvithaKavithe : ಎಷ್ಟು ನಿರ್ಲಿಪ್ತವಾಗಿದ್ದೇನೆ ಅಂದುಕೊಂಡರೂ ತಲೆಯೊಳಗೆ, ಮನಸ್ಸಿನೊಳಗೆ ಆಗಾಗ ಏನಾದರೂ ಕುದಿಯುತ್ತಿರುತ್ತದೆ, ಅದನ್ನು ಹೊರಹಾಕಲಿಕ್ಕೆ ಸೂಕ್ತವಾದ ದಾರಿಗಳಿರುವುದಿಲ್ಲ, ಅದಕ್ಕೆ ಕೆಲವೊಮ್ಮೆ ನೇರವಾಗಿ, ಇನ್ನು ಕೆಲವೊಮ್ಮೆ ಒಗಟಾಗಿ ಬರೆಯುತ್ತೇನೆ. ಹಾಗಾಗಿ ಆಗೊಮ್ಮೆ ಈಗೊಮ್ಮೆ ಕವನಗಳು ರೂಪುಗೊಳ್ಳುವುದುಂಟು. ಹೀಗೆ ಬರೆದಿದ್ದು ಸಾರ್ವಕಾಲಿಕವಾಗಿರಬೇಕೆಂಬ ಒತ್ತಡವಾಗಲೀ ಎಲ್ಲರಿಗೂ ಆರ್ಥವಾಗಬೇಕೆಂಬ ಹಂಬಲವಾಗಲೀ ನನ್ನಲ್ಲಿಲ್ಲ. ನೈಜ ಭಾವನೆಗಳಿಂದಾಗಿಯೇ ಕೆಟ್ಟ ಕವಿಯ ಜನನವಂತೆ, ಭಾವನೆಗಳನ್ನು ಹಿಡಿತದಲ್ಲಿಟ್ಟು ಪದಗಳಲ್ಲಿ ಪಳಗಿಸಲು ಗೊತ್ತಿಲ್ಲದವರು ಒಳ್ಳೆಯ ಕವಿಯಾಗುವುದಿಲ್ಲವಂತೆ. ನನಗೆ ಕವಿತೆ ಭಾವನೆಗಳು ಹೊರಹಾಕುವ ಮಾರ್ಗ, ಒತ್ತಡ, ಒಂಟಿತನ ಗೆಲ್ಲುವ ಬಗೆ. ನಾನು ಕವಯಿತ್ರಿಯಲ್ಲ, ಬರಹಗಾರ್ತಿ. ಶ್ರೀ. ಡಿ. ಎನ್. (Shree DN)

ಅಪ್ಪ ಹಾಕಿದ ಆಲದ ಮರ

ಅಪ್ಪ ಹಾಕಿದ ಆಲದ ಮರ
ನಾನು ಬೆಳೆಸಿದ ಈ ಮರ
ಬೇರೇನೂ ಬೆಳೆಯಬಿಡದು
ಹಾಗಾಗಿ ಅದರಡಿ ಜಾಗವೋ ಜಾಗ
ನೆರಳು, ಮೇವು ಕೊಡುತ್ತಿದೆ
ದಣಿದು ಬಂದ ಜನಕ್ಕೆ
ಪ್ರಾಣಿಗಳಿಗೆ, ಹಕ್ಕಿಗಳಿಗೆ
ಹೂವುಗಳೆಷ್ಟು ಚಂದ,
ನನ್ನ ದೇವರಿಗೆ ಅದರಿಂದಲೇ ಕಳೆ
ಹಣ್ಣುಗಳೆಷ್ಟು ರುಚಿ
ಹುಳಿ ಬರಿಸಿ ವೈನ್ ಮಾಡಿ
ಕುಡಿದಿದ್ದೇನೆ ನಾನು
ಸುರೆಯೆಂಬುದು ಸುಮ್ಮನೆಯೇ?
ದೇವತೆಗಳದೇ ಅಮಲು
ಗಾದೆ ಸುಮ್ಮನೆ ಮಾಡಲಿಲ್ಲ
ಸತ್ತರೆ ಇದರ ಬೀಳಲಿಗೇ
ನೇತು ಸಾಯಬೇಕು ನಾನು,
ಅಷ್ಟು ತಣ್ಣನೆಯ ಆಲದ ಮರ
ಇದರಾಚೆಗೆ ಹೋದವರಿಗೆ
ಮಾತ್ರ ಗೊತ್ತು ಮರದಡಿಯ ಸುಖ

ಆದರೊಂದು ತೊಂದರೆ...
ತೊಂದರೆಯೆಂದೆನೇ, ಅಲ್ಲಲ್ಲ
ಸಹಜ ಬೆಳವಣಿಗೆ.
ಮರದ ಬೇರು ತೂರಿದೆ
ನನ್ನ ನೆಲದಾಳಕ್ಕೆ...
ಅಲ್ಲೆಲ್ಲೋ ಆಳದಲ್ಲಿ ಹುದುಗಿದ
ನೀರೇ ಇದರ ಜೀವಾಳ, ಬಂಡವಾಳ
ಕೀಳಹೊರಟರೆ ಎಲ್ಲಿಂದ ಕೀಳಬೇಕೋ
ತಿಳಿಯದ ಚಕ್ರವ್ಯೂಹ
ಒಂದೆಡೆ ಕಿತ್ತರೆ ಇನ್ನೆಲ್ಲೋ
ಹುಟ್ಟಿಬರುವ ಜಾದೂ...
ಈಗ ಪಕ್ಕದ ಮನೆಯವರ
ಅಡಿಪಾಯಕ್ಕೆ ತೂರಿ
ಅಲ್ಲಾಡಿಸುತ್ತಿದೆಯಂತೆ
ಅವರ ಮನೆಯೊಳಗೆ ಒಡೆದ ನೆಲ,
ಸೀಳಿದ ಗೋಡೆ ಹೇಳುತ್ತಿವೆ ಸಾಕ್ಷಿ
ಮನೆ ಬಿದ್ದು ಹೋದರೆ
ಅವರು ಬೀಳಬೇಕು ಬೀದಿಗೆ
ಹುಡುಕಬೇಕು ಬೇರೆ ನೆಲೆ
ಅವರೀಗ ನನ್ನ, ಮತ್ತೆ
ಮರದಡಿಯಿರುವವರನ್ನ
ದಿಟ್ಟಿಸುತ್ತಾರೆ ಸಂಶಯದಿಂದ
ಅರೇ, ನಾವೇನು ಮಾಡಿದೆವು,
ನಾನೋ ಸಾಧು
ಮರದ ನೆರಳಿಗೆ ಬಂದವರು
ನನ್ನ ಅತಿಥಿಗಳು
ಕೂತಿದ್ದು ತಪ್ಪೇ,
ವಿರಮಿಸಿದ್ದು ತಪ್ಪೇ,
ಸಂಭ್ರಮಿಸಿದ್ದು ತಪ್ಪೇ?
ಅವರೂ ಹಾಕಿಲ್ಲವೇ
ಅವರಂಗಳದಲ್ಲಿ ಗಿಡ
ನಾಳೆ ಅದು ದೊಡ್ಡದಾದಾಗ
ನನ್ನ ಮನೆಗೂ ಇದೇ ಗತಿಯಲ್ಲವೇ?

ಆದರೆ...
ಮರಕ್ಕೆ ಬೆಳೆಯುವುದಷ್ಟೇ ಗೊತ್ತು
ಅದ ಬೆಳೆಸಿದ್ದು ನಾನೇ ತಾನೇ
ನನಗೆ ನೆರಳು, ನೀರು,
ಅಮಲು ಕೊಡುವ ಮರ
ಅವರ ಮನೆಯೊಡೆದರೆ
ಆ ಪಾಪದಲ್ಲಿ ನನ್ನ ಪಾಲೆಷ್ಟು?

*

AvithaKavithe Kannada Poetry Column by Shree DN

ಶ್ರೀ ಡಿ.ಎನ್. ಅವರ ಕೈಬರಹ

ಕವಿತೆ ಅವರದು ನೋಟ ನಿಮ್ಮದು

ಇದನ್ನೂ ಓದಿ
Image
Weather: Qatar Mail: ಮಧ್ಯಪ್ರಾಚ್ಯವನ್ನು ದಿಕ್ಕೆಡಿಸುತ್ತಿರುವ ಈ ಮರಳು ಬಿರುಗಾಳಿ
Image
National Wine Day: ಒಡೆದ​ ವೈನ್ ಬಾಟಲಿ ಮತ್ತು ‘ಕೂಲ್​ ರನ್ನಿಂಗ್’ನೊಂದಿಗೆ ಮಮತಾ ಸಾಗರ್
Image
Poetry: ಅವಿತಕವಿತೆ; ಬಾಗಿಲುಗಳು ‘ಎಡ’ಕ್ಕೆ ತೆರೆಯಲಿವೆ ಬಾಗಿಲುಗಳು ‘ಬಲ’ಕ್ಕೆ ತೆರೆಯಲಿವೆ
Image
Booker Shortlist 2022: ಗೀತಾಂಜಲಿ ಶ್ರೀ ಕಾದಂಬರಿ ‘ಟಾಂಬ್ ಆಫ್ ಸ್ಯಾಂಡ್’ ಬೂಕರ್ ಪ್ರಶಸ್ತಿಯ ಅಂತಿಮ ಘಟ್ಟಕ್ಕೆ

ಶ್ರೀ ಡಿ.ಎನ್. ಅವರ ಕವಿತೆ ಓದುವಾಗ ಡಿವಿಜಿ ಅವರ ಕಗ್ಗದ ಸಾಲುಗಳು ನೆನೆಪಾಗುತ್ತವೆ.

ಮನೆಯ ಮಾಳಿಗೆಗಲ್ಲ ಮುಡಿಯ ಕೊಪ್ಪಿಗೆಗಲ್ಲ ಇನಿವಣ್ಣು ತನಿಯ ಕಾಳೆಂಬುದಿಲ್ಲ ಒಣಗು ಕುರಿಚಲು ಗಿಡದ ಬಾಳೇನು? ನೀನಂತು ಒಣಗಿದೊಡೆ ಸವುದೆ ಸರಿ – ಮಂಕುತಿಮ್ಮ

ಹೇಗೆ ಕುರುಚಲು ಗಿಡ ಮನೆಯ ಮಾಳಿಗೆಗೆ ತೊಲೆಯಾಗುವುದಿಲ್ಲವೋ, ಯಾರ ಮುಡಿಗೂ ಅಂದವಾಗುವ ಹೂಗಳನ್ನು ಅರಳಿಸುವುದಿಲ್ಲವೋ ಅಥವಾ ತಿನ್ನಲು ರುಚಿಯಾದ ಹಣ್ಣು, ಆಹಾರ ಧಾನ್ಯವನ್ನು ಕೊಡುವುದಿಲ್ಲವೋ ಹಾಗೇ ಮನುಷ್ಯನ ಜೀವನವೂ ನಿಷ್ಪ್ರಯೋಜಕ ಎನ್ನುತ್ತಾರೆ. ಕುರಿಚಲು ಬರೀ ಒಲೆಗೆ ಸೌದೆಯಾಗಬಲ್ಲದೇ ಹೊರತು ಇನ್ನೇನಿಲ್ಲ. ಹೀಗೆ ನಮ್ಮೆಲ್ಲರ ಬದುಕಿನ ಪರಿಯನ್ನು ವಿಶ್ಲೇಷಿಸಿದ್ದಾರೆ.

ಅಪ್ಪ ನೆಟ್ಟ ಆಲದ ಮರ ಅಂತ ಆದಕ್ಕೆ ನೇಣು ಹಾಕಿಕೊಳ್ಳಲಾಗುತ್ತ? ಎನ್ನುವುದು ಒಂದು ಲೋಕೋಕ್ತಿಯ ನೆವದಲ್ಲಿ ಕವಿ ಬದುಕಿನ ಬಗ್ಗೆ ಮಾರ್ಮಿಕವಾಗಿ ಚಿಂತಿಸಿದಂತಿದೆ. ಒಂದು ಮರ ಬೃಹತ್ತಾಗಿ ಬೆಳೆದು ಹಕ್ಕಿಪಿಕ್ಕಿ, ಉರಗ, ಕ್ರಿಮಿಕೀಟಗಳಿಗೆ ತಂಗುದಾಣವಾಗಿ, ರುಚಿಯಾದ ಹಣ್ಣುಗಳನ್ನಿತ್ತು, ಸುಗಂದಭರಿತವಾದ ಹೂಗಳನ್ನು ಅರಳಿಸಿ , ತನ್ನನ್ನು ಆಶ್ರಯಿಸಿದವರಿಗೆ ನೆರಳನ್ನು ಕೊಟ್ಟು, ಬಿರುಬೇಸಿಗೆಯಲ್ಲಿ ಸೊಂಪಾದ ನಿದ್ದೆಯನ್ನು ಕೊಡುತ್ತದೆ. ತಂಪಾದ ಗಾಳಿಯನ್ನು, ಸುರಿಮಳೆಯಲ್ಲಿ ನಿಲುದಾಣವಾಗಿ ಇದೇ ಬಹುಪಯೋಗಿ ಮರವನ್ನು ಕಡಿದಾಗ ಅದು ತೊಲೆಗೋ ಮನೆಯ ಬಾಗಿಲು, ಕಿಟಕಿ ಮರದ ಕೆಲಸಕ್ಕೆ ಉಪಯೋಗವಾಗುತ್ತದೆ.

ಇದನ್ನೂ ಓದಿ : Poetry: ಅವಿತಕವಿತೆ; ಕನ್ನಡ ಪಂಡಿತರೊಬ್ಬರ ಮಾತುಗಳಿಗೆ ಪ್ರತಿಕ್ರಿಯೆ

ಅಪ್ಪ ನೆಟ್ಟ ಆಲದ ಮರ ಯಾವತ್ತೂ ವ್ಯರ್ಥವಾಗುವುದಿಲ್ಲ. ಹಿರಿಯರು ಮಾಡಿದ ಕಟ್ಟುಪಾಡುಗಳು, ಜೀವಪರ ಕಾಳಜಿಗಳು, ಇವತ್ತಿಗೆ ಮೂಢನಂಬಿಕೆ ಕಂದಾಚಾರಗಳಾಗಿ ದುರ್ಬಳಕೆಯಾಗುತ್ತಿದ್ದರೂ ಅವರ ದೂರದೃಷ್ಟಿ, ಜೀವನಾನುಭವ, ತಾಳ್ಮೆ ಇಂದಿನ ಕಾಲದ ನಮಗಿಲ್ಲವೆಂದೇ ಒಪ್ಪಿಕೊಳ್ಳಬೇಕಾಗಿದೆ. ಆ ಮರದಡಿಯ ಸುಖದ ಕಲ್ಪನೆ, ಅನುಭವ ಕವಿಗಿದೆ. ಇಲ್ಲಿ ಅಪ್ಪ ನೆಟ್ಟ ಮರವಿದೆ. ಜೊತೆಗೆ ಕವಿ ಬೆಳೆಸಿದ ಮರವೂ ಇದೆ. ಎರಡರಲ್ಲಿಯೂ ವ್ಯತ್ಯಾಸ ನೋಡಿ. ಆ ಮರವೀಗ ಪಕ್ಕದ ಮನೆಯವರ ಅಡಿಪಾಯಕ್ಕೆ ತೂರಿ ಅಲ್ಲಾಡಿಸುತ್ತಿದೆಯಂತೆ / ಅವರ ಮನೆಯೊಳಗೆ ಒಡೆದ ನೆಲ, ಸೀಳಿದ ಗೋಡೆ ಹೇಳುತ್ತಿವೆ ಸಾಕ್ಷಿ / ಮನೆ ಬಿದ್ದು ಹೋದರೆ / ಅವರು ಬೀಳಬೇಕು ಬೀದಿಗೆ /ಹುಡುಕಬೇಕು ಬೇರೆ ನೆಲೆ ಇದು ವರ್ತಮಾನದ ಆತಂಕ. ಯಾವುದೇ ದುರುದ್ದೇಶದಿಂದ ಮರ ಬೆಳೆಸಿರದಿದ್ದರೂ ಈಗದು ಸಮಸ್ಯೆಯನ್ನು ಹುಟ್ಟುಹಾಕಿದೆ. ನೆರಮನೆಯ ಅಡಿಪಾಯವನ್ನೇ ಅದು ಅಲ್ಲಾಡಿಸುತ್ತಿರುವಾಗ ಅ ಮರವನ್ನು ಬೆಳೆಸಿದವರಿಗೆ ಮನಸ್ಸು ಕದಡದೇ ಏನು?

ತಾನೇ ಬೆಳೆಸಿದ ಮರದಿಂದ ಇಷ್ಟೆಲ್ಲ ಆವಾಂತರವಾಗಿ ಹೋಗಿದೆಯೆಂದ ಮೇಲೆ ಇದರಲ್ಲಿ, ಈ ಪಾಪದಲ್ಲಿ ತನ್ನ ಪಾಲೆಷ್ಟು? ಎಂದು ಸ್ವವಿಮರ್ಶೆಗೆ ತೊಡಗುವ ಕವಿಗೆ ಉತ್ತರವೂ ಗೊತ್ತಿದೆ. ತನಗೆ ಸುಖವನ್ನು, ನೆಮ್ಮದಿಯನ್ನು ಅಮಲನ್ನು ಕೊಟ್ಟ ಈ ಮರ ಅನ್ಯರಿಗೆ ಉಪದ್ರವಿಯಾಗಬಾರದಿತ್ತು ಎನ್ನುವ ಅರಿವೂ ಇದೆ. ಆದರೂ ಒಪ್ಪದ ಭಂಡ ಮನಸ್ಸು ಅವರು ತಮ್ಮ ಅಂಗಳದಲ್ಲಿ ಮರ ಹೀಗೆ ಮರ ಬೆಳೆಸಿದ್ದರೆ ತನ್ನ ಮನೆಗೂ ಇದೇ ಗತಿ ಬರುತ್ತಿತ್ತಲ್ಲ ಎಂದು ತನ್ನನ್ನೇ ತಾನು ಸಮರ್ಥಿಸಿಕೊಳ್ಳುವ ಭಾವ ಮನುಷ್ಯ ಇರುವುದು ಹೀಗೇಯೇ, ಅವನ ಅಲ್ಪತನ ನಿತ್ಯದ ವ್ಯವಹಾರದಲ್ಲಿ ನುಸುಳುವ ವಿಸ್ಮಯವನ್ನು ಕವಿತೆ ಅನಾವರಣಗೊಳಿಸುತ್ತದೆ. ರೇಣುಕಾ ನಿಡಗುಂದಿ, ಕವಿ, ಅನುವಾದಕಿ

Published On - 6:30 am, Sun, 3 July 22

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ